ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್‌ ಅವರೊಂದಿಗಿನ ಒಂದು ಪ್ರಸಂಗ

2 months ago

ಜೆ ಎಚ್ ಪಟೇಲ್ ಸರ್ಕಾರದಲ್ಲಿ ಅನಂತನಾಗ್ BDA ಸಚಿವರೂ ಆಗಿದ್ದರು. ಬಿಎಂಐಸಿ ಯೋಜನೆ ಬಗ್ಗೆ ಗುಟ್ಟುಗುಟ್ಟಾಗಿ ಡೀಲ್‍ಗಳು ನಡೆದಿದ್ದ ಕಾಲ. ಅಂಥಾ ಒಂದು ಸಭೆಯಲ್ಲಿ ಅನಂತನಾಗ್ ಕೂಡ ಇದ್ದರು ಎಂಬ ಸುದ್ದಿ ಪ್ರಕಟವಾಗಿತ್ತು. ಅವರು ‘ಎಲ್ಲರಂತಲ್ಲ’ ಜನಪರ ಕಾಳಜಿಯಿರುವ ವ್ಯಕ್ತಿ ಎಂಬ ಸಲ್ಲದ ಪ್ರಚಾರ ಕೂಡ ಇತ್ತು. ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರ ನೇತೃತ್ವದಲ್ಲಿದ್ದ ಹೋರಾಟ ಸಮಿತಿಯು ಬಿಎಂಐಸಿಯ ಅಕ್ರಮಗಳ ವಿರುದ್ಧ ಹೋರಾಟ ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಈ ಸಚಿವರ ಭೇಟಿಗೋಸ್ಕರ ಪರಿಚಿತರೊಬ್ಬರ ಮೂಲಕ ಬೆಂಗಳೂರಿನ ಮಲ್ಲೇಶ್ವರಂನ ಅವರ ಮನೆಗೆ ಹೋದೆವು. ಬೆಳಿಗ್ಗೆ ಒಂಬತ್ತರ ಸಮಯ ಇರಬಹುದು. ಶ್ರೀಯುತರು ಬಿಳಿಚಡ್ಡಿ, ಬಿಳಿ ಬನಿಯನ್‍ನಲ್ಲಿ ನಾವು ಕೂತಿದ್ದ ಹಾಲ್‍ಗೆ ಬಂದರು. ಕೈಯಲ್ಲಿ ಒಂದು ಬಿಳಿ ಪ್ಯಾಂಟ್. ಹಾಲ್‍ನಲ್ಲಿ ಎಲ್ಲರೆದುರೇ ಪ್ಯಾಂಟ್ ಏರಿಸುತ್ತಾ ‘ರಾಧಾಕೃಷ್ಣ (ಅವರ ಪರಿಚಿತರು) ಏನ್ ಸಮಾಚಾರ ?’ ಅಂತ ಕೇಳಿದರು. ‘ಅಣ್ಣಾ, ಬಿಎಂಐಸಿ ಯೋಜನೆಗೆ ಸಾವಿರಾರು ಎಕರೆ ಭೂಮಿ ಅಕ್ವೈರ್ ಮಾಡ್ತಿದೀರಂತೆ. ರೈತರಲ್ಲಿ ಆತಂಕ ಇದೆ. ಯಾವ್ಯಾವ ಊರಿನಲ್ಲಿ ಅಕ್ವೈರ್ ಆಗುತ್ತೆ? ಪರಿಹಾರ ಹೇಗೆ ಅಂತ ಕೇಳೋಣ ಅಂತ ಬಂದಿದ್ದಾರೆ’ ಅಂದಿದ್ದೇ ತಡ, ಕೂಗಾಡಲಿಕ್ಕೆ, ಚೀರಾಡಲಿಕ್ಕೆ ಶುರು ಮಾಡಿಬಿಡ್ತು ಆಸಾಮಿ. ‘ಏಯ್ ರಾಧಾಕೃಷ್ಣ, ಇಂಥವರನ್ನೆಲ್ಲಾ ಯಾಕೆ ಕರಕೊಂಡ್ ಬರ್ತೀಯಾ? ನಾನ್ಯಾಕೆ ನಿಮಗೆ ಅದೆಲ್ಲ ಹೇಳಬೇಕು ? ಗೆಟ್ ಔಟ್…’ ಇತ್ಯಾದಿ ವದರಲಿಕ್ಕೆ ಶುರು ಮಾಡಿದರು ಆಸಾಮಿ. ಮಾತಿನ ಮಧ್ಯೆ … ಅಜ್ಜಿ ಪಿಂಡ ಅಂತಲೂ ಅಂದರು. ಒಂದು ವಾಕ್ಯವಿರಲಿ, ಅರ್ಧ ವಾಕ್ಯ ಮಾತಾಡಲಿಕ್ಕೂ ಅವಕಾಶ ಇರಲಿಲ್ಲ. ಅಷ್ಟು ವ್ಯಘ್ರಗೊಂಡಿದ್ದರು, ಒಂದೇ ಸಮನೆ ಚೀರಾಡುತ್ತಿದ್ದರು. ಕುಡಿತದ ಘಾಟು ವಾಸನೆ ಬರುತ್ತಿತ್ತು. ರಾತ್ರಿ ಕುಡಿದದ್ದು ಇಳಿದಿರಲಿಲ್ಲವೋ… ಅಥವಾ ಬೆಳ್‍ಬೆಳಿಗ್ಗೆ ಏರಿಸಿದ್ದರೋ ಗೊತ್ತಾಗಲಿಲ್ಲ. ಬೇರೆ ವಿಧಿಯಿಲ್ಲದೆ ವಾಪಸ್ ಬಂದೆವು.

ಇದು ಜನಪ್ರತಿನಿಧಿ, ಸಚಿವ ಎನಿಸಿಕೊಂಡಿದ್ದ ಅನಂತನಾಗ್ ಅವರ ಜೊತೆಗಿನ ನನ್ನ ಚುಟುಕು ಅನುಭವ. ಅನಂತನಾಗ್ ಎತ್ತ ಸಾಗಿದ್ದರೋ ಹಾಗೆ ಮುಂದೆ ಸಾಗಿ ಇಲ್ಲಿಗೆ ತಲುಪಿದ್ದಾರೆ. ಇಂಥವರ ಅಭಿಪ್ರಾಯವನ್ನು ಪ್ರಚುರಪಡಿಸಿ ಜನಮನ್ನಣೆ ಗಳಿಸುವ ಹತಾಶ ಪ್ರಯತ್ನ ಮಾಡುತ್ತಿರುವವರನ್ನು ಕಂಡು ಜಿಗುಪ್ಸೆ ಮೂಡುತ್ತದೆ.

– ದೊಡ್ಡಿಪಾಳ್ಯ ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು

Leave a Reply