2004-2014ರ ಹತ್ತು ವರ್ಷಗಳ ಪ್ರಧಾನಮಂತ್ರಿಗಳ ಅವಧಿಯಲ್ಲಿ ಮನಮೋಹನ್ ಸಿಂಗ್ ತಮ್ಮ ಎಲ್ಪಿಜಿ ಎನ್ನುವ ಕರಾಳ ನೀತಿಯಿಂದ ಉಂಟಾದ ಗುಣಪಡಿಸಲಾಗದ ಗಾಯಗಳಿಗೆ ಮಲಾಮು ಎನ್ನುವಂತೆ ಕಲ್ಯಾಣ ಯೋಜನೆಗಳ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಸಹ ಚರ್ಚೆಗೆ ಯೋಗ್ಯವಾಗಿದೆ. ಆದರೆ ಅರುಣಾ ರಾಯ್, ಜೀನ್ ಡ್ರೀಜೆಯಂತಹ ಅಭಿವೃದ್ಧಿ ಆರ್ಥಿಕ ತಜ್ಞರು, ಹರ್ಷ ಮಂದರ್ರಂತಹ ಚಿಂತಕರು, ಸೋನಿಯಾ ಗಾಂಧಿಯವರಂತಹ ಪ್ರಬುದ್ಧ ರಾಜಕಾರಣಿಗಳನ್ನು ಒಳಗೊಂಡ ʼರಾಷ್ಟ್ರೀಯ ಸಲಹಾ ಮಂಡಳಿʼಯ(ಎನ್ಎಸಿ) ಸಾಮಾಜಿಕ ಚಿಂತನೆ ಮತ್ತು ಅರೆ ಸಮಾಜವಾದಿ ಒಳನೋಟಗಳ ಕಾರಣದಿಂದ ಈ ಕಲ್ಯಾಣ ಯೋಜನೆಗಳ ಕಾಯ್ದೆಗಳು ಅನುಷ್ಠಾನಗೊಂಡವು ಎನ್ನುವುದು ವಾಸ್ತವ. ಇಲ್ಲಿ ಸಿಂಗ್ ಅವರು ಅನೇಕ ʼರೆʼಗಳ ಋಣದಲ್ಲಿದ್ದಾರೆ. ಎನ್ಎಸಿ ಇಲ್ಲದೇ ಹೋಗಿದ್ದರೆ, ಡಿ ಫ್ಯಾಕ್ಟೋ ಪಿಎಂ ಎಂದು ಅಪಪ್ರಚಾರಕ್ಕೆ ಒಳಗಾಗಿದ್ದ ಸೋನಿಯಾ ಗಾಂಧಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸದಿದ್ದರೆ ಮತ್ತು ಯುಪಿಎ 1 ಅವಧಿಯಲ್ಲಿ ಮೈತ್ರಿಕೂಟದ ಭಾಗವಾಗಿದ್ದ ಎಡ ಪಕ್ಷಗಳು ಜನಪರ ಕಾಳಜಿಯುಳ್ಳ ನೀತಿಗಳನ್ನು ರೂಪಿಸದಿದ್ದರೆ ಸಿಂಗ್ ಅವರ ಪ್ರಧಾನಮಂತ್ರಿಗಳ ಹತ್ತು ವರ್ಷಗಳ ಅವಧಿ ಮತ್ತಷ್ಟು ವೈಫಲ್ಯಗಳಿಂದ ಕೂಡಿರುತ್ತಿತ್ತು. ಈ ಸತ್ಯವೂ ಅವರ ಸಮಾಜೋ-ಆರ್ಥಿಕ-ರಾಜಕೀಯ ಚಿಂತನೆಯ ಮಿತಿಯನ್ನು ತೋರಿಸುತ್ತದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಆರ್ಟಿಇ(2009), ನರೇಗಾ(2005), ಆರ್ಟಿಐ(2005), ಆಹಾರ ಭದ್ರತೆ(2013)ಗಳಂತಹ ಜನಪರ ಕಲ್ಯಾಣ ಕಾಯ್ದೆಗಳು ಯುಪಿಎ1&2 ಅವಧಿಯಲ್ಲಿ ಜಾರಿಗೊಂಡಿದ್ದು ಈ ಸರ್ಕಾರದ ಹಿರಿಮೆಯನ್ನು ತೋರಿಸುತ್ತದೆ. ಆದರೆ ತಮ್ಮ ಎಲ್ಪಿಜಿ ಪರವಾದ ನೀತಿಗಳಿಗೆ ವಿರುದ್ಧವಾಗಿದ್ದ ಈ ಕಾಯ್ದೆಗಳನ್ನು ಎನ್ಎಸಿ ಇಲ್ಲದೇ ಹೋಗಿದ್ದರೆ ಸಿಂಗ್ ಅವರು ಸ್ವಯಂಪೂರ್ವಕವಾಗಿ ಜಾರಿಗೊಳಿಸುತ್ತಿದ್ದರೆ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ದೊರಕುತ್ತದೆ. ಯಾಕೆಂದರೆ ಅವರ ಆರ್ಥಿಕ ಚಿಂತನೆಗಳು ಸಂಪೂರ್ಣವಾಗಿ ಬಂಡವಾಳಶಾಹಿ ಪರವಾದ ಅಭಿವೃದ್ಧಿಯನ್ನು ಧೃಡವಾಗಿ ನಂಬಿಕೊಂಡಿದ್ದರೆ, ಅವರ ಸಚಿವ ಸಂಪುಟದಲ್ಲಿಯೂ ಇಂತಹ ಕಲ್ಯಾಣ ಯೋಜನೆಗಳ ಪರವಾಗಿ ಯೋಚಿಸಬಲ್ಲಂತಹ ಸಚಿವರ ಕೊರತೆಯಿತ್ತು. ಆದರೆ ಪ್ರಜಾಪ್ರಭುತ್ವವಾದಿಯಾಗಿದ್ದ ಸಿಂಗ್ ಅವರು ಮೇಲಿನ ಕಲ್ಯಾಣ ಯೋಜನೆಗಳಿಗೆ ಪ್ರಧಾನಿಯಾಗಿ ಸಂಪೂರ್ಣವಾಗಿ ಬೆಂಬಲಿಸಿದರು. ಇಂದಿನ ಮೋದಿ ನೇತೃತ್ವದ ದಮನಕಾರಿ ಆಡಳಿತವನ್ನು ಗಮನಿಸಿದಾಗ ಸಿಂಗ್ ಅವರ ಪ್ರಜಾಪ್ರಭುತ್ವವಾದಿ ಗುಣಗಳ ಮಹತ್ವ ಅರಿವಾಗುತ್ತದೆ.
ಇದೇ ಅವಧಿಯಲ್ಲಿ ಯುಎಪಿಎ (ನಿಯಂತ್ರಣ) ಕಾಯ್ದೆ 2004 & ಯುಎಪಿಎ(ತಿದ್ದುಪಡಿ)2008ಯಂತಹ ಪ್ರಜಾಪ್ರಭುತ್ವ ವಿರೋಧಿ ಕರಾಳ ಕಾನೂನು, ಎನ್ಇಎ(ರಾಷ್ಟ್ರೀಯ ತನಿಖಾ ಏಜೆನ್ಸಿ) ಕಾಯ್ದೆಯಂತಹ ದಮನಕಾರಿ ಏಜೆನ್ಸಿಗೆ ಚಾಲನೆ ನೀಡಿದರು, ಖಾಸಗಿತನವನ್ನು ಕಸಿದುಕೊಳ್ಳುವ ಆಧಾರ್ನಂತಹ ಯೋಜನೆಯನ್ನು ಜಾರಿಗೊಳಿಸಿದರು. 2008-2012ರ ಅವಧಿಯಲ್ಲಿ ಗೃಹಮಂತ್ರಿಯಾಗಿದ್ದ ಪಿ.ಚಿದಂಬರಂ ಯುಎಪಿಎಯಂತಹ ಕರಾಳ ಕಾನೂನು ಜಾರಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರೆ ಚತ್ತೀಸ್ಘಡ, ಒಡಿಸ್ಸಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಸಾಲ್ವಾಜುಡಂನಂತಹ ಖಾಸಗಿ ಹತ್ಯೆಕೋರರ ಬರ್ಬರ ಪಡೆಯನ್ನು ಸ್ಥಾಪಿಸಿದರು.
ಇವೆರಡೂ ಯುಪಿಎ ಸರ್ಕಾರದ ಜನ ವಿರೋಧಿ ಆಡಳಿತಕ್ಕೆ ಉದಾಹರಣೆಗಳಾಗಿವೆ. ಸಿಂಗ್ ಅವರ ವೈಯುಕ್ತಿಕ ಸೌಮ್ಯತೆ, ಸಜ್ಜನಿಕೆಯನ್ನು ಪರಿಗಣಿಸಿದಾಗ ಇಂತಹ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ಅವರು ಬೆಂಬಲಿಸಿರಲಿಕ್ಕಿಲ್ಲ ಎನ್ನುವುದು ನಿಜವಾದರೂ ಸಹ ಅವರ ಕೈ ಮೀರಿ ಜಾರಿಗೊಂಡಿರುವುದು ನಾಯಕತ್ವದಲ್ಲಿನ ದೌರ್ಬಲ್ಯವನ್ನು ಸೂಚಿಸುತ್ತದೆ. ಯುಪಿಎ 1&2 ಅವಧಿಯಲ್ಲಿನ ಕಲ್ಯಾಣ ಯೋಜನೆಗಳ ಕಾಯ್ದೆಗಳು ಮತ್ತು ಕರಾಳ ಶಾಸನಗಳು ಎರಡಕ್ಕೂ ಸಿಂಗ್ ಅವರು ಹೊಣೆಗಾರರಾಗಿರಲಿಲ್ಲ ಎನ್ನುವ ವಾಸ್ತವ ದುರ್ಬಲ ಪ್ರಧಾನಿಯನ್ನು ಸಂಕೇತಿಸುತ್ತದೆಯೇ?
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




