ಕಿಲಾರಿಗಳ ಅಧ್ಯಯನ ಹೆಚ್ಚಾಗಲಿ: ಗೊಲ್ಲಹಳ್ಳಿ ಶಿವಪ್ರಸಾದ್

1 year ago

ಪಶುಪಾಲನೆಗಾಗಿಯೇ ಬದುಕು ಮುಡಿಪಾಗಿಡುವ ಕಿಲಾರಿಗಳ ಅಧ್ಯಯನ ಹೆಚ್ಚಾಗಲಿ: ಗೊಲ್ಲಹಳ್ಳಿ ಶಿವಪ್ರಸಾದ್

ಚಿತ್ರದುರ್ಗ: ಕಿಲಾರಿಗಳು ತಮಗಲ್ಲದೇ ತಮ್ಮ ಬದುಕನ್ನು ಪಶುಪಾಲನೆಗಾಗಿ ಮುಡಿಪಾಗಿಟ್ಟು, ಇಡೀ ತಮ್ಮ ವೈಯಕ್ತಿಕ ಜೀವನ ಮರೆತು ಪಶುಪಾಲನೆಯಲ್ಲಿ ತೊಡಗಿ, ಅದನ್ನು ಸಂಸ್ಕೃತಿಯಾಗಿ ಉಳಿಸಿಕೊಂಡು ಜೀವ ಕಳೆಯುವುದು ಬಹಳ ದೊಡ್ಡ ವಿಚಾರ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಸಹಯೋಗದೊಂದಿಗೆ ನಡೆದ ಕಿಲಾರಿ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ನೆಲಕ್ಕೆ ಒಂದು ವಿಶಿಷ್ಟವಾದ ಗುಣವಿದೆ. ಕವಿಗಳು, ಕಲಾವಿದರು, ಹಾಡುಗಾರರು, ನಾಟಕಕಾರರು, ವಿಮರ್ಶಕರು, ಸಾಧು, ಸಂತರು, ಶರಣರು, ಸೂಫಿಗಳು ಸೇರಿದಂತೆ ಬಹಳಷ್ಟು ಜನ ಬಾಳಿ ಬದುಕಿದ್ದಾರೆ. ಹಾಗಾಗಿ ಈ ನೆಲ ಸಾಂಸ್ಕೃತಿಕವಾಗಿ ಸಿರಿತನದಲ್ಲಿದೆ. ಸಾಂಸ್ಕೃತಿಕ ಅಸ್ಮಿತೆಗಳ ಸಮಸ್ಯೆ ಬಂದಾಗ ಈ ಹುಡುಕಾಟದಲ್ಲಿ ನಮಗೆ ದೊರೆತಿದ್ದು, ಕಿಲಾರಿ ಕಲರವ. ಮಣ್ಣಿನ ವಾಸನೆಯೊಂದಿಗೆ ಬದುಕುವ ಕಿಲಾರಿಗಳಲ್ಲಿ ಸಮರ್ಪಣಾ ಮನೋಭಾವವಿದೆ ಎಂದರು.

ಈ ಮಣ್ಣಿಗೆ ಆಕರ್ಷಿಣಿಯವಾದ, ತಾಯ್ತನದ ಮನಸ್ಸಿದೆ. ಹಾಗಾಗಿ ಹೆಚ್ಚು ಸಂತರು, ಶರಣರು, ದಾರ್ಶನಿಕರು, ತತ್ವಪದಕಾರರು ಇಲ್ಲಿ ಮಾತ್ರ ಅರಳು ಸಾಧ್ಯವಾಯಿತು. ತಮಗಾಗಿ ಹಾಗೂ ತಮ್ಮ ಕುಟುಂಬಕ್ಕಾಗಿ ಎಲ್ಲರೂ ಬದುಕುತ್ತಾರೆ. ಅವರಿಗಾಗಿ ಅವರು ಬದುಕುವುದು ದೊಡ್ಡದಲ್ಲ. ಆದರೆ ಸಮಾಜ, ನೆಲ, ಪ್ರಕೃತಿ, ಸಮುದಾಯ ಹಾಗೂ ಜಗತ್ತಿಗಾಗಿ ಬದುಕುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಇವರುಗಳನ್ನೆಲ್ಲಾ ಒಂದೊಂದು ಹೆಜ್ಜೆಯನ್ನಾಗಿಸಿಕೊಂಡು ನಡೆಯಬೇಕು ಎಂದರು.

ಗುಡುಗು, ಸಿಡಿಲು, ಮಳೆ, ಗಾಳಿ ಇದ್ಯಾವುದನ್ನು ಲೆಕ್ಕಿಸದೆ ಸಮಾಜ, ನೆಲ, ಸಮುದಾಯ ಪ್ರಕೃತಿಗಾಗಿ ಬದುಕುವ ಕಿಲಾರಿಗಳು ಬೆಳ್ಳಿ, ಬಂಗಾರ, ಕಂಚು ಹಿತ್ತಾಳೆ ಯಾವುದಕ್ಕೂ ಆಸೆ ಪಡುವವರಲ್ಲ. ನೆಲದ ವಾಸನೆ ಹಾಗೂ ಮಣ್ಣಿನ ಸೊಗಡಿನಲ್ಲಿ ಬದುಕು ಅರಳಿಸುವುದು ವಿಶಿಷ್ಟವಾದ ಗುಣ. ಇದು ನಿಸರ್ಗದ ನಿಮಯಕ್ಕೆ ಬಹಳ ಹತ್ತಿರ ಹಾಗೂ ಸಂಬಂಧಿಯಾದುದು. ನಿಜವಾದ ಪ್ರಾಕೃತಿಕ ಅಲೋಚನೆ ಮತ್ತು ತಾಯ್ತನದ ಬದುಕು ಸವೆಸುವುದು ಕಿಲಾರಿಗಳು. ಪ್ರಕೃತಿಯೊಂದಿಗೆ ಬದುಕನ್ನು ಸಮರ್ಪಿಸಿಕೊಳ್ಳುವ ಕಿಲಾರಿಗಳನ್ನು ಒಳಗಣ್ಣಿನಿಂದ ನೋಡಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಸಮಾಜ ಮಾಯಾಲೋಕದಲ್ಲಿ ತೇಲುತ್ತಿದೆ. ಸಿನಿಮಾ, ಟಿ.ವಿಗಳು ನಮ್ಮದಲ್ಲದ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿವೆ. ಈ ವೇಗ ಅಪಘಾತಕ್ಕೆ ಬಹಳಷ್ಟು ಹತ್ತಿರದಲ್ಲಿದೆ. ಹಾಗಾಗಿ ಜಾನಪದ ನಡೆ ಮತ್ತು ನುಡಿಯ ಕಡೆ, ಔಷಧಿ, ಜೀವನ ಕ್ರಮಗಳನ್ನು ಮತ್ತೆ ನಮ್ಮೊಳಗೆ ಮರುಪ್ರತಿಷ್ಠಾಪಿಸಿಕೊಳ್ಳಬೇಕು. ಇಲ್ಲದಿದ್ದರೆ ನಾಳೆಯ ದಿನಗಳು ಬಹಳಷ್ಟು ಕಠೋರವಾಗಲಿವೆ ಎಂದರು.

ಕಿಲಾರಿ ಅಧ್ಯಯನಗಳು, ಹುಡುಕಾಟಗಳು ಅತಿ ಹೆಚ್ಚಾಗಬೇಕು. ಜಾನಪದ ವಿದ್ವಾಂಸರು, ತಜ್ಞರು, ವಿಮರ್ಶಕರು, ಕಲಾವಿದರು ಒಟ್ಟಾಗಿ ಸೇರಿ ಈ ನೆಲದ ಅಸ್ಮಿತೆ ಹಾಗೂ ಜಾನಪದ ಕುರುಹುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ ಎಂದರು.

ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ನೆಲದ ಅರಿವು, ಪ್ರಜ್ಞೆ, ಬೆಳಕು, ತತ್ವಪದಕಾರರ ನಾಥ, ಸಿದ್ದ, ಅವಧೂತರ ಪರಂಪರೆಯನ್ನು ಒಳಗೊಂಡಂತೆ ಕಿಲಾರಿಗಳ ಚರಿತ್ರೆಯನ್ನು ಶೈಕ್ಷಣಿಕ ಶಿಸ್ತಿನೊಳಗೆ ದಾಖಲಿಸುವ ಪ್ರಯತ್ನವಾಗಬೇಕು ಎಂದರು.

ನಿರ್ಲಕ್ಷಿತ ಸಮುದಾಯಗಳ ಜ್ಞಾನ, ಪರಂಪರೆಯನ್ನು ಶೋಧಿಸುವ ಸಂಶೋಧನೆಗಳು ನಡೆಯಬೇಕು. ಬಯಲ ಬದುಕನ್ನು ಕಟ್ಟಿಕೊಂಡ ಬಡುಕಟ್ಟು ಸಮುದಾಯದ ಚರಿತ್ರೆ ಮತ್ತು ಜ್ಞಾನವನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಗೊಳಿಸುವ ಅನಿವಾರ್ಯತೆಯಲ್ಲಿದ್ದೇವೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮ್ಯಾಸ ಬುಡಕಟ್ಟಿನಲ್ಲಿ ಗಾದ್ರಿಪಾಲನಾಯಕ, ಯರಮಂಚಿನಾಯಕ ಮುಂತಾದ ವಿವಿಧ ಸಾಂಸ್ಕೃತಿಕ ಅಧಿದೈವಗಳ ಹೆಸರಿನಲ್ಲಿ ಆಚರಣಾತ್ಮಕ ನೆಲೆಯೊಳಗೆ ಗೋವುಗಳನ್ನು ಎತ್ತುಗಳನ್ನು ಹರಕೆ ರೂಪದಲ್ಲಿ ತುರುಪಟ್ಟಿಗಳಿಗೆ ಸೇರಿಸಲಾಗುತ್ತದೆ. ಈ ಮಾದರಿಯ ದೇವರ ಎತ್ತುಗಳನ್ನು ವಿಧಿಬದ್ಧವಾಗಿ ಪಾಲನೆ, ಪೋಷಣೆ ಮಾಡುವವರನ್ನು ಕಿಲಾರಿಗಳೆದು ಕರೆಯಲಾಗುತ್ತದೆ ಎಂದರು.

ಕಿಲಾರಿಗಳಿಗೆ ಪಶುಪಾಲನೆ ಬಗ್ಗೆ ಅಪಾರ ತಿಳುವಳಿಕೆ, ಜ್ಞಾನ ಇದೆ. ಅಗಾಧವಾದ ಮೌಖಿಕ ಸಾಹಿತ್ಯವೂ ಇವರದಲ್ಲಿ ಅಡಕವಾಗಿದೆ. ಶೈಕ್ಷಣಿಕ ಚೌಕಟ್ಟಿನಲ್ಲಿ ಕಿಲಾರಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಕರೆತಂದು ಪ್ರಸ್ತುತ ಪಡಿಸುತ್ತಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆ ಅಕಾಡಮಿಗೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಟಿ.ತಿಪ್ಪೇರುದ್ರಸ್ವಾಮಿ, ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ತಾರಿಣಿ ಶುಭದಾಯಿನಿ, ಸಮಾಜಶಾಸ್ತ್ರ ವಿಭಾಗದ ಪ್ರೊ.ಯಶೋಧಮ್ಮ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

Leave a Reply