ಒಳ ಮೀಸಲಾತಿ ಜಾರಿಗೆ ತರುವ ಸಂಬಂಧ ಸೃಜಿಸಿದ ಒಳ ಹೊಲಸನ್ನು ಸಾಗಾಕಲು ನಾವೇ ಕೈಜೋಡಿಸೋಣ.
ಮಂತ್ರಿಗಳಾದ ಡಾ. ಮಹಾದೇವಪ್ಪ ಅವರಲ್ಲಿ ವೈಯಕ್ತಿಕ ಸಾರ್ವಜನಿಕ ವಿನಂತಿ, ಮಾನ್ಯ ಧಮ್ಮ ಉಪಾಸಕರೇ,
ನಿಮಗೆ ಭಾಸ್ಕರ್ ಪ್ರಸಾದ್ ಮತ್ತು ವಕೀಲರಾದ ಅರುಣ್ ಕುಮಾರ್ ಅವರಿಂದ ವೈಯಕ್ತಿಕವಾಗಿ ತೇಜೋವಧೆ ಆಗಿದ್ದರೆ ನೇರವಾಗಿ ಕೇಸು ದಾಖಲಿಸಬೇಕಿತ್ತು. ಅದನ್ನು ಬಿಟ್ಟು ನಿಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹಸ್ತಕ್ಷೇಪ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಆಗುತ್ತಿದೆ ಈ ನಡಾವಳಿಗಳು. ತಾವು ಸುಮಾರು ನಾಲ್ಕು ದಶಕಗಳಿಂದ ರಾಜಕಾರಣ ಮಾಡಿದವರು. ಯಾವ ಪೊದೆಗೆ ಹೊಡೆದರೆ ಹಾವು ಸಿಗುವುದೆಂಬ ಚಾಣಾಕ್ಷ ರಾಜಕಾರಣಿ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ನಾನು ಸಹ ಅನೇಕ ಸಂದರ್ಭಗಳಲ್ಲಿ ಅವರಿಬ್ಬರ ಮಾತುಗಳಿಗೆ ಅಸಮ್ಮತಿ ಸೂಚಿಸಿದ್ದೇನೆ. ಈ ಬಗ್ಗೆ ಭಾಸ್ಕರ್ ನನ್ನನ್ನು ವಾಚಾಮಗೋಚರವಾಗಿ ನಿಂದಿಸಿ, ಕಾಂಗ್ರೆಸ್ ಏಜೆಂಟ್, ಕುಲ ಕಂಟಕ ಎಂದಾಗಲು ನಾನು ವಿಚಲಿತನಾಗಲಿಲ್ಲ. ಕಾರಣ ಒಳ ಮೀಸಲಾತಿ ದೀವಿಗೆ ಹೊತ್ತಿಸಿ ಮುನ್ನಡೆದ ದಿನಗಳಿಂದ ಅದರೊಂದಿಗೆ ಹೆಜ್ಜೆ ಹಾಕುತ್ತಾ ಬಂದಿರುವೆ.
ಒಳ ಮೀಸಲಾತಿ ಹೋರಾಟ ಯಾವುದೇ ಸಮುದಾಯ ಅಥವಾ ವ್ಯಕ್ತಿಯ ಅಸ್ಮಿತೆಯನ್ನು ಅಲ್ಲೋಲಕಲ್ಲೋಲ ಮಾಡಲು ಹುಟ್ಟಿದ ಚಳವಳಿಯಂತೂ ಅಲ್ಲ. ಅದು ಹಸಿವಿನಿಂದ, ಸಾಮಾಜಿಕ ಅಪಮಾನಗಳಿಂದ ಬೆಂದವರಿಗೆ ಒಂದು ಸಾಂವಿಧಾನಿಕ ಹಕ್ಕನ್ನು ಅನುಭವಿಸಲು ಸಮಾನಾಂತರ ಸಾಮಾಜಿಕ ನ್ಯಾಯ ಕೇಳುವುದೆ ಆಗಿತ್ತು. ಬಹುಶಃ ನಿಮ್ಮಂತಹ ಮುತ್ಸದ್ಧಿ ರಾಜಕಾರಣಿಗಳಿಗೆ ಈ ತಾತ್ಪರ್ಯ ಬಿಡಿಸಿ ಹೇಳಬೇಕಿಲ್ಲ.
ನೀವು ಯಾವ ಮಣ್ಣಿನಲ್ಲಿ ಹುಟ್ಟಿರುವಿರೋ ಅದೇ ಮಣ್ಣಲ್ಲಿ ನಾನೂ ಸಹ ಹುಟ್ಟಿರುವ ಕಾರಣಕ್ಕೆ ನನಗಷ್ಟು ಸರಿ ತಪ್ಪುಗಳನ್ನು ನಿಮ್ಮ ಮುಂದೆ ಸಾದರಪಡಿಸಲು ಸಲುಗೆಯಿದೆ. ಅದು ಪ್ರೀತಿ ಪೂರ್ವಕ ಇರಬೇಕು. ಆಗಸ್ಟ್ 5ರ ದಿನಾಂಕದಿಂದ ಯಾವ ಸಾಮಾಜಿಕ ವಿಘಟನೆಗಳು ಮೂಲ ಅಸ್ಪೃಶ್ಯ ಸಮುದಾಯದವರ ಮುಂದೆ ನಡೆಯಬಾರದಿತ್ತು, ಅನಾವರಣ ಆಗಬಾರದಿತ್ತು, ಅವುಗಳು ಬೀದಿ ಮಾತಾಗಿವೆ. ಮೈಸೂರು ಭಾಗದಲ್ಲಿ ನನ್ನ ಹೊಲೆಯ ಮಾದಿಗರು ಯಾವತ್ತೂ ಬೀದಿಯಲ್ಲಿ ನಿಂತು ಕೆಸರು ಎರಚಾಟದಲ್ಲಿ ಮಗ್ನರಾಗಿರಲಿಲ್ಲ. ನಾನಂತೂ ಕಂಡಿಲ್ಲ. ಹಿರಿಯರು ನನಗೆ ತಿಳಿಸಿಲ್ಲ.
ಒಳ ಮೀಸಲಾತಿ ಒಂದು ಆಂಶಿಕ ಪ್ರಯೋಜನವಾದರೂ ಸತತವಾಗಿ ಉಂಡವರು ಬಿಟ್ಟು ಕೊಡುವ ಮನಸ್ಸುಗಳನ್ನು ಹೊಂದಿಲ್ಲ. ಬಹುಶಃ ಡಾ. ಅಂಬೇಡ್ಕರ್ ತಮ್ಮ ಜ್ಞಾನದ ಫಲವನ್ನು ತನಗೆ ಮತ್ತು ತನ್ನ ವಂಶವಾಹಿನಿಗಾಗಿ ಅಷ್ಟೇ ಎಂದು ಚಿಂತಿಸಿ ಅಭಿಮತಿಸಿದ್ದರೆ ನೀವು ಮಂತ್ರಿಗಳೇ ಆಗುತ್ತಿರಲಿಲ್ಲ. ನಾನು ನಿಮಗೆ ಇಂತಹ ಒಂದು ಒಕ್ಕಣೆಯನ್ನು ಈ ಜಾಲದ ಮೂಲಕ ಬರೆಯುವ ಅವಕಾಶ ಸಿಗುತ್ತಿರಲಿಲ್ಲ. ನಮ್ಮಿಬ್ಬರ ಪೂರ್ವೇತಿಹಾಸದ ಸಾಮಾಜಿಕ ಜಿಗುಟು ಹಾಗೆಯೇ ನಮ್ಮಿಬ್ಬರ ನಡುವೆ ಉಳಿದಿರುತ್ತಿತ್ತು.
ನಮ್ಮಿಬ್ಬರನ್ನು ಮಾನಸಿಕವಾಗಿ ಬೆಸೆದಿರುವ ಅಂಬೇಡ್ಕರ್ ಸಾಮಾಜಿಕ ಅಭಿಮತದ ಎಳೆಗಳನ್ನು ಈಗ ಮತ್ತಷ್ಟು ಛಿದ್ರ ಮಾಡಿದರೆ ಅಂಬೇಡ್ಕರ್ ಆಶಯಗಳು ಉಳಿದು ಬೆಳೆಯುವುದಾದರೂ ಹೇಗೆ ಹೇಳಿ.
ಮೈಸೂರು ಪ್ರಾಂತ್ಯದಲ್ಲಿ ಹೊಲೆಯರೊಂದು ದಿನ ಮಾದಿಗರೊಂದು ದಿನ ಪ್ರತಿಭಟನೆ ಮಾಡುತ್ತಾ ಹೋದ್ರೆ ಇವರ ಮಾನ ಮರ್ಯಾದೆ ಕಾಪಾಡುವವರು ಯಾರು? ಈ ಸಮುದಾಯಗಳು ವಿಘಟಿತರಾದಷ್ಟು ಅವರಿಗಾಗಿ ಖೆಡ್ಡಾ ತೋಡುವವರು ಸಹ ನಮ್ಮ ನಡುವೆಯೇ ಬಂದು ನಿಲ್ಲುತ್ತಾರೆ. ಇದನ್ನು ಪಡೆಯಲಿಕ್ಕೆ ನಾವೇನು ಹಿಮಾಲಯದ ತಪ್ಪಲಿನಲ್ಲಿ ಕುಳಿತು ತಪಸ್ಸು ಮಾಡಬೇಕಾಗಿಲ್ಲ. ಕಡೆಗಣಿಸಿದ ಕಿಡಿ ಊರನ್ನೇ ಸುಟ್ಟುಹಾಕಿತು ಎಂಬ ಮಾತನ್ನು ಅರಿತು ನಡೆಯೋಣ.
ಈಗಾಗಲೇ ಸಾಕೆನ್ನುವಷ್ಟು ನಮ್ಮ ಸಮುದಾಯಗಳು ವಿಭಿನ್ನವಾಗಿ ಇತರರಿಗೆ ರಾಚುವಷ್ಟು ಕಕ್ಕಾಡಿದ್ದೇವೆ. ಈ ಪ್ರಕ್ರಿಯೆ ಪುನರಾವರ್ತನೆ ಆಗುತ್ತಾ ಹೋದಂತೆ ನಮ್ಮ ಮಾನಸಿಕ ವಾಂತಿಗೆ ಔಷಧಿ ಯಾವುದೇ ಅಂಗಡಿಗಳಲ್ಲಿ ಸಿಗುವುದಿಲ್ಲ. ಅದು ಸಿಗುವುದಾದರೆ ಅಂಬೇಡ್ಕರ್ ಮತ್ತು ಬುದ್ಧರ ಮೈತ್ರಿಯ ದವಾಖಾನೆಯಲ್ಲಿ ಮಾತ್ರ. ಹಾಗೆಯೇ ನಮ್ಮಿಬ್ಬರ ನಡುಬೀದಿ ವಿರಸದಾಟ ಶತೃ ಪಡೆಗಳಿಗೆ ರಸದೌತಣವನ್ನು ನೀಡಿದಂತಾಗುತ್ತದೆ. ಇಂದು ಈ ಪಡೆಗಳು ಮಾದಿಗರ ಜೊತೆಯಲ್ಲಿ ಸಾವಕಾಶವಾಗಿ ಇರಬಹುದು. ಆದರೆ ಅವರಿಂದ ಇವರ ಸಾಮಾಜಿಕ ಜಡತ್ವ ಹೋಗುವುದೆಂದು ನಾನಂತೂ ನಂಬಿಲ್ಲ.
ಪಂಚಾಯಿತಿ ಇಲ್ಲದ ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ನಮ್ಮ ಹೊಲಸನ್ನು ಸಾಗಾಕಲು ಸಾಮೂಹಿಕವಾಗಿ ಶ್ರಮದಾನ ಮಾಡುವ ಮುಖಾಂತರ ತಮ್ಮ ಕೇರಿಗಳನ್ನು ಶುದ್ಧೀಕರಣ ಮಾಡುತ್ತಿದ್ದರು. ಆದರೆ ಇಂದು ಭಾವೊದ್ವೇಗದಿಂದ ಸೃಜಿಸಿರುವ ಮಾನಸಿಕ ಬಗಡೆಯನ್ನು ಊರು ಕೇರಿಗಳಾಚೆ ಹಾಕಲು ಸಮುದಾಯಗಳ ಅಂತರಂಗದಲ್ಲಿ ನಿಂತು ಮಾತನಾಡೋಣ ಎಂಬ ಹೆಬ್ಬಯಕೆ ನನ್ನದಾಗಿದೆ.
ಒಳ ಮೀಸಲಾತಿ ಎಂಬ ವಿಚಾರ ಒಂದು ಸಾಂವಿಧಾನಿಕ ಚೌಕಟ್ಟಿನಲ್ಲಿ ನಿರ್ವಹಣೆ ಮಾಡಲು ಅವಕಾಶ ಸಿಗುತ್ತದೆ. ಆದರೆ ಮುರಿದ ಮನಸ್ಸುಗಳನ್ನು ಹೊಸೆಯಲು ಯಾವುದೇ ಕಾನೂನಿನ ಮೂಲಕ ಆಗುವುದಿಲ್ಲ.
ಆದುದರಿಂದ, ತಾವು ರಚನಾತ್ಮಕವಾಗಿ ಯೋಚಿಸುವ ಪ್ರತಿಯೊಬ್ಬ ಮಾದಿಗ ಸಮುದಾಯದ ಕಿರಿಯರಿಗೆ ಅಣ್ಣನಾಗಿ ಹಿರಿಯರಿಗೆ ತಮ್ಮನಾಗಿ ಕೈ ಜೋಡಿಸಿ ವಿಪತ್ತಿನ ಕಾಲದಲ್ಲಿ ಪರಿವರ್ತನೆ ಹಣತೆಯನ್ನು ಹಚ್ಚುವ ಕೆಲಸವನ್ನು ತಾವು ಒರ್ವ ಧಮ್ಮಪರಿಪಾಲಕರಾಗಿ ಮಾಡಬೇಕಿದೆ.
ಈ ಎರಡೂ ಸಮುದಾಯಗಳಿಂದ ಅಣ್ಣಗಳಾಗದಿದ್ದರೂ ಪರವಾಗಿಲ್ಲ. ಕೊನೆಯ ಪಕ್ಷ ಅಂಬೇಡ್ಕರ್ ಅವರ ಸಾಮಾಜಿಕ ಪರಿವರ್ತನೆಯ ಚಳುವಳಿ ಕಟ್ಟಲು ಅವರ ಅನುಯಾಯಿಗಳಾಗಲು ಅವರ ಬಸ್ಸಿನಲ್ಲಿ ಸಹ ಪ್ರಯಾಣಿಕರಂತಾಗಿ ಸಾಗೋಣ. ಯೋಚಿಸಿ
ನಿಮ್ಮ ಅಭಿಪ್ರಾಯಗಳಿಗಾಗಿ ಆಸೆಗಣ್ಣುಗಳಿಂದ ಕಾಯುತ್ತಾ ನಿಂತಿರುವೆ. ಹಾಗೆಯೇ ನಿಮ್ಮ ಒಳದನಿ ಪಾಡುಗಳು ಎರಡು ಸಮುದಾಯಗಳ ಓಣಿಗಳಲ್ಲಿ ಶಾಂತಿದೂತನಾಗಲೆಂದು ಆಶಿಸುತ್ತಾ ಕಾಯುತ್ತಿದ್ದೇನೆ.
ತಮ್ಮ ನಂಬುಗೆಯ
– ದಾಸನೂರು ಕೂಸಣ್ಣ, ಸಮುದಾಯ ಚಿಂತಕರು



