ಮಂಗಳೂರು: ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿಯು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ, ನೀಡಲಿರುವ ಪ್ರಶಸ್ತಿ, ಪುರಸ್ಕಾರಕ್ಕೆ ನಾಟಕ ರಂಗಕ್ಕೆ ಸಂಬಂಧಿಸಿದ ಕೃತಿಗಳನ್ನು ಆಹ್ವಾನಿಸಿದೆ.
ಆದರ್ಶ ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರು, ನಮಗೆ ಹೆಚ್ಚು ಪ್ರಸ್ತುತರಾಗಿರುವುದು ನಾಟಕಗಳ ರಚನೆಯಿಂದ ಮತ್ತು ರಂಗಭೂಮಿಗೆ ಪ್ರಸ್ತುತವೆನ್ನಿಸುವ ಲೇಖನಗಳಿಂದ. ಅವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿಯು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ, ಅಂಬಾತನಯ ಮುದ್ರಾಡಿಯವರ ಹೆಸರಿನ ಪ್ರಶಸ್ತಿ – ಪುರಸ್ಕಾರವೊಂದನ್ನು ಈ ವರ್ಷದಿಂದ ಅನುಷ್ಠಾನಕ್ಕೆ ತರಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಪರಿಶೀಲನ ಅವಧಿಯಲ್ಲಿ ಪ್ರಕಟವಾದ, ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯಕೃತಿ ಅಥವಾ ಪರಿಶೀಲನ ಅವಧಿಯಲ್ಲಿ ಪ್ರಕಟವಾದ ಅತ್ಯುತ್ತಮ ನಾಟಕ ಕೃತಿಯನ್ನು ಪರ್ಯಾಯ ವರ್ಷಗಳಲ್ಲಿ ಸ್ಪರ್ಧೆಯ ಮೂಲಕ ಗುರುತಿಸಿ ಪುರಸ್ಕಾರವನ್ನು ನೀಡುವ ಮೂಲಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯನ್ನು ನಿರಂತರವಾಗಿ ನಡೆಸುವ ಯೋಜನೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ಪ್ರಶಸ್ತಿಯು ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ವರ್ಷದ ಹಿಂದಿನ ಎರಡು ವರ್ಷಗಳಲ್ಲಿ ಪ್ರಕಟವಾಗುವ ಕೃತಿಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಮೊದಲ ವರ್ಷದ (2023) ಪ್ರಶಸ್ತಿಗೆ ಹಿಂದಿನ ಎರಡು ವರ್ಷಗಳಲ್ಲಿ (2021 ಮತ್ತು 22) ಪ್ರಕಟವಾದ ‘ನಾಟಕ ರಂಗಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿ’ಯನ್ನು ಮತ್ತು ಎರಡನೆಯ ವರ್ಷದ (2024) ಪ್ರಶಸ್ತಿಗೆ ಆದರ ಹಿಂದಿನ ಎರಡು ವರ್ಷಗಳಲ್ಲಿ ಪ್ರಕಟವಾದ ನಾಟಕ ಕೃತಿಯನ್ನು ಪರಿಗಣಿಸುವ ಮೂಲಕ ಈ ಸರ್ಧೆಯನ್ನು ನಿರಂತರವಾಗಿ ನಡೆಸಲಾಗುತ್ತದೆ.
ತನ್ನಿಮಿತ್ತ 2021 ಮತ್ತು 2022 ಈ ಎರಡು ವರ್ಷಗಳ ಅವಧಿಯಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ, ನಾಟಕ ರಂಗಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಯ ಸ್ವತಂತ್ರ ನಾಟಕೇತರ ಸಾಹಿತ್ಯಕೃತಿಗಳ ಒಂದು ಪ್ರತಿಯನ್ನು ಲೇಖಕ/ ಪ್ರಕಾಶಕರು/ ರಂಗಕರ್ಮಿಗಳು/ ಅಥವಾ ರಂಗಾಸಕ್ತರು ಕಳುಹಿಸಬಹುದು.
ವಿಳಾಸ: ಬೆಳಗೋಡು ರಮೇಶ ಭಟ್, ‘ಭಾಗೀರಥಿ’, ಇಂದ್ರಾಳಿ ದೇವಸ್ಥಾನದ ರಸ್ತೆ, ಅಂಚೆ: ಕುಂಜಿಬೆಟ್ಟು ಉಡುಪಿ – 576102 (ಮೊಬೈಲ್ 9341091821) .ಇವರಿಗೆ ಆಕ್ಟೋಬರ್ 31, 2023 ರ ಒಳಗೆ ತಲುಪುವಂತೆ ಕಳುಹಿಸಿಕೊಡಬಹುದು.
(ಆಗತ್ಯವಿದ್ದಲ್ಲಿ ಸ್ಪರ್ಧೆಯ ಕೊನೆಯ ಸುತ್ತಿಗೆ ಆಯ್ಕೆಯಾದ ಪುಸ್ತಕಗಳ ಮೂರು ಪ್ರತಿಗಳನ್ನು ಆಯ್ಕೆ ಸಮಿತಿಯು “ಖರೀದಿಸಿ’ ತೀರ್ಪುಗಾರರಿಗೆ ಒದಗಿಸಲಿರುವುದರಿಂದ, ಪುಸ್ತಕದ ಹೆಚ್ಚಿನ ಮೂರು ಪ್ರತಿಗಳ ಲಭ್ಯತೆಯನ್ನು ಖಾತ್ರಿಪಡಿಸಬೇಕಾಗಿ ವಿನಂತಿ.)
ಪ್ರಶಸ್ತಿ ಸಮಿತಿ:
ಡಾ ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು
ಪ್ರದೀಪ್ ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ
ಸಂಚಾಲಕರು : ರಮೇಶ್ ಭಟ್ ಬೆಳಗೋಡು, ಸಹ ಸಂಚಾಲಕರು: ಪ್ರಭಾಕರ್ ಜಿ ಪಿ, ಪೂರ್ಣಿಮಾ ಸುರೇಶ್, ಡಾ ವಿಷ್ಣುಮೂರ್ತಿ ಸಮಿತಿ. ಸದಸ್ಯರು: ಭುವನಪ್ರಸಾದ್ ಹೆಗ್ಡೆ, ಡಾ. ಮಾಧವಿ ಎಸ್ ಭಂಡಾರಿ, ಡಾ. ನಿಕೇತನ, ಡಾ. ಪಾರ್ವತಿ ಜಿ ಐತಾಳ್, ರಾಘವ ನಂಬಿಯಾರ್ ಕೆ. ಪಿ.




