ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

11 months ago

ಬೆಂಗಳೂರು: ಆರ್ ಸಿ ಬಿ ಕ್ರಿಕೆಟ್ ತಂಡದ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮತ್ತೊಂದೆಡೆ ಈ ಘಟನೆಗೆ ಕಾರಣವೂ ಯಾರು ಯಾರ ಸೂಚನೆಯ ಮೇರೆಗೆ ವಿಜಯೋತ್ಸವ  ಆಯೋಜಿಸಲಾಗಿತ್ತು ಮತ್ತು ಕಾಲ್ತುಳಿತ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಕಾಲ್ತುಳಿತ ಘಟನೆಯ ಬಗ್ಗೆ ಸ್ವಯಂ ಪ್ರೇರಿತ  ಸಾರ್ವಜನಿಕ ಹಿತಾಸಕ್ತಿಯ ಪ್ರಕರಣ ದಾಖಲಿಸಿಕೊಂಡಿರುವ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ  ವಿ.ಕಾಮೇಶ್ವರ ರಾವ್ ಬೆಳಿಗ್ಗೆ ಈ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡು ವರದಿ ನೀಡಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿದರು.

ಇದಾದ ನಂತರ ಹಲವು ಮಂದಿ ವಕೀಲರು ಮತ್ತು ಖಾಸಗಿ ವ್ಯಕ್ತಿಗಳು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣ ದಾಖಲಿಸಿದರು ಈ ಎಲ್ಲವನ್ನು ಮಧ್ಯಾಹ್ನ ವಿಚಾರಣೆಗೆ ನಿಗದಿ ಪಡಿಸಿದ ವರದಿ ನೀಡಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿತು.

ಮಧ್ಯಾಹ್ನ ನ್ಯಾಯ ಪೀಠದ ಮುಂದೆ ಹಾಜರಾದ ಅಡ್ವೂಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರವಾಗಿ ವರದಿ ಮಂಡಿಸಿದರು.

ಜೂನ್ 3ರಂದು ಆರ್‌ಸಿಬಿ ಐಪಿಎಲ್ ಮ್ಯಾಚ್ ಗೆಲುವು ಸಾಧಿಸಿತು. ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದರು. ಬಂದೋಬಸ್ತ್ ಗಾಗಿ 1,643 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ವಾಟರ್ ಟ್ಯಾಂಕರ್, ಕೆಎಸ್‌ಆರ್ಪಿ ತುಕಡಿ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ 1,600 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಕಾಲ್ತುಳಿತ ಸಂಭವಿಸಿ 56 ಜನರು ಗಾಯಗೊಂಡಿದ್ದರು. ಐವರು ಮಹಿಳೆಯರು ಹಾಗೂ 6 ಪುರುಷರು ಮೃತಪಟ್ಟಿದ್ದಾರೆ. ಕೋಲಾರ, ಉತ್ತರ ಕನ್ನಡ, ತುಮಕೂರು, ಯಾದಗಿರಿ, ಮಂಡ್ಯದಿಂದಲೂ ಬೆಂಗಳೂರಿಗೆ ಜನ ಬಂದಿದ್ದರು. ಒಟ್ಟು ನಿನ್ನೆ ಬೆಂಗಳೂರಿಗೆ 2.5 ಲಕ್ಷ ಜನರು ಬಂದಿದ್ದರು ಎಂದು ಕೋರ್ಟ್ಗೆ ತಿಳಿಸಿದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 34,600 ಜನರಿಗಷ್ಟೇ ವ್ಯವಸ್ಥೆ ಇದೆ. 33 ಸಾವಿರ ಜನರಿಗಷ್ಟೇ ಟಿಕೆಟ್ ನೀಡುತ್ತಾರೆ. ಆದರೆ ನಿನ್ನೆ ಎರಡೂವರೆ ಲಕ್ಷ ಜನರು ಬಂದಿದ್ದರು.ಸ್ಟೇಡಿಯಂಗೆ 21 ಗೇಟುಗಳಿವೆ, ಎಲ್ಲ ತೆರೆದಿತ್ತೆಂಬ ಮಾಹಿತಿಯಿದೆ. 2 ಲಕ್ಷ ಜನರು ಸ್ಟೇಡಿಯಂ ಸುತ್ತಲೇ ಇದ್ದರು. ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನ ಬಂದಿದ್ದರು. ಬೆಂಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರೂ ಪರಿಶೀಲಿಸುತ್ತಿದ್ದರು ಎಂದು ಸ್ಪಷ್ಟನೆ ನೀಡಿದರು.

ಈ ವಾದ ಆಲಿಸಿದ ನ್ಯಾಯಪೀಠ ಇದು ಸರ್ಕಾರ ಆ ಯೋಜನೆ ಮಾಡಿದ ಕಾರ್ಯಕ್ರಮವೇ? ಇಂತಹ ಘಟನೆ ತಡೆಗೆ ಎಸ್‌ಒಪಿ ಇರಬೇಕಲ್ಲವೇ? ವೈದ್ಯಕೀಯ ಸಿಬ್ಬಂದಿ, ಸಿದ್ಧತೆ ಇರಬೇಕಲ್ಲವೇ ಆಂಬುಲೆನ್ಸ್ ವ್ಯವಸ್ಥೆ ಇರಬೇಕಲ್ಲವೇ? ಕಾಲ್ತುಳಿತವಾದಾಗ ಏನು ಮಾಡಬೇಕೆಂಬ ಬಗ್ಗೆ ಸಿದ್ಧ ಇರಬೇಕಲ್ಲವೇ? ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಲ್ಲವೇ? ಇಂತಹ ಮಾರ್ಗಸೂಚಿ ಏನಾದರೂ ಪಾಲಿಸಿದ್ದೀರಾ? ಒಂದೇ ದಿನ ಎರಡು ಕಡೆ ವಿಜಯೋತ್ಸವ ಆಯೋಜನೆ ಮಾಡಿದ್ದು ಯಾಕೆ? ವಾಣಿಜ್ಯ ಉದ್ದೇಶದ ಈ ಕಪ್ ಗೆದ್ದ ತಂಡಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದ್ದು ಯಾಕೆ? ಎಂದು ಪ್ರಶ್ನೆಗಳನ್ನು ಹಾಕಿರುವ ನ್ಯಾಯಪೀಠ ಇವುಗಳಿಗೆಲ್ಲ ಸಮಗ್ರವಾದ ಉತ್ತರ ನೀಡಬೇಕಿದೆ ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.

ಮತ್ತೊಂದೆಡೆ ಈ ಘಟನೆಯ ಬಗ್ಗೆ ರಾಜ್ಯಪಾಲರು ತೀವ್ರ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ವಿಧಾನಸೌಧ ಮುಂಭಾಗದಲ್ಲಿ ವಿಜಯೋತ್ಸವ ಮತ್ತು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಇದೇ ಸಮಯದಲ್ಲಿ ಮತ್ತೊಂದು ವಿಜಯೋತ್ಸವ ಆಚರಣೆಗೆ ಅನುಮತಿ ನೀಡಿದವರು ಯಾರು ಎಂದು ಕೇಳಿರುವ ರಾಜ್ಯಪಾಲರು ಕಾಲ್ತುಳಿತ ಘಟನೆಯಲ್ಲಿ ಮೃತರಾದವರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸೂಕ್ತ ರೀತಿಯ ಪರಿಹಾರ ಮತ್ತು ನೆರವು ಕಲ್ಪಿಸುವಂತೆ ಸಲಹೆ ನೀಡಿದ್ದಾರೆ.

Leave a Reply