ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ

1 day ago

ಪ್ರೊ.ಪಿ.ವಿ.ನಂಜರಾಜ ಅರಸ್ ಅವರಿಗೆ ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ

ಮೈಸೂರು:  ಪ್ರೊ.‌ನಂಜರಾಜ ಅರಸ್ ಅವರ ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್ ಕೃತಿಗೆ “ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ 2026” ಗೌರವ ಸಂದಿದೆ. ಮೈಸೂರಿನಲ್ಲಿರುವ ಪ್ರೊ.ನಂಜರಾಜ ಅರಸ್ ಅವರ ನಿವಾಸದಲ್ಲಿ  ಆಂಧ್ರಪ್ರದೇಶದ ಸತ್ಯಸಾಯಿ (ಅನಂತಪುರಂ) ಜಿಲ್ಲೆ , ಹಿಂದೂಪುರಂನ ‘ಆಲ್ ಇಂಡಿಯಾ ಶಹೀದ್ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್’ನ ರಾಷ್ಟ್ರೀಯ ಅಧ್ಯಕ್ಷರಾದ ಕಲ್ಲೂರು ಉಮರ್ ಫಾರೂಕ್ ಖಾನ್ ಅವರ ನೇತೃತ್ವದಲ್ಲಿ, ‘ದಲಿತ್ ಆಲ್ ಇಂಡಿಯಾ ಶಹೀದ್ ಟಿಪ್ಪು ಸುಲ್ತಾನ್ ಹ್ಯುಮಾನಿಟೇರಿಯನ್ ಬ್ಲಡ್ ಡೊನೇಷನ್ ಅಸೋಸಿಯೇಷನ್’ನ ರಾಷ್ಟ್ರೀಯ ಉಪಾಧ್ಯಕ್ಷರಾದ ಎಂ.ಆರ್. ಹನುಮಂತು ಅವರ ಅಧ್ಯಕ್ಷತೆಯಲ್ಲಿ ಹಾಗೂ ಕವಿ- ಸಂಶೋಧಕರಾದ ಡಾ. ವಡ್ಡಗೆರೆ ನಾಗರಾಜಯ್ಯ ಅವರ ಮಾರ್ಗದರ್ಶನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮೈಸೂರಿನ ಇತಿಹಾಸ, ಮೈಸೂರು ಒಡೆಯರ್ ಮನೆತನದ ಇತಿಹಾಸ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಇತಿಹಾಸ ​​ಕುರಿತು ಪ್ರೊ.ನಂಜರಾಜ ಅರಸ್ ಅವರು ನಡೆಸಿರುವ ಮೌಲ್ಯಯುತ ಸಂಶೋಧನೆ ಹಾಗೂ ಇತಿಹಾಸದ ವಾಸ್ತವಾಂಶಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನಗಳನ್ನು  ಗುರುತಿಸಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ.

ಉಮರ್ ಫಾರುಕ್ ಖಾನ್ ಅವರು ಪ್ರಶಸ್ತಿ ಪ್ರದಾನ ಮಾಡಿ, ಕನ್ನಡನಾಡಿನ ಚರಿತ್ರೆ ಮತ್ತು ಸಾಹಿತ್ಯಕ್ಕೆ ನಂಜರಾಜ ಅರಸ್ ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಇತಿಹಾಸಜ್ಞರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಅವರ ಬಹುಮುಖ ಪ್ರತಿಭೆ ವಿಶಿಷ್ಠವಾದದ್ದು. ಇಂದಿನ ಜೆನ್-ಜಿ ಹೊಸ ತಲೆಮಾರಿನ ಜನ ನಮ್ಮ ಪೂರ್ವಿಕರ ಇತಿಹಾಸದ ಕಡೆಗೆ ಗಮನ ಹರಿಸುವ ಅಗತ್ಯವಿದೆ. ಅಂಥವರಲ್ಲಿ ಚರಿತ್ರೆಯ ಆಸಕ್ತಿ ಮೂಡಿಸುವ ನಿರಂತರ ಪ್ರಯತ್ನಗಳನ್ನು ನಂಜರಾಜ ಅರಸ್ ಮಾಡುತ್ತಿದ್ದಾರೆ. ಪ್ರಗತಿಪರ ವಿಚಾರಧಾರೆ, ಸಂಶೋಧನಾತ್ಮಕ ದೃಷ್ಟಿಕೋನ, ಸಾಹಿತ್ಯ ಸೇವೆ, ಚಲನಚಿತ್ರ ರಂಗದ ಕೊಡುಗೆ ಮತ್ತು ಐತಿಹಾಸಿಕ ಪರಂಪರೆಯನ್ನು ಉಳಿಸುವ ಬದ್ಧತೆಯಲ್ಲಿ ನಂಜರಾಜ ಅರಸ್ ಅವರು ಇಂದಿನ ತಲೆಮಾರಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.

ಮಡಕಶಿರಾದ ಸಾಮಾಜಿಕ ಹೋರಾಟಗಾರ ಎಂ.ಆರ್.ಹನುಮಂತು ಮಾತನಾಡಿ, ಬಲಪಂಥೀಯ ಶಕ್ತಿಗಳು ಕೋಮುವಾದಿ ರಾಜಕೀಯ ಮಾಡುತ್ತಾ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ಹೊತ್ತಿನಲ್ಲಿ ಪ್ರೊ.ಪಿ.ವಿ.ನಂಜರಾಜ ಅರಸ್ ಅವರು ತಮ್ಮ  ಸಂಶೋಧನಾ ಬರಹಗಳು ಮತ್ತು ವೈಚಾರಿಕ ಆಲೋಚನೆಗಳಿಂದ ಇಂದಿನ ಜೆನ್-ಜಿ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.‌ದೇಶಾದ್ಯಂತ ಧಾರ್ಮಿಕ ಸಾಮರಸ್ಯ, ಸಹಿಷ್ಣುತೆ, ಬ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ಆದರ್ಶ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.‌

ಇದೇ ಸಂದರ್ಭದಲ್ಲಿ ಕವಿ- ಸಂಶೋಧಕ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಕೋಮುವಾದಿ ರಾಜಕೀಯ ಶಕ್ತಿಗಳು ಇತ್ತೀಚೆಗೆ ಮೈಸೂರು ಸೀಮೆಯನ್ನು ತಮ್ಮ ಧಾರ್ಮಿಕ ಪ್ರಚೋದನೆಯ ಪ್ರಯೋಗಾಲಯ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ಪ್ರೊ.ಕೆ.ರಾಮದಾಸ್, ದೇವನೂರ ಮಹಾದೇವ, ಪ್ರೊ. ಪಿ.ವಿ. ನಂಜರಾಜ ಅರಸ್, ಪ್ರೊ.ಎಚ್.ಗೋವಿಂದಯ್ಯ ಮುಂತಾದವರು ರೂಪಿಸುವ ಪ್ರಬುದ್ಧ ಸಾಂಸ್ಕೃತಿಕ ಪರಿಸರ ಹಾಳಾಗದಿರಲಿ ಎಂದರ.

ಇದೇ ಸಂದರ್ಭದಲ್ಲಿ ಕಲ್ಲೂರು ಉಮರ್ ಫಾರೂಕ್ ಖಾನ್ ಅವರು ತಮ್ಮ ಶ್ರೀ ಶಾರದಾ ಮಾತಾ ಶೃಂಗೇರಿ ಪೀಠ ರಕ್ಷಕುಡು ಶಹೀದ್ ಟಿಪ್ಪು ಸುಲ್ತಾನ್ ಎಂಬ ತೆಲುಗು ಕೃತಿಯ ಪ್ರಕಟಣಾ ಪೂರ್ವ ಶುಭ ಹಾರೈಕೆಗಳನ್ನು ಹಾಗೂ ಪ್ರೊ.ನಂಜರಾಜ ಅರಸ್ ಅವರ ಆಶೀರ್ವಾದವನ್ನು ಕೋರಿದರು.

ನಂತರ ಪ್ರೊ. ಅರಸ್ ಅವರು, ಕಲ್ಲೂರು ಉಮರ್ ಫಾರೂಕ್ ಖಾನ್ ಅವರಿಗೆ, ಟಿಪ್ಪು ಸುಲ್ತಾನರ ಶೌರ್ಯದ ಸಂಕೇತವಾದ ‘ಹುಲಿಯ ಪಟ್ಟೆಗಳ’ ವಿನ್ಯಾಸವಿರುವ ಶಾಲನ್ನು ಹೊದಿಸಿ ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್ ಎಂಬ ಪುಸ್ತಕವನ್ನು ನೀಡಿ ಸನ್ಮಾನಿಸಿದರು.

Leave a Reply