ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರಿಗೆ ನಮಸ್ಕಾರ.
ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಅಧೋಗತಿಗೆ ಹಿಂದಿನ ಎರಡು ಅವಧಿಯ ಇಬ್ಬರು ರಾಜ್ಯಾಧ್ಯಕ್ಷರು ಕಾರಣ. ಅದರಲ್ಲೂ ಮಹೇಶ್ ಜೋಶಿಯ ಸರ್ವಾಧಿಕಾರ, ದುರಹಂಕಾರದ ಅಹಂನಿಂದ 112 ವರ್ಷಗಳ ಪರಿಷತ್ತಿನ ಪರಂಪರೆಗೆ ಮಸಿ ಬಳಿಯಲಾಯಿತು. ಭ್ರಷ್ಟಾಚಾರದ ಆರೋಪದಿಂದ ಸರ್ಕಾರ ಅವರನ್ನು ಮನೆಗೆ ಕಳುಹಿಸಿಯೂ ಆಯ್ತು. ಹೀಗಾಗಿ. ಜೋಶಿಯ ಪ್ರಾಥಮಿಕ ಸದಸ್ಯತ್ವವನ್ನು ನ್ಯಾಯಾಲಯ ಅಮಾನತ್ತಿನಲ್ಲಿಟ್ಟಿದೆ. ಬೆನ್ನಲ್ಲೇ ಕೇಂದ್ರ ಕಸಾಪಗೆ ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ.
- ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭ್ರಷ್ಟ ಅಧಿಕಾರಿಗಳಿಗೇನು ಕೆಲಸ?
- ಮತ್ತೆ ಮತ್ತೆ ಕರಿದು ಬಳಸಿ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವುದಕ್ಕೆ ಕಡಿವಾಣ
- ಅಗತ್ಯ ಬಿದ್ದರೆ ಸಾಲ ತಗೊಂಡಾದರೂ ರೈತರಿಗೆ ನೆರವು ನೀಡುತ್ತೇವೆ: ಜಿ ಪರಮೇಶ್ವರ್
- ಯುವಾಧಿವೇಶನ 2026: ಮಾನಸಿಕ ಆರೋಗ್ಯಕ್ಕಾಗಿ ಯುವಯಾನ!
- ವಿಕಲಚೇತನರ ಗೌರವಧನ ತಡೆ ಅಮಾನವೀಯ: ಆರ್ ಅಶೋಕ್
ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಜೋಶಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಹಾಗೂ ಜೋಶಿ ವಕೀಲರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು ಜೋಶಿಯ ಅರ್ಜಿಯನ್ನು ವಜಾಗೊಳಿಸಿರುವುದು ಬಹುತೇಕ ಕನ್ನಡಪರ ಹೋರಾಟಗಾರರು ಹಾಗೂ ಸಾಹಿತ್ಯಾಸಕ್ತರಿಗೆ ಸಂತಸ ತಂದಿರುವ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ನಾವು ಸ್ವಾಗತಿಸುತ್ತೇವೆ.
ಆದರೆ, ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಮತ್ತೊಂದು ಮಹತ್ವದ ಸವಾಲಿನ ಬಗ್ಗೆ ಪ್ರತಿಯೊಬ್ಬ ಸದಸ್ಯರೂ ಗಂಭೀರವಾಗಿ ಯೋಚಿಸಬೇಕಾಗಿದೆ.
ಈ ಸಂದರ್ಭದಲ್ಲಿ ಸರ್ಕಾರಿ ಸೇವೆಯಲ್ಲಿದ್ದು ಉನ್ನತ ಸ್ಥಾನದಲ್ಲಿದ್ದು ಅಧಿಕಾರ ಅನುಭವಿಸಿ, ಬಿಜೆಪಿ ಸರ್ಕಾರದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅಧಿಕಾರಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಹನ್ನೊಂದು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಸಾಗಿರುವ ದಿಕ್ಕು ಮತ್ತು ಅದರ ಆಡಳಿತ ವೈಖರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಕನ್ನಡಿಗರ ಮಹತ್ವದ ಪ್ರಾತಿನಿಧಿಕ ಸಂಸ್ಥೆಯ ಚುಕ್ಕಾಣಿ ಯಾರ ಕೈಗೆ ಹೋಗಬೇಕು ಎಂಬುದು ಕೇವಲ ಚುನಾವಣೆಯ ಪ್ರಶ್ನೆಯಲ್ಲ; ಇದು ಸಂಸ್ಥೆಯ ಹಾಗೂ ಕನ್ನಡಿಗರ ಮುಂದಿನ ಭವಿಷ್ಯವನ್ನು ನಿರ್ಧರಿಸುವ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಪ್ರಮುಖ ವಿಚಾರವನ್ನು ಕಸಾಪ ಸದಸ್ಯರ ಗಮನಕ್ಕೆ ತರಲು ಬಯಸುತ್ತೇನೆ.
ಸರ್ಕಾರಿ ಸೇವೆಯಲ್ಲಿದ್ದ ನಿವೃತ್ತ ಜಿಲ್ಲಾಧಿಕಾರಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ತನಿಖೆ ನಡೆದಿರುವ ವಿಚಾರವೂ ಸಾರ್ವಜನಿಕವಾಗಿ ಚರ್ಚೆಯಲ್ಲಿದೆ. ಅದೇ ರೀತಿ, ಕೆಎಎಸ್ ಹುದ್ದೆಯಿಂದ ಐಎಎಸ್ ಹುದ್ದೆಗೆ ಬಡ್ತಿ ಪಡೆಯುವ ಸಂದರ್ಭದಲ್ಲಿ ಅವರ ವಿರುದ್ಧ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಐಎಎಸ್‌ಗೆ ಪರಿಗಣಿಸಬಾರದು ಎಂದು ಲೋಕಾಯುಕ್ತ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂಬ ವಿಚಾರವೂ ಚರ್ಚೆಯಲ್ಲಿದೆ. ಈ ಎಲ್ಲಾ ವಿಚಾರಗಳ ಸತ್ಯಾಸತ್ಯತೆ ಮತ್ತು ಕಾನೂನುಬದ್ಧ ಪರಿಣಾಮಗಳನ್ನು ಸಂಬಂಧಪಟ್ಟ ದಾಖಲೆಗಳು ಹಾಗೂ ನ್ಯಾಯಾಂಗದ ಅಂತಿಮ ನಿರ್ಣಯಗಳ ಆಧಾರದ ಮೇಲೆ ಪರಿಗಣಿಸಬೇಕಾಗಿದೆ.
ಇದೇ ಸಂದರ್ಭದಲ್ಲಿ, ‘ಲಂಕೇಶ್ ಪತ್ರಿಕೆ’ (ವರದಿ: ಟಿ.ಕೆ. ತ್ಯಾಗರಾಜ್, 1996, ಮಾರ್ಚ್ 13) ಯಲ್ಲಿ ‘ಸ್ಲಮ್ ಕುಳ್ಳನ ಕಥೆ’ಎಂಬ ಶೀರ್ಷಿಕೆಯಡಿ ಸಿ. ಸೋಮಶೇಖರ್ ಅವರ ಕುರಿತು ಪ್ರಕಟವಾಗಿರುವ ವರದಿಯನ್ನೂ ಕಸಾಪ ಸದಸ್ಯರು ಒಮ್ಮೆ ಗಮನಿಸಬೇಕಾಗಿದೆ. ಆ ವರದಿಯಲ್ಲಿ, “ಕಾಲಕ್ಕೆ ತಕ್ಕಂತೆ, ನಾಯಕರಿಗೆ ತಕ್ಕಂತೆ ಬಣ್ಣ–ನಿಷ್ಠೆ ಬದಲಿಸುವ ಕನ್ನಡದ ಕೂಸು” ಎಂಬ ರೀತಿಯಲ್ಲಿ ಅವರ ಸಾರ್ವಜನಿಕ ನಡೆ-ನುಡಿಗಳ ಕುರಿತು ತೀವ್ರ ಟೀಕೆ ಮಾಡಲಾಗಿದೆ. ಹಾಗೆಯೇ ಇದೇ ವರದಿಯ ಬಾಕ್ಸ್ ಸುದ್ದಿಯಲ್ಲಿ “ಭಾಷಣ – ಭಯಂಕರ ಸೋಮಶೇಖರ ದೌಲತ್ತು” ಎಂಬ ಮಾಹಿತಿಯೂ ಪ್ರಕಟವಾಗಿದೆ.
ಒಬ್ಬ ವ್ಯಕ್ತಿಯ ಕುರಿತು ಪತ್ರಿಕೆಯಲ್ಲಿ ಹಿಂದೆ ಪ್ರಕಟವಾಗಿರುವ ವರದಿಯನ್ನು ಮಾತ್ರ ಆಧಾರ ಮಾಡಿಕೊಂಡು ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಆದರೆ, ಇಂತಹ ವರದಿಗಳು ಮತ್ತು ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಇತರ ವಿಚಾರಗಳನ್ನು ಒಟ್ಟಾಗಿ ಪರಿಶೀಲಿಸಿ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಐತಿಹಾಸಿಕ ಸಂಸ್ಥೆಯ ನಾಯಕತ್ವಕ್ಕೆ ಅಭ್ಯರ್ಥಿಯ ಸಾರ್ವಜನಿಕ ಹಿನ್ನೆಲೆ, ನಡೆ-ನುಡಿ ಮತ್ತು ಆಡಳಿತದ ದೃಷ್ಟಿಕೋನ ಹೇಗಿದೆ ಎಂಬುದನ್ನು ಮತದಾರರು ಪ್ರಶ್ನಿಸಿಕೊಳ್ಳುವುದು ಅಗತ್ಯವಾಗಿದೆ.
ಇಂತಹ ಗಂಭೀರ ಆರೋಪಗಳು, ವಿವಾದಗಳು ಮತ್ತು ಸಾರ್ವಜನಿಕ ಟೀಕೆಗಳು ಚರ್ಚೆಯಲ್ಲಿರುವ ಸಂದರ್ಭದಲ್ಲಿ, ಅಂತಹ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದರಿಂದ, ಕಸಾಪದ ಪ್ರತಿಯೊಬ್ಬ ಸದಸ್ಯರೂ ಅಭ್ಯರ್ಥಿಗಳ ಹಿನ್ನೆಲೆ ಹಾಗೂ ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸಿ ತಮ್ಮ ನಿರ್ಧಾರ ಕೈಗೊಳ್ಳಬೇಕಾಗಿದೆ.
ಇದರ ಜೊತೆಗೆ, ಪ್ರಸ್ತುತ ಶರಣ ಸಾಹಿತ್ಯ ಪರಿಷತ್ತಿನಲ್ಲಿರುವ ಅಧಿಕಾರ ಮತ್ತು ಸ್ಥಾನವನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುವುದು, ಸಾಹಿತಿಗಳನ್ನು ಸನ್ಮಾನಿಸುವುದು, ಪ್ರಶಸ್ತಿಗಳನ್ನು ನೀಡುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕುರಿತು ಹಲವು ಪ್ರಶ್ನೆಗಳು ಕೇಳಿಬರುತ್ತಿವೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ದುರುಪಯೋಗದಿಂದ ನೊಂದು ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿ ಮಠಾಧೀಶರಾದ ತೋಂಟದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ತಮ್ಮ ಗೌರವ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆನೀಡಿದ್ದಾರೆಂದು ಮಾಹಿತಿ ಇದೆ. ಈ ಬೆಳವಣಿಗೆ ಏನು ಸೂಚಿಸುತ್ತೆ? ಜೊತೆಗೆ ಶರಣ ಸಾಹಿತ್ಯ ಪರಿಷತ್ತಿನಲ್ಲಿನ ಎಲ್ಲಾ ನಿರ್ಧಾರಗಳು ಅಧ್ಯಕ್ಷರ ಏಕಪಕ್ಷೀಯ ನಿರ್ಧಾರದಿಂದ ಆಗುತ್ತಿವೆ. ಅವರೊಬ್ಬ ಸರ್ವಾಧಿಕಾರಿ ಎಂದು ಹಲವರು ದೂರಿದ್ದಾರೆ. ಇನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದರೆ ಗತಿಏನು ಎಂಬ ಪ್ರಶ್ನೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರೆ ಕೇಳುತ್ತಿದ್ದಾರೆ. ಇಂತಹ ಮಾಹಿತಿಗಳು ಚುನಾವಣಾ ನೀತಿ ಮತ್ತು ನೈತಿಕತೆಯ ದೃಷ್ಟಿಯಿಂದ ಪರಿಶೀಲನೆಗೆ ಒಳಪಡಬೇಕಾದ ವಿಚಾರವಾಗಿವೆ. ಈ ಬಗ್ಗೆ ಮತದಾರರೂ ಗಂಭೀರವಾಗಿ ಯೋಚಿಸಬೇಕು.
ಚುನಾವಣೆಯ ಸಂದರ್ಭದಲ್ಲಿ ಸನ್ಮಾನ, ಪ್ರಶಸ್ತಿ ಅಥವಾ ಇತರೆ ಗೌರವಗಳನ್ನು ಯಾರಿಗೆ ಮತ್ತು ಯಾವ ಉದ್ದೇಶದಿಂದ ನೀಡಲಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕು. ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ನೀಡಲಾಗುತ್ತಿರುವ ಸನ್ಮಾನ ಅಥವಾ ಪ್ರಶಸ್ತಿಗಳನ್ನು ಸಾಹಿತಿಗಳು ಮತ್ತು ಗಣ್ಯರು ಸ್ವೀಕರಿಸುವ ಬದಲು, ಅವುಗಳನ್ನು ತಿರಸ್ಕರಿಸುವ ಮೂಲಕ ತಮ್ಮ ನೈತಿಕ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ.
ಇಲ್ಲವಾದರೆ ಚುನಾವಣಾ ಸಂದರ್ಭದಲ್ಲೇ ನೀಡಲಾಗುವ ಸನ್ಮಾನ ಅಥವಾ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅವರ ನೈತಿಕ ನಿಲುವಿನ ಬಗ್ಗೆಯೂ ಪ್ರಶ್ನೆ ಮೂಡುವಂತೆ ಮಾಡಬಹುದು ಎಂಬುದನ್ನು ಸಂಬಂಧಪಟ್ಟವರು ಯೋಚಿಸಬೇಕು.
ಸಾಹಿತ್ಯ ಸೇವೆ, ಸನ್ಮಾನ ಮತ್ತು ಪ್ರಶಸ್ತಿಗಳು ಯಾವುದೇ ರೀತಿಯ ಚುನಾವಣಾ ಪ್ರಭಾವದ ಸಾಧನಗಳಾಗಬಾರದು. ಸಾಹಿತಿಗಳಿಗೆ ಗೌರವ ನೀಡುವುದು ಉತ್ತಮ ಸಂಪ್ರದಾಯವೇ ಆಗಿದ್ದರೂ, ಚುನಾವಣಾ ಸಂದರ್ಭದಲ್ಲಿ ಅದರ ಹಿಂದೆ ಯಾವುದೇ ಮತದಾನದ ಉದ್ದೇಶ ಅಥವಾ ಪ್ರಭಾವದ ಪ್ರಯತ್ನ ಇರಬಾರದು ಎಂಬುದು ಮುಖ್ಯ.
ಇದೇ ಸಂದರ್ಭದಲ್ಲಿ, ಶರಣ ಸಾಹಿತ್ಯ ಪರಿಷತ್ತಿನ ಕೆಲವು ಪದಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಸಂಸ್ಥೆಯ ಬೈಲಾ ತಿದ್ದುಪಡಿ ಮೂಲಕ ಹಿಂದೆ ಅಸ್ತಿತ್ವದಲ್ಲಿರದ ಹುದ್ದೆಗೆ ಅವಕಾಶ ಕಲ್ಪಿಸಿಕೊಂಡಿರುವ ಬಗ್ಗೆ ಸಹ ಪ್ರಶ್ನೆಗಳು ಕೇಳಿಬಂದಿವೆ. ಈ ವಿಚಾರದ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಬೈಲಾ, ತಿದ್ದುಪಡಿ ದಾಖಲೆಗಳು ಮತ್ತು ಅಧಿಕೃತ ಮಾಹಿತಿಗಳ ಮೂಲಕ ಪರಿಶೀಲಿಸಬೇಕಾಗಿದೆ.
ಒಂದು ಸಂಸ್ಥೆಯಲ್ಲಿಯೇ ಹುದ್ದೆ, ಅಧಿಕಾರ ಮತ್ತು ಬೈಲಾ ತಿದ್ದುಪಡಿಯ ಕುರಿತು ಇಂತಹ ಪ್ರಶ್ನೆಗಳು ಉದ್ಭವಿಸಿರುವಾಗ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಇನ್ನಷ್ಟು ದೊಡ್ಡ ಮತ್ತು ಐತಿಹಾಸಿಕ ಸಂಸ್ಥೆಯ ಆಡಳಿತದ ಕುರಿತು ಸದಸ್ಯರು ಸಹಜವಾಗಿಯೇ ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ. ತಮ್ಮ ಅಮೂಲ್ಯ ಮತವನ್ನು ಸಾಹಿತಿಗಳು, ಕನ್ನಡಪರ ಹೋರಾಟಗಾರರಿಗೆ ನೀಡುವ ಮೂಲಕ ಅಧಿಕಾರಿಗಳನ್ನು ದೂರವಿಡಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ವ್ಯಕ್ತಿಯ ವೈಯಕ್ತಿಕ ಅಧಿಕಾರ ಅಥವಾ ಪ್ರತಿಷ್ಠೆಗಾಗಿ ಇರುವ ಸಂಸ್ಥೆಯಲ್ಲ. ಅದು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನದ ಸಂಸ್ಥೆ. ಆದ್ದರಿಂದ ಕಸಾಪದ ಪ್ರತಿಯೊಬ್ಬ ಸದಸ್ಯರೂ ಈ ಚುನಾವಣೆಯಲ್ಲಿ ವ್ಯಕ್ತಿ, ಪ್ರಭಾವ, ಅಧಿಕಾರ ಅಥವಾ ವೈಯಕ್ತಿಕ ಸಂಬಂಧಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳದೆ, ಅಭ್ಯರ್ಥಿಗಳ ಹಿನ್ನೆಲೆ, ಸಾರ್ವಜನಿಕ ದಾಖಲೆಗಳು, ಕನ್ನಡಪರ ಬದ್ಧತೆ, ಸಂಸ್ಥೆಯ ಬಗ್ಗೆ ಅವರ ದೃಷ್ಟಿಕೋನ ಹಾಗೂ ಪಾರದರ್ಶಕ ಆಡಳಿತದ ಬಗ್ಗೆ ಅವರ ನಿಲುವುಗಳನ್ನು ಪರಿಗಣಿಸಬೇಕೆಂದು ಮನವಿ ಮಾಡುತ್ತೇನೆ.
ನಾವು ಎಚ್ಚರ ತಪ್ಪಿದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ದಿಕ್ಕಿನ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಕಸಾಪ ಸದಸ್ಯರೇ, ಈ ಚುನಾವಣೆಯನ್ನು ಕೇವಲ ವ್ಯಕ್ತಿಗಳ ನಡುವಿನ ಸ್ಪರ್ಧೆಯಾಗಿ ನೋಡದೆ, ಕನ್ನಡ ಸಾಹಿತ್ಯ ಪರಿಷತ್ತು ಯಾವ ರೀತಿಯ ಆಡಳಿತ ಮತ್ತು ನಾಯಕತ್ವದ ಅಡಿಯಲ್ಲಿ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸುವ ಮಹತ್ವದ ಸಂದರ್ಭವಾಗಿ ಪರಿಗಣಿಸಬೇಕು.
ದಾಖಲೆಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳ ಹಿನ್ನೆಲೆಯನ್ನು ತಿಳಿದುಕೊಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಸ್ವಾಯತ್ತತೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಅಮೂಲ್ಯ ಮತವನ್ನು ಚಲಾಯಿಸಿ.
ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರದ ಕೇಂದ್ರವಾಗಬಾರದು; ಕನ್ನಡದ ಸೇವೆಯ ಕೇಂದ್ರವಾಗಬೇಕು.
ಕನ್ನಡಕ್ಕಾಗಿ – ಕನ್ನಡಿಗರಿಗಾಗಿ – ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಮತ್ತು ಸ್ವಾಯತ್ತತೆಗಾಗಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳೋಣ. ನಮಗೆ ಕನ್ನಡ – ಕನ್ನಡಿಗ – ಕರ್ನಾಟಕ ಮುಖ್ಯವಾಗಬೇಕು.
ವಂದನೆಗಳೊಂದಿಗೆ,
– ಎಲ್. ಜೀವನ್, ಕ.ಸಾ.ಪ. ಆಜೀವ ಸದಸ್ಯ, ಪತ್ರಕರ್ತ ಹಾಗೂ ಪ್ರಕಾಶಕ, ಬೆಂಗಳೂರು









