ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ: ಡಾ.ಮಹೇಶ ಜೋಶಿ

3 years ago

#ShivaramaKaranta #TwentiethCentury #Multifaceted #Personality #MaheshJoshi

ಬೆಂಗಳೂರು: ಬಹುಮುಖ ಪ್ರತಿಭೆಯಿಂದ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ.ಕೋಟ ಶಿವರಾಮ ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.

ಡಾ. ಶಿವರಾಮ ಕಾರಂತರ ೧೨೧ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟದ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧೯೦೨ರ ಅಕ್ಟೋಬರ್‌ ೧೦ ರಂದು ಜನಿಸಿ ಶಿವರಾಮ ಕಾರಂತರು ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು. ಹರಿಜನೋದ್ಧಾರಕ, ಅಸಹಕಾರ ಚಳವಳಿಯ ಮೂಲಕ ಸ್ವಾತಂತ್ರ್ಯ ಚಳವಳಿಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನೃತ್ಯ ಸಂಗೀತ, ಯಕ್ಷಗಾನ, ನಾಟಕ ರಂಗಗಳಲ್ಲಿ ನಾನಾರೀತಿ ಸೇವೆ ಸಲ್ಲಿಸಿದರು ಎಂದರು.

ಶಿವರಾಮ ಕಾರಂತ ಅವರು ಸರ್ಕಾರ ಸೇರಿದಂತೆ ಇತರ ಯಾವುದೇ ಆಶ್ರಯವಿಲ್ಲದೇ ತಮ್ಮ ಕೆಲಸವನ್ನು ಮಾಡುತ್ತ ಬಂದವರು.ತಮ್ಮ ಜೀವನದ ಉದ್ದಕ್ಕೂ ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು, ಬಾಲವನ ಸ್ಥಾಪಿಸಿದರು, ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಬಿಎಂಶ್ರೀ ಸ್ಮಾರಕ ಸಂಸ್ಥೆ, ನೀನಾಸಂ ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದವರು ಎಂದರು.

ಕಾರಂತರು ಕವನ, ನಾಟಕ, ಕಾದಂಬರಿ, ಕಥೆ, ಪ್ರವಾಸ ಸಾಹಿತ್ಯ, ಹರಟೆ, ಮಕ್ಕಳ ವಿಶ್ವಕೋಶ, ವಿಜ್ಞಾನ ವಿಶ್ವಕೋಶ, ಜೀವನ ಚರಿತ್ರೆ, ಯಕ್ಷಗಾನ, ಜಾನಪದ, ಚಲನಚಿತ್ರ, ಅನುವಾದ, ಅರ್ಥಕೋಶ, ಪ್ರಾಣಿ ಪಕ್ಷಿ ಪರಿಸರ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫0ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ ಎಂದರು.

ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ʻಮರಳಿ ಮಣ್ಣಿಗೆʼ, ʻಮೂಕಜ್ಜಿಯ ಕನಸುಗಳುʼ, ʻಬೆಟ್ಟದ ಜೀವʼ, ʻಚೋಮನ ದುಡಿʼ, ʻಸರಸಮ್ಮನ ಸಮಾಧಿʼ, ʻಮೈ ಮನಗಳ ಸುಳಿಯಲಿʼ, ʻಬತ್ತದ ಹೊರೆʼ, ʻಗೆದ್ದವರ ದೊಡ್ಡಸ್ತಿಕೆʼ, ʻಸ್ವಪ್ನದ ಹೊಳೆʼ, ʻಒಂಟಿ ದನಿʼ, ʻಅಳಿದ ಮೇಲೆʼ, ʻಗೊಂಡಾರಣ್ಯʼ ಕಾರಂತರ ಪ್ರಮುಖ ಕಾದಂಬರಿಗಳು. ಅವರ ʻಮೂಕಜ್ಜಿಯ ಕನಸುಗಳುʼ ಕಾದಂಬರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕಾರಂತರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ʻಯಕ್ಷಗಾನ ಬಯಲಾಟʼ ಕೃತಿಗೆ ೧೯೫೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು ಎಂದರು.

ಕಾರಂತರ ಆಸಕ್ತಿ ಚಲನಚಿತ್ರ ಕ್ಷೇತ್ರದ ಕಡೆಯೂ ತಿರುಗಿತು. ʻಭೂತರಾಜ್ಯʼ, ʻಡೊಮಿಂಗೋʼ ಎಂಬ ಮೂಕಿ ಚಿತ್ರಗಳನ್ನು ಅವರು ನಿರ್ದೇಶಿಸಿದರು. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಅಪಾರ ಆನುಭವವನ್ನೂ ಅವರು ಪಡೆದ ಕಾರಂತರು ನಮ್ಮ ಮಧ್ಯ ಇದ್ದರು ಎನ್ನುವುದೇ ನಮ್ಮ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್.ಎಸ್.ಶ್ರೀಧರಮೂರ್ತಿ ಮಾತನಾಡಿ, ಕಾರಂತರ ಉಗ್ರ ಪರೀಕ್ಷೆಯಿಂದಲೇ ತನ್ನ ಕನ್ನಡ ಶುದ್ಧವಾಯಿತು ಎಂದು ಅವರ ಜೊತೆಗೆ ಕೆಲಸ ಮಾಡಿದ ಅನುಭವವನ್ನು ವಿವರಿಸಿದರು.

ಕನ್ನಡ ಚಿತ್ರರಂಗದ ಆರಂಭಿಕ ಕಾಲದಲ್ಲಿಯೇ ಮೂಕಿ ಚಿತ್ರಗಳನ್ನು ನಿರ್ದೇಶಿಸಿದ್ದ ಕಾರಂತರು ತಮ್ಮದೇ ʼಕುಡಿಯೂರ ಕೂಸುʼಕಾದಂಬರಿಯನ್ನು ʼಮಲೆಯ ಮಕ್ಕಳುʼ ಎಂಬ ಚಲನಚಿತ್ರವಾಗಿ ನಿರ್ದೇಶಿಸಿದ್ದರು. ಅದು ಕಲ್ಪನಾ ಅಭಿನಯದ ಕೊನೆಯ ಚಿತ್ರವಾಗಿತ್ತು. ʼಇದು ಸಾಧ್ಯʼ ಚಿತ್ರದಲ್ಲಿಯೂ ಅಭಿನಯವನ್ನೂ ಮಾಡಿದ್ದ ಅವರ ಕಾದಂಬರಿಗಳನ್ನು ಆಧರಿಸಿದ ಚೋಮನ ದುಡಿ ಸ್ವರ್ಣ ಕಮಲವನ್ನು ಪಡೆದರೆ ಚಿಗುರಿದ ಕನಸು, ಸರಸಮ್ಮನ ಸಮಾಧಿ, ಮೂಕಜ್ಜಿಯ ಕನಸುಗಳು ಮೊದಲಾದ ಚಿತ್ರಗಳೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದವು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್‌ ಪಾಂಡು, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎಂ.ಪಾಟೀಲ್ ಹಾಗೂ ಪರಿಷತ್ತಿನ ಪದಾಧಿಕಾರಿಗಳು, ಪರಿಷತ್ತಿನ ವಿಶೇಷ ಕರ್ತವ್ಯಾಧಿಕಾರಿ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿ ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Leave a Reply