ಮ್ಯಾಸಬೇಡರ ಅತ್ಯಂತ ದೊಡ್ಡ ಸಾಂಸ್ಕೃತಿಕ ನಾಯಕನೆಂದರೆ ಕಮ್ಮಟದುರ್ಗದ ಕಂಪಿಲಿಯ ಕುಮಾರರಾಮ. ಕರ್ನಾಟಕದ ಚರಿತ್ರೆಯಲ್ಲಿ ‘ಗಂಡುಗಲಿ’ ಎಂಬ ಬಿರುದಾಂಕಿತ ಕುಮಾರರಾಮನ ಇತಿಹಾಸ ಒಂದು ರೋಮಾಂಚಕ ಅಧ್ಯಾಯ. ಕುಮಾರರಾಮನ ಕುರಿತ ಮೌಖಿಕ ಕಥನವನ್ನು ನಾಡೋಜ ದರೋಜಿ ಈರಮ್ಮನವರು ಬರ‍್ರಕಥಾ ರೂಪದಲ್ಲಿ ಹಾಡುತ್ತಿದ್ದರು. ಈ ಕುಮಾರರಾಮನನ್ನು ಕುರಿತು ಹತ್ತಕ್ಕೂ ಹೆಚ್ಚು ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ಅಸ್ಪೃಶ್ಯ ಜಾತಿಗಳಿಗೆ ಭೂಮಿ ಕೊಟ್ಟು, ಅವರನ್ನು ಸೇನೆಯ ದಂಡನಾಯಕರ ಉನ್ನತ ಪದವಿಗೆ ನೇಮಿಸಿದ ಬುಡಕಟ್ಟು ದೊರೆ ಕುಮಾರರಾಮನ ಹೆಸರಿನಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ಪುರಾತನ ಗುಡಿ ಇದೆ. ಶೋಷಿತ ಮ್ಯಾಸನಾಯಕ ಸಮುದಾಯದ ವ್ಯಕ್ತಿಯೊಬ್ಬ ವೀರನಾಯಕನಾಗಿ, ಅಸಲಿ ಜನಪದ ನಾಯಕನಾಗಿ, ಜಾನಪದ ಕಾವ್ಯದ ಸೃಷ್ಟಿಗೂ ಕಾರಣವಾಗಿ ಶೋಷಿತ ವರ್ಗವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಸಾಂಸ್ಕೃತಿಕ ವೀರ ಕುಮಾರರಾಮ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನನ್ನ ಫ್ರೆಂಡತಿ ರಮಾ ಅವರ ತವರೂರು ಇದೇ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿ ಎಂಬ ಗ್ರಾಮ. ಈಗ್ಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಪುರಾತನ ದೇವಾಲಯದ ಗೋಡೆಗಳನ್ನು ಕೆಡವಿ ಭವ್ಯವಾದ ಕಟ್ಟಡ ನಿರ್ಮಿಸಿ ಜೀರ್ಣೋದ್ಧಾರ ಮಾಡಲಾಯಿತು. ಹಳೆಯ ಗೋಡೆಗಳನ್ನು ಕೆಡವಿದಾಗ ಕುಮಾರರಾಮನ ತಾಯಿಯಾದ ಹರಿಯಮ್ಮನ (ಹರಿಯಲಾದೇವಿ) ಬೆಳ್ಳಿ ಬಂಗಾರದ ಅಪಾರ ಒಡವೆಗಳು ಮತ್ತು ದ್ರವ್ಯ ಸಿಕ್ಕಿತು. ಇದನ್ನು ತುಮಕೂರಿನ ಆಗಿನ ಜಿಲ್ಲಾಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡರು. ಅಂದ್ಹಾಗೆ ನನ್ನ ಹೆಂಡತಿಯ ಪೂರ್ವಿಕರು ಕುಮಾರರಾಮನ ಸೇನೆಯಲ್ಲಿದ್ದರು. ಆದುದರಿಂದಲೇ ದೇವಸ್ಥಾನ ಮತ್ತು ಜಾತ್ರೆಯಲ್ಲಿ ನಡೆಯುವ ಆಚರಣೆ ಕೈಂಕರ್ಯಗಳಲ್ಲಿ ಇವರ ಮನೆತನಕ್ಕೆ ಪ್ರಧಾನವಾದ ಅಧಿಕಾರಗಳಿವೆ. ಇಲ್ಲಿನ ಕುಮಾರರಾಮನ ದೇವಾಲಯದ ಪೂಜಾರಿಗಳು ಬೇಡ ನಾಯಕ ಸಮುದಾಯಕ್ಕೆ ಸೇರಿದವರು. ಎಲ್ಲಾ ಸಮುದಾಯಗಳ ಜನ ಕುಮಾರರಾಮನ ಒಕ್ಕಲಾಗಿ ನಡೆದುಕೊಳ್ಳುತ್ತಾರೆ. ಕುಮಾರರಾಮನು ಬೇಡ ನಾಯಕ ಸಮುದಾಯಕ್ಕೆ ಸೇರಿದವನೆಂದು ದೊಂಬರ ಹುಡುಗಿಯನ್ನು ಪ್ರೀತಿಸಿದವನೆಂದು ಮಾದಿಗ ಸಮುದಾಯದ ಜಾನಪದ ಹಾಡುಗಾರ್ತಿಯರು ಚೆಂಡುಭಂಡಾರದ ಪದಗಳನ್ನು ಹಾಡುತ್ತಾರೆ.
ಕುಮಾರರಾಮನ ಹೆಸರಿನ ದೇವಾಲಯಗಳು ಕರ್ನಾಟಕದಾದ್ಯಂತ ನೂರಾರು ಊರುಗಳಲ್ಲಿವೆ. ಕುಮ್ಮಟದುರ್ಗದ ಕುಮಾರರಾಮ ಮತ್ತು ಅವನ ತಮ್ಮನಾದ ಹುಲಿರಾಮನನ್ನು (ಚೆನ್ನಿಗರಾಮ) ಕುರಿತು ಅನೇಕ ಐತಿಹ್ಯಗಳಿವೆ. ಕುಮಾರರಾಮನು ಪ್ರೀತಿಸಿದ ದೊಂಬರ ರತ್ನಾಜಿಯನ್ನು ಆತನ ತಂದೆಯಾದ ಕಂಪಿಲರಾಯನೇ ಮದುವೆ ಮಾಡಿಕೊಂಡ ಬಳಿಕ ರತ್ನಾಜಿಯು ಕುಮಾರರಾಮನಿಗೆ ಮಲತಾಯಿಯ ಸ್ಥಾನದಲ್ಲಿ ಇರುತ್ತಾಳೆ. ಮುದುಕ ಗಂಡ ಕಂಪಿಲರಾಯನಿಗೆ ತನ್ನ ದೇಹವನ್ನೊಪ್ಪಿಸಲು ಇಚ್ಛಿಸದ ಮಲತಾಯಿ ರತ್ನಾಜಿಯು ಕುಮಾರರಾಮನನ್ನು ಮೋಹಿಸಲು ಪ್ರಯತ್ನಿಸುತ್ತಾಳೆ. ತಾಯಿಯ ಮತ್ತು ರಾಜಮಾತೆಯ ಪವಿತ್ರ ಸ್ಥಾನದಲ್ಲಿ, ರತ್ನಾಜಿಯನ್ನು ಕಾಣುತ್ತಾನೆ ಕುಮಾರರಾಮ. ಇದರಿಂದಾಗಿ ಪ್ರೇಮವಾಂಛೆ ಈಡೇರದೆ ವಿಫಲವಾಗಿ ಕೃದ್ಧಗೊಂಡ ರತ್ನಾಜಿಯು ಕುಮಾರರಾಮನ ವಿರುದ್ಧ ಹಗೆ ಸಾದಿಸಲು ತೀರ್ಮಾನಿಸುತ್ತಾಳೆ. ರಾಜ ಕಂಪಿಲರಾಯನ ಬಳಿ ಕುಮಾರರಾಮ ತನ್ನನ್ನು ಬಲತ್ಕಾರಿಸಲು ಪ್ರಯತ್ನಿಸಿದನೆಂದು ದೂರು ನೀಡುತ್ತಾಳೆ. ಚೆಲುವೆಯಾದ ಕಿರಿಯರಸಿ ರತ್ನಾಜಿಯ ಮಾತನ್ನು ನಂಬಿದ ಕಂಪಿಲರಾಯನು ಕುಮಾರರಾಮನ ರುಂಡವನ್ನು ಕತ್ತರಿಸಲು ಭಟರಿಗೆ ಆಜ್ಞಾಪಿಸುತ್ತಾನೆ. ಕಂಪಿಲರಾಯನ ಮಂತ್ರಿಯಾದ ಬೈಚಪ್ಪನು ಕುಮಾರರಾಮನ ಪ್ರತಿರೂಪದಂತಿದ್ದ ಹುಲಿರಾಮನ (ಚೆನ್ನಿಗರಾಮ) ಬಳಿ ಹೋಗಿ ಕುಮಾರರಾಮನಿಗೆ ಒದಗಿರುವ ಆಪತ್ತನ್ನು ವಿವರಿಸುತ್ತಾನೆ. ವಿಷಯ ತಿಳಿದ ಹುಲಿರಾಮನು (ಚೆನ್ನಿಗರಾಮ) ತನ್ನ ಅಣ್ಣನಾದ ಕುಮಾರರಾಮನ ಬದಲಾಗಿ ತನ್ನ ತಲೆಯನ್ನೇ ಕಡಿದು ಕೊಡಲು ಮುಂದಾಗುತ್ತಾನೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿಯಲ್ಲಿ ಕಂಪಿಲಿ ಮ್ಯಾಸಬೇಡರ ದೊರೆ ಕುಮಾರರಾಮನ ಹೆಸರಿನಲ್ಲಿ ಪ್ರತಿವರ್ಷ ಮೊಲದ ಬೇಟೆಯಾಡಿ ಪೂಜಿಸುವ ಸಂಪ್ರದಾಯ ರೂಢಿಯಲ್ಲಿತ್ತು. ಮೊಲವನ್ನು ಜೀವಂತವಾಗಿ ಹಿಡಿದು ಅದರ ಕಿವಿಗಳಿಗೆ ಗೆಜ್ಜೆಓಲೆ ಹಾಕಿ ಶೃಂಗರಿಸಿ, ಕುಮಾರರಾಮನ ರಥೋತ್ಸವದ ನಂತರ ಮೊಲವನ್ನು ಜೀವಂತವಾಗಿ ಕಾಡಿಗೆ ಬಿಟ್ಟು ಬರುತ್ತಿದ್ದರು. ಇದೇ ಮೊಲವೇ ರತ್ನಾಜಿಯ ಸಂಕೇತ ಎಂಬ ನಂಬಿಕೆಯೂ ಈ ಆಚರಣೆಯಲ್ಲಿದೆ. ಈಗ ಈ ಸಂಪ್ರದಾಯ ಸಂಪೂರ್ಣವಾಗಿ ನಿಂತೇ ಹೋಗಿದೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ, 8722724174




