ಬಿಜ್ಜಳ ಲಿಂಗಾಯತಕ್ಕೆ ಮಾನ್ಯತೆ ನೀಡಲೆಂದು ಬಸವಣ್ಣನವರು ಧರ್ಮ ಸ್ಥಾಪಿಸಲಿಲ್ಲ

7 months ago

ನಾನು ಲಿಂಗಾಯತ ನನ್ನ ಧರ್ಮ ಲಿಂಗಾಯತ. ನನ್ನ ಅಸ್ಮಿತೆ ಲಿಂಗಾಯತ.

ಹನ್ನೆರಡನೆಯ ಶತಮಾನದಲ್ಲಿ ರಾಜ ಬಿಜ್ಜಳ ಲಿಂಗಾಯತಕ್ಕೆ ಮಾನ್ಯತೆ ನೀಡಲೆಂದು ಬಸವಣ್ಣನವರು ಧರ್ಮ ಸ್ಥಾಪಿಸಲಿಲ್ಲ. ಲಿಂಗಾಯತವು ಅಧಿಕೃತ ಧರ್ಮವಾದೀತೆಂದು ಅಲ್ಲಮರು ಅನುಭವ ಮಂಟಪದ ಅಧ್ಯಕ್ಷತೆ ವಹಿಸಲಿಲ್ಲ. ತಮ್ಮ ಜನತೆಗೆ ಮೀಸಲಾತಿ ಸಿಗುತ್ತದೆಂದು ಡೋಹರ ಕಕ್ಕಯ್ಯ ಲಿಂಗಾಯತರಾಗಲಿಲ್ಲ. ಬಿಜ್ಜಳ ಉನ್ನತ ವರ್ಗಕ್ಕೆ ಸೇರಿಸಲೆಂದು ಮಾದಾರ ಚನ್ನಯ್ಯ ಲಿಂಗಾಯತವನ್ನು ಅಪ್ಪಿಕೊಳ್ಳಲಿಲ್ಲ. ಸೂಳೆ ಸಂಕವ್ವೆ ವೃತ್ತಿಯಿಂದ ಬಿಡುಗಡೆಹೊಂದಲು ಲಿಂಗಾಯತಳಾಗಲಿಲ್ಲ. ರಾಣಿ ಅಕ್ಕಮಹಾದೇವಿ ಸ್ವರ್ಗ ಸೇರಲು ಸೀರೆ ಕಿತ್ತೆಸೆಯಲಿಲ್ಲ.

ಏಳನೂರಾ ಎಪ್ಪತ್ತು ಶರಣರು ವಾಂಚಲ್ಯಕ್ಕಾಗಿ, ಸ್ವಾರ್ಥಕ್ಕಾಗಿ ಈ ಧರ್ಮ ಸ್ಥಾಪಿಸಲಿಲ್ಲ. ಜಗದ ಏಳಿಗಾಗಿ ಧರ್ಮ ಸ್ಥಾಪಿಸಿದರು. ಮಾನರೆಲ್ಲರೂ ಸಮಾನರೆಂದು ಸಾರಲು ಧರ್ಮ ಕಟ್ಟಿದರು.

ಲಿಂಗಾಯತ ವಿಶ್ವಧರ್ಮ. ಮಾನವನ ಕನಸನ್ನು ನನಸಾಗಿಸುವ ಕನ್ನಡದ ಧರ್ಮ.

ಊಸರವಳ್ಳಿ ರಾಜಕೀಯ ನಾಯಕರು ಮತಗಳಿಗಾಗಿ ಧರ್ಮ ಬದಲಾಯಿಸಿದಂತೆ ನಿಜ ಲಿಂಗಾಯತ ಧರ್ಮ ಬದಲಾಯಿಸಲಾರ. ಭಕ್ತನ ಹೆಗಲ ಮೇಲೆ ಮೆರೆಯಲು ದಿನಕ್ಕೊಂದು ವೇಶ ಹಾಕುವ ಮಠಾಧೀಶರು ನಿಜ ಲಿಂಗಾಯತರಲ್ಲ. ಮರಣವೇ ಮಹಾನವಮಿ ಎನ್ನುವವನೇ ಲಿಂಗಾಯತ. ಸಿದ್ಧಾಂತಕ್ಕಾಗಿ ಜೀವಿಸುವನೇ ಲಿಂಗಾಯತ, ಭಿಕ್ಷೆಗಾಗಿ ಕೈ ಒಡ್ಡದವನೇ ಲಿಂಗಾಯತ. ಲಿಂಗಾಯತನ ಅಂಗೈ ನೆಲ ನೋಡದು, ಆಕಾಶ ನೋಡುವ ಅಂಗೈ ಲಿಂಗಾಯತನದಾಗಲು ಎಂದೆಂದಿಗೂ ಸಾಧ್ಯವಿಲ್ಲ. ಮೀಸಲಾತಿಗಾಗಿ ನಾನು ನನ್ನ ಧರ್ಮ ಮಾರಿಕೊಳ್ಳುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ಪ್ರಜೆಯೆ ಪ್ರಜಾಪತಿ. ಪ್ರಜಾಪತಿಯಾಗಲು ಸಂಖ್ಯೆ ಮುಖ್ಯ. ನಾಡನಾಳಲು ನಾವಿಂದು ಎದೆ ತಟ್ಟಿ ಹೇಳಲೇಬೇಕು “ನಾವು ಲಿಂಗಾಯತರೆಂದು”. ನಾವು “ಬಸವ ಶಿಶುಗಳೆಂದು”. ಅದನ್ನು ಇಂದಿನ ಆಳುವ ಸರ್ಕಾರಗಳಿಗೆ ತಿಳಿಸಲು ಎಲ್ಲರೂ ಬದ್ಧರಾಗೋಣ.

ಹನ್ನೊಂದನೆಯ “ಇತರೆ” ಕಾಲಂನಲ್ಲಿ “ಲಿಂಗಾಯತ” ಎಂದು ಬರೆಸುವ. ಜಾತಿ ಅವಶ್ಯಕತೆ ಇರುವವರು ಜಾತಿ ಕಾಲಂನಲ್ಲಿ ತಮ್ಮ ಕಾಯಕ ವರ್ಗವನ್ನು ಸಧ್ಯಕ್ಕೆ  ಗುರುತಿಸಿಕೊಳ್ಳಲಿ.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply