ತುಮಕೂರು: ಮಾಜಿ ಉಪ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕ ಡಾ.ಜಿ ಪರಮೇಶ್ವರ್ ಪ್ರತಿನಿಧಿಸುವ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭೆ ಕ್ಷೇತ್ರ ಇದೀಗ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಪರಮೇಶ್ವರ್ ಅವರನ್ನು ಮಣಿಸಲು ಬಿಜೆಪಿಯಲ್ಲಿ ಆಕಾಂಕ್ಷಿಗಳ ನಡುವೆ ದೊಡ್ಡ ಪೈಪೋಟಿ ಉಂಟಾಗಿದೆ.
ನಿವೃತ್ತ ಐಎಎಸ್, ಕೆಎಎಸ್ ಮತ್ತು ವೈದ್ಯರೊಬ್ಬರು ಟಿಕೆಟ್ ಆಕಾಂಕ್ಷಿಗಳಾಗಿದ್ದು ಕ್ಷೇತ್ರದ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರ ಪಡೆಗಳೊಂದಿಗೆ ಹೈವೋಲ್ಟೇಜ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇವರ ಭರಾಟೆ ಪ್ರಚಾರದ ಅಬ್ಬರದಲ್ಲಿ ಹಾಲಿ ಶಾಸಕ ಪರಮೇಶ್ವರ್, ಮಾಜಿ ಶಾಸಕ ಜೆಡಿಎಸ್ ನ ಸುಧಾಕರ್ ಲಾಲ್ ಮಂಕಾಗಿದ್ದಾರೆ ಎಂದು ಹೇಳಬಹುದು.
ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಅಧಿಕಾರಿ ಮುನಿಯಪ್ಪ ತಮ್ಮ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲದ ನಿರೀಕ್ಷೆಯಲ್ಲಿ ತಮಗೆ ಟಿಕೆಟ್ ಖಾತ್ರಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮಗೆ ಟಿಕೆಟ್ ಖಾತ್ರಿ ಪಡಿಸಬೇಕು ಎಂದು ಹೇಳಿ ಖಚಿತ ಭರವಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಅವರ ಬೆಂಬಲದೊಂದಿಗೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ತಮಗೆ ಟಿಕೆಟ್ ಖಚಿತ ಎಂದು ಕ್ಷೇತ್ರಾದ್ಯಂತ ಭರಾಟೆ ಪ್ರವಾಸ ಮಾಡುತ್ತಿದ್ದಾರೆ.
ಇವರಿಬ್ಬರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಂಸದ ಜಿ.ಎಸ್.ಬಸವರಾಜು ಅವರ ಬೆಂಬಲಿಗ ವೈದ್ಯ ಡಾ.ಲಕ್ಷ್ಮೀಕಾಂತ್ ಕೂಡ ಕ್ಷೇತ್ರದ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರ ಪಡೆಯೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಮಣಿಸುತ್ತೇನೆಂಬ ವಿಶ್ವಾಸದಲ್ಲಿ ಓಡಾಟ ನಡೆಸಿದ್ದಾರೆ. ಈ ಭರಾಟೆ ನಡುವೆ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರ ನಡುವೆ ಅನೇಕ ಕಡೆ ಜಟಾಪಟಿ ನಡೆಯುತ್ತಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಕೊರಟಗೆರೆ ಪಟ್ಟಣ ಹೊರವಲಯದ ಬೈಪಾಸ್ ಬಳಿ ಪಕ್ಷದ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವ ವಿಚಾರದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಲಕ್ಷ್ಮೀಕಾಂತ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ.
ಡಾ. ಲಕ್ಷ್ಮೀಕಾಂತ್ ಕಟ್ಟಿದ್ದ ಬಿಜೆಪಿ ಫ್ಲೆಕ್ಸ್ ಗಳನ್ನ ಅನಿಲ್ ಕುಮಾರ್ ಬೆಂಬಲಿಗರು ತೆರವುಗೊಳಿಸಿದ್ದಾರೆ ಎಂದು ಲಕ್ಷ್ಮಿಕಾಂತ್ ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನಿಲ್ ಕುಮಾರ್ ಮತ್ತುಲಕ್ಷ್ಮೀಕಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಅನಿಲ್ ಕುಮಾರ್ ತೋಳೇರಿಸಿ ಲಕ್ಷ್ಮಿಕಾಂತ್ ಅವರತ್ತ ನುಗಿದ್ದಾರೆ. ಇದರಿಂದ ಉಭಯ ನಾಯಕರ ಬೆಂಬಲಿಗರೂ ಕಾದಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ತಿಳಿದ ಪೊಲೀಸರು ಕೂಡಲೆ ಮಧ್ಯಪ್ರವೇಶಿಸಿ ನಾಯಕರನ್ನು ಸಮಧಾನ ಪಡಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.



