ರಂಗಮಂದಿರಗಳ ಬಾಡಿಗೆಗಳು ಸರ್ಕಾರದಿಂದಲೇ ನಿಗದಿಯಾಗಲಿ

7 months ago

ಕರ್ನಾಟಕ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ 200 ರೂಪಾಯಿಗಳ ದರವನ್ನು ನಿಗದಿಪಡಿಸಿ ಆದೇಶ ಮಾಡುವುದರ ಮೂಲಕ ಚಲನಚಿತ್ರ ವೀಕ್ಷಣೆಗೆ ಎಲ್ಲ ವರ್ಗದ ಜನರಿಗೂ ಅನುಕೂಲವಾಗುತ್ತಿದೆ. ಇದೊಂದು ಒಳ್ಳೆಯ ನಿರ್ಧಾರವಾಗಿದೆ.

ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ನಗರ ಮತ್ತು ಇತರ ಪ್ರಮುಖ ನಗರಗಳಲ್ಲಿ ಹಲವಾರು ರಂಗ ಮಂದಿರಗಳಿಗೆ ಮತ್ತು ಸಾಂಸ್ಕೃತಿಕ ಭವನಗಳಿವೆ, ಇವುಗಳಲ್ಲಿ ಬಹಳಷ್ಟು ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆಗಳ ಅನುದಾನದಿಂದ ನಿರ್ಮಾಣವಾಗಿರುತ್ತದೆ. ಇವುಗಳ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಟೆಂಡರ್ ಮೂಲಕ ಅವಕಾಶವನ್ನ ನೀಡಿರುತ್ತಾರೆ.

ವಿಶೇಷವಾಗಿ ಬೆಂಗಳೂರು ನಗರದಲ್ಲಿ ಇಂತಹ ರಂಗ ಮಂದಿರಗಳು ಮತ್ತು ಸಾಂಸ್ಕೃತಿಕ ಭವನಗಳು ದರವನ್ನ ನಿಗದಿಪಡಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಮಾನದಂಡವನ್ನು ಅನುಸರಿಸುವುದಿಲ್ಲ. ತಮಗೆ ಇಷ್ಟ ಬಂದ ರೀತಿಯಲ್ಲಿ ದರವನ್ನು ಸಂಸ್ಥೆಗಳಿಂದ ಮತ್ತು ನಾಟಕ ತಂಡಗಳಿಂದ ಪಡೆಯುತ್ತಿದ್ದಾರೆ. ಇದರಿಂದಾಗಿ ನಾಟಕ ತಂಡಗಳು ತಮ್ಮ ನಾಟಕಗಳನ್ನ ಪ್ರದರ್ಶನ ಮಾಡಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ಟಿಕೆಟ್ ದರ ಕೇವಲ 150, 200 ರೂಪಾಯಿಗಳಿಗೆ ನಿಗದಿಪಡಿಸಿದರು ಸಹ ಸಭಾಂಗಣದ ಬಾಡಿಗೆ ಹೆಚ್ಚಾಗಿರುವುದರಿಂದ ಇವರಿಗೆ ನಷ್ಟವಾಗುತ್ತಿದೆ.

ಉದಯೋನ್ಮುಖ ಮತ್ತು ರಂಗಭೂಮಿಯಲ್ಲಿ ಆಸಕ್ತಿಯನ್ನ ಹೊಂದಿ ಸಾಂಸ್ಕೃತಿಕ  ರಂಗಕ್ಕೆ ಆಸಕ್ತಿಯಿಂದ ಬರುವವರಿಗೆ ನಿರಾಶೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಂಸ್ಕೃತಿ ಸಚಿವರು ಅಧಿಕಾರಿಗಳ ಸಭೆ ನಡೆಸಿ ರಂಗಮಂದಿರಗಳು ಮತ್ತು ಸಾಂಸ್ಕೃತಿಕ ಭವನಗಳಲ್ಲಿ ನಾಟಕಗಳು ಮತ್ತು ಸುಗಮ ಸಂಗೀತ    ಕಾರ್ಯಕ್ರಮಗಳಿಗೆ  ರಿಯಾಯಿತಿ ದರದಲ್ಲಿ ಬಾಡಿಗೆಯನ್ನು ನಿಗದಿಪಡಿಸಿ ಕೊಟ್ಟರೆ, ನಾಟಕ ತಂಡಗಳು ಉಳಿದುಕೊಳ್ಳುತ್ತದೆ, ತಮ್ಮ ಚಟುವಟಿಕೆಯನ್ನ ಮತ್ತಷ್ಟು ವಿಸ್ತಾರಗೊಳಿಸಲು ಸಾಧ್ಯವಾಗುತ್ತದೆ.

ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಿತ್ರಗಳಿಗೂ 200 ರೂಪಾಯಿಗಳ ದರವನ್ನ ನಿಗದಿಪಡಿಸಿ ಸಾಂಸ್ಕೃತಿಕ ಲೋಕಕ್ಕೆ ಪ್ರೋತ್ಸಾಹಿಸಿರುವ ಮತ್ತು ಜನರ ಹಿತವನ್ನು ಕಾಪಾಡಿರುವ ಸರ್ಕಾರ, ರಂಗಮಂದಿರಗಳು ಮತ್ತು ಸಾಂಸ್ಕೃತಿಕ ಭವನಗಳ ದರವನ್ನು ತಂಡಗಳಿಗೆ ಹೊರೆಯಾಗದ ರೀತಿಯಲ್ಲಿ ನಿಗದಿಪಡಿಸಿ ಸಹಾಯ ಮಾಡಬೇಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply