ಕ್ರಿಯಾಶೀಲ ವ್ಯಕ್ತಿತ್ವದ ನಾಡಿನ ಸಾಂಸ್ಕೃತಿಕ ಮಹಾನ್ ಚೇತನ ಶಂಕರ್ ನಾಗ್

8 months ago

ಪಾದರಸದ ಚುರುಕಿನ, ಕ್ರಿಯಾಶೀಲ ವ್ಯಕ್ತಿತ್ವದ ನಾಡಿನ ಸಾಂಸ್ಕೃತಿಕ ಮಹಾನ್ ಚೇತನ ಶಂಕರ್ ನಾಗ್ ಸ್ಮರಣೆ.

ಕನ್ನಡ ಚಲನಚಿತ್ರರಂಗದಲ್ಲಿ ಇದ್ದದ್ದು ಕೇವಲ ಕೆಲವು ದಶಕಗಳು ಮಾತ್ರ. 1978ರಲ್ಲಿ ಆರಂಭವಾದ ಇವರ ಸಿನಿಮಾ ಪಯಣ 1990ರಲ್ಲಿ ತಮ್ಮ ದುರಂತದ ಸಾವಿನೊಂದಿಗೆ ಅಂತ್ಯವಾಯಿತು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1954ರಲ್ಲಿ ನವೆಂಬರ್ 15ರಂದು ಹುಟ್ಟಿದಂತಹ ಶಂಕರ್ ನಾಗ್ ಕನ್ನಡ ನಾಡು ಎಂದು ಸಹ ಮರೆಯದ ರೀತಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಇದರ ಕನಸನ್ನು ಕಂಡಿದ್ದವರು ಶಂಕರ್ ನಾಗ್ ಎಂಬ ವಿಚಾರ ಬಹಳಷ್ಟು ಜನರಿಗೆ ಗೊತ್ತಿದೆ. ಆದರೂ ಸಹ ಇವರ ಹೆಸರಿನಲ್ಲಿ ಒಂದೇ ಒಂದು ಮೆಟ್ರೋ ನಿಲ್ದಾಣ ಇಲ್ಲದಿರುವುದು ಬೇಸರದ ಸಂಗತಿ.

ನಂದಿಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಯೋಜನೆಯ ಮಾತುಗಳನ್ನು ಮೊದಲು ಆಡಿದವರು ಇವರು, ಕಡಿಮೆ ಮೊತ್ತಕ್ಕೆ ಕಡಿಮೆ ಅವಧಿಯಲ್ಲಿ ಬಡ ಜನರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯ ಕನಸು ಕಂಡಿದ್ದವರು ಇವರು.

ರಾಜ್ಯದ ಹಲವಾರು ಆಟೋರಿಕ್ಷಾಗಳ ಮೇಲೆ ದೇವರ ಚಿತ್ರಗಳು ಇರುತ್ತದೋ ಇಲ್ಲವೋ, ಆದರೆ ಶಂಕರ್ ನಾಗ್ ರವರ ಚಿತ್ರಗಳು ಇಲ್ಲದಂತಹ ಆಟೋರಿಕ್ಷಗಳನ್ನು ಕಾಣಲು ಸಾಧ್ಯವೇ ಇಲ್ಲ. ಆಟೋ ರಾಜ ಎನ್ನುವ ಒಂದು ಚಲನಚಿತ್ರದ ಮೂಲಕ ಆಟೋ ಚಾಲಕರ ಮನಸ್ಸನ್ನು ಗೆದ್ದು ಆಟೋ ಚಾಲಕರಿಗೂ ಒಂದು ವ್ಯಕ್ತಿತ್ವವನ್ನ ಇರುವುದನ್ನ ಪರಿಚಯಿಸಿದ ಶಂಕರ್ ನಾಗ್ ನಿಧನರಾಗಿ 35 ವರ್ಷಗಳು ಕಳೆದರೂ ಆಟೋ ಚಾಲಕರ ಪಾಲಿನ ಪ್ರೀತಿಯ ನಟ.

ಮರಾಠಿ ರಂಗಭೂಮಿಯ ಮೂಲಕ ತಮ್ಮ ನಟನೆಯನ್ನ ಆರಂಭಿಸಿ ಒಂದಾನೊಂದು ಕಾಲದಲ್ಲಿ ಚಲನಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಕನ್ನಡದ ಚಲನಚಿತ್ರರಂಗಕ್ಕೆ ಹೊಸದೊಂದು ಪ್ರತಿಭೆ ಪಾದಾರ್ಪಣೆ ಆಯಿತು. 12 ವರ್ಷಗಳ ಅಲ್ಪ ಅವಧಿಯಲ್ಲಿ ಇವರು ಅದೆಷ್ಟು ಕೋಟಿ ಕನ್ನಡಿಗರ ಮನಸ್ಸನ್ನು ಗೆದ್ದು ಇಂದಿಗೂ ಅಭಿಮಾನದ ನಟರಾಗಿದ್ದಾರೆ.

ಒಂದು ಮುತ್ತಿನ ಕಥೆ ಇವರು ನಿರ್ದೇಶಿಸಿದ ಚಿತ್ರ. ಈ ಚಿತ್ರ ವಿಶ್ವದ ಗಮನವನ್ನು ಸೆಳೆಯಿತು. ಕಾರಣ ಈ ಚಿತ್ರದ ವಸ್ತು ಮತ್ತು ಚಿತ್ರೀಕರಣದ ಗುಣಮಟ್ಟ. ಆ ಚಲನಚಿತ್ರದಲ್ಲಿ ಡಾಕ್ಟರ್ ರಾಜ್ ಇದರಲ್ಲಿ ಅದ್ಭುತವಾದ ಅಭಿನಯವನ್ನು ಮಾಡಿದ್ದರು.

ಕರಾಟೆ ಕಿಂಗ್ ಎಂದು ಇವರನ್ನು ಅಭಿಮಾನದಿಂದ ಕರೆಯುತ್ತಾರೆ. ಒಬ್ಬ ಪೊಲೀಸ್ ಅಧಿಕಾರಿಯ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಪರಿಚಯಿಸುವ ಸಾಂಗ್ಲಿಯಾನ ಚಿತ್ರ ಇವರ ಮತ್ತೊಂದು ಜನಪ್ರಿಯ ಚಿತ್ರ. ಇದು ಸಹ ಇವರ ನಟನೆಯ ಮೂಲಕ ಕನ್ನಡಿಗರ ಸಾಂಸ್ಕೃತಿಕ ಮನಸ್ಸುಗಳನ್ನು ಆಕರ್ಷಿಸಿತು.

ಸಿಬಿಐ ಶಂಕರ್ ಈ ಚಿತ್ರ ಸಹ ಜನಪ್ರಿಯವಾಯಿತು. ವಿಶೇಷವಾಗಿ ಸೀತಾರಾಮ ಚಲನಚಿತ್ರ ಮೂಗನ ಮಾತು, ಗೀತಾ ಮುಂತಾದವುಗಳು ಜನಪ್ರಿಯ ಚಿತ್ರಗಳು.

ಮಿಂಚಿನ ಓಟ ಇವರು ನಿರ್ದೇಶಿಸಿದ ಮತ್ತೊಂದು ಚಿತ್ರ. ಇದರ ವಸ್ತು ಬಹಳಷ್ಟು ಜನರನ್ನ ಆಕರ್ಷಿಸಿತು.

ಶಂಕರ್ ನಾಗ್ ಆರ್ ಕೆ ನಾರಾಯಣ್ ರವರ ಮಾಲ್ಗುಡಿ ಡೇಸ್ ಸಣ್ಣ ಕಥೆಗಳನ್ನ ಧಾರವಾಹಿಯಾಗಿ ಚಿತ್ರಿಸಿ ಬಿಡುಗಡೆ ಮಾಡಿದರು. ಮಾಲ್ಗುಡಿ ಡೇಸ್ ಶಂಕರನಾಗ್ ರವರ ಸಾಮರ್ಥ್ಯ ಕ್ರಿಯಾಶೀಲತೆಯನ್ನ ಪರಿಚಯಿಸಿದ ಮತ್ತೊಂದು ಪ್ರಮುಖವಾದ ಧಾರವಾಹಿ. ಇಂದಿಗೂ ಸಹ ಮಾಲ್ಗುಡಿ ಡೇಸ್ ಬಗ್ಗೆ ಜನರು ಮಾತನಾಡುತ್ತಾರೆ.

ಏಕಕಾಲದಲ್ಲಿ ನಟನೆಯನ್ನು ಮಾಡುತ್ತಾ ಬಿಡುವಿನ ವೇಳೆಯಲ್ಲಿ ಓದುತ್ತಾ ತಾವು ಕನಸು ಕಂಡಂತಹ ಯೋಜನೆಗಳ ಬಗ್ಗೆ ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸದಾ ಕಾಲ ತಮ್ಮನ್ನು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪಾದರಸದ ಚುರುಕಿನ ವ್ಯಕ್ತಿತ್ವ ಇವರದು.

ಶಂಕರ್ ನಾಗ್ ಅನೇಕ ಚಿತ್ರಗಳನ್ನು ಮತ್ತು ಅನೇಕ ನಾಟಕಗಳನ್ನು ಸಹ ನಿರ್ದೇಶಿಸಿದ್ದರು. ವಿಶೇಷವಾಗಿ ಕನ್ನಡ ಚಲನಚಿತ್ರರಂಗದ ಬಹುತೇಕ ಡಬ್ಬಿಂಗ್, ಸಂಕಲನ ಇವೆಲ್ಲವೂ ತಮಿಳುನಾಡಿಗೆ ಸೀಮಿತವಾಗಿತ್ತು. ಆದರೆ, ಇವರು ಸಂಕೇತ್ ಸ್ಟುಡಿಯೋ ಮೂಲಕ ಕನ್ನಡ ನಾಡಿನಲ್ಲೂ ಡಬ್ಬಿಂಗ್ ಮತ್ತು ಸಂಕಲನ ಕಾರ್ಯವನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು. ಇವರು ಅಂದು ಅಡಿಪಾಯ ಹಾಕಿದ ಸಂಕೇತ್ ಸ್ಟುಡಿಯೋ ಬಹಳಷ್ಟು ಜನರನ್ನ ಪ್ರೇರೇಪಿಸಿ ಕನ್ನಡ ನಾಡಿನಲ್ಲಿ ಸ್ವತಂತ್ರವಾಗಿ ಡಬ್ಬಿಂಗ್ ಮತ್ತು ಎಡಿಟಿಂಗ್ ಹಾಗೂ ಇನ್ನಿತರೆ ತಾಂತ್ರಿಕ ಕೆಲಸಗಳನ್ನು ಮಾಡಬಲ್ಲ ಹಲವಾರು ಸಂಸ್ಥೆಗಳು ಹುಟ್ಟಿಕೊಂಡವು. ಮದ್ರಾಸ್ ಅವಲಂಬನೆ ಸಾಕಷ್ಟು ಕಡಿಮೆಯಾಗಿ ಕನ್ನಡ ಚಲನಚಿತ್ರ ಸ್ವಾವಲಂಬನೆಯಾಗಿ ಸ್ವಾಭಿಮಾನದಿಂದ ಮತ್ತಷ್ಟು ಬೆಳೆಯಲು ಕಾರಣವಾಯಿತು.

ಶಂಕರ್ ನಾಗ್ ತಾವು ಒಬ್ಬರೇ ಬೆಳೆಯದೆ ಅನೇಕರನ್ನು ಜೊತೆಯಲ್ಲಿ ಹಲವಾರು ವಿಭಾಗಗಳಲ್ಲಿ ಉತ್ತೇಜಿಸಿ ಅವರನ್ನು ಪ್ರಮುಖ ವಾಹಿನಿಗೆ ತಂದಿದ್ದಾರೆ. ಎಷ್ಟೇ ದೊಡ್ಡ ನಟರಾಗಿದ್ದರು ಅಹಂಕಾರವಿಲ್ಲದೆ ಸರಳತೆಯಿಂದ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಿದ್ದರು. ಚಿತ್ರೀಕರಣದ ವೇಳೆಯಲ್ಲಿ ಶಿಸ್ತು ಮತ್ತು ಸಂಯಮದಿಂದ ನಡೆದುಕೊಂಡು ಕಲೆಯ ಗೌರವವನ್ನು ಹೆಚ್ಚಿಸಿದ್ದರು.

ಇವರ ಸಹೋದರರಾದ ಅನಂತನ ನಾಗ್ ಸಹ ಇವರೊಂದಿಗೆ ಹಲವಾರು ಸಂದರ್ಭಗಳಲ್ಲಿ ಕೈಜೋಡಿಸಿದ್ದಾರೆ.

1990 ಸೆಪ್ಟೆಂಬರ್ 30 ನಿಜಕ್ಕೂ ಕನ್ನಡ ನಾಡಿನ ಸಾಂಸ್ಕೃತಿಕ ಮತ್ತು ಸಿನಿಮಾ ಲೋಕಕ್ಕೆ ದೊಡ್ಡದಾದಂತಹ ನಷ್ಟವಾಗಿದೆ. ಕಾರಣ ಅಂದು ಶಂಕರ್ ನಾಗ್ ಅಪಘಾತದಲ್ಲಿ ಸಾವನ್ನು ಅಪ್ಪದಿದ್ದರೆ ಅವರಿಗಿದ್ದಂತಹ ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆ ಕನ್ನಡ ಚಲನಚಿತ್ರ ರಂಗ ಮತ್ತು ಸಾಮಾಜಿಕ ಲೋಕಕ್ಕೆ ಸಾಕಷ್ಟು ರೀತಿಯಲ್ಲಿ ನೆರವಾಗುತ್ತಿತ್ತು. ಈ ಕಾರಣದಿಂದ ನಿಜಕ್ಕೂ ಹೇಳಲೇಬೇಕಿದೆ ಶಂಕರ್ ನಾಗ್ ರವರ ಅಗಲಿಕೆ ಕನ್ನಡ ಚಲನಚಿತ್ರ ರಂಗ ಮತ್ತು ಸಾಂಸ್ಕೃತಿಕ ಲೋಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಇಂದಿಗೂ ಸಹ ತುಂಬಲಾರದ ನಷ್ಟವೇ ಆಗಿದೆ.

ಆಟೋರಿಕ್ಷಾ ಚಾಲಕರ ಕಥೆಯನ್ನ ಕುರಿತು ಹಲವಾರು ಚಿತ್ರಗಳು ಬಂದರೂ ಸಹ ಇಂದಿಗೂ ಜನರ ಮನಸ್ಸಿನಲ್ಲಿ ಸದಾ ಕಾಲ ಉಳಿದಿರುವುದು ಶಂಕರ್ ನಾಗ್ ರವರು.

36ನೇ ವರ್ಷದ ಇವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಇವರ ಧರ್ಮಪತ್ನಿ ಅರುಂಧತಿ ನಾಗರವರ ಸಾಂಸ್ಕೃತಿಕ ಸೇವೆಯನ್ನು ನಾವು ಗೌರವಿಸಬೇಕಿದೆ. ವಿಶ್ವದಲ್ಲಿ ಒಂದು ಲಂಡನ್ ಮತ್ತು ಮತ್ತೊಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ರಂಗ ಶಂಕರ ನಾಟಕ ಮಂದಿರದಲ್ಲಿ ಮಾತ್ರವೇ ವರ್ಷದ 365 ದಿನವೂ ನಿರಂತರವಾಗಿ ನಾಟಕ ನಡೆಯುವಂತಹ ಸ್ಥಳಗಳಾಗಿದೆ. ಅನೇಕರು ಸ್ಮಾರಕಗಳನ್ನ ಕಟ್ಟಲು ಬಯಸುತ್ತಾರೆ. ಸಮಾಧಿಗಳನ್ನ ನಿರ್ಮಿಸಿಕೊಳ್ಳುತ್ತಾರೆ. ಆದರೆ ಅರುಂಧತಿ ನಾಗ್ ರಂಗ ಶಂಕರದ ಮೂಲಕ ಶಂಕರ ನಾಗರವರನ್ನ ಪ್ರತಿದಿನವೂ ನೆನೆಯುವಂತೆ ಮಾಡುತ್ತಾ ಶಂಕರ್ ನಾಗ್ ರವರನ್ನು ನಾಟಕ ಚಟುವಟಿಕೆಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಬಹಳಷ್ಟು ಜನರಿಗೆ ಮಾದರಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply