ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಅತ್ಯಂತ ಕಹಿ ಘಟನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಕಾಲ್ತುಳಿತ ಘಟನೆಯ ಕುರಿತಂತೆ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಸುಧೀರ್ಘ ಉತ್ತರ ನೀಡಿದ ಅವರು, ಕಾಲ್ತುಳಿತಕ್ಕೆ ಕಾರಣರಾದ ಯಾವುದೇ ವ್ಯಕ್ತಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಿಧಾನಸಭೆಯಲ್ಲಿ ಘೋಷಿಸಿದರು.
ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ತಳ್ಳಿ ಹಾಕಿದರು.
ಈ ಘಟನೆ ನಡೆಯಬಾರದಿತ್ತು. ಈ ಘಟನೆಯಿಂದ ನಮಗೂ ನೋವಾಗಿದೆ. ಈ ಘಟನೆಯ ಬಗ್ಗೆ ನಾನು ಹಿಂದೆಯೂ ವಿಷಾದ ವ್ಯಕ್ತಪಡಿಸಿದ್ದೆ. ಈಗಲೂ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಈ ಘಟನೆಗೆ ಸರ್ಕಾರ ಜವಾಬ್ದಾರಿ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಒತ್ತಾಯ ಸರಿಯಲ್ಲ ಎಂದರು.
ದುರಂತದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕೇಲ್ ಡಿ ಕುನ್ಹಾ ಅವರು ಕಳೆದ ಜುಲೈ ಹತ್ತರಂದು ವರದಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳು ಜುಲೈ 11 ರಂದು ವರದಿ ಕೊಟ್ಟಿದ್ದಾರೆ. ಈ ಘಟನೆಯ ಬಗ್ಗೆ ರಾಜ್ಯ ಹೈಕೋರ್ಟ್ ಕೂಡ ಸ್ವಯಂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ ಎಂದರು.
ಇಡೀ ಘಟನೆಯನ್ನು ನಾವು ಸಿಐಡಿ ತನಿಖೆಗೆ ವಹಿಸಿದ್ದೇವೆ. ದೋಷಾರೋಪ ಪಟ್ಟಿಯೂ ಸಿದ್ಧವಾಗಿದೆ. ನ್ಯಾಯಾಲಯದ ಅನುಮತಿ ಸಿಕ್ಕ ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತೇವೆ ಘಟನೆ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಆ ಸಂಸ್ಥೆಗಳ ಕೆಲವರನ್ನು ಬಂಧಿಸಿದ್ದೆವು. ಈಗ ಅವರೆಲ್ಲಾ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.
ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನುಷ್ಯತ್ವ ಇದ್ದರೆ, ಹೃದಯ ಇದ್ದಿದ್ದರೆ ತಪ್ಪಾಯಿತು ಎಂದು ಕ್ಷಮೆ ಕೇಳಬೇಕು ಎಂದೆಲ್ಲಾ ಪ್ರತಿಪಕ್ಷ ನಾಯಕರು ಹೇಳಿದ್ದಾರೆ. ಆ ಘಟನೆ ನಡೆದ ದಿನವೇ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ನಡೆಯಬಾರದ ಘಟನೆ ನಡೆದಿದೆ. 42 ವರ್ಷಗಳಿಗೂ ಹೆಚ್ಚು ಕಾಲದ ನನ್ನ ರಾಜಕೀಯ ಬದುಕಿನಲ್ಲಿ ಈ ರೀತಿಯ ಕಹಿ ಘಟನೆ ನಡೆದಿದೆ ಎಂದು ನಾನು ಹೇಳಿದ್ದೇನೆ. ನನಗೂ ಈ ಘಟನೆಯ ಬಗ್ಗೆ ದುಃಖ ಇದೆ ಎಂದು ವಿಷಾದ ವ್ಯಕ್ತಪಡಿಸಿದ್ದೇನೆ ಎಂದರು.
ಈ ಘಟನೆಯ ಬಗ್ಗೆ ನನಗೆ ಮಾಹಿತಿ ಗೊತ್ತಾದ ನಂತರ ಇಡೀ ದಿನ ಡಿಸ್ಟರ್ಬ್ ಆಗಿದ್ದೆ. ಈ ಘಟನೆ ಗೊತ್ತಿದ್ದರೂ ಹೋಟೆಲ್‌ಗೆ ದೋಸೆ ತಿನ್ನಲು ಹೋಗಿದ್ದೆ ಎನ್ನುವುದು ತಪ್ಪು. ನಾನು ಹೋಟೆಲ್‌ಗೆ ಹೋಗಿದ್ದು ನಿಜ. ಆದರೆ ಹೋಟೆಲ್‌ನಲ್ಲಿ ನಾನು ತಿಂಡಿ ತಿಂದ ಮೇಲೆ ಈ ಘಟನೆಯ ಬಗ್ಗೆ ಕಾನೂನು ಸಲಹೆಗಾರರು ಮಾಹಿತಿ ನೀಡಿದರು. ಆಗ ನಾನು ಪೊಲೀಸ್ ಆಯುಕ್ತರಿಗೆ ದೂರವಾಣಿ ಮಾಡಿ ವಿಚಾರಿಸಿದೆ. ಆಗ ಅವರು ಒಬ್ಬರು ಸತ್ತಿದ್ದಾರೆ ಎಂದು ಹೇಳಿದರು. ಇದು ನಿಜ ಸಂಗತಿ. ನನಗೂ ಬಹಳ ದುಃಖವಾಗಿದೆ ಎಂದರು.
ಚಿಕ್ಕವಯಸ್ಸಿನ ಹುಡುಗರು ಸತ್ತಿರುವುದು ನನಗೂ ನೋವು ತಂದಿದೆ. ಗೃಹ ಸಚಿವರ ಜತೆ ನಾನು ಸಹ ಆಸ್ಪತ್ರೆಗೆ ಭೇಟಿ ನೀಡಿದ್ದೆ. ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ತನಿಖೆಗೂ ಆದೇಶಿಸಿದೆ. ನಂತರ ಹೈಕೋರ್ಟ್‌ನ ನಿವೃತ್ತ ನ್ಯಾಯಧೀಶರಾದ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆಯೂ ತಿಳಿಸಿದ್ದೆ. ಸರ್ಕಾರವನ್ನು ಅಬೆಟರ್ ಎಂದು ಕರೆದಿದ್ದಾರೆ. ಸರ್ಕಾರ ಈ ಘಟನೆಗೆ ಹೊಣೆಯೇ, ಇಲ್ಲವೇ ಎಂಬುದು ಸಾರ್ವಜನಿಕರಿಗೂ ಗೊತ್ತಿದೆ. ಎಲ್ಲವನ್ನೂ ಜನ ತೀರ್ಮಾನ ಮಾಡುತ್ತಾರೆ ಎಂದರು.
ಇತ್ತೀಚಿಗೆ ನಡೆದ ಕುಂಭಮೇಳದಲ್ಲಿ ಕಾಲ್ತುಳಿತ ಘಟನೆ ಸೇರಿದಂತೆ ಗುಜರಾತ್, ಬಿಹಾರ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡಗಳಲ್ಲಿ ಸಂಭವಿಸಿರುವ ಕಾಲ್ತುಳಿತ ಘಟನೆಗಳನ್ನು ಪ್ರಸ್ತಾಪಿಸಿದ ಅವರು, ಈ ಘಟನೆಗಳಾದಾಗ ಅಲ್ಲಿನ ರಾಜ್ಯಗಳಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಗಳಾಗಿದ್ದರು. ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದಾರಾ ಅವರೆಲ್ಲಾ ಕ್ಷಮೆ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಗುಜರಾತ್‌ನಲ್ಲಿ ಇತ್ತೀಚೆಗೆ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿತು. ಈ ಹಿಂದೆ ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಲಾಯಿತು ವರನಟ ಡಾ. ರಾಜ್‌ಕುಮಾರ್ ಮೃತಪಟ್ಟಾಗ ಗೋಲಿಬಾರ್ ಆಗಿ ನಾಲ್ವರು ಸತ್ತರು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ, ಯಡಿಯೂರಪ್ಪ ಉಪಮುಖ್ಯಮಂತ್ರಿ. ಇವರು ರಾಜೀನಾಮೆ ಕೊಟ್ಟರಾ, ತಪ್ಪಾಯಿತು ಎಂದು ಹೇಳಿದರಾ ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರವನ್ನು ರಾಜಕೀಯ ಮಾಡುವುದು ಬೇಡ. ಕ್ಷಮಾಪಣೆ ಕೇಳಿ ಎಂದು ನಮಗೆ ಪಾಠ ಮಾಡಲು ಬರಬೇಡಿ. ದುರಂತಕ್ಕೆ ಸಂಭವಿಸಿದಂತೆ ಮೂವರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಗುಪ್ತಚರ ಮುಖ್ಯಸ್ಥರನ್ನು ವರ್ಗಾವಣೆಯನ್ನು ಮಾಡಿದ್ದೇವೆ ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದರು.
ಆದರೆ ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು ಮುಖ್ಯಮಂತ್ರಿಗಳು ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ, ಕ್ಷಮಾಪಣೆ ಕೇಳುತ್ತಿಲ್ಲ, ಅವರು ನೀಡಿದ ಉತ್ತರ ನಮಗೆ ತೃಪ್ತಿ ತಂದಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿದರು.




