(ಇದು ಎನ್ ಎಸ್ ಶ್ರೀಧರ ಅವರ ಅಭಿಪ್ರಾಯಗಳಿಗೆ ನನ್ನ ಪ್ರತಿಕ್ರಿಯೆ. ಪ್ರಜಾವಾಣಿಯಲ್ಲಿ ಪ್ರಕಟವಾಗಿಲ್ಲ.)
ಭಾಷಾ ವಿಜ್ಞಾನ ನಮ್ಮಲ್ಲಿ 50 ವರ್ಷ ಹಿಂದುಳಿದಿದೆ ಎಂಬ ಪ್ರೊ. ಎಸ್.ಎನ್.ಶ್ರೀಧರ ಅವರ (ದಿ. 12.08.2018)ರ ಲೇಖನದಲ್ಲಿ ಕೆಲವು ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ‘ಭಾಷಾವಿಜ್ಞಾನ ನಮ್ಮಲ್ಲಿ 50 ವರ್ಷಗಳಷ್ಟು ಹಿಂದುಳಿದಿದೆ. ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳು ತುಂಬಾ ಹಿಂದುಳಿದಿವೆ. ತಮ್ಮ ಕೆಲಸದಲ್ಲಿ ವಿಫಲವಾಗಿವೆ. ಕನ್ನಡಕ್ಕೆ ಸಂಬಂಧಿಸಿದಂತೆ ಆಧುನಿಕ ಚಿಂತನೆ ಮಾಡುತ್ತಿರುವ ಕೆ.ವಿ.ನಾರಾಯಣ ಶಂಕರಭಟ್ಟರಂಥವರು ಯೂನಿವರ್ಸಿಟಿಗಳಿಂದ ಹೊರಗೇ ಇದ್ದಾರೆ. ಹಾಗಾಗಿ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸರ್ಕಾರ ತಜ್ಞ ವ್ಯಕ್ತಿಗಳಿಗೆ ವಹಿಸಬೇಕು. ಸಂಸ್ಥೆಗಳಿಗಲ್ಲ’ ಎಂದಿದ್ದಾರೆ. ಇದು ಮುಖ್ಯವಾಗಿ ಚರ್ಚೆಯಾಗಬೇಕಾದ ಸಂಗತಿ. ಭಾಷೆ ನಿಂತ ನೀರಲ್ಲ. ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಆದರೆ, ಕರ್ನಾಟದಲ್ಲಿ ಭಾಷೆಯ ಬೆಳವಣಿಗೆ, ತಂತ್ರಜ್ಞಾನದಲ್ಲಿ ಭಾಷೆಯ ಅಳವಡಿಕೆ, ಅಂತರ್ಜಾಲದಲ್ಲಿ ಕನ್ನಡ ಬಳಕೆಗೆ ಎದುರಾಗುವ ಸಮಸ್ಯೆ ಮತ್ತು ಅನುವಾದದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಗಳು ಇತ್ತೀಚೆಗೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾ ವಿದ್ವಾಂಸರು ಹೆಚ್ಚು ಕೆಲಸ ಮಾಡಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಕನ್ನಡದಲ್ಲಿ ನಡೆದಿರುವ ಭಾಷಾ ಸಂಶೋಧನೆಗಳು ಸಂಸ್ಕೃತ, ಇಂಗ್ಲಿಷ್ ಭಾಷೆಯನ್ನು ಆರಂಭದಿಂದ ಅನುಸರಿಸಿದ ಪರಿಣಾಮದಿಂದಾಗಿ ಕನ್ನಡದ್ದೇ ಆದ ವ್ಯಾಕರಣ, ಪರಿಭಾಷೆ, ಪದಗಳನ್ನು ಸೃಷ್ಟಿಸುವ ಕೆಲಸ ಕೂಡ ಹಿಂದುಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಇತ್ತೀಚೆಗೆ ಡಿ.ಎನ್.ಶಂಕರ ಬಟ್ (ಶಂಕರ ಬಟ್ ಅವರು ತಮ್ಮ ಹೆಸರನ್ನು ಭಟ್ ಎಂದು ಬಳಸುವುದಿಲ್ಲ), ಕೆ.ವಿ.ನಾರಾಯಣ ಮುಂದಾಗಿರುವುದನ್ನು ಶ್ರೀಧರ ಗುರುತಿಸಿದ್ದಾರೆ. ಆದರೆ, ಶಂಕರ ಬಟ್ಟರ ಹಾದಿಯಲ್ಲಿ ಸ್ವತಃ ಶ್ರೀಧರ ಅವರು ಕೂಡ ನಡೆಯಲಾರರು ಎನಿಸುತ್ತದೆ. ಇದರೊಂದಿಗೆ ಕನ್ನಡದ ಅತ್ಯುತ್ತಮ ಕೃತಿಗಳನ್ನು, ಕನ್ನಡತ್ವ, ಕನ್ನಡ ಚಿಂತನೆ, ಕನ್ನಡ ಮನಸು, ಕನ್ನಡದ ವೈಶಿಷ್ಟ್ಯತೆಯನ್ನು ತಿಳಿಸುವ ಕೃತಿಗಳನ್ನು ಅನುವಾದಿಸುವವರ ಕೊರತೆ ಇದೆ.
ಡಿ.ಎನ್.ಶಂಕರ ಬಟ್ಟರ ಪ್ರಕಾರ, ಕನ್ನಡದಲ್ಲಿ ಐ, ಔ, ಅರ್ಕಾವೊತ್ತು, ಋ, ಮಹಪ್ರಾಣಾಕ್ಷರಗಳನ್ನು ಬಳಸಬೇಕಿಲ್ಲ. ಈ ಮೂಲಕ ಕನ್ನಡದಲ್ಲಿ ದೊಡ್ಡ ಸಮಸ್ಯೆಯಾಗಿರುವ ಸ್ಷಷ್ಟ ಉಚ್ಛಾರಣೆ ಮತ್ತು ಬರಹದ ಸಮಸ್ಯೆಯನ್ನು ಪರಿಹರಿಸಲು ಹೊಸ ಹಾದಿಯೊಂದನ್ನು ಮೇಲಿನ ವಿದ್ವಾಂಸರು ರೂಪಿಸುತ್ತಿದ್ದಾರೆ. ಆದರೆ, ಅವರ ಚಿಂತನೆಗಳಿಗೆ ಕರ್ನಾಟಕದ ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಇಲಾಖೆಗಳು, ವಿಶ್ವವಿದ್ಯಾಲಯಗಳು ಪೂರಕವಾಗಿ ಕೆಲಸ ಮಾಡುತ್ತಿಲ್ಲ. ಆರ್. ಚಲಪತಿ, ಬಸವರಾಜ ಕೋಡಗುಂಟಿ, ಮಲ್ಲಿಕಾರ್ಜುನ ಮೇಟಿ ಮೊದಲಾದ ಯುವ ವಿದ್ವಾಂಸರು ಶಂಕರ ಬಟ್ಟರ ಹೊಸ ಕನ್ನಡ ಬರಹವನ್ನು ಬಳಸುತ್ತಿದ್ದಾರೆ. ಇದರೊಂದಿಗೆ ಹೊನಲು.ನೆಟ್ ಮತ್ತು ನುಡಿಕನ್ನಡ ವೆಬ್ತಾಣದಲ್ಲಿ ಕೆಲವು ಯುವಕರು ಶಂಕರ ಬಟ್ಟರ ಹೊಸ ಬರಹವನ್ನು ಪ್ರಚಲಿತಕ್ಕೆ ತರಲು ಯತ್ನಿಸುತ್ತಿದ್ದಾರೆ.
ಆದರೆ, ಶಂಕರ ಬಟ್ಟರು ಮಂಡಿಸುತ್ತಿರುವ ಕನ್ನಡ ಬರಹವನ್ನು ಸರಿಪಡಿಸೋಣ, ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳ ಬಳಕೆ ಕುರಿತು ಚಿಂತನೆಗಳು ಬಹುತೇಕ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಪದವಿ, ಪದವಿಪೂರ್ವ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರಿಗೆ ಅಪಥ್ಯವಾಗಿವೆ. ಇದೇ ಕಾರಣದಿಂದಾಗಿ ಮಕ್ಕಳ ಮೇಲೆ ಅನವಶ್ಯಕವಾಗಿ ಸಂಸ್ಕೃತ ಪದಗಳನ್ನು, ವ್ಯಾಕರಣವನ್ನು ಕಲಿಸಲಾಗುತ್ತಿದೆ. ಶಂಕರ ಬಟ್ಟರ ಇನ್ನೊಂದು ಪ್ರಮೇಯವಾದ ಬರಹ ಮತ್ತು ಮಾತಿನ ನಡುವಿನ ಗೊಂದಲದ ಅಂತರ ಪ್ರಮುಖವಾದುದು. ಈ ಪ್ರಮೇಯದ ಪ್ರಕಾರ ಕನ್ನಡದಲ್ಲಿ ಮಾತು ಮತ್ತು ಬರಹದ ನಡುವೆ ಅಂತರವಿದೆ.
ಕಶ್ಟ, ಇಶ್ಟ, ಕ್ರುಶ್ಣ ಎಂದು ಉಚ್ಛರಿಸಲಾಗುವ ಪದಗಳನ್ನು ಬರೆಯುವಾಗ ಮಾತ್ರ ಕಷ್ಟ, ಇಷ್ಟ, ಕೃಷ್ಣ ಎಂಬ ರೂಪವನ್ನು ಬಳಸಲಾಗುತ್ತಿದೆ. ಇನ್ನು ನಿರ್ದೇಶಕದಂತಹ ಪದಗಳಲ್ಲಿ ಕೂಡ ಇಂತಹ ಸಮಸ್ಯೆ ಇದೆ. ಇದು ಭಾಷೆಯನ್ನು ಬಳಸುವ ಬಹುತೇಕರಲ್ಲಿ ಸಮಸ್ಯೆಯಾಗಿಯೇ ಉಳಿದಿದೆ. ಈ ಅಂತರವನ್ನು ಕಡಿಮೆ ಮಾಡಬೇಕು ಎಂಬ ತಿಳಿವಳಿಕೆಯನ್ನು ನಾಡಿನ ಬಹುತೇಕ ಭಾಷಾ ವಿದ್ವಾಂಸರು ಮತ್ತು ಕನ್ನಡ ಭಾಷಾ ಬೋಧಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರೊಂದಿಗೆ ಕನ್ನಡ ಭಾಷೆಯಲ್ಲಿ ಅಕ್ಷರಗಳ ಸಂಖ್ಯೆ 33ಕ್ಕೆ ಇಳಿಸುವ ಶಂಕರ ಬಟ್ಟರ ಆಲೋಚನೆಯನ್ನು ಗಂಭೀರವಾಗಿ ಪರಿಗಣಿಸಿದಲ್ಲಿ, ಕನ್ನಡದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ.
ಇದು ನಿಜಕ್ಕೂ ಭಾಷೆಯನ್ನು ಆಧುನೀಕರಣಕ್ಕೆ ಒಡ್ಡುವ ಕೆಲಸ. ಆದರೆ, ಇಂತಹ ಚಿಂತನೆಗಳಿಗೆ ಕನ್ನಡ ಆಡುಗ ಸಮುದಾಯ ಮತ್ತು ಬೋಧಕ ಸಮುದಾಯದ ನಡುವೆ ಅಂತರವಿದೆ. ಬರೆದಂತೆ ಓದು, ಓದಿದಂತೆ ಬರಹ ಇದ್ದಲ್ಲಿ ಭಾಷೆಯ ತೊಡಕುಗಳು ಮಾಯವಾಗುತ್ತವೆ. ಈ ನಿಟ್ಟಿನಲ್ಲಿ ಕನ್ನಡ ಸಮುದಾಯ ಆಲೋಚಿಸಬೇಕಿದೆ. ಅಲ್ಲದೇ, ಸಂಸ್ಕೃತವನ್ನು ಬಳಸಿದ ಮಾತ್ರಕ್ಕೆ ಕನ್ನಡದ ಸೊಗಡು, ಕಸುವು ಹೆಚ್ಚುತ್ತದೆ ಎಂಬ ಮೂಢನಂಬಿಕೆಯಿಂದ ಕನ್ನಡ ಬೋಧಕ ಸಮುದಾಯ ಬಿಡುಗಡೆ ಹೊಂದಬೇಕಿದೆ.
ಇನ್ನು ಭಾಷಾ ವಿಜ್ಞಾನ ನಮ್ಮಲ್ಲಿ 50 ವರ್ಷ ಹಿಂದುಳಿದಿಯಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಕರ್ನಾಟಕದಲ್ಲಿ ಭಾಷಾ ವಿಜ್ಞಾನ ಏಕೆ ಹಿಂದುಳಿದಿದೆ? (ಆಗಸ್ಟ್, 23, 2018) ಎಂಬ ಲೇಖನದಲ್ಲಿ ಡಾ. ಡಿ. ಪಾಂಡುರಂಗ ಬಾಬು ಅವರು ಮಹತ್ವದ ವಿಷಯಗಳನ್ನು ಮಂಡಿಸಿದ್ದಾರೆ. ಭಾಷಾ ವಿಜ್ಞಾನವನ್ನು ಬೋಧಿಸುವ, ಕಲಿಸುವವರ ಕೊರತೆಯೊಂದಿಗೆ ಭಾಷಾ ವಿಜ್ಞಾನದಲ್ಲಿ ಆಸಕ್ತಿಯಿಂದ ತೊಡಗುವವರ ಸಂಖ್ಯೆ ಕೂಡ ವಿರಳವಾಗಿದೆ. ಭಾಷಾ ವಿಜ್ಞಾನವನ್ನು ತಿಳಿದವರಿಗೆ ಉದ್ಯೋಗ ಭದ್ರತೆಯೂ ಇಲ್ಲವಾದ ಕಾರಣ, ಈ ಕೆಲಸಗಳನ್ನು ಕನ್ನಡ ಬೋಧಕರೇ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಿಐಐಎಲ್ ಮೈಸೂರು, ಕನ್ನಡ ವಿಶ್ವವಿದ್ಯಾಲಯ, ಮತ್ತಿತರ ಸಂಸ್ಥೆಗಳಲ್ಲಿ ನಡೆದಿರುವ ಕೆಲಸಗಳನ್ನು ಹೊರತುಪಡಿಸಿದರೆ ಭಾಷಾ ವಿಜ್ಞಾನವನ್ನು ಒಂದು ಶಿಸ್ತಾಗಿ ಅಧ್ಯಯನ ಮಾಡುವ, ಕಲಿಸುವ ಮತ್ತು ವಿಸ್ತರಿಸುವ ಕೆಲಸ ಬಾಕಿ ಉಳಿದಿದೆ. ಇದಕ್ಕೆ ಸರ್ಕಾರಗಳು ಭಾಷಾ ವಿಜ್ಞಾನ ವಿಷಯವನ್ನು ನಿರ್ಲಕ್ಷಿಸಿರುವುದೂ ಒಂದು ಪ್ರಮುಖ ಕಾರಣವಾಗಿದೆ.
– ಪ್ರದೀಪ್ ಮಾಲ್ಗುಡಿ, 07.09.2018




