UPI ಡಿಜಿಟಲ್  ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು

6 hours ago

ಕಾಂಗ್ರೆಸ್‌ ವತಿಯಿಂದ ಮೋದಿ, ನಿರ್ಮಲಾ, ಬಿಜೆಪಿ, ಕೇಂದ್ರದ ವಿರುದ್ಧ ಪ್ರತಿಭಟನೆ

ಬೆಂಗಳೂರು: ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ 0.4% MDR ಶುಲ್ಕ ವಿಧಿಸುವ ಪ್ರಸ್ತಾವನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. UPI ಇಂದು ಸಾಮಾನ್ಯ ಜನ, ಸಣ್ಣ ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಮಧ್ಯಮ ವರ್ಗದವರು ವ್ಯಾಪಕವಾಗಿ ಬಳಸುತ್ತಿರುವ ಡಿಜಿಟಲ್ ಪಾವತಿ ಹಣದ  ವ್ಯವಸ್ಥೆಯಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಭಿಪ್ರಾಯಪಟ್ಟರು.

ಕೇಂದ್ರದ ಉದ್ದೇಶಿತ ಯುಪಿಐ ಪಾವತಿಗೆ ದರ ನಿಗದಿ ನಿರ್ಧಾರ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಈಗಾಗಲೇ ಡಿಜಿಟಲ್ ಪಾವತಿಗಳು ಜನರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿರುವ ಸಂದರ್ಭದಲ್ಲಿ, ಅದರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಯಾವುದೇ ಕ್ರಮ ಸಾಮಾನ್ಯ ಜನ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಇದು ಮತ್ತೊಂದು ಆರ್ಥಿಕ ಹೊರೆಯಾಗಲಿದೆ ಹಾಗೂ ಕೇಂದ್ರ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯು ಆಗಿದೆ ಎಂದು ಅಭಿಪ್ರಾಯಪಟ್ಟರು.

₹2,000ಕ್ಕಿಂತ ಹೆಚ್ಚಿನ ಪ್ರತಿಯೊಂದು ವಹಿವಾಟಿಗೂ ಶುಲ್ಕ ವಿಧಿಸುವ ಪ್ರಸ್ತಾವನೆಯಿಂದ ದಿನನಿತ್ಯದ ವ್ಯವಹಾರಗಳಲ್ಲಿ ಹೆಚ್ಚುವರಿ ವೆಚ್ಚ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಪ್ರಸ್ತಾವನೆ ಕುರಿತು ಸ್ಪಷ್ಟನೆ ನೀಡಬೇಕು ಮತ್ತು ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರ ಬದುಕು ದುಸ್ತರ ಆಗಿದೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಒಂದೆಡೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ  ಆಹಾರ, ಸಾರಿಗೆ ಮತ್ತು ಕುಟುಂಬದ ಖರ್ಚುಗಳನ್ನು ನಿರ್ವಹಿಸುವುದು ಸಾಮಾನ್ಯ ಕುಟುಂಬಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ, ಮತ್ತೊಂದೆಡೆ ಡಿಜಿಟಲ್ ಪಾವತಿಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಜನರ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಆತಂಕ ಮೂಡಿಸಿದೆ ಎಂದರು.

ಸಾಮಾನ್ಯ ಜನರ ಆದಾಯಕ್ಕೆ ಅನುಗುಣವಾಗಿ ಖರ್ಚು ನಿರ್ವಹಿಸುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವ ಸಂದರ್ಭದಲ್ಲಿ, ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳು ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತಿದೆ. ಹೊಸ ಹೊಸ ಶುಲ್ಕಗಳ ಮೂಲಕ ಹೆಚ್ಚುವರಿ ಹೊರೆ ಜನಸಾಮಾನ್ಯರ ಮೇಲೆ ತೆರಿಗೆಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಭಯಪಡುವ ನರೇಂದ್ರ ಮೋದಿ, ದೇಶದ ಜನರ ಹಿತ ಕಾಪಾಡದೇ ವಿದೇಶದ ನೀತಿಗಳಿಗೆ ಮಣಿಯುತ್ತಿದೆ. ಕೂಡಲೆ ಈ ನಿಮ್ಮ ನಿರ್ಧಾರವನ್ನ  ಹಿಂಪಡೆಯಬೇಕು. ದೇಶದ ಜನರ ಆರ್ಥಿಕ ಹೊರೆಯನ್ನು ಇಳಿಸಬೇಕು ಎಂದು ಪ್ರತಿಭಟನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಜಿ.ಪ್ರಕಾಶ್, ಲಕ್ಷ್ಮಿನಾರಾಯಣ್, ಉಮೇಶ್, ಆನಂದ್ , ಪುಟ್ಟರಾಜು, ಚಂದ್ರಶೇಖರ್, ಕುಶಾಲ್ ಹರವೇಗೌಡ, ರಂಜಿತ್ ಕುಮಾರ್ ಮಾಧವ ಹನೂರು, ಪ್ರವೀಣ್ ರಾವ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು‌.

Leave a Reply