ಚೆನ್ನೈ: ಚೆನ್ನೈನ ‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು’ ಸಂಸ್ಥೆ ಆಯೋಜಿಸಿದ ‘ಭಾರತೀಯ ಭಾಷಾ ಉತ್ಸವ’ ಇದೇ ನವೆಂಬರ್ 15-24ರವರೆಗೆ ಆಯೋಜನೆಗೊಂಡಿದೆ.
ಈ ಕಾರ್ಯಕ್ರಮದಲ್ಲಿ ‘ನೆರೆಯ ಭಾಷೆಗಳನ್ನು ಅರಿಯೋಣ’ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ತುಳು ಮತು ಕೊಡವ ಭಾಷಾ ಸಂಸ್ಕೃತಿಯನ್ನು ಅರಿಯುವ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಭಾಷಾ ಬಾಂಧವ್ಯವನ್ನು ಕಟ್ಟುವ ಉತ್ತಮ ಕಾರ್ಯಕ್ರಮ ಇದಾಗಿದೆ.
ಮೈಸೂರು ಮಲ್ಲಿಗೆ ಕವಿ ಡಾ. ಕೆ.ಎಸ್.ನರಸಿಂಹಸ್ವಾಮಿಯವರು ಹೇಳುವಂತೆ “ಕಣ್ಣು ಬೇರೆ ನೋಟ ಒಂದು – ನಾವು ಭಾರತೀಯರು” ಎಂಬ ಭಾವ ಮೂಡಿತ್ತು. ‘ಭಾಷೆ ಹಲವು; ಭಾವ ಒಂದೇ’ ಎಂಬ ಅರಿವನ್ನು ಈ ಕಾರ್ಯಕ್ರಮ ಕಲಿಸಿತು. ‘ಲಾಂಗ್ವೇಜಸ್ ಆರ್ ಮೆನಿ; ಎಮೋಶನ್ ಇಸ್ ಒನ್’ಎಂಬ ಆಂಗ್ಲ ನುಡಿಗಟ್ಟಿನಂತೆ ತುಂಬ ಅರ್ಥಪೂರ್ಣವಾಗಿ ನಡೆಯಿತು.
ಕನ್ನಡ ಭಾಷೆಯ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಿತು. ಮೊದಲ ದಿನ ಮದ್ರಾಸ್ ವಿಶ್ವವಿದ್ಯಾನಿಲಯದ ಡಾ.ಎಂ.ರಂಗಸ್ವಾಮಿ ಅವರು ‘ಕನ್ನಡ ಮತ್ತು ತಮಿಳು ಭಾಷೆಯ ಸಂಬAಧ’ವನ್ನು ಕುರಿತು ತಮಿಳಿನಲ್ಲಿ ತಮ್ಮ ವಿಚಾರವನ್ನು ಮಂಡಿಸಿ ಜನಮನ್ನಣೆಯನ್ನು ಪಡೆದರು.

ಮೈಸೂರಿನ ಜನಪ್ರಿಯ ಜಾನಪದ ಕಲಾವಿದ ದೇವಾನಂದ ವರಪ್ರಸಾದ್ ಅವರ ತಂಡ ಕಂಸಾಳೆ ಮತ್ತು ಮಂಡ್ಯ ಜಿಲ್ಲೆಯ ಕೀರ್ತನಾ ಮತ್ತು ಕೀಲಾರ ಕೃಷ್ಣೆಗೌಡ ಅವರು ಪೂಜಾ ಕುಣಿತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿಕೊಟ್ಟರು. ಎರಡನೆಯ ದಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಡಾ.ಪಿ.ಮಣಿ ಅವರು ‘ಕನ್ನಡ ಭಾಷೆಯ ಲಕ್ಷಣ, ಸ್ವರೂಪ ಮತ್ತು ವೈಶಿಷ್ಟ್ಯ’ ಮತ್ತು ‘ಕರ್ನಾಟಕ, ಕನ್ನಡ ಪದದ ಅರ್ಥ, ನಿಷ್ಪತ್ತಿ’ಎಂಬ ವಿಷಯದ ಬಗ್ಗೆ ತಮಿಳಿನಲ್ಲಿ ಮಾತನಾಡಿ ಭಾಷೆ ಗೊತ್ತಿಲ್ಲದವರಿಗೆ ಸರಳವಾಗಿ ವಿವರಿಸಿದರು. ಇದು ನಿಜವಾದ ಕನ್ನಡ ಪಸರಿಸುವ ಕಾಯಕ. ಯಾರಿಗೆ ಕನ್ನಡ ಗೊತ್ತಿಲ್ಲವೋ ಅವರಿಗೆ ಕನ್ನಡ ಕಲಿಸಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ತಿಳಿಸುವ ಕೆಲಸ ತಾವು ಮಾಡಿದ್ದೀರಿ ಎಂದು ಸಹೃದಯಿಗಳು ಶ್ಲಾಘಿಸಿದರು.

ಅಂತರರಾಷ್ಟಿçÃಯ ಖ್ಯಾತಿಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮತ್ತು ರಾಮಸಮುದ್ರದ ಶಂಕರ್ ಮತ್ತು ಅವರ ತಂಡ ನಡೆಸಿಕೊಟ್ಟ ಗೊರವರಕುಣಿತ ಮತ್ತು ಜನಪದ ಗಾಯನ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ತಬಲದಲ್ಲಿ ರಘುನಾಥ್, ಕೀಬೋರ್ಡ್ ನಲ್ಲಿ ದರ್ಶನ್, ಜಗ್ಗು ಜಾದುಗಾರ್, ಸವಿಗಾನ ಮಂಜು ಕಾರ್ಯಕ್ರಮದಲ್ಲಿ ಭಾಗವಹಿಸಿ ರಂಜಿಸಿದರು.

ಚೆನ್ನೈನ ‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು’ಸಂಸ್ಥೆಯ ನಿರ್ದೇಶಕ ಪ್ರೊ. ಆರ್.ಚಂದ್ರಶೇಖರ್, ಕುಲಸಚಿವ ಡಾ.ಭುವನೇಶ್ವರಿ, ಡಾ.ಮರಿಯಪ್ಪನ್ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಪ್ರಶಂಸಿಸಿ ಪ್ರಮಾಣ ಪತ್ರಗಳನ್ನು ವಿತರಿಸಿದರು.



