ವಿದ್ಯಾಶಂಕರ ಪ್ರಶಸ್ತಿ ಮತ್ತು ಪುರಸ್ಕಾರ

4 years ago

ಬೆಂಗಳೂರು: ಡಾ. ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು 2020ನೇ ಸಾಲಿಗೆ ಹಿರಿಯ ಸಂಶೋಧಕರಾದ ತುಮಕೂರಿನ ವಿದ್ವಾನ್ ಸಿದ್ಧಗಂಗಯ್ಯ ಅವರಿಗೆ ವಿದ್ಯಾಶಂಕರ ಪ್ರಶಸ್ತಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರಿಗೆ ವಿದ್ಯಾಶಂಕರ ಪುರಸ್ಕಾರವನ್ನು ಹಾಗೂ 2021ನೇ ಸಾಲಿನಲ್ಲಿ ಹಿರಿಯ ಸಂಶೋಧಕ,  ವಿದ್ವಾಂಸರಾದ ಧಾರವಾಡದ ಡಾ. ವೀರಣ್ಣ ರಾಜೂರ ಅವರಿಗೆ ವಿದ್ಯಾಶಂಕರ ಪ್ರಶಸ್ತಿ ಮತ್ತು ಯುವ ಸಂಶೋಧಕಿ ಡಾ. ಗಂಗಾಂಬಿಕೆ ಅವರಿಗೆ ವಿದ್ಯಾಶಂಕರ ಪುರಸ್ಕಾರವನ್ನು ಘೋಷಿಸಿದೆ.

ವಿದ್ಯಾಶಂಕರ ಪ್ರಶಸ್ತಿಯು ತಲಾ ಇಪ್ಪತ್ತೈದು ಸಾವಿರ ರೂಪಾಯಿ ನಗದು ಹಾಗೂ ವಿದ್ಯಾಶಂಕರ ಪುರಸ್ಕಾರವು ತಲಾ ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕರಾಗಿದ್ದ ಡಾ. ಎಸ್. ವಿದ್ಯಾಶಂಕರ ಅವರು ಕನ್ನಡದ ಮಹತ್ವದ ಸಂಶೋಧಕರು, ವಿದ್ವಾಂಸರಾಗಿದ್ದರು. ಅವರು ದಿನಾಂಕ 29-07-2015ರಂದು ಕಾಲವಶರಾದ ಸಂದರ್ಭದಲ್ಲಿ ಅವರ ಒಡನಾಡಿಗಳು, ಹಿತೈಷಿಗಳು, ವಿದ್ಯಾರ್ಥಿಗಳು, ಕುಟುಂಬದವರು ಸೇರಿ “ಡಾ. ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ”ವನ್ನು ಸ್ಥಾಪಿಸಿದ್ದಾರೆ. ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಹಿರಿಯ ಸಂಶೋಧಕರೊಬ್ಬರಿಗೆ ‘ವಿದ್ಯಾಶಂಕರ ಪ್ರಶಸ್ತಿ’ಯನ್ನು ಹಾಗೂ ಯುವ ಸಂಶೋಧಕರಿಗೆ ‘ವಿದ್ಯಾಶಂಕರ ಪುರಸ್ಕಾರ’ವನ್ನು ನೀಡುತ್ತಿದೆ.

ನವೆಂಬರ್ 18ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಎಂ.ಜಿ.ನಾಗರಾಜ ಅವರು ವಿದ್ಯಾಶಂಕರ ಪ್ರಶಸ್ತಿಯನ್ನು ಹಾಗೂ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರು ವಿದ್ಯಾಶಂಕರ ಪುರಸ್ಕಾರವನ್ನು ಪ್ರದಾನ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಅವರು ಅಧ್ಯಕ್ಷತೆಯನ್ನು ಹಾಗೂ ಮಹಾಪೋಷಕರಾದ ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು.

Leave a Reply