ಕನ್ನಡ ಕಾವ್ಯ ಕ್ಷೇತ್ರ ಹಿಗ್ಗಿಸಿದ ಪ್ರಯೋಗಶೀಲ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ

11 months ago

ಕನ್ನಡ ಕಾವ್ಯ ಕ್ಷೇತ್ರ ಹಿಗ್ಗಿಸಿದ ಪ್ರಯೋಗಶೀಲ ಕವಿ, ಗದ್ಯ ಪ್ರಕಾರದಲ್ಲೂ ಕೃಷಿ ಮಾಡಿ, ಭಾವಗೀತೆಗಳ ಕಣಜ ವಿಸ್ತರಿಸಿದ ಸಹೃದಯಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ  ನಮ್ಮನ್ನಲಿದ್ದಾರೆ‌. ಅವರು ವಿಭಜಿತ ನನ್ನ ದಾವಣಗೆರೆ ಜಿಲ್ಲೆಯವರು. ಈ ಹೆಮ್ಮೆ ನನಗಿದೆ.

ಬೆಂಗಳೂರಿಗೆ ಬಂದ ಹೊಸತರಲ್ಲಿ ಅವರನ್ನು ಭೇಟಿ ಮಾಡಲು ತ್ಯಾಗರಾಜನಗರದ ಮನೆ ಹುಡುಕಿ ಹೋಗಿದ್ದೆ. ಕಾವ್ಯವಲ್ಲದೆ ಅವರದ್ದೊಂದು ಗದ್ಯ ಕೃತಿ “ಬಾನಸವಾಡಿ ಬೆಂಕಿ” ಓದಿದ್ದೆನಾದ್ದರಿಂದ ಆ ಬಗ್ಗೆ ಮಾತಾಡಿದ್ದ ನೆನಪು. ಬ್ರಿಗೇಡ್ ರಸ್ತೆಯಲ್ಲಿದ್ದ ಒಂದು ಕ್ರಿಶ್ಚಿಯನ್ ಕಾಲೇಜಿನ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದೆ. ನಂತರದ ದಿನಗಳಲ್ಲಿ ಬನಶಂಕರಿಯಲ್ಲಿದ್ದ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಮನೆ ಎದುರಿನ ಮತ್ತೊಂದು ಮನೆಯಲ್ಲಿ ವಾಸವಿದ್ದಾಗಲೂ ಭೇಟಿಯಾಗಿ ಸಮಾರಂಭಗಳಿಗೆ ಆಹ್ವಾನಿಸಿ, ಕರೆದೊಯ್ದಿದ್ದೆ.

೧೯೮೪-೮೫ ಇರಬಹುದು. ಹಿರಿಯಕವಿ ಪುತಿನ ಭಾಗವಹಿಸಿದ್ದ ಎಂ‌‌.ಇ. ಕಾಲೇಜಿನ ವಿಚಾರ ಸಂಕಿರಣದಲ್ಲಿ HSV ಅವರು ಮಾತಾಡಿದ್ದರು. ಆಗ ನಾವೆಲ್ಲ ಅದರಲ್ಲಿ ಭಾಗವಹಿಸಿದ್ದೆವು. ಆಗ ಹಿರಿಯ ಕವಿ ಪುತಿನ, ಎಚ್ಚೆಸ್ವಿ ಅವರ ಜೊತೆ ನಾನೊಂದು ಫೋಟೋ ತೆಗೆಸಿಕೊಂಡದ್ದು ಸ್ಮರಣೀಯ.

೧೯೮೬ರಲ್ಲಿ “ಅನ್ವೇಷಣೆ – ಸಂಘರ್ಷ ವಿಚಾರ ವೇದಿಕೆ”ಯನ್ನು ನಾನು, ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಆರಂಭಿಸಿದಾಗ, ಆರ್.ಎಂ.ಹಡಪದರ  “ಕೆನ್ ಕಲಾ ಶಾಲೆ”ಯ ತಿಂಗಳ ಕವಿಗೋಷ್ಠಿಗೆ ಆಗಮಿಸಿ, ಅಧ್ಯಕ್ಷತೆ ವಹಿಸಿ ಕಾವ್ಯದ ಬಗ್ಗೆ ಉತ್ತಮ ಉಪನ್ಯಾಸ ನೀಡಿ ಕಾವ್ಯಕ್ಕೆ ಬೇಕಾದ ಲಯ, ರೂಪಕಶಕ್ತಿ, ಕಾವ್ಯ ಕಟ್ಟುವ ಕಲೆ, ವಸ್ತುವನ್ನು ಬಳಸುವ ವಿನ್ಯಾಸದ ಬಗ್ಗೆ ಮಾತಾಡಿದ್ದು, ಮಾರನೇದಿನ ಮಾಧ್ಯಮಗಳಲ್ಲಿ ವರದಿಯಾಗಿದ್ದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿತ್ತು.

ಕನ್ನಡದ ಪ್ರಯೋಗಶೀಲ ಕವಿ ಸು.ರಂ.ಎಕ್ಕುಂಡಿ ಅವರ ಬಗ್ಗೆ ಎಚ್ಚೆಸ್ವಿ ಅವರಿಗೆ ಅಪಾರ ಗೌರವ. ಅವರು ಉತ್ತರಕನ್ನಡ ಜಿಲ್ಲೆ ಬಿಟ್ಟ ನಂತರ ಬೆಂಗಳೂರಿನಲ್ಲಿ ನೆಲೆಸಿದರು. ಆಗ ನಾನು ಜಿ.ಎನ್.ಮೋಹನ –  ಎಕ್ಕುಂಡಿ ಅವರನ್ನು ಭೇಟಿ ಮಾಡಿದಾಗ, ಮೋಹನ ಸೊಗಸಾದ ಸಂದರ್ಶನ ಮಾಡಿದ. “ಪ್ರೊಮೀಥಿಯಸ್ ಕಣ್ಣಿನ ಬೆಳಕು ನಮ್ಮ ಕಾವ್ಯದ ಉಸಿರಾಗಬೇಕು” ಎಂದು ತಲೆಬರಹ ಕೊಟ್ಟು, ಅದನ್ನು ನಮ್ಮ “ಅನ್ವೇಷಣೆ” ಪತ್ರಿಕೆಯಲ್ಲಿ ಪ್ರಕಟಿಸಿದೆ. ಆ ಸಂಚಿಕೆಯನ್ನು ಬಹು ಸಂತೋಷದಿಂದ ಅದೇ ಕೆನ್ ಕಲಾಶಾಲೆಯಲ್ಲಿ ಬಿಡುಗಡೆ ಮಾಡಿ, ಎಕ್ಕುಂಡಿ ಅವರ ಕಾವ್ಯದ ಬಗ್ಗೆ ಸೋದಾಹರಣವಾಗಿ ಉಪನ್ಯಾಸ ನೀಡಿದ್ದರು.  ವರ್ಷಗಳು ಉರುಳಿದವು. ಎಕ್ಕುಂಡಿ ನಮ್ಮನ್ನಲಿದರು. ಆಗ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಕೊಠಡಿಯಲ್ಲಿ “ಕವಿ ಎಕ್ಕುಂಡಿ ನಮನ” ಕಾರ್ಯಕ್ರಮದಲ್ಲಿ ಕವಿಗೋಷ್ಢಿ ಅಧ್ಯಕ್ಷತೆಯನ್ನು ವಹಿಸಿ, ಮತ್ತೆ ಸು.ರಂ.ಎಕ್ಕುಂಡಿ ಅವರನ್ನು  ಸ್ಮರಿಸಿದ್ದು ನನ್ನ ನೆನಪಿನಾಳದಲ್ಲಿ ಅಚ್ಚಳಿಯದೆ ಉಳಿದಿದೆ.

ನಾನೊಂದು ಖಾಸಗಿ ಸಂಸ್ಥೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದಾಗ ರಾಜ್ಯೋತ್ಸವದಲ್ಲಿ ಕೊಡಮಾಡುವ ಒಂದು ಮೌಲಿಕ ಮೊತ್ತದ ಪ್ರಶಸ್ತಿಗೆ ಅವರನ್ನು ಶಿಫಾರಸ್ಸು ಮಾಡಿ ಫೋನಲ್ಲಿ ಒಪ್ಪಿಸಿದ್ದು ಅಷ್ಟೇ ಅಲ್ಲ, ಅವರನ್ನು ಆ ಸಮಾರಂಭಕ್ಕೆ ಕರೆದೊಯ್ದಿದ್ದೆ. ಆ ಪ್ರಶಸ್ತಿ “ಡಿ.ಎಸ್.ಮ್ಯಾಕ್ಸ್ ಸಾಹಿತ್ಯ ಶ್ರೀ”. ಮುಂದೆ ಆ ಗೌರವ ಕವಿ ಪ್ರೊ.ನಿಸಾರ್, ವಿಚಾರವಾದಿ ಪ್ರೊ. ಬರಗೂರು, ಕವಿ ಬಿ.ಆರ್. ಲಕ್ಷ್ಮಣರಾವ್, ವೈದ್ಯೆ- ಲೇಖಕಿ ಡಾ. ಎಚ್. ಗಿರಿಜಮ್ಮ ಅವರಿಗೂ ಸಂದಿದ್ದು  ಸಂತೋಷ.

ಅವರು ತಮ್ಮ ಹುಟ್ಟೂರು ಹೊದಿಗೆರೆಯಲ್ಲಿನ ಕೃಷಿ ಬಗ್ಗೆ ಮಾತಾಡುತ್ತಿದ್ದರು. ತಮ್ಮ ಮಗನೊಬ್ಬ ಕೃಷಿ ಮಾಡುತ್ತಿದ್ದುದರ ಬಗ್ಗೆ ಹೇಳುತ್ತಿದ್ದು ಆಶ್ಚರ್ಯ ಉಂಟು ಮಾಡಿತ್ತು. ಆ ಸಂದರ್ಭ ಹಳ್ಳಿಯ ಬಾಲ್ಯದ ನೆನಪು ಹಂಚಿಕೊಳ್ಳುತ್ತಿದ್ದರು.

ಇತ್ಯಾದಿ ನೆನಪುಗಳ ಬೆನ್ನಲ್ಲೆ ಅವರ ನಿಧನದ ಸುದ್ದಿ ನನಗೆ ಆಘಾತ ನೀಡಿದೆ. ಅನಾರೋಗ್ಯ ಸ್ಥಿತಿಯನ್ನು ಬಲ್ಲವನಾಗಿ ಅನೇಕ ಸಂದರ್ಭ ಅವರನ್ನು ಭೇಟಿ ಮಾಡಲು ಪ್ರಯತ್ನ ಮಾಡಿದೆ. ಜ್ಞಾನಭಾರತಿಯ ಚಿತ್ರಕೂಟ ಶಾಲೆಯ ಉಪಾಧ್ಯಾಯಿನಿ, ಲೇಖಕಿ ತನ್ನ ಕೆಲವು ವಿದ್ಯಾರ್ಥಿಗಳ ಜೊತೆ ಬಂದು, ಅವರ ಕಾವ್ಯವನ್ನು ಹಾಡಿನ ರೂಪದಲ್ಲಿ ಅವರ ಸಮ್ಮುಖದಲ್ಲಿ ಹಾಡಿಸಲು ಇಷ್ಟಪಟ್ಟಿದ್ದ ಕನಸು ಈಡೇರಲಿಲ್ಲ. ಆಕೆ ನನಗೆ ಮತ್ತೆಮತ್ತೆ HSV ಸಾರ್ ನೋಡೋಣ ಅನ್ನುತ್ತಿದ್ದಳು. ಸಾಕಷ್ಟು ಪ್ರಯತ್ನ ಮಾಡಿ ಒಮ್ಮೆ ಕವಿಗಳ ಜೊತೆಯೂ ಮಾತಾಡಿದೆ. ಆಸ್ಪತ್ರೆ ಓಡಾಟದಲ್ಲಿದ್ದರು. ತೊಂದರೆ ಕೊಡುವುದು ಬೇಡ ಎಂದು ಇದ್ದಲ್ಲೆ ಶುಭವಾಗಲಿ ಸಾರ್ ಎಂದೇಳಿದ್ದೆ.

HSV ಅವರ ಆಪ್ತ ಮಿತ್ರ ಕವಿ ಬಿ.ಆರ್.ಲಕ್ಷ್ಮಣರಾವ್ ಅವರನ್ನು ಭೇಟಿ ಮಾಡಿ ಆಗಾಗ್ಗೆ ಫೋಟೋ ಹಾಕುತ್ತಿದ್ದರು. ಉಪಾಸನಾ ಮೋಹನ್ ಅವರಂತೂ ಅವರ ಬಳಿ ಕೂತು ಅವರ ಸಾಹಿತ್ಯಕ್ಕೆ ನೀಡಿದ ಸಂಗೀತದ ಸುಧೆಯನ್ನು ಅವರಿಗೆ ಉಣಬಡಿಸಿದ ಚಿತ್ರ ಹಂಚಿಕೊಳ್ಳುತ್ತಿದ್ದರು. ಇದೆಲ್ಲ ಕಂಡು ಮನದೊಳಗೆ ಖುಷಿಪಡುತ್ತಿದ್ದೆ.

ಕೊನೆಗೂ HSV ಅವರನ್ನು ಭೇಟಿ ಮಾಡಲಾಗದ  ಶಾಲಾ ಶಿಕ್ಷಕಿಗೂ, ಆಕೆಯ ವಿದ್ಯಾರ್ಥಿಗಳಿಗೂ ಆದ ನಿರಾಶೆ ಅಷ್ಟಿಷ್ಟಲ್ಲ. ಅನಾರೋಗ್ಯದಲ್ಲಿ ಅವರಿಗೆ ತೊಂದರೆ ಆಗುತ್ತೆ ಎಂಬ ಕಾರಣದಿಂದ ಕುಟುಂಬದವರು ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಿಲ್ಲ. ಅವರ ಜೊತೆಯ ಕೊನೆಯ ಮಾತು, ಭೇಟಿಯೂ ಸಾಧ್ಯವಾಗಲಿಲ್ಲ. ಈ ನೋವು ನನ್ನೊಳಗೆ ಉಳಿದಿದೆ.

HSV ಅವರ ಬಾಳಸಂಗಾತಿ ತೀರಿದ ನಂತರ ಮಾನಸಿಕವಾಗಿ ಕುಗ್ಗಿದ್ದರು. ಅವರ ಮಕ್ಕಳು, ಸೊಸೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನು ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡುವಾಗ ಬೈಟ್ಸ್, ಅನಿಸಿಕೆ ಪಡೆಯಲು ಕ್ಯಾಮೆರಾಮನ್ ಸಹಿತ ಅವರ ಮನೆಗೆ ಓಡುತ್ತಿದ್ದೆ. ಅವರು ಮಗನ ಮನೆಯಲ್ಲಿದ್ದಾಗ ಆ ಆತಿಥ್ಯ ಸ್ವೀಕರಿಸಿದ್ದೇನೆ.

ಹೋಗಿ ಬನ್ನಿ ಸಾರ್. ನಿಮ್ಮ ಕಾವ್ಯ, ಭಾವಗೀತೆ, ಗದ್ಯ ಸಾಹಿತ್ಯ, ನಿಮ್ಮ ಮಾನವೀಯತೆ ನಮ್ಮ ಜೊತೆ ಇದೆ. ನಿಮ್ಮ ಜೊತೆ ಕಳೆದ ಅನೇಕ ಘಟನೆಗಳಿವೆ. ಕೊನೆಯದಾಗಿ ನಿಮಗೆ ನನ್ನ ಕುಟುಂಬದ ಭಾವಪೂರ್ಣ ನಮನಗಳು.

– ಆರ್ ಜಿ ಹಳ್ಳಿ ನಾಗರಾಜ, ಹಿರಿಯ ಪತ್ರಕರ್ತರು

Leave a Reply