ಸಾವರ್ಕರ್ ಅಧ್ಯಯನ ಪೀಠ ವಿರುದ್ಧದ ಹೋರಾಟಕ್ಕೆ ಸಾಹಿತಿ ವಡ್ಡಗೆರೆ ನಾಗರಾಜಯ್ಯ ಬೆಂಬಲ

4 years ago

ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಯನ್ನು ವಿರೋಧಿಸಿ ಹೋರಾಟ ರೂಪಿಸಿರುವ ನಮ್ಮ ತುಮಕೂರು ಜಿಲ್ಲೆಯ ಪ್ರಗತಿಪರ ಸಂಗಾತಿಗಳ ವೈಚಾರಿಕ ನಡೆ ಪ್ರಶಂಸನೀಯವಾದದ್ದು.

ಶರಣರು, ಕುಮಾರರಾಮ, ಕುರಂಗರಾಯ, ಎತ್ತಪ್ಪ, ಜುಂಜಪ್ಪ, ಗುರು ಮರುಳಸಿದ್ಧ, ವೀರಕ್ಯಾತರಾಯ, ಮಲ್ಲಿಕ್ ರೆಹಾನ್ ಶಾ ಇನ್ನೂ ಮುಂತಾದ ಸಾಂಸ್ಕೃತಿಕ ವೀರ ನಾಯಕರು ಹಾಗೂ ದಾರ್ಶನಿಕರು ಆಗಿಹೋಗಿರುವ ತುಮಕೂರು ಜಿಲ್ಲೆಯ, ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಯ ಪ್ರಸ್ತಾಪ ಆಘಾತಕಾರಿಯಾದ ಸಂಗತಿ.

ಟುಮಕಿ ಎಂಬುದು ಪೂರ್ವಕಾಲದ ದಲಿತರ ಚರ್ಮವಾದ್ಯದ ಹೆಸರು. ಕುಶಲಕರ್ಮಿ ಚರ್ಮಕಾರರಾದ ದಲಿತರ ಸಂಗೀತ ವಾದ್ಯದ ಹೆಸರಿನಲ್ಲಿ ತುಮಕೂರು ಎಂಬ ಹೆಸರು ಊರಿಗೂ ಮತ್ತು ವಿಶ್ವವಿದ್ಯಾಲಯಕ್ಕೂ ಇರುವುದು ಆದಿಮ ಮೂಲನಿವಾಸಿ ನೆಲೆಗಳಿಗೆ ತೋರಿಸುವ ಗೌರವದ ಸಂಕೇತವೂ ಆಗಿದೆ. ಆದಿಮ ತಳಸಮುದಾಯಗಳ ಸಾಂಸ್ಕೃತಿಕ ಲಾಂಛನವಾದ ಟುಮಕಿ ಎಂಬ ಚರ್ಮವಾದ್ಯದ ಹೆರಿನಲ್ಲಿ ತುಮಕೂರು ಎಂಬ ನಗರವೂ ಮತ್ತು ಇಲ್ಲಿನ ವಿಶ್ವವಿದ್ಯಾಲಯ ಜ್ಞಾನಕೇಂದ್ರವೂ ಇರುವುದು ಅತ್ಯಂತ ಹೆಮ್ಮೆಯ ಸಂಗತಿ. ಇಡೀ ಪ್ರಪಂಂಚದಲ್ಲಿಯೇ ಕುಶಲಕರ್ಮಿ ನೆಲೆಗಳಿಗೆ ಸಲ್ಲಿಸಿದ ಇಂತಹ ಗೌರವದ ಅನುಪಮ ಉದಾಹರಣೆಯೊಂದು ತುಮಕೂರು ಜಿಲ್ಲೆಯಲ್ಲಲ್ಲದೆ ಮತ್ತೆಲ್ಲಿಯೂ ಸಿಗಲಾರದು. ಅಂತಹ ಘನಮಹಿಮೆಯ ಆದರ್ಶಕ್ಕೆ ಕಲ್ಪತರು ನಾಡು ದ್ಯೋತಕವಾಗಿದೆ. ತುಂಬೆ ಹೂವಿನ ಹೆಸರಿನಿಂದಲೂ ತುಮಕೂರು ಎಂಬ ಹೆಸರು ಬಂದಿತೆಂದು ಇಲ್ಲಿನ ಸ್ಥಳಪುರಾಣವು ಹೇಳುತ್ತದೆ. ಮಧುಗಿರಿಯ ಏಕಶಿಲಾ ಬೆಟ್ಟವು ವಿಶ್ವಮಾಹಿತಿಗಳ ಗಿನ್ನಿಸ್ ಪುಸ್ತಕದಲ್ಲಿ ಏಷ್ಯಾ ಖಂಡದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಏಕಶಿಲಾ ಬೆಟ್ಟ ಎಂದು ದಾಖಲಾಗಿದೆ. ಇದು ತುಮಕೂರು ಜಿಲ್ಲೆಯ ಭೌಗೋಳಿಕ ಗುರುತಾಗಿ ಜನಪ್ರಿಯವಾಗಿದೆ. ತೆಂಗು ಬೆಳೆಯುವ ಈ ಕಲ್ಪತರು ನಾಡು ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ತೆಂಗಿನ ಉತ್ಪನ್ನಗಳಿಗೆ ತನ್ನದೇ ಸ್ಥಾನವನ್ನು ಪಡೆದಿದೆ. ಇವೆಲ್ಲವೂ ತುಮಕೂರು ವಿಶ್ವವಿದ್ಯಾಲಯದ ಮೂಲಲಾಂಛನದಲ್ಲಿ ಅಡಕವಾಗಿವೆ. ಇಂತಹ ಕಾಯಕ ಶರಣರ ಮತ್ತು ಆದಿಮ ನೆಲ ಸಂಸ್ಕೃತಿಯ ಪ್ರತೀಕವಾಗಿರುವ ತುಮಕೂರು ವಿಶ್ವವಿದ್ಯಾಲಯದಲ್ಲಿ ಹಿಂದೂ ಮತೀಯವಾದಿ ಸಾವರ್ಕರ್ ನ ಹೆಸರಿನಲ್ಲಿ ಯಾವುದೇ ಅಧ್ಯಯನ ಪೀಠದ ಸ್ಥಾಪನೆಯನ್ನು ನಾನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಗೆ ಸಂಚು ರೂಪಿಸಿದ ಹಿಂದೂ ಮತೀಯವಾದಿ ಸಾವರ್ಕರ್ ನ ಹೆಸರಿನಲ್ಲಿ ಅಧ್ಯಯನ ಪೀಠದ ಸ್ಥಾಪನೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರಗತಿಪರ ಸಂಗಾತಿಗಳ ಹೋರಾಟವನ್ನು ತುಮಕೂರು ಜಿಲ್ಲೆಯ ಲೇಖಕನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ನಾನು ಬೆಂಬಲಿಸುತ್ತಿದ್ದೇನೆ.

– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply