ಮೂರನೇ ವರುಷದ ಪ್ರಶಸ್ತಿ ವಿಜೇತರು
ಪ್ರಭು ಗುರಪ್ಪನವರ: ರಂಗ ಸಂಘಟಕರು, ರಂಗ ನಿರ್ದೇಶಕರು, ಸಮಾಜ ಸೇವಕರು ಶೇಷಗಿರಿ ಗ್ರಾಮ, ಹಾನಗಲ್ ತಾಲ್ಲೂಕ, ಹಾವೇರಿ ಜಿಲ್ಲೆ.
ದಿನಾಂಕ 10 ಫೆಬ್ರವರಿ, 2025 ಸಂಜೆ 5:30 ರಿಂದ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ, ಮಲ್ಲತ್ತಹಳ್ಳಿ ಬೆಂಗಳೂರು
ತೋ.ನಂಜುಂಡಸ್ವಾಮಿ ನೆನಪಿನ ಗೌರವ ಪ್ರಶಸ್ತಿ ಕಾರ್ಯಕ್ರಮ
ಪ್ರಶಸ್ತಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ: ಕೆ ವಿ ನಾಗರಾಜ ಮೂರ್ತಿ, ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡಮಿ, ಬೆಂಗಳೂರು.
ಮುಖ್ಯ ಅತಿಥಿಗಳು:
ಶ್ರೀನಿವಾಸ ಜಿ ಕಪ್ಪಣ್ಣ, ರಂಗ ಸಂಘಟಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸೆಂಟರ್ ಸ್ಟೇಜ್ ಗಂಗಾಧರ, ಹುಳಿಯಾರು, ಅಂತರರಾಷ್ಟ್ರೀಯ ಬೆಳಕು-ಧ್ವನಿ ತಜ್ಞರು
ಶಶಿಧರ ಅಡಪ, ರಾಷ್ಟ್ರೀಯ ರಂಗ ವಿನ್ಯಾಸಕಾರರು, ಬೆಂಗಳೂರು
ಆರ್.ನರೇಂದ್ರ ಬಾಬು, ರಂಗಭೂಮಿ ಕಲಾವಿದರು, ಸಮಾಜ ಸೇವಕರು
ಕಾರ್ಯಕ್ರಮಗಳ ವಿವರ
5.30 – 6.00
ಲಘು ಉಪಹಾರ
6.00 – 6.45
ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತಾದ ಗಾಯನ ಕಾರ್ಯಕ್ರಮ ಆನಂದ್ ಮಾಲೂರು ಮತ್ತು ತಂಡದವರಿಂದ
6.45 – 7.45
ತೊ.ನಂ.ನೆನಪಿನ ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
8.00 – 9.00
“ಶಾಂತಿ ಮತ್ತು ಪ್ರೀತಿಗಾಗಿ” ಭರತನಾಟ್ಯ.
ಪರಿಕಲ್ಪನೆ ಮತ್ತು ವಿನ್ಯಾಸ – ಲಹರಿ ಭಾರಿಘಾಟ್
ನೃತ್ಯ ಸಂಯೋಜನೆ – ಸಹಚಾರಿ ತಂಡ
ತೊಟ್ಟವಾಡಿ ನಂಜುಂಡಸ್ವಾಮಿ ನೆನಪಿನ ಗೌರವ ಪ್ರಶಸ್ತಿ ಪುರಸ್ಕೃತರು
2023 – ಚಂದ್ರ ಕುಮಾರ್ ಸಿಂಗ್, ಬೆಳಕು ತಜ್ಞರು, ರಂಗ ನಿರ್ದೇಶಕರು, ರಂಗ ಸಂಘಟಕರು
2024 – ಹೂಲಿ ಶೇಖರ್, ನಾಟಕಕಾರರು, ರಂಗ ನಿರ್ದೇಶಕರು, ರಂಗ ಸಂಘಟಕರು, ಬಯಲಾಟದ ಕಲಾವಿದರು
2025 – ಪ್ರಭು ಗುರಪ್ಪನವರ, ರಂಗ ಸಂಘಟಕರು, ರಂಗ ನಿರ್ದೇಶಕರು, ಸಮಾಜ ಸೇವಕರು
ತೊಟ್ಟವಾಡಿ ನಂಜುಂಡಸ್ವಾಮಿ ಅವರ ಕೃತಿಗಳು:
ಹಬ್ಬ ಮತ್ತು ಬಲಿ (ನಾಟಕ)
ಕೊಂಡಿ ಮತ್ತು ಮುಳ್ಳುಗಳು (ನಾಟಕ)
ಜಾತಿಯೆಂಬ ಮಾಯೆಯೊಳಗೆ (ನಾಟಕ)
ಕಾಯಕ ಯೋಗಿ ಮಾದಾರ ಚೆನ್ನಯ್ಯ (ನಾಟಕ)
ಪಾಲ್ಗುಣಿ (ನಾಟಕ)
ಅರಿವಿನಂಗಳ (ಹದಿನೈದು ಬೀದಿ ನಾಟಕಗಳ ಸಂಪಾದನೆ)
ಬದುಕು ಚಿತ್ತಾರ (ಡಾ.ಹೆಚ್.ಸಂದೀಪ್ ಅವರ ನೆನಪಿನಲ್ಲಿ – ಸಂಪಾದಕರು ತೋ.ನಂ)
ಹವಳ -ಡಾ.ಸಿ ಎನ್ ಮಂಜುನಾಥ್ ಅಭಿನಂದನಾ ಗ್ರಂಥ (ಸಂಪಾದಕರು: ಡಿ ಕೆ ಚೌಟ ಮತ್ತು ತೋ.ನಂ)
ದವನ -ಡಾ.ಸಿ ಎನ್ ಮಂಜುನಾಥ್ ಅಭಿನಂದನಾ ಗ್ರಂಥ (ಸಂಪಾದಕರು ಡಿ ಕೆ ಚೌಟ ಮತ್ತು ತೋ.ನಂ)
ಪಚ್ಚೆತೆನೆ (ಡಿ ಕೆ ಚೌಟ ಅಭಿನಂದನಾ ಗ್ರಂಥ – ಪ್ರಧಾನ ಸಂಪಾದಕರು ತೊ.ನಂ)
ಭರಣಿ – ಸುಭಾಶ್ ಭರಣಿ ಅಭಿನಂದಾನ ಗ್ರಂಥ (ಸಂಪಾದಕರು – ಹೆಚ್.ದಂಡಪ್ಪ; ಪ್ರಕಾಶಕರು: ತೊ.ನಂಜುಂಡಸ್ವಾಮಿ)
ತೊ. ನಂಜುಂಡಸ್ವಾಮಿ
ತೊಟ್ಟವಾಡಿ ನಂಜುಂಡಸ್ವಾಮಿ ಅವರು ಕರ್ನಾಟಕ ರಂಗಭೂಮಿಯಲ್ಲಿ ನಾಟಕಕಾರರೂ, ರಂಗ ಸಂಘಟಕರು ಹಾಗೂ ರಂಗಭೂಮಿಯ ಕಲಾವಿದರಿಗೆ ಅತಿ ಅವಶ್ಯವಾದಾಗ ವೈದ್ಯಕೀಯ ನೆರವು ನೀಡುತ್ತಿದ್ದ ಸಹೃದಯ ಸಾಂಸ್ಕೃತಿಕ ಚಿಂತಕರು. ವೃತ್ತಿಯಿಂದ ವಿಕ್ಟೋರಿಯಾ ಆಸ್ಪತ್ರೆಯ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ತೋ.ನಂ. ಅವರು, ಆಸ್ಪತ್ರೆಯ ಎಲ್ಲ ಖ್ಯಾತ ಹಾಗೂ ಪ್ರಮುಖ ವೈದ್ಯರ ಜೊತೆಗೆ ಅತ್ಮೀಯ ಒಡನಾಟ ಹೊಂದಿದ್ದು, ಆ ಎಲ್ಲ ಗೆಳೆತನವನ್ನು ತುರ್ತು ಸಮಯದಲ್ಲಿ ನಮ್ಮ ರಂಗ ಕಲಾವಿದರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಉಪಕರಿಸುತ್ತಿದ್ದ ಮಾನವೀಯ ರಂಗ ಸಂಘಟಕ. ಐದು ನಾಟಕಗಳನ್ನೂ ರಚನೆ ಮಾಡಿದ್ದ ತೋ.ನಂ ಅವರು, ಅದರಲ್ಲಿನ ಕೆಲವು ನಾಟಕಗಳ ನಿರ್ದೇಶನವನ್ನೂ ಮಾಡಿದ್ದರು. ರಂಗ ಚೇತನ ಎಂಬ ಸಾಂಸ್ಕೃತಿಕ ಸಂಘಟನೆಯ ಮುಖಾಂತರ ಆ ನಾಟಕಗಳ ಪ್ರದರ್ಶನಗಳನ್ನು ರಾಜ್ಯದಾದ್ಯಂತ ನೀಡಿದ್ದು, ಪ್ರತಿ ವರುಷವೂ ಸಮಾಜದ ವಿವಿಧ ನೆಲೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ರಂಗ ಚೇತನ ಪ್ರತಿಷ್ಠಾನದಿಂದ ಗೌರವ ಸನ್ಮಾನಗಳನ್ನು ಮಾಡುತ್ತಿದ್ದವರು. ಅದೇ ರೀತಿ, ನಾಡ ಚೇತನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಹಾಗೂ ರಂಗಭೂಮಿಯ ಅವಿಸ್ಮರಣೀಯ ಪ್ರತಿಭೆ ಸಿ ಜಿ ಕೃಷ್ಣಸ್ವಾಮಿ ( ಸಿ ಜಿ ಕೆ) ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳನ್ನು ನೀಡುತ್ತಿದ್ದ ರಂಗಭೂಮಿಯ ಮಹಾನ್ ಚೇತನ, ತೊಟ್ಟವಾಡಿ ನಂಜುಂಡಸ್ವಾಮಿ ಅವರು.
ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು. ಸದಸ್ಯರಾಗಿ, ರಾಜ್ಯದ ಹತ್ತು ಹಲವರು ರಂಗಸಂಸ್ಥೆಗಳಿಗೆ ರಂಗ ಚಟುವಟಿಕೆಗಳನ್ನು ನಡೆಸಲು ಸಹಾಯ ಮಾಡಿರುತ್ತಾರೆ. ರಾಜ್ಯದ ಹಲವಾರು ಜಿಲ್ಲೆಗಳ ಸಾಂಸ್ಕೃತಿಕ ಕೇಂದ್ರಗಳಲ್ಲಿ ನಾಟಕೋತ್ಸವಗಳನ್ನು ಆಯೋಜಿಸಿರುತ್ತಾರೆ. ಕರ್ನಾಟಕ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಡಾ. ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಅವರು.
ಈಗ್ಗೆ ಐದು ವರಷಗಳ ಹಿಂದೆ ಏಕಾಏಕಿ ಅವರನ್ನು ಕಳೆದುಕೊಂಡ ಅವರ ಗೆಳೆಯರಾದ ನಾವುಗಳು, ಕಳೆದ ಮೂರು ವರುಷಗಳಿಂದ ಅವರ ನೆನಪಿನಲ್ಲಿ, ಅವರ ಎಲ್ಲ ಸಾಧನೆಗಳನ್ನು ಗೌರವದಿಂದ ಸ್ಮರಿಸುವ ಸಲುವಾಗಿ “ತೊ.ನಂಜುಂಡಸ್ವಾಮಿ ನೆನಪಿನ ಗೌರವ ಪ್ರಶಸ್ತಿ” ಯನ್ನು ಸ್ಥಾಪಿಸಿದ್ದು, ಪ್ರತಿ ವರುಷವೂ ರಾಜ್ಯ ಮಟ್ಟದ ರಂಗ ಸಂಘಟಕರಿಗೆ, ನಾಟಕಕಾರರಿಗೆ ಹಾಗೂ ರಂಗ ತಂತ್ರಜ್ಞರನ್ನು ಗುರುತಿಸಿ, ಗೌರವ ಸನ್ಮಾನ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ.
ಪ್ರಭು ಗುರಪ್ಪನವರ ರಂಗ ಸಂಘಟಕರು, ರಂಗ ನಿರ್ದೇಶಕರು
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪ್ರಭು ಗುರಪ್ಪನವರು ಊರಿನ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಿ ಹಲವು ಸಮಾಜಮುಖಿ ಪ್ರಗತಿಪರ, ಸುಧಾರಣೆಗಳನ್ನು ತರಲು 1983 ರಲ್ಲಿ ಶ್ರೀ ಗಜಾನನ ಯುವಕ ಮಂಡಳ ಹುಟ್ಟು ಹಾಕುತ್ತಾರೆ.
ಶ್ರೀ ಗಜಾನನ ಯುವಕ ಮಂಡಳದ ಮೂಲಕ ಊರಿನಲ್ಲಿ ಗುಂಪುಗಳಾಗಿ ಒಡೆದು ಹೋಗಿದ್ದ ಜನರ ಮನಸ್ಥಿತಿಯನ್ನು ಒಂದುಗೂಡಿಸಿ, ನಿಂತು ಹೋಗಿದ್ದ ಜಾತ್ರೆಯನ್ನು ಪುನಃ ಪ್ರಾರಂಭಿಸುತ್ತಾರೆ. ಗ್ರಂಥಾಲಯ ಸಪ್ತಾಹ, ಸಾಕ್ಷರತಾ ಆಂದೋಲನ, ಪರಿಸರ ಕಾಳಜಿಯ ಗಿಡ ನೆಡು ಅಂದೋಲನಗಳನ್ನು ಪ್ರಾರಂಭಿಸುತ್ತಾರೆ. ನೀರಾವರಿ ವ್ಯವಸ್ಥೆ, ಸುಸಜ್ಜಿತವಾದ ಆಸ್ಪತ್ರೆ, ಬಸ್ ನಿಲ್ದಾಣ, ಬ್ಯಾಂಕ್ ಪೋಸ್ಟ್ ಆಫೀಸ್, ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಇವೆಲ್ಲವುಗಳ ಜೊತೆಗೆ ಸುಸಜ್ಜಿತವಾದಂತಹ ಧ್ವನಿ ಬೆಳಕು ಹಾಗೂ ವಸತಿ ವ್ಯವಸ್ಥೆ ಇರುವಂತಹ ರಂಗಮಂದಿರ – ಈ ಎಲ್ಲ ಸೌಕರ್ಯಗಳು ಗ್ರಾಮದಲ್ಲಿ ಸಿಗುವಂತೆ ಶ್ರಮ ವಹಿಸುತ್ತಾರೆ. ಕೂಲಿ ಕಾರ್ಮಿಕರು, ಸಣ್ಣಪುಟ್ಟ ರೈತರಿಂದ ಕೂಡಿರುವ ಈ ಹವ್ಯಾಸಿ ತಂಡದ ನಾಟಕ ಪ್ರದರ್ಶನಗಳ ಸಲುವಾಗಿ ಸಾಲ ಮಾಡಿ ಭೂಮಿಯನ್ನು ಖರೀದಿಸಿ. ಅಂದಿನ ಶಾಸಕ ಸಿ ಎಂ ಉದಾಸಿ ಮುಂತಾದ ಹಲವು ಶಾಸಕರ ಸಹಾಯದಿಂದ ರಂಗಮಂದಿರಕ್ಕೆ ಅಡಿಪಾಯ ಹಾಕುತ್ತಾರೆ. ಇಂದು ಶೇಷಗಿರಿಯ ರಂಗಮಂದಿರ ಅತ್ಯುತ್ತಮವಾದ ಧ್ವನಿ, ಬೆಳಕು ತಂತ್ರಜ್ಞಾನಗಳ ಸುಸಜ್ಜಿತ ರಂಗಮಂದಿರವಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಸರ್ಕಾರಿ ಮತ್ತು ಖಾಸಗೀ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಈ ರಂಗ ಮಂದಿರ ವೇದಿಕೆ ಆಗಿದೆ. 40 ವರುಷಗಳನ್ನು ಕಂಡಿರುವ ಗಜಾನನ ಯುವಕ ಮಂಡಳದ ಅಡಿಯಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಭು ಗುರಪ್ಪನವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ಪುರಸ್ಕಾರ, ಸಿಜಿಕೆ ರಂಗಪ್ರಶಸ್ತಿ, ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಪ್ರಭು ಗುರಪ್ಪನವರಿಗೆ ದೊರೆತಿವೆ.
ಎಲ್ಲ ಸಹೃದಯರಿಗೂ ಆತ್ಮೀಯ ಸ್ವಾಗತ ಕೋರುವ
ತೊ.ನಂಜುಂಡಸ್ವಾಮಿ ಗೆಳೆಯರ ಬಳಗ
ಶ್ರೀನಿವಾಸ ಜಿ ಕಪ್ಪಣ್ಣ, ಶಶಿಧರ ಅಡಪ,ಬಿ ಸುರೇಶ, ಜಿ ಎನ್ ಮೋಹನ, ಆರ್.ನರೇಂದ್ರ ಬಾಬು, ಶಶಿಧರ ಭಾರೀಘಾಟ್, ಜೆ ಸಿ ಶಶಿಧರ ಕುಮಾರ್, ಮಲ್ಲಿಕಾರ್ಜುನ ಮಹಾಮನೆ, ರಂಗಚಂದಿರ ಚಂದ್ರಶೇಖರ್, ಶಿವಲಿಂಗ ಪ್ರಸಾದ್, ಪ್ರವೀಣ ಕುಮಾರ್, ಅಶ್ವಿನಿ ಅಶು, ತೇಜಸ್ವಿ ಕೆ ನಾಗ್, ಸಂಚಾಲಕರು: ಗುಂಡಣ್ಣ ಚಿಕ್ಕಮಗಳೂರು.








