ಕೋಲಾರ: ಬದುಕು ಬಹಳ ವೈವಿಧ್ಯತೆಯಿಂದ ಕೂಡಿದೆ. ಈ ವೈವಿಧ್ಯತೆ ಕ್ರಿಯಾಶೀಲವಾಗಿದ್ದರೆ ಮಾತ್ರ ಬದುಕಿಗೆ ಬೆಲೆ ಬರಲು ಸಾಧ್ಯ. ಬದುಕಿ ಸಾಯಬೇಕೆ ಹೊರತು ಸಾಯುವುದಕ್ಕೆ ಬದುಕಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದಲ್ಲಿ ಮಾತನಾಡಿದ ಅವರು, ರಂಗಭೂಮಿ ಸದಾ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುತ್ತದೆ. ಅದರೊಂದಿಗೆ ನಾವು ಹೆಜ್ಜೆ ಹಾಕಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದರು.
ಜೊತೆಗೆ ತಮ್ಮ ಕಲಾ ಜೀವನದ ಸಿಹಿಕಹಿ ಉದಾಹರಣೆಗಳನ್ನು ವಿವರಿಸುತ್ತ ರಂಗಭೂಮಿಯ ಒಡನಾಟವನ್ನು ಮೆಲುಕು ಹಾಕಿದರು.
ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿ, ರಾಜ್ಯ ದೇಶ, ಅಂತಾರಾಷ್ಟ್ರೀಯ ಮಟ್ಟದ ರಂಗಭೂಮಿಯ ಹಲವು ಮಾದರಿಗಳನ್ನು ವಿವರಿಸಿದರು.
ಗಾಯಕರೇ ನಾಯಕರಾಗಿರುವ ನೆಲ ಈ ಕೋಲಾರ. ಮೊದಲು ಈ ನೆಲದ ಸಂಸ್ಕೃತಿಯನ್ನು ಅರಿಯಿರಿ. ಸದಾ ಅವಕಾಶಗಳನ್ನು ಬಳಸಿಕೊಳ್ಳುವ ಯೋಗ ನಿಮ್ಮದಾಗಲಿ. ಕಲಿಯುವಾಗ ನಿಷ್ಠೆಯಿಂದ ಶ್ರದ್ಧೆಯಿಂದ ಸಮರ್ಥವಾಗಿ ಕಲಿಯಿರಿ. ಯಾವ ಪಾತ್ರ ಚಿಕ್ಕದಲ್ಲ ಯಾವ ಪಾತ್ರ ದೊಡ್ಡದಲ್ಲ ಎಂದರು.
ಅನೇಕ ವಿಷಯಗಳು ಒಂದರೊಳಗೆ ಒಂದು ಅಂತರಗತವಾಗಿರ್ತವೆ. ನಿರಂತರ ಅಭ್ಯಾಸ ನಿಮ್ಮನ್ನು ಉತ್ತಮ ನಟನನ್ನಾಗಿ, ಕಲಾವಿದನನ್ನಾಗಿ ರೂಪಿಸಲು ಸಾಧ್ಯ. ರಂಗಭೂಮಿ ಪ್ರಶ್ನೆ ಮಾಡುವ ಬಹುಶಿಸ್ತೀಯ ಮಾಧ್ಯಮ ಎಂದರು.
ಪ್ರಶ್ನೆಯ ಮೂಲಕ ಹಲವು ಸಂಕಟಗಳನ್ನು ಸಮಸ್ಯೆಗಳನ್ನು ಬಗೆಹರಿಸಲು ಕೂಡ ಸಾಧ್ಯ. ನಿಮ್ಮ ವ್ಯಕ್ತಿತ್ವ ವಿಕಸನವಾಗುವುದಂತೂ ಖಂಡಿತ. ಕರ್ನಾಟಕದಲ್ಲಿ ಹಲವು ರಂಗ ಶಾಲೆಗಳಿವೆ. ಆದಿಮ ವಿಶಿಷ್ಟ ಬಗೆಯ ವಿಭಿನ್ನ ಆಲೋಚನೆಗಳನ್ನು ರೂಪಿಸಿಕೊಂಡು ಹೊಸ ಹೆಜ್ಜೆಗಳನ್ನು ಹಾಕುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ರಂಗಭೂಮಿ ಶಿಕ್ಷಕರನ್ನು ಪ್ರತಿಯೊಂದು ಶಾಲೆಗಳಿಗೆ ನೇಮಿಸಿಕೊಳ್ಳುವಂತಹ ಕಾರ್ಯ ಸರಕಾರ ಮಾಡಲಿ ಎಂದು ಆಗ್ರಹಿಸಿದರು. ರಂಗ ಮುಖೇನ ಶಿಕ್ಷಣದಿಂದ ದೇಶದ ಭವಿಷ್ಯ ಉಜ್ವಲವಾಗುವ ಸಾಧ್ಯತೆಗಳಿವೆ ಎಂದರು.
ಆದಿಮದ ಆಡಳಿತಗಾರ ರಾಮಚಂದ್ರ ಪ್ರಾಸ್ತವಿಕವಾಗಿ ಮಾತನಾಡಿ, ನಟರಾದವರಿಗೆ ಸೂಕ್ಷ್ಮತೆ ಬಹಳ ಮುಖ್ಯ. ಚಿಂದಿ ಆಯುವ ವ್ಯಕ್ತಿ ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ಗ್ರಹಿಸಿಕೊಂಡಾಗ ನಮ್ಮೊಳಗಿನ ನಟ ಕಲಾವಿದ ಜಾಗೃತನಾಗಲು ಸಾಧ್ಯ ಎಂದರು.
ಆದಿಮ ಸಂಸ್ಥೆಗೆ 20 ವರ್ಷಗಳ ಇತಿಹಾಸವಿದೆ. ಆದಿಮ ಸಂಸ್ಥೆ ಕೂಲಿ ಕಾರ್ಮಿಕರ ಮಕ್ಕಳು, ಬಡಜನರ ಮಕ್ಕಳು ಒಂದೊಂದು ರೂಪಾಯಿ ಕೂಡಿಟ್ಟು ಕಟ್ಟಿದ ಸಂಸ್ಥೆ. ಹಾಗಾಗಿ ತನ್ನದೇ ಆದ ಘನತೆ ಮತ್ತಷ್ಟು ಬರಲು ದುಡಿಯೋಣ. ಆದಿಮ ರಂಗದ ಶಿಕ್ಷಣ ಕೇಂದ್ರದ ಮೊದಲ ವಿದ್ಯಾರ್ಥಿಗಳು ಇತಿಹಾಸ ನಿರ್ಮಿಸಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ. ಮುನಿಸ್ವಾಮಿ, ಕಲೆ, ಪ್ರೀತಿ ಜಗತ್ತಿನ ದಕ್ಷಿಣ ಉತ್ತರ ಧ್ರುವಗಳಿದ್ದಂತೆ. ಇವುಗಳ ಸಮತೋಲನ ಮೂಡಿಸುವುದೆ ಕಲಾವಿದರ ಕೆಲಸ. ಈ ರಂಗಭೂಮಿ ಸದೃಢ ಮಾಧ್ಯಮವಾಗಲು ಸ್ವ ಮೌಲ್ಯಮಾಪನ ಕಲಾವಿದನ ಮೊದಲ ಆದ್ಯತೆಯಾಗಬೇಕು ಎಂದರು.
ಕೆ ಎಂ ನೀಲಕಂಠೇಗೌಡ, ಜಗದೀಶ್ ಆರ್ ಜಾಣಿ, ಶ್ರೀನಿವಾಸ್, ಶಿವು ಕುಮಾರ್, ರಾಜೇಂದ್ರ ಮುದ್ನಾಳ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಗ.ನ.ಅಶ್ವತ್ ಸ್ವಾಗತಿಸಿದರು ಶ್ರೀನಿವಾಸ್ ವಂದಿಸಿದರು. ರಮೇಶ್ ಅಗ್ರಹಾರ ಕಾರ್ಯಕ್ರಮ ನಿರೂಪಿಸಿದರು.











