ಕನ್ನಡ ಸಾಹಿತ್ಯ ಪರಿಷತಿನಲ್ಲಿ ಹೊಸ ಶಕೆ ಪ್ರಾರಂಭಿಸಿದವರು ಜಿ. ನಾರಾಯಣ: ಡಾ. ಮಹೇಶ ಜೋಶಿ

3 years ago

A new shake was started in Kannada Sahitya Parishad by G. Narayan: Dr. Mahesh Joshi

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣಕರ್ತರಾಗಿ, ಪರಿಷತ್ತಿನಲ್ಲಿ ಒಂದು ಹೊಸ ಶಕೆ ಪ್ರಾರಂಭಿಸಿದವರು ದೇಶಹಳ್ಳಿ ಜಿ. ನಾರಾಯಣ ಅವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದೇಶಹಳ್ಳಿ ಜಿ. ನಾರಾಯಣ ೧೦೦ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೧೯೬೯ರಿಂದ ೧೯೭೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ಕನ್ನಡ ನಾಡು ನುಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದರು ಎಂದರು.

ಜಿ.ನಾರಾಯಣ ಅವರು ೧೯೪೨ರಲ್ಲಿ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿʼ ಭಾಗವಹಿಸಿ ಸೆರೆಮನೆ ಸೇರಿದ್ದರು. ೧೯೫೭ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ನಾರಾಯಣ ಅವರು ೧೯೬೪ರಲ್ಲಿ ಬೆಂಗಳೂರಿನ ಮೇಯರಾಗಿ ಸೇವೆ ಸಲ್ಲಿಸಿದವರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷರೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು ನಿರಂತರ ಕನ್ನಡ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಹಾಸ್ಯ ಭರಿತ ಮಾತುಗಳಂದ ಜನರನ್ನು ಸೇರಿಸುವ ಮೂಲಕ ಮಹಾನ್‌ ಸಂಘಟಕರಾಗಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಮಾತನಾಡಿ, ಶ್ರೇಷ್ಠ ಸಂಘಟಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಜಿ. ನಾರಾಯಣರು ಅವರು ಸಾಹಿತಿಗಳು ವಿದ್ವಾಂಸರೂ ಅಲ್ಲದೆ ಸ್ವತಃ ಪತ್ರಕರ್ತರು ಆಗಿದ್ದರು. ಪರಿಷತ್ತಿನ ಪ್ರಗತಿ ಕಾರ್ಯಗಳಿಗೆ ವಿನೂತನ ಯೋಜನೆಗಳನ್ನು ರೂಪಿಸಿ ಅದರಂತೆ ಯೋಜನಾಬದ್ಧವಾಗಿ ಕೆಲಸಮಾಡಿ ಹೆಸರಾದವರು. ಅವರ ಕಾಲದಲ್ಲಿ ನಡೆಸಿದ ಬಹುತೇಕ ಕಾರ್ಯಕ್ರಮಗಳೆಲ್ಲ ಐತಿಹಾಸಿಕವಾಗಿದ್ದವು. ೧೯೭೫ನೇ ವರ್ಷವನ್ನು ಯುನೆಸ್ಕೊ ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಿದಾಗ, ಪರಿಷತ್ತಿನಲ್ಲಿ ೨೦೦ ಗೋಷ್ಠಿಗಳನ್ನು ನಡೆಸಿ, ೨೫ ಮಹಿಳಾ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿ, ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿದ್ದರು ಎಂದರು.

ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್‌. ಪಟೇಲ್‌ ಪಾಂಡು, ವಿಶೇಷ ಕರ್ತವ್ಯಾಧಿಕಾರಿ ಚಿಕ್ಕತಿಮ್ಮಯ್ಯ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು.

Leave a Reply