ರಾಜಕೀಯ, ಸಾಮಾಜಿಕ ಫ್ಯಾಸಿಸಂ ಮನಮೋಹನ್ ಸಿಂಗ್ ರ ಆಡಳಿತದ ಬಳವಳಿ

1 year ago

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ತೀವ್ರ ಸಂತಾಪಗಳು.

ಭಾರತದ ಮುಕ್ತಮಾರುಕಟ್ಟೆ, ಉದಾರೀಕರಣ ನೀತಿಗಳ ಪಿತಾಮಹ ಎಂದು ಕರೆಯಲ್ಪಡುವ ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿ, ಪ್ರಧಾನಿಯಾಗಿ ಜಾರಿಗೆ ತಂದ ಆರ್ಥಿಕ ನೀತಿಗಳಿಗಾಗಿ ಬಹಳಷ್ಟು (ಲೆಕ್ಕಕ್ಕಿಂತ ಹೆಚ್ಚಾಗಿಯೆ) ಹೊಗಳಲ್ಪಡುತ್ತಾರೆ. ಮುಕ್ತ ಆರ್ಥಿಕ ನೀತಿಯಿಂದ ಉಂಟಾಗಿರುವ ಅವಾಂತರಗಳನ್ನು ವಿರೋಧಿಸುವವರೂ ಮನ ಮೋಹನ ಸಿಂಗ್ ರ ಆಡಳಿತ, ಆರ್ಥಿಕ ಕ್ರಮಗಳನ್ನು ಹೊಗಳುವ ಚೋದ್ಯವನ್ನೂ ನಾವು ನೋಡುತ್ತಿದ್ದೇವೆ. ನರೇಂದ್ರ ಮೋದಿ ವೈಫಲ್ಯಗಳನ್ನು ಟೀಕಿಸುವಾಗ ಸಿಂಗ್ ಅವರನ್ನು ನೆನಪಿಸಿಕೊಳ್ಳುವುದು, ಹೊಗಳುವುದು ಇಂತಹ ಹಲವರ ಅಭ್ಯಾಸ.

ಭಾರತ ಈ ದಿನಗಳಲ್ಲಿ ಏನಾಗಿದೆಯೊ, ಏನನ್ನು ಅನುಭವಿಸುತ್ತಿದೆಯೊ (ಆರ್ಥಿಕ, ರಾಜಕೀಯ, ಸಾಮಾಜಿಕ) ಅದರಲ್ಲಿ ಮನ ಮೋಹನ ಸಿಂಗ್ ರ ಆಡಳಿತ ಹಾಗೂ ಅದರ ನೀತಿಗಳ ದಟ್ಟ ಪರಿಣಾಮ ಇದೆ. ಇಂದು ಕ್ರೋನಿ ಕ್ಯಾಪಿಟಲಿಸಂ ಉಂಟು ಮಾಡಿರುವ ಆರ್ಥಿಕ ಫ್ಯಾಸಿಸಂ, ಸಂಘ ಪರಿವಾರ ಉಂಟು ಮಾಡಿರುವ ರಾಜಕೀಯ, ಸಾಮಾಜಿಕ ಫ್ಯಾಸಿಸಂ ಮನಮೋಹನ ಸಿಂಗ್ ರ ಆಡಳಿತದ ಬಳವಳಿ ಎಂಬುದರ ಕುರಿತು ಅನುಮಾನ ಬೇಡ.

ಮನಮೋಹನ್ ಸಿಂಗ್ ವ್ಯಕ್ತಿಗತವಾಗಿ ಸಜ್ಜನ ಎಂಬುದರಲ್ಲಿ ಬಹುಷ ಯಾರಿಗೂ ತಕರಾರು ಇಲ್ಲ. ವ್ಯಕ್ತಿಗತ ಸಜ್ಜನಿಕೆ ವ್ಯಕ್ತಿ ನೀಡುವ ಆಡಳಿತದಲ್ಲಿ ದೊಡ್ಡ ಪಾತ್ರ ವಹಿಸುವುದಿಲ್ಲ. ಅವರ ಆಡಳಿತವನ್ನು ನಿರ್ದೇಶಿಸುವುದು, ಒಳಿತು, ಕೆಡುಕುಗಳನ್ನು ನಿರ್ಧರಿಸುವುದು ಅವರು ಹೊಂದಿರುವ ನೀತಿಗಳು.

ಮನ ಮೋಹನ್ ಸಿಂಗ್ ಅವರು ಹೊಂದಿದ್ದ ಆರ್ಥಿಕ ನೀತಿಗಳು ನೆಹರು, ಇಂದಿರಾ ಹೊಂದಿದ್ದ ಆರ್ಥಿಕ ನೀತಿಗಳಿಗೆ ತೀರಾ ವಿರುದ್ಧವಾಗಿತ್ತು‌‌. ಅದು ಬಿಜೆಪಿ ಸೇರಿದಂತೆ ಬಲಪಂಥೀಯರು ಹೊಂದಿದ್ದ ಆರ್ಥಿಕ ನೀತಿಗಳ ಸುಧಾರಿತ ರೂಪ ಆಗಿತ್ತು‌. (ಅಥವಾ ಹೆಚ್ಚು ಆಕ್ರಮಣಕಾರಿ). ಅವರು ವಿಶ್ಯ ಬ್ಯಾಂಕ್ ಪ್ರಣೀತ ಆರ್ಥಿಕ ನೀತಿಗಳ ಪ್ರಬಲ ಪ್ರತಿಪಾದಕರು ಆಗಿದ್ದರು. ವಿಶ್ವ ಬ್ಯಾಂಕ್ ಪ್ರಣೀತ ಆರ್ಥಿಕ ನೀತಿಗಳು ಯಾವುದೇ ಅಭಿವೃದ್ದಿ ಶೀಲ ದೇಶಗಳನ್ನು ಉದ್ಧಾರ ಮಾಡಿದ ಒಂದು ಉದಾಹರಣೆಯೂ ಈ ಜಗತ್ತಿನಲ್ಲಿಲ್ಲ. ಮನಮೋಹನ್ ಸಿಂಗ್ ಚಾಣಾಕ್ಷ ಆರ್ಥಿಕ ತಜ್ಞ ಆಗಿದ್ದುದರಿಂದ ಉದಾರೀಕರಣದ ಆರ್ಥಿಕ ನೀತಿಗಳು ಉಂಟು ಮಾಡುವ ಗಂಭೀರ ಸ್ಥಿತಿಯನ್ನು ಒಂದಿಷ್ಟು ಮುಂದೂಡಬಲ್ಲ, ಆಗಿರುವ ಗಾಯಗಳಿಗೆ ಮುಲಾಮು ಹಚ್ಚಿ ಉರಿಯನ್ನು ತಹಬಂದಿಯಲ್ಲಿ ಇಡಬಲ್ಲ ಜಾಣ ಆಗಿದ್ದರು‌.

ಮನ ಮೋಹನ್ ಸಿಂಗರು ವಿತ್ತ ಸಚಿವರಾಗಿ, ಪ್ರಧಾನಿಯಾಗಿ ಜಾರಿಗೆ ತಂದ ಉದಾರೀಕರಣದ ನೀತಿಗಳೆ ಇಂಡಿಯಾದಲ್ಲಿ ಅಂಬಾನಿ, ಅದಾನಿ ಎಂಬ ಹೊಸ ಮಾದರಿಯ ಬಂಡವಾಳದಾರರ ವರ್ಗವನ್ನೇ ಸೃಷ್ಟಿಸಿತು. ಇದು ಆರ್ಥಿಕ ಫ್ಯಾಸಿಸಂಗೆ ದಾರಿಯಾಯಿತು. ಹಸಿದವರ (ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ವಂಚಿತ) ದಂಡುಗಳೇ ದೇಶದ ಎಲ್ಲೆಡೆ ಸೃಷ್ಟಿಯಾದವು. ಒಂದೆಡೆ ಅತಿ ಶ್ರೀಮಂತರು ಹಾಗೂ ಅವರ ಕಣ್ಣು ಕೋರೈಸುವ ಕೊಳ್ಳುಬಾಕ ಸಂಸ್ಕೃತಿ, ಇನ್ನೊಂದೆಡೆ ಹಸಿವಿಗೆ ತುತ್ತಾದ, ಶಿಕ್ಷಣ, ಆರೋಗ್ಯ,ಉದ್ಯೋಗದಿಂದ ವಂಚಿತರಾದ ಅಶಾಂತ ಜನ ಸಮೂಹ…

ಇಂತಹ ಹುಲುಸಾದ ವಾತಾರವರಣದಲ್ಲೆ ಬಲಪಂಥೀಯ ಚಿಂತನೆಗಳು ಸಮೃದ್ಧವಾಗಿ ಬೆಳೆದವು. ನರೇಂದ್ರ ಮೋದಿ, ಅಮಿತ್ ಶಾ ಪಟ್ಟಾಭಿಷೇಕವೂ ಬಹಳ ಸುಲಭದಲ್ಲಿ ಆಗಿ ಹೋಯ್ತು. ಮನಮೋಹನ್ ಸಿಂಗ್ ರ ನೀತಿಗಳಿಂದ ದೈತ್ಯರಂತೆ ಬೆಳೆದು ಕೊಬ್ಬಿ ನಿಂತಿರುವ ಕಾರ್ಪೊರೇಟ್ ಬಂಡವಾಳಿಗರ ಬೆಂಬಲವೂ ಸಹಜವಾಗಿ ಈ ಬಲ ಪಂಥೀಯ ಆಡಳಿತಕ್ಕೆ ಸಿಕ್ಕಿತು‌. ಅದು ರಾಜಕೀಯ ಸರ್ವಾಧಿಕಾರ, ಫ್ಯಾಸಿಸಂಗೆ ರಹದಾರಿಯಾಯ್ತು.

ಈಗ ದೇಶದಲ್ಲಿ ಕಣ್ಣು ಕೋರೈಸುವ ಸಿರಿತನ, ಕರುಳು ಚುರುಕ್ ಅನ್ನುವ ಬಡತನಗಳ ನಡುವೆ ದೊಡ್ಡ ಕಂದರ ನಿರ್ಮಾಣಗೊಂಡಿದೆ‌. ಹಸಿದ ಜನಗಳ ನಡುವೆ ಧರ್ಮ (ದ್ವೇಷ) ದ ಗೋಡೆಗಳು ಎದ್ದಿವೆ. ಪ್ರಜಾಪ್ರಭುತ್ವ ಏದುಸಿರು ಬಿಡುತ್ತಿದೆ. ಸಂವಿಧಾನ ಅಪಾಯಕ್ಕೆ ಒಳಗಾಗಿದೆ. ನಾವು ಈ ಸ್ಥಿತಿಗೆ ಕಾರಣವಾದ ನೈಜ ಕಾರಣಗಳ ಕುರಿತು ಚಿಂತಿಸದೆ, ಮನ ಮೋಹನ್ ಸಿಂಗ್ ಪ್ರಧಾನಿಯಾಗಿ ಇರಬೇಕಿತ್ತು ಎಂದು ಲೊಚಗುಟ್ಟುತ್ತೇವೆ. ಆರ್ಥಿಕ ಸರ್ವಾಧಿಕಾರಿಗಳು ಮೀಸೆಯ ಮರೆಯಲ್ಲೆ ನಗುತ್ತಾರೆ.

ಬೇರೆ ಎಲ್ಲಾ ಇರಲಿ, ಕಾಂಗ್ರೆಸ್ ಪಕ್ಷ ಇಂದು ನಡು ಮುರಿದ ಬಾಳೆ ಗಿಡದ ಸ್ಥಿತಿಗೆ ತಲುಪಲು ಇದೇ ಮನಮೋಹನ್ ಸಿಂಗ್ ರ ಆಡಳಿತ, ಆರ್ಥಿಕ ನೀತಿಗಳೇ ಪ್ರಧಾನ ಕಾರಣ ಎಂಬ ಅರಿವಾದರು ಇರಬೇಕು. ಮನ ಮೋಹನ್ ಸಿಂಗ್ ರಿಂದ ಕಳಚಿಕೊಂಡು ನೆಹರೂ, ಇಂದಿರಾ ಕಡೆಗೆ ಚಲಿಸದೆ ಕಾಂಗ್ರೆಸ್ ಗೆ ಬೇರೆ ದಾರಿ ಇಲ್ಲ. ದೇಶ ಹಾಗೂ ದೇಶದ ಭವಿಷ್ಯದ ಕುರಿತು ಕಾಳಜಿ ಉಳ್ಳವರು ಈ ಕುರಿತು ಗಂಭೀರ ಚರ್ಚೆಗೆ ಇಳಿಯಲು ಇದು ಸಕಾಲ. ಉದಾರೀಕರಣ, ಮುಕ್ತ ಮಾರುಕಟ್ಟೆ ನೀತಿಗಳು ಉಂಟು ಮಾಡಿರುವ ಅನಾಹುತಗಳ ಕುರಿತು ಗಂಭೀರ ಚರ್ಚೆ ನಡೆಸುವುದೇ ಮನ ಮೋಹನ್ ಸಿಂಗ್ ರ ಅಗಲಿಕೆಯ ಈ ಸಂದರ್ಭದ ತುರ್ತು.

ಸಜ್ಜನ, ಮುಕ್ತ ಆರ್ಥಿಕ ನೀತಿಯ ಪಿತಾಮಹನಿಗೆ ಮತ್ತೊಮ್ಮೆ ಸಂತಾಪಗಳು.

– ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು

Leave a Reply