ವ್ಯಾಪಾರದ ಹಿಡಿತ ಕಳೆದುಕೊಂಡು ಕನ್ನಡಿಗರು ಬದುಕನ್ನು ಕಟ್ಟಿಕೊಳ್ಳುವುದಾದರೂ ಹೇಗೆ?

3 years ago

#Kannadigas #living #losing #control #business #ksnagaraj

ಕನ್ನಡವು ಮಾಯವಾಗುತ್ತಿದೆ, ಕನ್ನಡಿಗರ ಭೂಮಿಯು ಅನ್ಯರ ಪಾಲಾಗುತ್ತಿದೆ ಈಗ ಬ್ಯಾಂಕ್‌ಗಳು ಉತ್ತರ ಭಾರತೀಯರ ಪಾಲಾಗುತ್ತಿವೆ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಉದ್ಯಾನವನಗಳು, ಮಾಲ್‌ಗಳು, ಬ್ಯಾಂಕ್‌ಗಳು ಇಲ್ಲಿ ಕನ್ನಡ ಮಾತನಾಡುವವರೇ ವಿರಳ. ತೆಲುಗು, ತಮಿಳು, ಹಿಂದಿ ಭಾಷೆ ಕಿವಿಗಳಿಗೆ ಅಪ್ಪಳಿಸುತ್ತದೆ. ಶಿಕ್ಷಣದಲ್ಲಿ ದಿನದಿಂದ ದಿನಕ್ಕೆ ಕನ್ನಡ ಮಾಯವಾಗುತ್ತಿದೆ. ಮನೆಗಳಲ್ಲಿ ಮಮ್ಮಿ, ಡ್ಯಾಡಿ ಸಂಸ್ಕೃತಿ ತಾಂಡವಾಡುತ್ತಿದೆ.

ಬೆಂಗಳೂರಿನ ಬಹಳಷ್ಟು ಭೂಮಿ ಬಹುಮಹಡಿಗಳ ಕಟ್ಟಗಳ ಹೆಸರಿನಲ್ಲಿ ಉತ್ತರ ಭಾರತೀಯರ ಮಾಲೀಕತ್ವಕ್ಕೆ ವರ್ಗಾವಣೆಯಾಗಿದೆ. ಮಾಲ್ ಗಳ ಮಾಲೀಕರು, ಔಷಧಿ ವ್ಯಾಪಾರವೂ ಅವರ ಕೈಯಲ್ಲಿದೆ. ಬಟ್ಟೆ ವ್ಯಾಪಾರ, ಚಿನ್ನ, ಬೆಳ್ಳಿ ವ್ಯಾಪಾರ, ವಿದ್ಯುತ್‌ ಉಪಕರಣಗಳು, ಶಿಕ್ಷಣ ಸಂಸ್ಥೆಗಳು ಎಲ್ಲವೂ ಕನ್ನಡಿಗರಿಂದ ಅವರ ಪಾಲಿಗೆ ವರ್ಗಾವಣೆಯಾಗುತ್ತಿದೆ.

ಮೈಸೂರು ಮಹಾರಾಜರು ಸ್ಥಾಪಿಸಿದ ಮೈಸೂರು ಬ್ಯಾಂಕ್, ಮಂಗಳೂರಿನ ಹಿರಿಯರು ಸ್ಥಾಪಿಸಿದ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಇವೆಲ್ಲವೂ ಉತ್ತರ ಭಾರತೀಯರ ಬ್ಯಾಂಕ್‌ಗಳೊಂದಿಗೆ ವಿಲೀನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿವೆ.

ನಮ್ಮ ಮೈಸೂರು ಲ್ಯಾಂಪ್ಸ್ ಮುಚ್ಚಿ ಹೋಯಿತು. ಮೈಸೂರು ಸಾಬೂನು ಕಾರ್ಖಾನೆ ಮುಂದೊಂದು ದಿನ ಮಾರಾಟವಾದರೂ ಹೆಚ್ಚಿಲ್ಲ. ನಮ್ಮ ಎನ್.ಜಿ.ಎಫ್. ನಮ್ಮ ಕಣ್ಮುಂದೆಯೇ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿತು. ಇದು ಸಾಲದು ಎಂಬಂತೆ ಈಗ ಅನೇಕ ಸಹಕಾರಿ ಬ್ಯಾಂಕ್‌ಗಳು ನಷ್ಟದ ಹಾದಿಯನ್ನು ಹಿಡಿದು ನಿರ್ವಹಣೆ ಮಾಡಲು ಸಾಧ್ಯವಾಗದೇ ಠೇವಣಿದಾರರ ಹಿತವನ್ನು ಕಾಯುವ ನೆಪದಲ್ಲಿ ಉತ್ತರ ಭಾರತೀಯರ ಶ್ಯಾಮ್‌ ರಾವ್‌ ವಿಠಲ್ ಕೋ-ಆಪರೇಟಿವ್ ಬ್ಯಾಂಕ್, ಸಾರಸ್ವತ ಗೌಡ ಸಹಕಾರಿ ಬ್ಯಾಂಕ್‌, ಠಾಣಾ ಜನತಾ ಕೋ-ಆಪರೇಟಿವ್ ಬ್ಯಾಂಕ್, ಬಂಧನ್ ಕೋ-ಆಪರೇಟಿವ್‌ ಬ್ಯಾಂಕ್‌ ಮುಂತಾದಂತಹ ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿ ಸ್ಥಾಪನೆಯಾಗಿರುವ ಬ್ಯಾಂಕ್‌ಗಳೊಂದಿಗೆ ವಿಲೀನವಾಗುವ ಪ್ರಕ್ರಿಯೆಗಳು ಆರಂಭವಾಗಿವೆ.

ಕನ್ನಡಿಗರ ಪಾಲಿಗೆ ಇನ್ನು ಏನೂ ಉಳಿದುಕೊಂಡಿಲ್ಲ. ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸಿ ಅನ್ಯರಾಜ್ಯದವರ ಸುಖದ ಬದುಕಿಗೆ ಮೇಲ್ಪತುವೆಗಳು, ವರ್ತುಲ ರಸ್ತೆಗಳು, ಸುರಂಗ ರಸ್ತೆಗಳು ಇವುಗಳನ್ನೆಲ್ಲ ಮಾಡಿಕೊಟ್ಟು ಅವರ ಮನೆಯ ಕೆಲಸಕ್ಕೆ, ಅವರ ಮಕ್ಕಳ ಆರೈಕೆಗೆ, ಅವರ ಕಛೇರಿಗಳ ಆಯಾ ಕೆಲಸಕ್ಕೆ ಕನ್ನಡಿಗರು ನೇಮಕವಾಗುವಂತಹ ಪರಿಸ್ಥಿತಿ ಅಷ್ಟೇ ಬಂದಿದೆ.

ಬೆಂಗಳೂರಿನಲ್ಲಿ ಭೂಮಿಯ ಒಡೆತನವನ್ನು ಕಳೆದುಕೊಂಡು ಆರ್ಥಿಕತೆ ಹಿಡಿತವನ್ನು ಕಳೆದುಕೊಂಡು ವ್ಯಾಪಾರದ ಹಿಡಿತವನ್ನು ಕಳೆದುಕೊಂಡು ಕನ್ನಡಿಗರು ತಮ್ಮ ಬದುಕನ್ನು ಕಟ್ಟಿಕೊಳ್ಳುವುದಾದರೂ ಹೇಗೆ? ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಉಳಿಯುವುದಾದರೂ ಹೇಗೆ? ಗಂಭೀರವಾದಂತಹ ವಿಚಾರಗಳ ಬಗ್ಗೆ ಬಹಳಷ್ಟು ಜನರಲ್ಲಿ ಗಂಭೀರತೆಯೇ ಇಲ್ಲದಿರುವುದು ನಮ್ಮ ದೌರ್ಭಾಗ್ಯ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply