ಕೃತಿ: ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ – ‘M ಡಾಕ್ಯುಮೆಂಟ್’
ಲೇಖಕರು: ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ
ಕನ್ನಡಕ್ಕೆ: ರಾಜಾರಾಂ ತಲ್ಲೂರು
ಪ್ರಕಾಶಕರು: ಅಕ್ಷತಾ ಕೆ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ. ಸಂಪರ್ಕ: 94491-74662, 94486-28511
ಈ ವರ್ಷ (2023) ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದ ಮಹತ್ವದ ಕೃತಿಗಳಲ್ಲೊಂದು ಭಾರತದ ಆರ್ಥಿಕತೆಯು ಉದಾರೀಕರಣದ ಹಾದಿಯಲ್ಲಿ ಮೂರು ದಶಕಗಳ ಕಾಲ ಪಯಣಿಸಿದ ಕಥೆ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ M ಡಾಕ್ಯುಮೆಂಟ್
“ಮೋಂಟೆಕ್ ಒಬ್ಬ ಮೊದಲ ದರ್ಜೆಯ ಅರ್ಥಿಕ ತಜ್ಞ, ಸೃಜನಶೀಲ ಚಿಂತಕ, ಅವರು ಬರೆದ ಪ್ರಬಂಧವೊಂದು 1990 ರಲ್ಲಿ ಆರಂಭವಾದ ಉದಾರವಾದಿ ಸುಧಾರಣಾ ಕ್ರಮಗಳ ಮೇಲೆ ಅಪಾರ ಪ್ರಭಾವ ಬೀರಿದೆ”ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ರಿಂದಲೇ ಹೊಗಳಿಕೆಗೆ ಪಾತ್ರರಾದ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ, ಮೂರು ದಶಕಗಳ ಕಾಲ ಭಾರತದ ಹಿರಿಯ ನೀತಿ ನಿರೂಪಕರಾಗಿ ಸೇವೆ ಸಲ್ಲಿಸಿದವರು. 80ರ ದಶಕದಲ್ಲಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಹಾಗೂ ವಿ ಪಿ ಸಿಂಗ್ ಅವರಿಗೆ ವಿಶೇಷ ಕಾರ್ಯದರ್ಶಿಗಳಾಗಿದ್ದ ಅವರು, 90ರ ದಶಕದಲ್ಲಿ ವಾಣಿಜ್ಯ ಮತ್ತು ಹಣಕಾಸು ಸಚಿವಾಲಯಗಳ ಕಾರ್ಯದರ್ಶಿಯಾಗಿದ್ದರು. 2004 ರಿಂದ 2013 ರ ವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ದೇಶದ ಆರ್ಥಿಕ ನೀತಿ ನಿರೂಪಣೆ ಮತ್ತು ಸಾರ್ವಜನಿಕ ಸೇವೆಗಳಲ್ಲಿನ ಉತ್ಕೃಷ್ಟತೆಗಾಗಿ ಅವರಿಗೆ ಭಾರತದ ಎರಡನೆ ಅತಿದೊಡ್ಡ ನಾಗರಿಕ ಸಮ್ಮಾನ ‘ಪದ್ಮವಿಭೂಷಣ’ದ ಗೌರವ ಸಂದಿದೆ.
ತಾನು ಅಧಿಕಾರಿಯಾಗಿದ್ದಾಗ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರಕಾರದೊಳಗೆ ನಡೆದ ಮಹತ್ತ್ವದ ಬೆಳವಣಿಗೆಗಳು, ಆರ್ಥಿಕ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಎದುರಾದ ರಾಜಕೀಯ ಮತ್ತು ಆಡಳಿತ ಶಾಹಿಯ ಸವಾಲುಗಳು, ಅದನ್ನು ನಿಭಾಯಿಸಿದ ರೀತಿ, ಮಾತ್ರವಲ್ಲ, ತನ್ನ ಬಾಲ್ಯ, ಓದು, ವಿದೇಶಯಾತ್ರೆ, ಪ್ರೇಮ, ಪ್ರಣಯ, ಪರಿಣಯ, ಐಎಂಎಫ್ ನ ಕೆಲಸ, ಮೋದಿ ಸರಕಾರ ಬಂದ ಬಳಿಕ ದೇಶದ ಆರ್ಥಿಕತೆಯಲ್ಲಾದ ಬೆಳವಣಿಗೆಗಳು, ಅಲ್ಲೋಲಕಲ್ಲೋಲಗಳು, ಆಗಬೇಕಾದ ಕೆಲಸಗಳ ಬಗ್ಗೆಯೂ ಮೋಂಟೆಕ್ ಅವರು ಅಂಕಿ ಅಂಶ ಆಧಾರ ಸಹಿತ ತಮ್ಮ ವಿಚಾರಗಳನ್ನು ಸ್ವಾರಸ್ಯಕರವಾಗಿ ಇಲ್ಲಿ ಮಂಡಿಸಿದ್ದಾರೆ.
ಮೂರು ಕಾರಣಗಳಿಗೆ ನನಗೆ ಈ ಕೃತಿ ಬಹಳ ಮುಖ್ಯವೆನಿಸಿತು. ಮೊದಲನೆಯದಾಗಿ, ಭಾರತದ ಸುಧಾರಣಾ ಹಾದಿಯ ಮೂರು ದಶಕಗಳ ಆರ್ಥಿಕ ಚರಿತ್ರೆಯನ್ನು ಕಟ್ಟಿಕೊಡುವ ಜತೆಯಲ್ಲಿಯೇ, ಇದು ಮೋಂಟೆಕ್ ಸಿಂಗ್ ಅಹ್ಲುವಾಲಿಯಾರ ಆತ್ಮಕತೆಯ ರೀತಿಯಲ್ಲಿಯೂ ಅವರ ಜೀವನದ ಕೆಲ ಬಹುಮುಖ್ಯ ವಿವರಗಳನ್ನು ಒದಗಿಸುತ್ತದೆ. ಸಾಧಾರಣ ಕುಟುಂಬದಿಂದ ಬಂದ ಒಬ್ಬ ವ್ಯಕ್ತಿಯು ತನ್ನ ಓದು, ಶ್ರದ್ಧೆ, ಪರಿಶ್ರಮ, ಛಲ, ಸವಾಲುಗಳನ್ನು ಸಂಯಮದಿಂದ, ಬುದ್ಧಿವಂತಿಕೆಯಿಂದ ನಿಭಾಯಿಸುವ ಗುಣ ಇತ್ಯಾದಿಗಳಿಂದ ಜಗತ್ತಿನ ಒಬ್ಬ ದೊಡ್ಡ ಅರ್ಥಶಾಸ್ತ್ರಜ್ಞನಾಗಿ ಹೊರಹೊಮ್ಮಿದ ಸ್ಫೂರ್ತಿದಾಯಕ ಕಥನ ಇಲ್ಲಿದೆ. ಆತ್ಮಕಥಾ ರೂಪದ ಕೃತಿಗಳು ಯಾವತ್ತೂ ಸಮಕಾಲೀನ ಸಾಮಾಜಿಕ, ಆರ್ಥಿಕ, ರಾಜಕೀಯ ಚರಿತ್ರೆಯನ್ನೂ ಕಟ್ಟಿಕೊಡುವ ಕಾರಣದಿಂದಲೂ ಈ ಕೃತಿ ಕುತೂಹಲ ಕೆರಳಿಸುತ್ತದೆ.
ಎರಡನೆಯದಾಗಿ, ಮೋಂಟೆಕ್ ಅವರು ಪ್ರಧಾನವಾಗಿ ಒಬ್ಬ ಅರ್ಥಶಾಸ್ತ್ರಜ್ಞ; ಆರ್ಥಿಕ ಸಲಹೆಗಾರ. ಆದರೆ, ಅವರು ಕೆಲಸ ಮಾಡಿದ್ದು ಮತ್ತು ಮಾಡಬೇಕಾಗಿ ಬಂದುದು ಒಂದು ನಿರ್ದಿಷ್ಟ ರಾಜಕೀಯ ವ್ಯವಸ್ಥೆಯ ಒಳಗಡೆ. ಹಾಗಾಗಿ, ಸರಕಾರವೊಂದರ ಒಳಗಡೆ ರಾಜಕೀಯವಾಗಿಯೂ ಏನು ನಡೆಯುತ್ತದೆ ಎಂಬ ಅನೇಕ ಅಂತರಂಗದ ಸಂಗತಿಗಳು ಮೋಂಟಕ್ ರಂಥವರಿಗೆ ಗೊತ್ತಿದ್ದೇ ಇರುತ್ತದೆ. ಆದ್ದರಿಂದಲೇ, ಇಂದಿರಾ ಗಾಂಧಿ ಕಾಲದಿಂದ, ಮನಮೋಹನ್ ಸಿಂಗ್ ಅಧಿಕಾರಾವಧಿಯವರೆಗೆ ಭಾರತ ಸರಕಾರದ ಆರ್ಥಿಕ ಚರಿತ್ರೆಯನ್ನು ಹೇಳುವ ಜತೆಯಲ್ಲಿಯೇ, ‘M ಡಾಕ್ಯುಮೆಂಟ್’ಭಾರತ ಸರಕಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಚರಿತ್ರೆಯನ್ನೂ ಹೇಳುತ್ತದೆ. ಇಂದಿರಾ ಕಾಲದಲ್ಲಿ ನಡೆದ ಬ್ಲೂ ಸ್ಟಾರ್ ಆಪರೇಶನ್, ಇಂದಿರಾ ಹತ್ಯೆ, ದೆಹಲಿ ಸಿಖ್ ನರಮೇಧ, ಸಿಖ್ಖರು ಅನುಭವಿಸಿದ ತಲ್ಲಣ, ರಾಜೀವ್ ಅವರ ಕ್ರಾಂತಿಕಾರಕ ಕೆಲಸಗಳು, ತಪ್ಪುಗಳು, ರಾಜೀವ್ ಹತ್ಯೆ, ನರಸಿಂಹ ರಾವ್ ಕಾಲದಲ್ಲಿ ಆರ್ಥಿಕ ಸುಧಾರಣೆಗಳಿಗೆ ಎದುರಾದ ರಾಜಕೀಯ ವಿರೋಧಗಳು, ಪದೇ ಪದೇ ಉರುಳಿದ ಸರಕಾರಗಳು, ಮನಮೋಹನ್ ಸಿಂಗ್ ಪ್ರಧಾನಿಯಾದುದು, ಎಡಪಕ್ಷಗಳಿಂದ ಮೂಗುದಾರ, ಅಣು ಒಪ್ಪಂದ, ಎಡಪಕ್ಷಗಳಿಂದ ಬೆಂಬಲ ಹಿಂದೆಗೆತ, ಎರಡನೆ ಬಾರಿಗೆ ಸಿಂಗ್ ಸರಕಾರ, ಸಿಂಗ್ ಸರಕಾರ ಎರಡನೆ ಅವಧಿಯಲ್ಲಿ ಎದುರಿಸಿದ ಭ್ರಷ್ಟಾಚಾರ ಆರೋಪಗಳು, ಬಿಕ್ಕಟ್ಟುಗಳು, ಅಣ್ಣಾ ಹಜಾರೆ ಹೋರಾಟ, ಸಿಂಗ್ ಸೋಲು, ಹೀಗೆ ನಮಗೆ ವಿವರವಾಗಿ ಗೊತ್ತಿಲ್ಲದ ಅನೇಕ ಸಂಗತಿಗಳೂ ಸೇರಿದಂತೆ, ಒಟ್ಟಾರೆ ರಾಜಕೀಯ ಚರಿತ್ರೆಯ ಮೇಲೂ ಇದು ಬೆಳಕು ಚೆಲ್ಲುತ್ತದೆ. ಎಂದೇ, ರಾಜಕೀಯ ಆಸಕ್ತರಿಗೂ ಇದೊಂದು ಇಷ್ಟವಾಗಬಲ್ಲ ಪುಸ್ತಕ.

ಮೂರನೆಯದಾಗಿ, ಅನುವಾದಕ ರಾಜಾರಾಂ ತಲ್ಲೂರು ಅವರ ಅನುವಾದ ಕೌಶಲವನ್ನು ಇಲ್ಲಿ ಪ್ರಶಂಸಿಸಲೇಬೇಕು. ಅನುವಾದಕರಿಗೆ ಅನ್ಯ ಭಾಷೆಯ ಸಾಮಾನ್ಯ ಪಠ್ಯಗಳನ್ನು ಅನುವಾದಿಸುವುದು ಅಷ್ಟು ದೊಡ್ಡ ಸವಾಲಾಗದಿರಬಹುದು. ಆದರೆ ಕಾನೂನು, ಆರ್ಥಿಕ ವಿಚಾರಗಳು, ವಿಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ಪಠ್ಯಗಳನ್ನು ಅನುವಾದಿಸುವುದು ಕೆಲವೊಮ್ಮೆ ಅಸಾಧ್ಯ ಎಂಬಷ್ಟು ಸವಾಲಿನ ಕೆಲಸ. ಅವನ್ನು ಯಥಾವತ್ತು ಅನುವಾದಿಸುವಂತಿಲ್ಲ, ತೀರಾ ಸರಳಗೊಳಿಸುವಂತೆಯೂ ಇಲ್ಲ. ಆರ್ಥಿಕ ವಿಚಾರಗಳಲ್ಲಿಯೂ ಅಷ್ಟೇ. ಇಂಗ್ಲಿಷ್ ನಲ್ಲಿ ಸುಲಭವಾಗಿ ಅರ್ಥವಾಗುವ ಪಾರಿಭಾಷಿಕ ಪದಗಳಿಗೆ ಕನ್ನಡದಲ್ಲಿ ಸಂವಾದಿಯಾದ ಪದ ಸಿಗುವುದು ವಿರಳ. ಕೆಲವೊಮ್ಮೆ ನೀವೇ ಕಾಯಿನ್ ಮಾಡಬೇಕಾಗುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅರ್ಥ ಕೆಡದಂತೆ ಅನುವಾದಿಸುವುದು ಮತ್ತು ಸುಲಭದಲ್ಲಿ ಅರ್ಥ ಆಗುವಂತೆ ಅನುವಾದಿಸುವುದು ಅನುವಾದಕನ ಜ್ಞಾನ, ಅನುಭವ, ಪ್ರತಿಭೆ ಮತ್ತು ಕೌಶಲವನ್ನು ಆಧರಿಸಿದೆ. ಈ ಅರ್ಥದಲ್ಲಿ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು ಎಂಬ ಸುಳಿವೇ ಸಿಗದ ರೀತಿಯಲ್ಲಿ ಮೋಂಟೆಕ್ ಸಿಂಗ್ ಅವರ ಈ ಕೃತಿಯನ್ನು ರಾಜಾರಾಂ ಅನುವಾದಿಸಿದ್ದಾರೆ. ಅರ್ಥ ವಿಚಾರಗಳ ಕಬ್ಬಿಣದ ಕಡಲೆ ಇಲ್ಲಿ ಬಾಯಿಯಲ್ಲಿಟ್ಟಾಗ ಸುಲಭದಲ್ಲಿ ಕರಗುವ ಹುರಿಗಡಲೆಯಾಗಿದೆ. ನನಗಂತೂ ರಾಜಾರಾಂ ಅವರ ಈ ಅನುವಾದ ಕೌಶಲ ಕಂಡು ಅಭಿಮಾನಕ್ಕಿಂತಲೂ ಮತ್ಸರವೇ ಉಂಟಾಗಿದೆ.
ಅಹ್ಲೂವಾಲಿಯಾ ಅವರ ಕೃತಿಯನ್ನು ಓದಿದಾಗ ಅನಿಸಿದ ಇನ್ನೂ ಒಂದು ಸಂಗತಿಯೆಂದರೆ, ಈವತ್ತು ಆರ್ಥಿಕ ಉದಾರೀಕರಣವನ್ನು, ಮನಮೋಹನ್ ಸಿಂಗ್, ಮಾಂಟೆಕ್ ಮೊದಲಾದವರನ್ನು ದೇಶದ ಅನೇಕ ಸಮಸ್ಯೆಗಳಿಗೆ ಹೊಣೆ ಎಂದು ಕಟಕಟೆಯಲ್ಲಿ ನಿಲ್ಲಿಸುವವರಿದ್ದಾರೆ. ಆದರೆ ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು. ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪರಿಣತರು. ನೀತಿ ನಿರೂಪಣೆಯಲ್ಲಿಯೂ ಅವರ ನಿರ್ಧಾರಗಳು ಸದುದ್ದೇಶದವೇ ಆಗಿರುತ್ತವೆ. ಅವರು ನಿರೀಕ್ಷಿಸಿದ ಫಲ ಸಿಗಬೇಕಾದರೆ, ಅದಕ್ಕೆ ಒಂದು ನಿರ್ದಿಷ್ಟ ಕಾಲಾವಧಿ ಬೇಕಾಗುತ್ತದೆ ಮತ್ತು ಅದಕ್ಕೆ ರಾಜಕೀಯ ಬೆಂಬಲವೂ ಇರಬೇಕಾಗುತ್ತದೆ. ಆದರೆ, ದಡ ಮುಟ್ಟಿಸುವುದರೊಳಗೆ ಅನೇಕ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿ ಎಲ್ಲವನ್ನೂ ಹಳಿ ತಪ್ಪಿಸಿ ಲಾಭಕ್ಕಿಂತ ಹೆಚ್ಚಿನ ನಷ್ಟವನ್ನೇ ಮಾಡಿಬಿಡುವುದೂ ಇದೆ. ಕಳೆದ ಶತಮಾನದ ಕೊನೆಯ ದಶಕದ ಆರಂಭದಲ್ಲಿ ನೆಟ್ಟ ಆರ್ಥಿಕ ಉದಾರೀಕರಣದ ಗಿಡ, ನಿರೀಕ್ಷಿತ ಫಲ ನೀಡಬೇಕು ಎನ್ನುವಾಗ ಎದುರಾದ ರಾಜಕೀಯ ಅಡ್ಡಿಗಳು, ಬೆನ್ನು ಬೆನ್ನಿಗೆ ಉರುಳಿದ ಸರಕಾರಗಳು, ಈಗಲೋ ಆಗಲೋ ಎಂಬಂತಹ ಅಸ್ಥಿರ ಸಮ್ಮಿಶ್ರ ಸರಕಾರಗಳು ಇವುಗಳ ಹಿನ್ನೆಲೆಯಲ್ಲಿ ಈ ವಿಷಯ ಸ್ಪಷ್ಟವಾದೀತು.
ಈ ಕೃತಿಯ ಶೀರ್ಷಿಕೆಗೆ ಸಂಬಂಧಿಸಿದಂತೆ ನನಗೆ ಒಂದು ಸಣ್ಣ ಸಮಸ್ಯೆ ಕಂಡಿತು. ಇದು ಆರ್ಥಿಕ ವಿಚಾರಗಳ ಜತೆಯಲ್ಲಿಯೇ, ಈಗಾಗಲೇ ಹೇಳಿದಂತೆ ಪ್ರತಿಭಾವಂತ ಅರ್ಥಶಾಸ್ತ್ರಜ್ಞನೊಬ್ಬನ ಆತ್ಮಕಥನ ಮತ್ತು ದೇಶದ ರಾಜಧಾನಿಯ ರಾಜಕೀಯ ಚಟುವಟಿಕೆಗಳ ಕಥನವೂ ಆಗಿದ್ದು, ಲೇಖಕರ ಹಾಸ್ಯಪ್ರಜ್ಞೆಯಲ್ಲಿ ಮಿಂದೆದ್ದ ಸ್ವಾರಸ್ಯಕರ ಕೃತಿಯಾದರೂ, ‘M ಡಾಕ್ಯುಮೆಂಟ್’ಎಂಬ ಆಂಗ್ಲಭಾಷಾ ರೂಪದಲ್ಲಿರುವ ಶೀರ್ಷಿಕೆ ಓದುಗರನ್ನು ಫಕ್ಕನೆ ಸೆಳೆಯದ ಮತ್ತು ಪುಸ್ತಕದಂಗಡಿಯಲ್ಲಿ ಜನರು ಪುಸ್ತಕವನ್ನು ಸ್ಕಿಪ್ ಮಾಡಿಕೊಂಡು ಹೋಗುವ ಸಾಧ್ಯತೆಯೂ ಇದೆ ಅನಿಸಿತು.
“M ಡಾಕ್ಯುಮೆಂಟ್’ ಭಾರತ ಕಂಡ ಮಹತ್ವದ ಆರ್ಥಿಕ ಸುಧಾರಕರೊಬ್ಬರ ಹಾಸ್ಯಪ್ರಜ್ಞೆ ಮತ್ತು ಚಿಂತನೆಗಳ ಅಡಕ. ಭಾರತದ ಅಭಿವೃದ್ಧಿಯಲ್ಲಿ ಆರ್ಥಿಕ-ರಾಜಕೀಯ ಪಾತ್ರಗಳ ಬಗ್ಗೆ ಆಸಕ್ತರಿಗೆ ಅಮೂಲ್ಯ ಮಾತ್ರವಲ್ಲದೇ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಒಳಗಡೆ ಕೆಲಸ ಮಾಡುವುದು ಹೇಗೆಂಬ ಚಿತ್ರಣವನ್ನೂ ಕಟ್ಟಿಕೊಡುವ ಪುಸ್ತಕ”ಎಂದಿದ್ದಾರೆ ಆರ್ ಬಿ ಐ ಮಾಜಿ ಗವರ್ನರ್ ರಘುರಾಂ ರಾಜನ್. ಈ ಎಲ್ಲ ಕಾರಣಕ್ಕೆ ನೀವು ಓದಲೇಬೇಕಾದ ಮತ್ತು ಶುರುಮಾಡಿದರೆ ಓದಿ ಮುಗಿಸದೆ ಕೆಳಗಿಡಲಾಗದ ಮಹತ್ತ್ವದ ಪುಸ್ತಕವಿದು.
- ಶ್ರೀನಿವಾಸ ಕಾರ್ಕಳ




