ಗೋವಿಂದಸ್ವಾಮಿಯವರಿಗೆ ನ್ಯಾಯ ದೊರಕಿಸಲು ಮುಂದಾಗಲಿ

6 months ago

ಕರ್ನಾಟಕ ರಾಜ್ಯ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಕ್ರಿಯಾಶೀಲ ಮತ್ತು ಪ್ರಾಮಾಣಿಕ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದಸ್ವಾಮಿ ಅವರ ಕರ್ತವ್ಯಗಳಿಗೆ ಅಡ್ಡಿಪಡಿಸಿ ಕರ್ನಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿಯವರು  ತೆಜೋವಧೆಗೆ ಪಿತೂರಿ ನಡೆಸುವ ಮೂಲಕ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಕಾರಣರಾಗಿದ್ದಾರೆ ಎಂದು ತಿಳಿದುಬಂದಿದೆ.

ರುದ್ರಪ್ಪ ಲಮಾಣಿಯವರು 07-02-2025 ರಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು, (ಪತ್ರ ಸಂಖ್ಯೆ: ಕವಿಸ.ಉಸ. 1089/2025), ಹಿರಿಯ ಸಾಹಿತಿ ಶ್ರೀಮತಿ ಬಿ.ಟಿ.ಲಲಿತಾನಾಯಕ್ ಅವರಿಗೆ “ಸಂತ ಸೇವಾಲಾಲ್ ಪ್ರಶಸ್ತಿ” ಘೋಷಣೆ ಮಾಡಿರುವ ಕ್ರಮವನ್ನು ಖಂಡಿಸಿರುತ್ತಾ, ಮಾನ್ಯ ರುದ್ರಪ್ಪ ಲಮಾಣಿಯವರ  ಹತ್ತಿರದ ಸಂಬಂಧಿಯೊಬ್ಬರಿಗೆ ಪ್ರಶಸ್ತಿ ನೀಡಬೇಕೆಂದು ಅಸಾಂವಿಧಾನಿಕವಾಗಿ ಒತ್ತಾಯಿಸಿರುತ್ತಾರೆ.

ಅಕಾಡೆಮಿಯ ಅಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಸದಸ್ಯರು ಲಲಿತಾನಾಯಕ್ ಅವರನ್ನು ಆಯ್ಕೆಮಾಡಿ ಪತ್ರಿಕಾ ಪ್ರಕಟಣೆ ನೀಡಿದ ಬಳಿಕವೂ ಒತ್ತಾಯ ತಂದಿರುವುದು ಅಸಾಂವಿಧಾನಿಕ ನಡೆಯಾಗಿರುತ್ತದೆ. 

ಅಕಾಡೆಮಿಯ ರಿಜಿಸ್ಟ್ರಾರ್ ದಿನಾಂಕ 17.03.2025 ರಂದು ಮಾನ್ಯ ಉಪಸಭಾಪತಿಗಳಿಗೆ ಪತ್ರ ಬರೆದು, ಈಗಾಗಲೇ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೂಡ ಆಯೋಜಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಿದ್ದರೂ ಶ್ರೀ ರುದ್ರಪ್ಪ ಲಮಾಣಿಯವರು, ಎ.ಆರ್.ಗೋವಿಂದಸ್ವಾಮಿಯವರಿಗೆ ದೂರವಾಣಿ ಕರೆಮಾಡಿ ವೈಯಕ್ತಿಕವಾಗಿ ನಿಂದಿಸಿರುತ್ತಾರೆ. “ನಾನೇ ಸರ್ಕಾರ, ನಾನು ಹೇಳಿದಂತೆ ಕೆಳಬೇಕು ನನಗೆ ತಿಳಿಸದೆ ನನ್ನಲ್ಲಿ ಬಂದು ಚರ್ಚಿಸದೆ ಸಂತ ಸೇವಾಲಾಲ್ ಪ್ರಶಸ್ತಿ ಹೇಗೆ ನೀಡಿದಿರಿ?” ಎಂದು ಬೆದರಿಕೆ ಒಡ್ಡಿದ್ದಾರೆ.

ರುದ್ರಪ್ಪ ಲಮಾಣಿಯವರ ಕಡೆಯ ಕೆಲವು ಪುಂಡರು ಗೋವಿಂದಸ್ವಾಮಿಯವರ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಗೋವಿಂದ ಸ್ವಾಮಿಯವರು ತನಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಕೋರಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ರುದ್ರಪ್ಪ ಲಮಾಣಿಯವರ ಬೆಂಬಲಿಗ ಸದಸ್ಯರಾದ ಮೋತಿಲಾಲ್ ಚವ್ಹಾಣ್ ಹಾಗೂ ಇನ್ನೊಬ್ಬ ವ್ಯಕ್ತಿ  ಅಕಾಡೆಮಿಯ ಕೆಲಸ ಕಾರ್ಯಗಳಿಗೆ ಅಸಹಕಾರ ತೋರಿಸಿರುತ್ತಾರೆ. ಲೆಕ್ಕಾಧಿಕಾರಿ ಶ್ರೀ ಸುರೇಶ್ ನಾಯಕ್ ಮತ್ತು ಪ್ರಭಾರ ರಿಜಿಸ್ಟ್ರಾರ್ ಆದ ಡಿ.ಎಂ.ರವಿಕುಮಾರ್ ಅವರು ಕೂಡಾ ಅಕಾಡೆಮಿಯ ಕೆಲಸ ಕಾರ್ಯಗಳಲ್ಲಿ ಯಾವುದೇ ಸಹಕಾರ ನೀಡಿರುವುದಿಲ್ಲ ಎಂಬ ದೂರು ಕೇಳಿಬಂದಿದೆ.

ರುದ್ರಪ್ಪ ಲಮಾಣಿಯವರು ಸದಸ್ಯರಿಗೆ ಆಮಿಷ ಒಡ್ಡಿ ತಮ್ಮತ್ತ ಸೆಳೆದುಕೊಂಡಿದ್ದಾರೆ. ಹಾಗಾಗಿ ಅಕಾಡೆಮಿಯ ಕೆಲಸ ಕಾರ್ಯಗಳನ್ನು ಸರಿಯಾಗಿ ನಡೆಸಲಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಕಾರ್ಯಕ್ರಮ ನಡೆಸದೆ, ಅಕಾಡೆಮಿಯ ಹಣ ಪೋಲು ಮಾಡಲಾಗಿದೆ. ಲಮಾಣಿಯವರಿಂದ ಪ್ರಚೋದಿತರಾದ ಕೆಲವು ಸದಸ್ಯರು ಪ್ರಶಸ್ತಿಯನ್ನು ತಮ್ಮ ಸ್ವಂತ ಸಂಬಂಧಿಗಳಿಗೆ ಸುಳ್ಳು ಹೇಳಿ ಕೊಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಖಂಡಿಸಿದ ಗೋವಿಂದಸ್ವಾಮಿಯವರ ವಿರುದ್ಧ ಶ್ರೀ ರುದ್ರಪ್ಪಲಮಾಣಿ ಜೊತೆ ಸೇರಿದ ಕೆಲವು ಸದಸ್ಯರು ದಿನಾಂಕ:17.06.2025 ರಂದು ಸುಳ್ಳು ಆರೋಪ ಹೊರಿಸಿ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ಪತ್ರ ಬರೆದಿದ್ದಾರೆ. ಅಧ್ಯಕ್ಷರಾದ ಗೋವಿಂದಸ್ವಾಮಿಯವರಿಗೆ ವೈಯಕ್ತಿಕ ತೊಂದರೆ ಕೊಡಲು ಬಯಸಿದ ಮಾನ್ಯ ರುದ್ರಪ್ಪ ಅವರು, ಸಂಚು ರೂಪಿಸಿ ಅಕಾಡೆಮಿಯಲ್ಲಿ ಕೆಲಸ ಮಾಡದಂತೆ, ಸದಸ್ಯರ ಸಹಕಾರ ಸಿಗದಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ನಂತರ ದಿನಾಂಕ : 30.5.2025 ರಲ್ಲಿ ಸಭಾಪತಿಯವರು ಟಿಪ್ಪಣಿಗಳನ್ನು ಕೊಟ್ಟು ಅಧ್ಯಕ್ಷರನ್ನು ಬದಲಿಸಲು ಸೂಚಿಸಿದ್ದಾರೆ. ಹೀಗಾಗಿ ಕಳೆದ ನಾಲ್ಕು ತಿಂಗಳುಗಳಿಂದ ರಿಜಿಸ್ಟ್ರಾರ್ ಕೂಡ ಅಕಾಡೆಮಿಗೆ ಬಾರದೆ ಅಕಾಡೆಮಿಯ ಕೆಲಸಗಳಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಗೋವಿಂದಸ್ವಾಮಿ ಪತ್ರ ಬರೆದಿದ್ದಾರೆ. ಅಕಾಡೆಮಿಯ ಲೆಕ್ಕಾಧಿಕಾರಿ ಮತ್ತು ರಿಜಿಸ್ಟ್ರಾರ್ ಗಳ ಕಡೆಯವರಿಗೆ ಎಲ್ಲಾ ಕಾರ್ಯಕ್ರಮಗಳನ್ನು ನೀಡಬೇಕೆಂದು ಹಣ ಪಾವತಿಗೆ ಅಡಚಣೆ ಮಾಡುತ್ತಿದ್ದ ಬಗ್ಗೆ ಆರೋಪ ಕೇಳಿಬಂದಿದೆ. ಕಲಾವಿದರಿಂದ, ಸಂಘ- ಸಂಸ್ಥೆಗಳಿಂದ ಮಾಮೂಲು ವಸೂಲಿ ಕೂಡಾ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕೆಲವು ಹಿರಿಯ ಅಧಿಕಾರಿಗಳು ಕೈಜೋಡಿಸಿದ್ದಾರೆ.

ರಾಜ್ಯೋತ್ಸವ ಹಾಗೂ ಇತರೆ ಪ್ರಶಸ್ತಿಗಳಲ್ಲಿ ಕೂಡಾ ಪ್ರಬಲ ಸಮದಾಯಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿ ಗೋವಿಂದಸ್ವಾಮಿಯವರು ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಂಜಾರ ಅಕಾಡೆಮಿಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಂಜಾರ ಬುಡಕಟ್ಟು ಸಮುದಾಯದವರಿಗಾಗಿ ಮಾಡಿರುವ ಉತ್ತಮ ಕೆಲಸಗಳಿಂದ ಅಕಾಡೆಮಿಗೆ, ಇಲಾಖೆಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಒಬ್ಬ ಸರ್ಕಾರಿ ನೌಕರರಾಗಿರುವ ಗೋವಿಂದಸ್ವಾಮಿ ಯಾವುದೇ ಗೌರದ ಧನ, ಸಂಭಾವನೆ ಮತ್ತು ಭತ್ಯೆ ಸ್ವೀಕರಿಸುತ್ತಿಲ್ಲ. ಪ್ರೊ.ಬರಗೂರು ರಾಮಚಂದ್ರಪ್ಪನವರು ರೂಪಿಸಿರುವ ಸಾಂಸ್ಕೃತಿಕ ನೀತಿಯು, ಸರ್ಕಾರಿ ನೌಕರರು ಯಾವುದೇ ಅಕಾಡೆಮಿಗಳಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಲು ಅವಕಾಶವಿದೆ. ಡಾ.ಎ.ಆರ್.ಗೋವಿಂದಸ್ವಾಮಿಯವರು ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಂಡು ಅರ್ಧ ದಿನ ಮಾತ್ರ ಇಲಾಖೆಯಲ್ಲಿ ಹಾಗೂ ಅರ್ಧ ದಿನ ಅಕಾಡೆಮಿಯ ಅಧ್ಯಕ್ಷರಾಗಿ ಗೌರವ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾನ್ಯ ರುದ್ರಪ್ಪ ಲಮಾಣಿ ಅವರ ಒತ್ತಡದ ಮೇಲೆ ಸದಸ್ಯರನ್ನು ಕರೆಸಿ ಬಲವಂತದಿಂದ ಸಹಿ ಹಾಕಿಸಿರುತ್ತಾರೆಂದು ತಿಳಿದುಬಂದಿದೆ.

ಇದರಿಂದ ಮನನೊಂದು ಸ್ವತಃ ಅಧ್ಯಕ್ಷರೇ ರಾಜಿನಾಮೆ ಕೊಡಲು ಮುಂದಾಗಿದ್ದರು. ಅಷ್ಟರಲ್ಲಿ ಸರ್ಕಾರವೇ ಗೋವಿಂದಸ್ವಾಮಿಯವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಸರ್ಕಾರವು ಈ ಕ್ರಮವನ್ನು ಪುನರ್ ಪರಿಶೀಲಿಸುವ ಮೂಲಕ ಗೋವಿಂದಸ್ವಾಮಿಯವರಿಗೆ ನ್ಯಾಯ ದೊರಕಿಸಲು ಮುಂದಾಗಲಿ ಎಂದು ಆಶಿಸುತ್ತೇನೆ.

– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply