ಬಂಧುತ್ವದ ಭಾಷಣ ಬಿಗಿದಿರುವುದು ಈಗ ಮಂಗಳೂರಿನ ರಾಜಕೀಯ ಪಡಸಾಲೆಗಳಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯ

1 year ago

ಕ್ರಿಸ್ ಮಸ್ ಆಚರಣೆ ಸಂದರ್ಭ ದೇಶದ ಹಲವೆಡೆ, ಮುಖ್ಯವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಲಪಂಥೀಯರು ಕ್ರೈಸ್ತ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿರುವುದು, ಕ್ರಿಸ್ ಮಸ್ ಆಚರಣೆಗೆ ಅಡ್ಡಿ ಮಾಡಿರುವುದು ವರದಿಯಾಗತೊಡಗಿದೆ. ಅಚ್ಚರಿಯೆಂದರೆ, ಕ್ರೈಸ್ತರ ವಿರುದ್ಧದ ದ್ವೇಷ ಹರಡುವ ಹಲವು ಕಾರ್ಯಾಚರಣೆಗಳಿಗೆ ಕುಖ್ಯಾತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಬೆಳವಣಿಗೆಗಳು ಕಂಡು ಬಂದಿದೆ‌.

ದ.ಕ‌. ಜಿಲ್ಲೆಯಲ್ಲಿ ಚರ್ಚ್ ಗಳು ಈ ಸರ್ತಿ ಕ್ರಿಸ್ ಮಸ್ ಗೆ “ಬಂಧುತ್ವ” ಕ್ರಿಸ್ ಮಸ್ ಎಂಬ ಸಭಾ ಕಾರ್ಯಕ್ರಮವನ್ನು ಎಲ್ಲಾ ಕಡೆ ಆಯೋಜಿಸಿದೆ. ಹೆಚ್ಚಿನ ಕಡೆಗಳಲ್ಲಿ ಬಿಜೆಪಿ, ಸಂಘ ಪರಿವಾರದವರನ್ನು ವೇದಿಕೆಗೆ ಆಹ್ವಾನಿಸಿದೆ. ಬಿಜೆಪಿ, ಸಂಘಪರಿವಾರದ ನಾಯಕರೂ ಬಹಳ ಸಂಭ್ರಮದಿಂದ ಚರ್ಚ್ ಗಳ “ಬಂಧುತ್ವ” ವೇದಿಕೆಗೆ ಏರಿದ್ದಾರೆ. ಸೌಹಾರ್ದತೆಯ ಕುರಿತು ಪುಂಖಾನುಪುಂಖ ಪ್ರವಚನ ನೀಡಿದ್ದಾರೆ. ನಳಿನ್ ಕುಮಾರ್ ಕಟೀಲ್, ವೇದವ್ಯಾಸ ಕಾಮತ್, ಎಮ್ ಬಿ ಪುರಾಣಿಕ್, ಕೃಷ್ಣ ಪ್ರಸಾದ್ ಉಪಾಧ್ಯಾಯ.‌. ಹೀಗೆ ಘಟಾನುಘಟಿಗಳೇ ಚರ್ಚ್ ಗಳ ಕ್ರಿಸ್ ಮಸ್ ವೇದಿಕೆಗೆ ಹತ್ತಿದ್ದಾರೆ.

ಅದರಲ್ಲೂ, ಚರ್ಚ್ ದಾಳಿಯ ಸಂದರ್ಭ ಮಹೇಂದ್ರ ಕುಮಾರ್ ರನ್ನು ಜೊತೆಗೆ ಕೂರಿಸಿ ಪತ್ರಿಕಾಗೋಷ್ಟಿ ನಡೆಸಿ ದಾಳಿಯನ್ನು ನ್ಯಾಯೀಕರಿಸಲು ಶತಪ್ರಯತ್ನ ಪಟ್ಟ ಎಂ ಬಿ ಪುರಾಣಿಕ್ ರು ಬಿಷಪ್ ಪಕ್ಕ ಕೂತು ತನಗೆ ಬಾಲ್ಯದಲ್ಲಿ ಧರ್ಮಗಳು ಅಸ್ಥಿತ್ವದಲ್ಲಿ ಇರುವುದೆ ತಿಳಿದಿರಲಿಲ್ಲ ಎಂದು ಹೇಳಿ ಜನರನ್ನು ಕಕ್ಕಾಬಿಕ್ಕಿಯಾಗಿಸಿದ್ದಾರೆ. ಜರೋಜಾ ಶಾಲೆಗೆ ದಿನವಿಡೀ ಮುತ್ತಿಗೆ ಹಾಕಿದ ಕುಖ್ಯಾತ ಪ್ರಕರಣ, ಲೇಡಿಹಿಲ್ ಸರ್ಕಲ್ (ಈಗ ನಾರಾಯಣ ಗುರು ವೃತ್ತ), ಬಾವುಟಗುಡ್ಡೆ ರಸ್ತೆ ನಾಮಕರಣ ವಿವಾದದಲ್ಲಿ ಮುಂಚೂಣಿಯಲ್ಲಿದ್ದ  ಶಾಸಕ ವೇದವ್ಯಾಸ ಕಾಮತ್ ರು ಸಹ ಒಂದೆಡೆ ಬಿಷಪ್ ಜೊತೆಗೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕ ಐವಾನ್ ಡಿಸೋಜರ ಜೊತೆಗೆ ಹೀಗೆ ಚರ್ಚ್ ಗಳ ಸರಣಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ತಿಂಗಳುಗಳ ಹಿಂದಿನವರೆಗೂ ಕ್ರೈಸ್ತರ ವಿರುದ್ಧ ಅಬ್ಬರಿಸುತ್ತಿದ್ದವರು ಈಗ ಏಕಾಏಕಿ “ಏನೂ ನಡೆದೇ ಇಲ್ಲ” ಎಂಬಂತೆ ಚರ್ಚ್ ವೇದಿಕೆ ಏರಿದ್ದು, ಬಂಧುತ್ವದ ಭಾಷಣ ಬಿಗಿದಿರುವುದು ಈಗ ಮಂಗಳೂರಿನ ರಾಜಕೀಯ ಪಡಸಾಲೆಗಳಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯ. ಅದೂ, ದೇಶದ ಎಲ್ಲೆಡೆ ಕ್ರಿಸ್ ಮಸ್ ಆಚರಣೆಗೆ ಯಾವತ್ತೂ ಇಲ್ಲದ ಅಡ್ಡಿಗಳು, ಕ್ರಿಸ್ ಮಸ್ ಶುಭಾಶಯ ಕೋರಿದ ಸೆಲೆಬ್ರಿಟಿಗಳನ್ನು ಬಲಪಂಥೀಯ ಟ್ರೋಲ್ ಪಡೆಗಳು ಬೆನ್ನತ್ತಿರುವುದು ನಡೆಯುತ್ತಿರುವಾಗ ಮಂಗಳೂರಿನಲ್ಲಿ ಈ ರೀತಿ ವ್ಯತಿರಿಕ್ತ ಬೆಳವಣಿಗೆಗಳು ಕುತೂಹಲಕಾರಿ. ಈ ಬೆಳವಣಿಗೆಗಳಿಂದ ಮಂಗಳೂರಿನ ಬಜರಂಗ ದಳದ ಹುಡುಗರಂತೂ ಕಕ್ಕಾಬಿಕ್ಕಿಯಾಗಿದ್ದಾರೆ.

ಪುರಾಣಿಕರ, ಕೃಷ್ಣ ಪ್ರಸಾದ ಉಪಾಧ್ಯಾಯರ, ವೇದವ್ಯಾಸ ಕಾಮತರ ಈ “ಬಂಧುತ್ವ” ಮಾತುಗಳ ವ್ಯಾಲಿಡಿಟಿ ಎಷ್ಟು ದಿನಗಳದ್ದು ಎಂಬುದು ಈಗಿರುವ ಪ್ರಶ್ನೆ. ಹೊಡೆಯುವವರು, ಬಡಿಯುವವರು, ನಡು ಬೀದಿಯಲ್ಲಿ ಅವಮಾನಿಸುವವರನ್ನು ಕರೆದು, ಗೌರವಿಸಿ, ಅಪ್ಪಿಕೊಂಡರೆ ಸಮಸ್ಯೆಗಳು ಪರಿಹಾರ ಆಗುತ್ತದೆಯೆ ಎಂಬುದು ಮತ್ತೊಂದು ಪ್ರಶ್ನೆ, ಈ ನಾಯಕರ “ಧರ್ಮ ರಕ್ಷಣೆ” ಯ ಬೈಠಕ್ ಭಾಷಣಗಳನ್ನು ಕೇಳಿ ದಾಳಿಗಿಳಿದು ಕೇಸು, ಜೈಲು ಎಂದು ಭವಿಷ್ಯವನ್ನೆ ಕಳೆದುಕೊಂಡು ಪುಂಡ ಪೋಕರಿಗಳು ಎಂದು ಕರೆಸಿಕೊಳ್ಳುವ ಹುಡುಗರಿಗೆ ಇದೆಲ್ಲಾ ರಾಜಕಾರಣ ಅರ್ಥ ಆಗುವುದು ಯಾವಾಗ ! ಎಂಬುದು ಪ್ರಧಾನ ಪ್ರಶ್ನೆ.  ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿಯೇ ಸಿಗುತ್ತದೆ. ಕಾಯಬೇಕು, ಕಾಯೋಣ.

– ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು

Leave a Reply