• ದೀಪ ಸುಸ್ಥಿಯಲ್ಲಿಲ್ಲದಿದ್ದರೆ ಗುತ್ತಿಗೆದಾರರಿಗೆ ದಂಡ!
• ಬಾಕಿ ದೀಪ ಅಳವಡಿಸಲು ಎರಡು ತಿಂಗಳ ಕಾಲಾವಕಾಶ
• ಡೇಟಾ ಇಲ್ಲದೆ ಬಂದ ಅಧಿಕಾರಿಗಳಿಗೆ ಕ್ಲಾಸ್
ಬೆಂಗಳೂರು: ನಗರದ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಶೇಕಡಾ 61.01% ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಆದರೆ, ಈ ಯೋಜನೆ ಕುಂಟುತ್ತಾ ಸಾಗಲು ಕಾರಣವೇನು? ಎಂದು ಅಧಿಕಾರಿಗಳ ಬಳಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟೀಕರಣ ಕೇಳಿದರು.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ನಗರದಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಜಿಬಿಎ ಎಲೆಕ್ಟ್ರಿಕ್ ಎಂಜಿನಿಯರ್ಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಇಡಿ ಬಲ್ಬ್ಗಳನ್ನು ಅಳವಡಿಸುವ ಕುರಿತು 2025 ಮೇ 07 ಮತ್ತು 15 ರಂದು ಕಾರ್ಯಾದೇಶ ನೀಡಲಾಗಿದೆ. ಯೋಜನೆಯಂತೆ ನಗರದಾದ್ಯಂತ ಒಟ್ಟು 3,02,919 ಎಲ್ಇಡಿ ದೀಪಗಳನ್ನು ಅಳವಡಿಸಬೇಕಿತ್ತು, ಆದರೆ ಪ್ರಸ್ತುತ 2,67,270 ದೀಪಗಳನ್ನು ಮಾತ್ರ ಅಳವಡಿಸಲಾಗಿದೆ. ಅಲ್ಲದೆ, ಒಟ್ಟು 24,677 ಸಿಸಿಎಂಎಸ್ (CCMS) ಪ್ಯಾನಲ್ಗಳನ್ನು ಅಳವಡಿಸಬೇಕಿತ್ತು, ಆದರೆ ಪ್ರಸ್ತುತ 7,567 ಪ್ಯಾನಲ್ಗಳನ್ನು ಮಾತ್ರ ಅಳವಡಿಸಲಾಗಿರುವುದು ಏಕೆ? ಬಾಕಿ ಕೆಲಸ ಕುಂಟುತ್ತಾ ಸಾಗಲು ಕಾರಣವೇನು? ಎಂದು ಅಸಮಾಧಾನ ಹೊರಹಾಕಿದರು.
ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲವೆಂಬ ನಿರಂತರ ದೂರುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ವಿದ್ಯುತ್ ಉಳಿಸುವ ಇಂಧನ ದಕ್ಷತೆಯ ಯೋಜನೆಯ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು ಸೂಕ್ತ ಸಮಯಕ್ಕೆ ಯೋಜನೆಯನ್ನು ಪೂರ್ಣಗೊಳಿಸದೆ ಬೋಗಸ್ ಅಂಕಿಅಂಶಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಸಭೆಯಲ್ಲಿ ವಿಷಾದಿಸಿದ ಅವರು, ಬಾಕಿ ಉಳಿದಿರುವ ಎಲ್ಲಾ ಎಲ್ಇಡಿ ದೀಪಗಳು ಮತ್ತು ಸಿಸಿಎಂಎಸ್ ಪ್ಯಾನಲ್ಗಳನ್ನು ಅಳವಡಿಸಲು ಆಗಸ್ಟ್ 3, 2026 ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದರು.
ಪ್ರಸ್ತುತ ಇರುವ ಎಲ್ಲಾ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು, ಅವುಗಳ ಜಾಗದಲ್ಲಿ ಇಂಧನ ದಕ್ಷತೆಯುಳ್ಳ ಎಲ್ಇಡಿ (LED) ದೀಪಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ದೀಪಗಳೇ ಇಲ್ಲದ ಆಯ್ದ ಪ್ರದೇಶಗಳಲ್ಲಿ ಹೆಚ್ಚುವರಿ ಬೀದಿ ದೀಪಗಳನ್ನು ಅಳವಡಿಸಬೇಕು, ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಟೋಮೇಷನ್ ವ್ಯವಸ್ಥೆಯಾದ ಸಿಸಿಎಂಎಸ್ (CCMS) ಅಳವಡಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ದೀಪ ಸುಸ್ಥಿಯಲ್ಲಿಲ್ಲದಿದ್ದರೆ ಗುತ್ತಿಗೆದಾರರಿಗೆ ದಂಡ!: ‘ಸಹಾಯ’ (Sahaya) ಪೋರ್ಟಲ್ನಲ್ಲಿ ಸ್ವೀಕೃತವಾಗುವ ದೂರುಗಳ ಪೈಕಿ ಶೇ.34ರಷ್ಟು ಕಾರ್ಯನಿರ್ವಹಿಸದ ಬೀದಿ ದೀಪಗಳ ಕುರಿತ ದೂರುಗಳು ದಾಖಲಾಗುತ್ತಿವೆ. ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕರು ನೀಡಿದ ದೂರುಗಳನ್ನು 48 ಗಂಟೆಗಳ ಒಳಗಾಗಿ ಪರಿಹರಿಸಬೇಕು. ಒಂದು ವೇಳೆ ಗುತ್ತಿಗೆದಾರರು ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಡಲು ವಿಫಲರಾದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ದೀಪಗಳ ಸಂಖ್ಯೆ ಮತ್ತು ವಿಳಂಬವಾದ ದಿನಗಳ ಆಧಾರದ ಮೇಲೆ ದಂಡದ ಮೊತ್ತವನ್ನು ಲೆಕ್ಕಹಾಕಬೇಕು. ಅಲ್ಲದೆ, ಸರಿಯಾಗಿ ಸ್ಪಂದಿಸದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿದರು.
ಪ್ರಾಥಮಿಕ ಅಂಕಿಅಂಶಗಳಿಲ್ಲದೆ ಸಭೆಗೆ ಏಕೆ ಬರ್ತೀರಿ?: ನಿಮ್ಮದೆ ಇಲಾಖೆಗೆ ಕಾರ್ಯ ಪ್ರಗತಿಯ ಬಗ್ಗೆ ಪ್ರಾಥಮಿಕ ಅಂಕಿಅಂಶಗಳೂ ಇಲ್ಲದೆ ಸಭೆಗೆ ಏಕೆ ಬರ್ತೀರಿ, ಸಂಬಂಧಿತ ಸಚಿವರು ಸಭೆ ಕರೆದಿದ್ದಾರೆ ಎಂದ ಮೇಲೆ ಕನಿಷ್ಠ ಸಿದ್ದತೆಯೂ ಇಲ್ಲದೆ ಬರುವುದು ಎಷ್ಟು ಸರಿ? ಎಂದು ಅಧಿಕಾರಿಗಳ ವಿರುದ್ದ ಮಾತಿನ ಚಾಟಿ ಬೀಸಿದರು.
ಪ್ರಸ್ತುತ ನಗರದ ಐದೂ ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಬಿಲ್ ಎಷ್ಟು ಪಾವತಿಸಲಾಗುತ್ತಿದೆ. ಎಲ್ಇಡಿ ದೀಪ ಅಳವಡಿಸಿದ ನಂತರದ ವ್ಯತ್ಯಾಸ ಎಷ್ಟು ಎಂಬ ಅಂಕಿಅಂಶ ನೀಡುವಂತೆ ಸಚಿವ ಕೃಷ್ಣ ಬೈರೇಗೌಡರು ಸಭೆಯಲ್ಲಿ ಕೋರಿದರು. ಆದರೆ, ಅಧಿಕಾರಿಗಳ ಬಳಿ ಯಾವುದೇ ಅಧಿಕೃತ ಅಂಕಿಅಂಶ ಇರಲಿಲ್ಲ. ಈ ವೇಳೆ ಅಸಮಾಧಾನ ಹೊರಹಾಕಿದ ಅವರು, “ ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ, ಸಭೆ ಕರೆದರೆ ಕನಿಷ್ಠ ಸಿದ್ದತೆಯೂ ಇಲ್ಲದೆ ಮತ್ಯಾಕೆ ನನ್ನ ಮುಖ ನೋಡಿಕೊಂಡು ಹೋಗಲು ಬಂದಿದ್ದಾ? ಸರ್ಕಾರಿ ಸೌಕರಿ ಅಂದ್ರೆ ಕೈಬೀಸ್ಕಂಡು ಬರ್ಬೋದು ಹೋಗ್ಬೋದು ಎಂಬ ಧೋರಣೆ ಬೆಳೆದುಬಿಟ್ಟಿದೆ. ಅಧಿಕಾರಿಗಳ ಇಂತಹ ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು” ಎಂದರು.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರ ಪಾಲಿಕೆ ಆಯುಕ್ತ ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಮುಖ್ಯ ಇಂಜಿನಿಯರ್ ಆನಂದ್, ಸ್ವಯಂಪ್ರಭಾ, ವಿದ್ಯುತ್ ವಿಭಾಗದ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.




