ಹೋರಾಟದ ಕಿಚ್ಚನ್ನು ನಾಡಿನೆಲ್ಲೆಡೆ ಹಬ್ಬಿಸಿದವರು ಡಾ. ಸಿದ್ಧಲಿಂಗಯ್ಯ: ಪ್ರೊ. ರಮೇಶ್

4 months ago

ಬೆಂಗಳೂರು: ಸಾಮಾನ್ಯವಾದ ಕಡುಬಡತನ ಮತ್ತು ಶೋಷಿತ ಸಮುದಾಯದಿಂದ ಬಂದು, ತಮ್ಮ ಹೋರಾಟದ ಕಿಚ್ಚನ್ನು ನಾಡಿನೆಲ್ಲೆಡೆ ಹಬ್ಬಿಸಿದವರು ಕವಿ ಡಾ. ಸಿದ್ಧಲಿಂಗಯ್ಯನವರು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ರಮೇಶ್ ಹೇಳಿದರು.

ಸರ್ಕಾರಿ ಕಲಾ ಕಾಲೇಜಿನಲ್ಲಿ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ಏರ್ಪಡಿಸಿದ್ದ ಹೊಲೆಮಾದಿಗರ ಹಾಡು – ೫೦, ಡಾ. ಸಿದ್ಧಲಿಂಗಯ್ಯ – ೭೨ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಬದುಕಿನಲ್ಲಿ ಕಂಡುಂಡ ನೋವುಗಳನ್ನು ಹೋರಾಟದ ಹಾಡುಗಳಾಗಿ ರಚಿಸಿದರು. ಆ ಹಾಡುಗಳು ನಾಡಿನಲ್ಲಿ ನಡೆದ ಚಳವಳಿಗಳಲ್ಲಿ ಸಶಕ್ತ ಧ್ವನಿಯಾಗಿ ಕಿಚ್ಚಿನಂತೆ ಹಬ್ಬಿದವು. ನೊಂದವರಿಗೆ ಸಾಂತ್ವನವನ್ನು ಹೇಳಿದವಲ್ಲದೆ, ಅಸಮಾನತೆಯನ್ನು ಕಿತ್ತೊಗೆದು ಸಮಾನತೆಯನ್ನು ಸಾಧಿಸುವಲ್ಲಿ ಶಕ್ತಿಯಾದವು ಎಂದರು.

ಕಾಲ ಬದಲಾದರೂ ಅಂದಿನ ಬಿಕ್ಕಟ್ಟುಗಳು ಇಂದಿಗೂ ಬೇರೆ ನೆಲೆಯಲ್ಲಿವೆ. ಇಂದಿನ ಹಲವು ಬಿಕ್ಕಟ್ಟುಗಳಿಗೆ ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ಪರಿಹಾರದ ಮಾರ್ಗಗಳಿವೆ. ಇವನ್ನು ನಾಡಿನ ನೊಂದ, ಶೋಷಿತ ಜನತೆ ಮತ್ತು ಹೋರಾಟಗಾರರು ಗ್ರಹಿಸಿ ಸ್ಪೂರ್ತಿ ಮತ್ತು ಪ್ರೇರಣೆಯನ್ನು ಪಡೆಯಲಿ. ಇದಕ್ಕೆ ಇಂದು ಆಯೋಜಿನೆಯಾಗಿರುವ ವಿಚಾರ ಸಂಕಿರಣವು ವೇದಿಕೆಯಾಗಲಿ. ಮುಖ್ಯವಾಗಿ ಎಪ್ಪತ್ತರ ದಶಕದಲ್ಲಿ ಇದೇ ಕಾಲೇಜಿನಲ್ಲಿ ಕವಿಗಳು ವಿದ್ಯಾರ್ಥಿಯಾಗಿದ್ದು, ಹೊಲೆಮಾದಿಗರ ಹಾಡನ್ನು ರಚಿಸಿದರು ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಸಿ. ನಾಗೇಂದ್ರಕುಮಾರ್ ಮಾತನಾಡಿ, ಸಾಮಾಜಿಕ ಬದ್ಧತೆ ಮತ್ತು ಪ್ರಸ್ತುತತೆಯನ್ನೊಳಗೊಂಡ ಕವಿ ಡಾ. ಸಿದ್ಧಲಿಂಗಯ್ಯನವರು ಎಂದರು.

ಸಿದ್ಧಲಿಂಗಯ್ಯನವರ ಮಾತಿನಲ್ಲಿ ವಿನಯ ಮತ್ತು ವಿಡಂಬನೆಯಿದ್ದು, ಆಂತರ್ಯದಲ್ಲಿ ಪ್ರತಿರೋಧದ ನೆಲೆಗಳಿವೆಯೆಂದು ಕೆಲವು ಪ್ರಸಂಗಗಳನ್ನು ಉದಾಹರಿಸಿ ಹೇಳಿದರು.

ಡಿ.ಆರ್. ನಾಗರಾಜರು ಹೇಳಿದಂತೆ ಖಡ್ಗವಾಗಲಿ ಕಾವ್ಯ ಜನರ ನಾಡಿಗೆ ಮಿಡಿವ ಪ್ರಾಣಮಿತ್ರ ಎಂಬಂಥ ಕಾವ್ಯವನ್ನು ಸಿದ್ಧಲಿಂಗಯ್ಯನವರು ಬರೆದರು. ನಾಡಿನಲ್ಲಿ ನಡೆದ ದಲಿತ ಚಳವಳಿ, ಹೋರಾಟಗಳಿಗೆ ಸಿದ್ಧಲಿಂಗಯ್ಯನವರ ಹಾಡುಗಳು ಸಶಕ್ತ ಧ್ವನಿಗಳಾಗಿದ್ದವು ಎಂದರು.

ಬೆಂಗಳೂರು ವಿಶ್ವವಿದ್ಯಾಲಯ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಬಿ. ಗಂಗಾಧರ್ ಮಾತನಾಡಿ, ಡಾ. ಸಿದ್ಧಲಿಂಗಯ್ಯನವರ ಕಾವ್ಯ, ಹೋರಾಟ ಹಾಗೂ ಬದುಕನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಮರ್ಶಕರಾದ ಡಾ. ಹೆಚ್. ದಂಡಪ್ಪ ಅವರು ಡಾ. ಸಿದ್ಧಲಿಂಗಯ್ಯನವರ ಬದುಕು, ಹೋರಾಟ ಹಾಗೂ ಕಾವ್ಯವನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ಮಧ್ಯಾಹ್ನ ನಡೆದ ಡಾ. ಸಿದ್ಧಲಿಂಗಯ್ಯನವರ ಮೆಲುಕು ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ಚಾಲನೆ ನೀಡಿ ಮಾತನಾಡಿ, ಎಪ್ಪತ್ತರ ದಶಕದಲ್ಲಿ ನಡೆದ ಚಳವಳಿ ಮತ್ತು ಹೋರಾಟಗಳಲ್ಲಿ ಡಾ. ಸಿದ್ಧಲಿಂಗಯ್ಯನವರು ಪ್ರಮುಖರು. ತಾವು ಮತ್ತು ತಮ್ಮ ಸಮುದಾಯ ಎದುರಿಸಿದ ನೋವುಗಳನ್ನು ಹಾಡುಗಳನ್ನಾಗಿ ರಚಿಸಿದರು. ಅವು ಕವನ ಸಂಕಲನವಾಗಿ ಪ್ರಕಟಗೊಳ್ಳುವ ಮೊದಲೇ ಹೋರಾಟದ ಧ್ವನಿಗಳಾಗಿ ಹೊರಹೊಮ್ಮಿದವು ಎಂದರು.

ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ವಿಧಾನ ಪರಿಷತ್ ಸದಸ್ಯರಾದ ಮೋಹನ್ ಕೊಂಡಜ್ಜಿ, ಲೇಖಕರಾದ ಡಾ. ಅಗ್ರಹಾರ ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕರಾದ ಶೂದ್ರ ಶ್ರೀನಿವಾಸ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ, ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ಗಾಯಕರಾದ ಅಪ್ಪಗೆರೆ ತಿಮ್ಮರಾಜು ಮತ್ತು ಪಿಚ್ಚಳ್ಳಿ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಭಾಗವಹಿಸಿದ ಸಿದ್ಧಲಿಂಗಯ್ಯನವರೊಂದಿಗಿನ ಒಡನಾಟದ ಹಲವು ಪ್ರಸಂಗಗಳನ್ನು ಹೇಳಿದರು.

ಸಿ.ರಮಾಕುಮಾರಿ ಉಪಸ್ಥಿತರಿದ್ದರು. ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿವಿಧ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

Leave a Reply