ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕಕ್ಕೆ ಹೋರಾಟದ ಹಾಡೆಂಬ ಹೊಸ ಕಾವ್ಯ ಪ್ರಕಾರ ಕೊಟ್ಟವರು ಕ್ರಾಂತಿ ಕವಿ ಡಾ. ಸಿದ್ದಲಿಂಗಯ್ಯ ಎಂದು ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಹೇಳಿದರು.
ನಗರದ ಹೊರವಲಯದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ರಂಗವಾಹಿನಿ, ಕರ್ನಾಟಕ ದಲಿತ ಮಹಾಸಭಾ ಹಾಗೂ ಸ್ನಾತಕೋತ್ತರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಸಿದ್ದಲಿಂಗಯ್ಯ ಅವರ ಹೋರಾಟದ ಸಾಂಸ್ಕೃತಿಕ ಕಥನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಡಾ. ಸಿದ್ದಲಿಂಗಯ್ಯ ಅವರು ಕನ್ನಡದ ಕಾವ್ಯ ಮುದಿಯಾಗಿ ಸತ್ತಿತೇನೋ ಅನ್ನುವಷ್ಟರಲ್ಲಿ ಆ ಸಾಹಿತ್ಯಕ್ಕೆ ಹೊಸ ಚೈತನ್ಯವನ್ನು ತುಂಬಿ ನವಮಾರ್ಗವನ್ನು ಕಟ್ಟಿ ತಮ್ಮದೇ ಹೊಸ ಇತಿಹಾಸವನ್ನು ಸೃಷ್ಟಿಸಿ ಮಾನವೀಯ ಮೌಲ್ಯದ ಪ್ರತೀಕವಾಗಿ ತಾವು ಬದುಕಿದ್ದಾಗಲೇ ಕಾವ್ಯವನ್ನು ಜನಪದೀಕರಣಗೊಳಿಸಿದ ಮಹಾನ್ ಕವಿ ಎಂದರು.
ಬೀದಿ ಬದಿಯ ಭಿಕ್ಷುಕರು, ವ್ಯಾಪರಿಗಳು, ಕೂಲಿ ಕಾರ್ಮಿಕರು, ನೊಂದವರು ದಲಿತ ಚಳುವಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಜನಕವಿಯಾಗಿ, ಸಾಮಾನ್ಯ ಜನರ ಸಂಕಟಗಳಿಗೆ ಸ್ಪಂದಿಸಿದ ಸಾಹಿತಿಯಾಗಿ ಡಾ. ಸಿದ್ದಲಿಂಗಯ್ಯ ನಿಲ್ಲುತ್ತಾರೆ ಎಂದರು.
ಪ್ರಭುತ್ವವನ್ನು ದಿಕ್ಕರಿಸಿ ಪ್ರಜಾಪ್ರಭುತ್ವದೆಡೆಗೆ ಅವರ ಲೇಖನಿ ಹರಿದಿರುವುದನ್ನು ಕಾಣಬಹುದು ಅವರ ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಣ್ಣಿನ ಹಾಡು ಇಂತಹ ಕವನ ಸಂಕಲಗಳಲ್ಲಿ ಏಕಲವ್ಯ, ಪಂಚಮ, ಬೆಲ್ಚಿ, ನೆಲಸಮ ಇಂತಹ ನಾಟಕಗಳಲ್ಲಿ ಕಾಣಬಹುದು. ಅವರ ಊರುಕೇರಿ ಆತ್ಮಕಥನದ ಸಂಪುಟಗಳಂತೂ ಕವಿ ಸಿದ್ದಲಿಂಗಯ್ಯ ಅವರ ಕಥನವನ್ನಷ್ಟೇ ಹೇಳದೇ ಅದು ಇಡೀ ದಲಿತ ಸಮುದಾಯದ ಸಾಂಸ್ಕೃತಿಕ ಕಥನವಾಗಿ ತೆರೆದುಕೊಳ್ಳುತ್ತವೆ. ಕಾವ್ಯ, ನಾಟಕ, ಸಂಶೋಧನೆ, ವಿಮರ್ಶೆ, ಆತ್ಮಕಥನ ಈ ಎಲ್ಲಾ ಪ್ರಕಾರಗಳಲ್ಲೂ ಡಾ. ಸಿದ್ದಲಿಂಗಯ್ಯ ಅವರು ತಾವು ಕಂಡುಂಡ ಸಾಂಸ್ಕೃತಿಕ ಪರಂಪರೆಯನ್ನು ಜನಪರವಾದ, ಸಮಾಜಮುಖಿಯಾದ ನೆಲೆಗಳಲ್ಲಿ ಬಿಂಬಿಸಿದ ಮಹಾನ್ ಮಾನವತಾ ಕವಿಯಾಗಿ ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪ್ರೊ. ಕೃಷ್ಣಮೂರ್ತಿ ಹನೂರು, ಸಾಹಿತ್ಯ, ಬಂಡಾಯಗಾರರು ಹಿಂದಿನಿಂದಲೇ ತೊಂದರೆ ಎದುರಿಸುತ್ತಲೆ ಬಂದಿದ್ದಾರೆ. ಸತ್ಯವನ್ನು ಹೇಳುವವರಿಗೆ ಕಷ್ಟ ಕಾದಿದೆ. ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿಯಾದರೂ ಈ ಸಮಾಜ ಸರಿಹೋಗಬಹುದೆಂದು ಯೋಚಿಸಿದರೆ, ಕರಾಳ ಸೂಚನೆಗಳೇ ಕಂಡುಬರುತ್ತಿವೆ. ಸಾಹಿತ್ಯ ಪರಂಪರೆ ಅರಮನೆಯ ಮಾರ್ಗವಾಗಿ ರಾಜಮಾರ್ಗವಾಗಿ, ದೇವಾನುದೇವತೆಗಳ ಮಾರ್ಗವಾಗಿ ಹರಿಯುತ್ತಿದ್ದ ಸಂದರ್ಭದಲ್ಲಿ ಜನಮಾರ್ಗವಾಗಿ ಹರಿದು ಜನರ ಬದುಕಿನ ಪ್ರಜ್ಞೆಯ ಭಾಗವಾಗಿ ಸಾಹಿತ್ಯವನ್ನು ಸೃಷ್ಟಸಿ ಹೊಸಮಾರ್ಗವೊಂದನ್ನು ಸೃಷ್ಟಿಸಿದವರು ಸಿದ್ದಲಿಂಗಯ್ಯನವರು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲದಯ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಆರ್. ನರೇಂದ್ರಕುಮಾರ್ ಮಾತನಾಡಿ, ಡಾ. ಸಿದ್ದಲಿಂಗಯ್ಯ ಅವರ ಹೋರಾಟದ ಹಾಡುಗಳು ದಲಿತ ಚಳುವಳಿಗಾರರ ಸ್ಪೂತಿಯಾಗಿದ್ದು, ಅವರ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ, ಪ್ರೀತಿ-ಪ್ರೇಮಗಳ ನಡುವೆ ಬದುಕಿನ ಗಂಭೀರತೆಯನ್ನು ನೈಜ ಬದುಕಿನ ಸತ್ಯದ ಅನಾವರಣ ಮಾಡುತ್ತವೆ ಎಂದರು.
ಕಾರ್ಯಕ್ರಮದ ಪ್ರಾಸ್ತವಿಕ ಭಾಷಣ ಮಾಡಿದ ಕರ್ನಾಟಕ ದಲಿತ ಮಹಾಸಭಾದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಅವರು, ಡಾ.ಸಿದ್ದಲಿಂಗಯ್ಯ ಅವರು ಸಮಾಜದಲ್ಲಿದ್ದ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆಗಳ ವಿರುದ್ಧ ಸಾಮಾಜಿಕ ಹೋರಾಟ ಹಾಗೂ ಸಾಹಿತ್ಯ ಹೋರಾಟಗಳನ್ನು ಮಾಡಿ ಸಾಮಾನ್ಯರನ್ನು ಜಾಗೃತಗೊಳಿಸಿದ ಸಂತ ಕವಿ. ಇವರ ಜೊತೆಗೆ ಕಿ.ರಂ. ನಾಗರಾಜ, ಅನಂತಮೂರ್ತಿ, ದೇವನೂರ ಮಹಾದೇವ ಅಂತಹವರ ಸಾಹಿತ್ಯ ಕುರಿತ ಅಧ್ಯಯನ, ಸಂಶೋಧನೆ ನಿರಂತರವಾಗಿ ನಡೆದು ಅವರ ವೈಚಾರಿಕತೆಯನ್ನು ಪ್ರತಿ ಓದುಗರಿಗೆ ತಲುಪುವಂತೆ ಮಾಡಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ನಿರ್ದೇಶಕ ಪ್ರೊ. ಆರ್. ಮಹೇಶ್ ವಹಿಸಿದ್ದರು. ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಅವರು ಡಾ. ಸಿದ್ದಲಿಂಗಯ್ಯ ಅವರ ಹೋರಾಟದ ಹಾಡುಗಳನ್ನು ಹಾಡಿ ರಂಜಿಸಿದರು. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರಾದ ಬಸವಣ್ಣಮೂಕಳ್ಳಿ, ಡಾ. ಶಿವರಾಜು, ಮಹೇಶ್ಬಾಬು, ಮಹೇಶ್ ಇತರರು ಹಾಜರಿದ್ದರು.




