ಒಳ ಮೀಸಲಾತಿ ಜಾರಿಗೆ ಏಕ ಸದಸ್ಯ ಆಯೋಗ ರಚನೆ

2 years ago

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ಒಳ ಮೀಸಲಾತಿ ನೀಡಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಏಕ ಸದಸ್ಯ ಆಯೋಗ ರಚಿಸಲು ನಿರ್ಧರಿಸಿದೆ.

ಒಳ ಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ ಎಚ್ ಮುನಿಯಪ್ಪ ಸೇರಿದಂತೆ ಹಲವರು, ಒಳ ಮೀಸಲಾತಿ ಜಾರಿ ಸಂಬಂಧ ಸಂಪುಟದ ಯಾವುದೇ ಸದಸ್ಯರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಈ ವಿಷಯದಲ್ಲಿ ಒಟ್ಟಾಗಿದ್ದೇವೆ ಎಂದರು.

ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿಗೆ ತರಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಯಾವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಸ್ಪಷ್ಟತೆ ಇಲ್ಲ. ಹಿಂದಿನ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟ ಮಾಹಿತಿಗಾಗಿ ಸರ್ಕಾರ ಆಯೋಗ ರಚಿಸಲು ನಿರ್ಧರಿಸಿತು ಎಂದರು.

ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲಿದ್ದು, ಮೂರು ತಿಂಗಳಲ್ಲಿ ಈ ಆಯೋಗ ತನ್ನ ವರದಿ ನೀಡಬೇಕು ಎಂದು ಸೂಚಿಸಲಾಗುವುದು. ಆಯೋಗ ವರದಿ ನೀಡುವವರೆಗೆ ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಮುಂದೂಡಲಾಗುವುದು ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಸಂಬಂಧ ಹಿಂದಿನ ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿದ್ದು, ಅದರ ಅಧಾರದ ಮೇಲೆ ಒಳ ಮೀಸಲಾತಿ ಜಾರಿಗೆನಿರ್ಣಯ ಮಾಡಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರ ಆಧಾರದಲ್ಲಿ ನಮ್ಮ ಸರ್ಕಾರ ದಲಿತ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ತೀರ್ಮಾನ ಮಾಡಿದೆ ಎಂದರು.

ನಮ್ಮ ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಸಮಾವೇಶದಲ್ಲಿ ಒಳ ಮೀಸಲಾತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ನಮ್ಮ ನಿಲುವಿಗೆ ನಾವು ಬದ್ದರಾಗಿದ್ದೇವೆ ಎಂದರು.

ದಲಿತ ಪಂಗಡಗಳ ಬಲ, ಎಡ, ಬೋವಿ, ಲಂಬಾಣಿ ಸಮಾಜದ ಎಲ್ಲರೂ ಚರ್ಚೆ ಮಾಡಿದ್ದೇವೆ. ಎಂಪೆರಿಕಲ್ ಡೇಟಾ ಪಡೆದುಕೊಂಡ ಬಳಿಕ ಒಳ ಮೀಸಲಾತಿ ಜಾರಿ ಮಾಡುತ್ತೇವೆ. ತೆಲಂಗಾಣ ಸರ್ಕಾರ ಕೂಡ ಅದೇ ಮಾದರಿಯಲ್ಲಿ ಆಯೋಗ ಮಾಡಿತ್ತು. ಈಗ ನಾವೂ ಕೂಡ ಆಯೋಗದ ವರದಿ ಆಧರಿಸಿಯೇ ಮುಂದಿನ ಜಾರಿಗೆ ತರುತ್ತೇವೆ ಎಂದರು.

Leave a Reply