ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಕೋಮು ರಾಷ್ಟ್ರೀಯತೆ: ಭಾರತ ಎತ್ತ ಸಾಗುತ್ತಿದೆ?
ಇಂಗ್ಲಿಷ್: ರಾಮ್ ಪುನಿಯಾನಿ ಕನ್ನಡಕ್ಕೆ: ಡಾ.ಪ್ರದೀಪ್ ಮಾಲ್ಗುಡಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೂರು ದೇಶಗಳ ಪ್ರವಾಸದ ನಂತರ ವಿಶ್ಲೇಷಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾಗವತ್ ಅವರು ವೈವಿಧ್ಯತೆಯನ್ನು ಹಿಂದುತ್ವದೊಂದಿಗೆ ಜೋಡಿಸಿ ಅದನ್ನು ಮತ್ತಷ್ಟು ಉದಾರವಾಗಿಸಿದ್ದಾರೆ ಎಂದು ಕೆಲವರು ಶ್ಲಾಘಿಸಿದ್ದಾರೆ. ಆದರೆ, ನಮ್ಮ ದೇಶದ ಶ್ರೀಮಂತ ಧಾರ್ಮಿಕ ವೈವಿಧ್ಯತೆಯನ್ನು ತನ್ನೊಳಗೆ ಸೇರಿಸಿಕೊಳ್ಳುವಷ್ಟು ಹಿಂದುತ್ವವು ಯಾವುದೇ ರೀತಿಯಲ್ಲಿ ಉದಾರವಾಗಲು ಸಾಧ್ಯವೇ?
ಯಾವುದೇ ದೇಶದಲ್ಲಿ ವೈವಿಧ್ಯತೆಗೆ ಎಷ್ಟು ಗೌರವವಿದೆ ಎಂಬುದನ್ನು ಆ ದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಯಿಂದ ಅಳೆಯಬಹುದು. ಒಂದು ದೇಶದಲ್ಲಿ ಪ್ರಜಾಪ್ರಭುತ್ವದ ಆರೋಗ್ಯ ಹೇಗಿದೆ ಎಂಬುದನ್ನು ಅಲ್ಲಿ ಅಲ್ಪಸಂಖ್ಯಾತರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ಆಧಾರದ ಮೇಲೆ ತಿಳಿಯಬಹುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರಸ್ತುತ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಸೂಚ್ಯಂಕಗಳಲ್ಲಿ ಭಾರತದ ಸ್ಥಾನಮಾನ ನಿರಂತರವಾಗಿ ಕುಸಿಯುತ್ತಿದೆ. ಅಲ್ಪಸಂಖ್ಯಾತರ ಪರಿಸ್ಥಿತಿ ಮತ್ತು ಅವರು ತಮ್ಮ ಸ್ಥಿತಿಯ ಬಗ್ಗೆ ಸ್ವತಃ ಏನು ಯೋಚಿಸುತ್ತಾರೆ ಎಂಬುದರೊಂದಿಗೆ ನಾವು ಇದನ್ನು ಜೋಡಿಸಿ ನೋಡಬೇಕಾಗಿದೆ. ಆದಾಗ್ಯೂ, ಉತ್ತಮ ಸ್ಥಿತಿಯಲ್ಲಿರುವ ಕೆಲವು ಮುಸ್ಲಿಂ ನಾಯಕರು ಮತ್ತು ಇತರ ಮುಸ್ಲಿಮರು, ಭಾರತದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ತೀರಾ ಹದಗೆಡುತ್ತಿಲ್ಲ ಎಂದು ಪ್ರತಿಪಾದಿಸಬಹುದು.
- ನೇರ ನಿಷ್ಠುರ ಪ್ರಾಮಾಣಿಕ ರಾಜಕೀಯ ನೇತಾರ ಕೆ ಎಚ್ ರಂಗನಾಥ್
- ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್-ಉನ್ ನಿಧನರಾಗಿದ್ದಾರೆಯೇ?
- ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಕೋಮು ರಾಷ್ಟ್ರೀಯತೆ: ಭಾರತ ಎತ್ತ ಸಾಗುತ್ತಿದೆ?
- 2029ರ ಮಹಾಚುನಾವಣೆಗೆ ತಟ್ಟಲಿದೆ ‘ಜೆನ್ ಜಿ’ ಭೂಕಂಪ
- ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ-2026
ಇದನ್ನು ಮೌಲ್ಯಮಾಪನ ಮಾಡಲು ಉತ್ತಮ ಮಾರ್ಗವೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಅಥವಾ ಒಂದು ದಶಕದಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಪರಿಶೀಲಿಸುವುದು. ಇತ್ತೀಚೆಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ದೆಹಲಿಯಲ್ಲಿ ಇಂತಹದ್ದೇ ವಿಷಯಗಳ ಮೇಲೆ ಕೇಂದ್ರೀಕೃತವಾದ ಸಭೆಯೊಂದನ್ನು ಆಯೋಜಿಸಿತ್ತು; ಅಲ್ಲಿ ನೀಡಲಾದ ವಿವರಗಳು ನಮ್ಮ ಸಮಾಜದ ವಾಸ್ತವ ಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ. ಬಿಜೆಪಿಗೆ ಲೋಕಸಭೆಯಲ್ಲಿ 240 ಮತ್ತು ರಾಜ್ಯಸಭೆಯಲ್ಲಿ 117 ಸದಸ್ಯರಿದ್ದಾರೆ. ಇದಲ್ಲದೆ ಸುಮಾರು 1,516 ಶಾಸಕರಿದ್ದಾರೆ. ಅಂದರೆ ಕೇಂದ್ರ ಮತ್ತು ರಾಜ್ಯ ಮಟ್ಟದ ಶಾಸನಸಭೆಗಳಲ್ಲಿ ಒಟ್ಟು 1,873 ಜನಪ್ರತಿನಿಧಿಗಳಿದ್ದಾರೆ. ಇವರಲ್ಲಿ ಕೇವಲ ಇಬ್ಬರು ಮಾತ್ರ ಮುಸ್ಲಿಮರು — ಒಬ್ಬರು ತ್ರಿಪುರಾದಲ್ಲಿ, ಇನ್ನೊಬ್ಬರು ಮಣಿಪುರದಲ್ಲಿ!
ಪಿಯುಸಿಎಲ್ ಆಯೋಜಿಸಿದ್ದ ಈ ಸಭೆಯಲ್ಲಿ ವಿವಿಧ ಮಾನವ ಹಕ್ಕು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮುಸ್ಲಿಮರ ವಿಷಯಕ್ಕೆ ಬಂದರೆ, ಸಾಮಾಜಿಕ ಚರ್ಚೆಗಳಲ್ಲಿ ಅವರ ತೇಜೋವಧೆ (ರಾಕ್ಷಸೀಕರಣ) ಅಭೂತಪೂರ್ವ ಮಟ್ಟಕ್ಕೆ ತಲುಪಿದೆ.
ದೆಹಲಿಯಲ್ಲಿ ‘4PM’ನ ಇಬ್ಬರು ಮಹಿಳಾ ಪತ್ರಕರ್ತೆಯರಾದ ಶಾಹೀನ್ ಮತ್ತು ನಫೀಸಾ ಅವರ ಮೇಲೆ ಪೊಲೀಸರ ಹಲ್ಲೆಯು, ಹಲ್ಲೆ ನಡೆಸುತ್ತಿದ್ದ ಅಧಿಕಾರಿಗೆ ಅವರಿಬ್ಬರೂ ಮುಸ್ಲಿಮರು ಎಂಬುದು ತಿಳಿದ ನಂತರ ಮತ್ತಷ್ಟು ತೀವ್ರಗೊಂಡಿತು. ಆರಂಭದಲ್ಲಿ ಈ ಸಮುದಾಯವನ್ನು ದ್ವೇಷ ಮತ್ತು ಹಿಂಸಾಚಾರದ ಗುರಿಯಾಗಿಸಲಾಗುತ್ತಿತ್ತು. ಈಗ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಮುಖ್ಯ ಗುರಿಯಾಗಿದೆ.
ಇದು ಕುಖ್ಯಾತ ಎನ್ಆರ್ಸಿ (NRC) ಮತ್ತು ಸಿಎಎ (CAA) ಮೂಲಕ ಆರಂಭವಾಯಿತು. ಇದರ ವಿರುದ್ಧ ದೆಹಲಿಯ ಶಾಹೀನ್ ಬಾಗ್ನಲ್ಲಿ ಮುಸ್ಲಿಂ ಮಹಿಳೆಯರು ನಡೆಸಿದ ಪ್ರತಿರೋಧ ಇಡೀ ದೇಶಕ್ಕೆ ವ್ಯಾಪಿಸುವ ಆತಂಕವಿದ್ದಿದ್ದರಿಂದ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಈ ನಡುವೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್ – SIR) ಮೂಲಕ ಮುಸ್ಲಿಮರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಹೊಸ ಮಾರ್ಗವನ್ನು ಕಂಡುಕೊಂಡು ಅದನ್ನು ದೇಶದ ಮೇಲೆ ಹೇರಲಾಯಿತು.
ಒಂದಾದ ಮೇಲೊಂದರಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ; ಇವರಲ್ಲಿ ಹೆಚ್ಚಿನವರು ಮುಸ್ಲಿಮರು ಅಥವಾ ದಲಿತರಾಗಿದ್ದಾರೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶಗಳಿಂದ ಇದು ಅತ್ಯಂತ ಸ್ಪಷ್ಟವಾಗಿ ದೃಢಪಟ್ಟಿತು. ಅಲ್ಲಿ ಚುನಾವಣೆಗೆ ಮುನ್ನ ಎಸ್ಐಆರ್ ಮೂಲಕ 27 ಲಕ್ಷಕ್ಕೂ ಹೆಚ್ಚು ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಯಿತು.
ಪ್ರತಿಷ್ಠಿತ ಅರ್ಥಶಾಸ್ತ್ರಜ್ಞ ಹಾಗೂ ರಾಜಕೀಯ ವಿಶ್ಲೇಷಕರಾದ ಪರಕಾಲ ಪ್ರಭಾಕರ್ ಅವರು, “ಎಸ್ಐಆರ್ನ ಉದ್ದೇಶ ಕೇವಲ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಮಾತ್ರವಲ್ಲ, ಬದಲಿಗೆ ಇದರಿಂದ ‘ನಾಗರಿಕರ ಎರಡು ವರ್ಗಗಳು ಸೃಷ್ಟಿಯಾಗುತ್ತವೆ — ಮೊದಲನೆಯದು ಮತ ಚಲಾಯಿಸಲು ಸಾಧ್ಯವಾಗುವವರು, ಮತ್ತು ಎರಡನೆಯದು ಮತ ಚಲಾಯಿಸಲು ಸಾಧ್ಯವಾಗದವರು'” ಎಂದು ಹೇಳಿದ್ದಾರೆ. ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿರುವ ವೇಗವನ್ನು ನೋಡಿದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ ಸುಮಾರು 16 ಕೋಟಿ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಹೀಗೆ ಎಸ್ಐಆರ್ ಎಂಬುದು ಸಮಾಜದ ಕೆಲವು ವರ್ಗಗಳನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ವಂಚಿಸುವ ಒಂದು ಯೋಜನೆಯಾಗಿದೆ.
ಮುಸ್ಲಿಮರ ವಿರುದ್ಧ ಬುಲ್ಡೋಜರ್ಗಳ ಬಳಕೆಗೆ ಸುಪ್ರೀಂ ಕೋರ್ಟ್ ನಿರ್ಬಂಧಗಳನ್ನು ವಿಧಿಸಿದ್ದರೂ, ಉತ್ತರ ಪ್ರದೇಶ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಇದನ್ನು ತಮ್ಮ ಹೆಗ್ಗಳಿಕೆಯಂತೆ (ಬಿರುದಿನಂತೆ) ಬಳಸಿಕೊಂಡರು. ಇದರೊಂದಿಗೆ ಕ್ಷೇತ್ರ ಪುನರ್ವಿಂಗಡಣೆಯ ಅಪಾಯವೂ ಎದುರಾಗಿದ್ದು, ಇದರಿಂದ ಬಿಜೆಪಿ ಪ್ರಭಾವವಿರುವ ರಾಜ್ಯಗಳ ಜನಪ್ರತಿನಿಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಆರ್ಎಸ್ಎಸ್ನಿಂದ ಹುಟ್ಟಿದ ಈ ಪಕ್ಷ ಇಂತಹ ದೊಡ್ಡದೊಡ್ಡ ತಂತ್ರಗಳನ್ನು ಹೆಣೆಯುತ್ತಿದೆ. ಇನ್ನೊಂದೆಡೆ, ಸಂವಿಧಾನ ಸಭೆಯ ಗೀತೆ ಸಮಿತಿಯ ತೀರ್ಮಾನಕ್ಕೆ ವಿರುದ್ಧವಾಗಿ ಬಿಜೆಪಿ ಸರ್ಕಾರ ಇಡೀ ‘ವಂದೇ ಮಾತರಂ’ ಗಾಯನವನ್ನು ಕಡ್ಡಾಯಗೊಳಿಸಿದೆ. ಇದು ಮುಸ್ಲಿಮೇತರರೂ ಹಿಂದೂ ದೇವತೆಗಳನ್ನು ಪೂಜಿಸಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ.
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಎಂಬುದು ಬಹುತೇಕ ಒಂದು ಟೊಳ್ಳು ಶಬ್ದವಾಗಿ ಉಳಿದಿದೆ. ಒಂದಾದ ಮೇಲೊಂದರಂತೆ ಹಲವು ರಾಜ್ಯಗಳು ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ಗಳನ್ನು ಜಾರಿಗೆ ತಂದಿವೆ. ಹಿಂದೂಗಳಿಗೆ ಮತಾಂತರಗೊಳ್ಳಲು ಅವಕಾಶ ನೀಡಬಾರದು ಮತ್ತು ಇದರ ನೆಪದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಈ ಕಾಯ್ದೆಗಳ ಮುಖ್ಯ ಉದ್ದೇಶವಾಗಿದೆ. ಸಂಘ ಪರಿವಾರದ ಮತ್ತೊಂದು ಕಾರ್ಯಕ್ರಮವೆಂದರೆ ‘ಘರ್ ವಾಪ್ಸಿ’, ಇದರ ಅಡಿಯಲ್ಲಿ ಆದಿವಾಸಿಗಳು, ದಲಿತರು ಮತ್ತು ಮುಸ್ಲಿಮರನ್ನು ಮತಾಂತರಿಸಿ ಹಿಂದೂಗಳನ್ನಾಗಿ ಮಾಡಲಾಗುತ್ತದೆ. ಈ ಕಾರ್ಯ ದೇಶದ ಕುಗ್ರಾಮಗಳಲ್ಲಿ ಭರದಿಂದ ಸಾಗಿದೆ.
ಧಾರ್ಮಿಕ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಗಳು ಭಾರತವನ್ನು ‘ವಿಶೇಷ ಕಳವಳಕಾರಿ ದೇಶಗಳ’ ಪಟ್ಟಿಯಲ್ಲಿ ಸೇರಿಸಿವೆ. ಅಮೆರಿಕದ ಸ್ವತಂತ್ರ ಒಕ್ಕೂಟ ಸಂಸ್ಥೆ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF), ಭಾಗವತ್ ಅವರು ಅಮೆರಿಕ ತಲುಪುವ ಕೆಲವೇ ದಿನಗಳ ಮೊದಲು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿ ಕುಸಿಯುತ್ತಲೇ ಇದೆ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಪ್ರಚೋದನೆ ನಿರಂತರವಾಗಿ ನಡೆಯುತ್ತಿದ್ದು, ಆರ್ಎಸ್ಎಸ್ ಪ್ರೇರಿತ ಗುಂಪುಗಳು ಈ ಹಿಂಸಾಚಾರದಲ್ಲಿ ಭಾಗಿಯಾಗಿವೆ ಎಂದು ತಿಳಿಸಿದೆ.
ಅಂಕಣಕಾರ್ತಿ ತವ್ಲೀನ್ ಸಿಂಗ್ ಅವರು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಹೀಗೆ ಬರೆದಿದ್ದಾರೆ: “ಹಿಂದುತ್ವದ ಧೈರ್ಯಶಾಲಿ ಯೋಧರು ಚರ್ಚ್ಗಳಿಗೆ ಬಲವಂತವಾಗಿ ನುಗ್ಗಿ, ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳ ಮೂಲಕ ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸುತ್ತಾರೆ. ಈ ‘ಸಾಹಸ’ಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಅಂತಹ ಒಂದು ವಿಡಿಯೋದಲ್ಲಿ, ಬಿಜೆಪಿ ನಾಯಕಿಯೊಬ್ಬಳು ಜಬಲ್ಪುರದ ಚರ್ಚ್ಗೆ ನುಗ್ಗಿ ಅಂಧ ವ್ಯಕ್ತಿಯೊಬ್ಬನೊಂದಿಗೆ ಆಕ್ರಮಣಕಾರಿಯಾಗಿ ಮಾತನಾಡುತ್ತಾ, ಆತನನ್ನು ಬೆದರಿಸಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದೀಯಾ ಎಂದು ಆರೋಪಿಸುವುದನ್ನು ನಾನು ನೋಡಿದೆ… ಕ್ರೈಸ್ತರ ಧಾರ್ಮಿಕ ಹಬ್ಬಗಳಿಗೆ ಅಡ್ಡಿಪಡಿಸುವ ಸುಮಾರು 100 ಪ್ರಯತ್ನಗಳು ನಡೆದಿವೆ ಮತ್ತು ಇಂತಹ ಬಹುತೇಕ ಎಲ್ಲಾ ಘಟನೆಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆದಿವೆ. ಆದರೆ ಹಾಗೆ ಮಾಡಿದ ಒಬ್ಬ ವ್ಯಕ್ತಿಗೂ ಶಿಕ್ಷೆಯಾಗಿಲ್ಲ ಮತ್ತು ಒಬ್ಬ ಮುಖ್ಯಮಂತ್ರಿಯೂ ಈ ಹಿಂಸಾಚಾರದ ಘಟನೆಗಳನ್ನು ಬಹಿರಂಗವಾಗಿ ಖಂಡಿಸಿಲ್ಲ.”
ಇತರ ಹಲವು ರಾಜ್ಯಗಳಂತೆ ಮಹಾರಾಷ್ಟ್ರದಲ್ಲೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಬಲವಂತವಾಗಿ, ವಂಚನೆಯಿಂದ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈ ಕಾನೂನು ಅವಕಾಶ ನೀಡುತ್ತದೆ. ಮತಾಂತರಗೊಳ್ಳಲು ಇಚ್ಛಿಸುವ ಯಾವುದೇ ವ್ಯಕ್ತಿ 60 ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ, ಚರ್ಚ್ನ ಪದಾಧಿಕಾರಿಗಳು ಅಥವಾ ಇತರ ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಕ್ರೈಸ್ತ ಸಂಘಟನೆಗಳು ಸೇರಿದಂತೆ ಸುಮಾರು ಇಪ್ಪತ್ತು ನಾಗರಿಕ ಸಮಾಜ ಸಂಸ್ಥೆಗಳು 2026ರ ಆಗಸ್ಟ್ 24ರಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ಕಾನೂನನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದವು. ಅವರು ಇದನ್ನು ‘ವೈಯಕ್ತಿಕ ಆಯ್ಕೆಯಲ್ಲಿನ ಹಸ್ತಕ್ಷೇಪ’ ಮತ್ತು ಭಾರತೀಯ ನಾಗರಿಕರಿಗೆ ಸಂವಿಧಾನ ನೀಡಿರುವ ಧರ್ಮವನ್ನು ಆಚರಿಸುವ ಹಾಗೂ ಪ್ರಚಾರ ಮಾಡುವ ಹಕ್ಕಿನ ಮೇಲಿನ ದಾಳಿ ಎಂದು ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಂಬೈ ಭಾಗದ ಚರ್ಚ್ಗಳು ಪ್ರಾರ್ಥನಾ ಸಭೆಗಳಿಗೆ ಬರುವವರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಲು ಪ್ರಾರಂಭಿಸಲು ನಿರ್ಧರಿಸಿವೆ.
ಪ್ರಾರ್ಥನಾ ಸಭೆಗಳ ಮೇಲಿನ ದಾಳಿಗಳಲ್ಲದೆ, ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಕ್ರೈಸ್ತ ಸ್ವಯಂಸೇವಾ ಸಂಸ್ಥೆಗಳು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಹಣದ ಕೊರತೆ. ಹೊಸ ಎಫ್ಸಿಆರ್ಎ (FCRA) ನಿಯಮಗಳಲ್ಲಿ ಇಂತಹ ನಿಬಂಧನೆಗಳನ್ನು ತರಲಾಗಿದ್ದು, ಇದರಿಂದ ಮಿಷನರಿಗಳ ಲೋಕೋಪಕಾರಿ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಮತ್ತು ಅವರು ನೀಡುವ ಮಾನವೀಯ ನೆರವನ್ನು ಅವಲಂಬಿಸಿರುವ ಬಡ ಜನ ಅದರಿಂದ ವಂಚಿತರಾಗಲಿದ್ದಾರೆ. ‘ವೈವಿಧ್ಯತೆ’ಯನ್ನು ಕೇವಲ ಒಂದು ಅಲಂಕಾರಿಕ ಮಾತಾಗಿ ಬಳಸುವ ಹಿಂದುತ್ವ ರಾಜಕಾರಣದ ಹಿರಿಯ ನಾಯಕ ಮೋಹನ್ ಭಾಗವತ್ ಅವರ ಹೇಳಿಕೆಗಳ ಅಸಲಿ ವಾಸ್ತವ ಇದು.




