ಸಿಎನ್‌ಎನ್‌, ಎಂಎಸ್‌ಎನ್‌ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್

57 minutes ago

ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮತ್ತೊಂದು ಸುತ್ತಿನ ಸಮರ?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಮಾಧ್ಯಮಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಪ್ರಮುಖ ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಶ್ವೇತಭವನದ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿರುವುದಾಗಿ ಪ್ರಕಟಿಸಿದ್ದಾರೆ.

ಸಿಎನ್‌ಎನ್‌ (CNN), ಎಂಎಸ್‌ಎನ್‌ಬಿಸಿ (MSNOW/MSNBC) ಹಾಗೂ ಪಾಲಿಟಿಕೋ (Politico) ಸಂಸ್ಥೆಗಳು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಆರೋಪಿಸಿ ಅವರು ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, “ಸಿಎನ್‌ಎನ್‌, ಎಂಎಸ್‌ಎನ್‌ಬಿಸಿ ಹಾಗೂ ಪಾಲಿಟಿಕೋ ಸಂಸ್ಥೆಗಳು ಅಧ್ಯಕ್ಷರು, ಟ್ರಂಪ್ ಆಡಳಿತ ಮತ್ತು ದೇಶದ ವಿರುದ್ಧ ನಿರಂತರವಾಗಿ ಸುಳ್ಳು ಮತ್ತು ಕಾಲ್ಪನಿಕ ವರದಿಗಳನ್ನು ಪ್ರಕಟಿಸುತ್ತಿವೆ. ಮಾಧ್ಯಮಗಳು ಈ ರೀತಿ ಸುಳ್ಳುಗಳನ್ನು ವರದಿ ಮಾಡಲು ಅವಕಾಶ ನೀಡಲಾಗದು. ಹೀಗಾಗಿ ತಕ್ಷಣದಿಂದ ಅನ್ವಯವಾಗುವಂತೆ ಇವುಗಳ ಶ್ವೇತಭವನ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇಂತಹ ಇನ್ನಷ್ಟು ಸುಳ್ಳು ಸುದ್ದಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದ್ದಾರೆ. ‌

ಇದಲ್ಲದೆ, ಜೋ ಬೈಡನ್ ಸರ್ಕಾರದ ಅವಧಿಯಲ್ಲಿ ಪಾಲಿಟಿಕೋ ಸಂಸ್ಥೆ ಅಕ್ರಮವಾಗಿ ಲಕ್ಷಾಂತರ ಡಾಲರ್ ಮೌಲ್ಯದ ಚಂದಾದಾರಿಕೆ ಪಡೆದಿದೆ ಎಂದೂ ಅವರು ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆತಂಕ: ಟ್ರಂಪ್ ಅವರ ಈ ನಡೆ ಅಂತರರಾಷ್ಟ್ರೀಯ ಮಾಧ್ಯಮ ವಲಯದಲ್ಲಿ ಹಾಗೂ ಪತ್ರಕರ್ತರ ಹಕ್ಕುಗಳ ಹೋರಾಟಗಾರರಲ್ಲಿ ತೀವ್ರ ಕಳವಳ ಮೂಡಿಸಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾರಂಗವನ್ನು ನಿಯಂತ್ರಿಸಲು ಅಥವಾ ಸರ್ಕಾರದ ಆಡಳಿತವನ್ನು ಪ್ರಶ್ನಿಸುವ ಮಾಧ್ಯಮಗಳಿಗೆ ಅಧಿಕೃತ ಪ್ರವೇಶ ನಿರ್ಬಂಧಿಸುವುದು ನೇರವಾಗಿ ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಅಮೆರಿಕದ ಸಂವಿಧಾನದ ಮೊದಲ ತಿದ್ದುಪಡಿ (First Amendment) ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಪರಮೋಚ್ಚ ರಕ್ಷಣೆ ನೀಡಿದೆ. ಆಡಳಿತದ ದೋಷಗಳನ್ನು ಎತ್ತಿ ತೋರಿಸುವುದು ಮಾಧ್ಯಮಗಳ ಕರ್ತವ್ಯವಾಗಿದ್ದು, ವಿಮರ್ಶಾತ್ಮಕ ಸುದ್ದಿಗಳನ್ನು “ಫೇಕ್ ನ್ಯೂಸ್” ಎಂದು ಕರೆದು ಮಾಧ್ಯಮಗಳನ್ನು ಬಹಿಷ್ಕರಿಸುವುದು ಮುಕ್ತ ಪತ್ರಿಕೋದ್ಯಮದ ಕತ್ತು ಹಿಸುಕುವ ಯತ್ನವೆಂದು ಹಲವು ಹಿರಿಯ ಪತ್ರಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಆಡಳಿತಶಾಹಿ ಮತ್ತು ಮಾಧ್ಯಮಗಳ ನಡುವಿನ ಈ ಘರ್ಷಣೆ ಜಾಗತಿಕ ಮಟ್ಟದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಭವಿಷ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.

Leave a Reply