ಶಿವಮೊಗ್ಗ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮತ್ತು ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲು ತೀರ್ಮಾನಿಸಿದೆ.
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
- ರಾಹುಲ್ ಗಾಂಧಿ ಅವರು ತಕ್ಷಣವೇ ನಾಡಿನ ಜನತೆಯ ಕ್ಷಮೆಯಾಚಿಸಬೇಕು!: ಆರ್ ಅಶೋಕ್
- ಬೆಂಗಳೂರು ಪೇಟೆಯ ವೈಟ್ ಟಾಪಿಂಗ್ ರಸ್ತೆಯಲ್ಲಿ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ: ಕೃಷ್ಣ ಬೈರೇಗೌಡ
ಜೂನ್ 13 ರಂದು ಬೆಂಗಳೂರಿನಲ್ಲಿ ಪಕ್ಷದ ಎಲ್ಲಾ ಶಾಸಕರು ಸಂಸದರು ಮತ್ತು ಹಿರಿಯ ನಾಯಕರು ಧರಣಿ ನಡೆಸಲಿದ್ದು ಜೂನ್ 16ರಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಘೋಷಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತದ ದುರ್ಘಟನೆಯಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಎ 1, ಎ 2 ಹಾಗೂ ಎ 3 ಆರೋಪಿಗಳು. ಆದರೆ ಲೋಪ ಮುಚ್ಚಿ ಹಾಕಲು ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿದ್ದಾರೆ ಎಂದರು.
ಕಾಲ್ತುಳಿತ ಘಟನೆಯ ನೈತಿಕ ಹೊಣೆ ಹೊತ್ತು ಈ ಮೂವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಲು ನೆರವಾಗುವ ದೃಷ್ಟಿಯಿಂದ ಘಟನೆಯ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದರು.
ಆರ್ ಸಿಬಿ ಗೆಲುವಿನ ಜನಪ್ರಿಯತೆಯ ವಾತಾವರಣವನ್ನು ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪೈಪೋಟಿಗಿಳಿದಿದ್ದರು. ಹೀಗಾಗಿಯೇ ವಿಧಾನಸೌಧದ ಆವರಣದ ಕಾರ್ಯಕ್ರಮ ಒಬ್ಬರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ವಿಜಯೋತ್ಸವವನ್ನು ಮತ್ತೊಬ್ಬರು ಹಂಚಿಕೊಂಡಿದ್ದರು.
ಅದೇ ಕಾರಣಕ್ಕೆ ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಗೆ ನಾನು ಜವಾಬ್ದಾರ ಅಲ್ಲ’ ಎಂದು ಸಿಎಂ ಹೇಳುತ್ತಿದ್ದಾರೆ. ಪರೋಕ್ಷವಾಗಿ ಡಿಸಿಎಂ ಕಡೆ ಬೆಟ್ಟು ಮಾಡುತ್ತಿದ್ದಾರೆ ಎಂದರು.
ಕಾಲ್ತುಳಿತದಲ್ಲಿ 11 ಜನ ಅಮಾಯಕರ ಸಾವಿನ ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಪರಿಗಣಿಸಿದೆಯೋ ಗೊತ್ತಿಲ್ಲ. ಆ ಪಕ್ಷದ ಹೈಕಮಾಂಡ್ ಪ್ರಬಲವಾಗಿದ್ದರೆ, ರಾಜ್ಯದ ಜನರ ಆಕ್ರೋಶವನ್ನು ಗ್ರಹಿಸಿ ಇಷ್ಟೊತ್ತಿಗೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆ ಪಡೆಯಬೇಕಿತ್ತು. ಆದರೆ ರಾಜ್ಯದಲ್ಲಿ ಪ್ರಬಲರೇ ಅಧಿಕಾರದಲ್ಲಿ ಜಂಡಾ ಹೂಡಿದ್ದಾರೆ. ಇಲ್ಲಿ ಬಾಲವೇ ದೇಹವನ್ನು ಅಲುಗಾಡಿಸುತ್ತಿದೆ. ಹೀಗಾಗಿ ಸರ್ಕಾರ ಹುಚ್ಚು ಕುದುರೆಯಂತೆ ವರ್ತಿಸುತ್ತಿದೆ ಎಂದರು.
ರಾಜ್ಯದ ಇತಿಹಾಸದಲ್ಲಿ ಜೂನ್ 4 ಅತ್ಯಂತ ಕರಾಳ ದಿನ. ಆ ದುರ್ಘಟನೆಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಮುಂದಾಗಬೇಕು.ಆ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿರುವೆ ಎಂದು ವಿಜಯೇಂದ್ರ ಪತ್ರ ಪ್ರದರ್ಶಿಸಿದರು.
ರಾಜೀನಾಮೆಯ ಬೇಡಿಕೆಗೆ ಸ್ಪಂದನೆ ದೊರೆತರೆ ಸರಿ. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತು ಹಾಕಲು ಜೂನ್ 13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿರೋಧ ಪಕ್ಷವಾಗಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಆ ದಿನ ಸಿಎಂ ಮನೆಗೆ ಮುತ್ತಿಗೆ ಕೂಡ ಹಾಕಲಾಗುವುದು. ಜೂನ್ 16 ರಂದು ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ ಎಂದರು.




