ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್

2 hours ago

ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ತವರು ಜಿಲ್ಲೆಯಲ್ಲೇ ನವಜಾತ ಶಿಶುಗಳ ಮಾರಣಹೋಮ ನಡೀತಿದ್ರೂ ನಿಮಗೆ ಕಾಣುತ್ತಿಲ್ಲವೇ?

ಮೈಸೂರಿನ ಐತಿಹಾಸಿಕ ಚೆಲುವಾಂಬ ಆಸ್ಪತ್ರೆಯಲ್ಲಿ ಕೇವಲ 15 ತಿಂಗಳಲ್ಲಿ 421 ಶಿಶುಗಳು ಮತ್ತು 12 ತಾಯಂದಿರು ಸಾವನ್ನಪ್ಪಿರುವುದು @INCKarnataka ಸರ್ಕಾರದ ದುರಾಡಳಿತದಲ್ಲಿ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ.

ಮೈಸೂರು ಮಹಾರಾಜರು ಕಟ್ಟಿಸಿದ ಪವಿತ್ರ ಆಸ್ಪತ್ರೆ ಇಂದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಡ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ, ನವಜಾತ ಶಿಶುಗಳಿಗೆ ಸ್ಮಶಾನವಾಗಿ ಮಾರ್ಪಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಮುಖ್ಯಮಂತ್ರಿ @siddaramaiah ಅವರೇ, ನಿಮ್ಮ ಸ್ವಂತ ಜಿಲ್ಲೆಯಲ್ಲೇ ನವಜಾತ ಶಿಶುಗಳು ಹೀಗೆ ಸರಣಿಯಾಗಿ ಪ್ರಾಣ ಬಿಡುತ್ತಿದ್ದರೆ ನಿಮ್ಮ ಅಂತಃಕರಣ ಎಲ್ಲಿ ಸತ್ತು ಹೋಗಿದೆ?
ಈ ಸಾವಿನ ಸರಣಿಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ನೇರ ಕಾರಣ. ಆಸ್ಪತ್ರೆಯಲ್ಲಿ 6 ಜನ ತಜ್ಞ ವೈದ್ಯರಿರಬೇಕಾದ ಜಾಗದಲ್ಲಿ ಕೇವಲ ಒಬ್ಬರೇ ವೈದ್ಯರಿದ್ದಾರೆ ಎಂದರೆ ರಾಜ್ಯದ ಆರೋಗ್ಯ ವ್ಯವಸ್ಥೆ ಎಂತಹ ದುಸ್ಥಿತಿಯಲ್ಲಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. 96 ನರ್ಸ್‌ಗಳಿರಬೇಕಾದ ಕಡೆ ಕೇವಲ 59 ಮಂದಿ ಇದ್ದಾರೆ. ಬೆಡ್‌ಗಳ ಕೊರತೆ ಮತ್ತು ಎಸ್‌ಎನ್‌ಸಿಯು (SNCU) ಘಟಕಗಳ ಕೊರತೆಯ ಬಗ್ಗೆ ವೈದ್ಯಾಧಿಕಾರಿಗಳು ಪತ್ರ ಬರೆದರೂ ಸ್ಪಂದಿಸದ ನಿಮ್ಮ ಸರ್ಕಾರಕ್ಕೆ, ಬಜೆಟ್‌ನಲ್ಲಿ ಆರೋಗ್ಯಕ್ಕಿಂತ ಭ್ರಷ್ಟಾಚಾರ ಮತ್ತು ಸುಳ್ಳು ಪ್ರಚಾರವೇ ಮುಖ್ಯವಾಗಿದೆಯೇ? ನಿಮ್ಮ ತವರು ಜಿಲ್ಲೆಯಲ್ಲೇ ಸರ್ಕಾರಿ ಆಸ್ಪತ್ರೆಗಳ ಗತಿ ಹೀಗಾದರೆ, ಇನ್ನು ರಾಜ್ಯದ ಉಳಿದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಗತಿ ಏನಾಗಿದೆ ಎನ್ನುವುದನ್ನ ಊಹಿಸಿಕೊಳ್ಳಲೂ ಭಯವಾಗುತ್ತದೆ?

ಮೈಸೂರಿನಲ್ಲಿ ತಮ್ಮ ಪ್ರತಿಮೆ ತಾವೇ ಉದ್ಘಾಟನೆ ಮಾಡುವುದಕ್ಕೆ, ರಸ್ತೆಗಳಿಗೆ ತಮ್ಮ ಹೆಸರು ಇಟ್ಟುಕೊಳ್ಳುವುದಕ್ಕೆ ಇರುವ ಉತ್ಸಾಹ, ಆಸಕ್ತಿ, ಬಡ ಕುಟುಂಬಗಳ ಮಹಿಳೆಯರು, ಶಿಶುಗಳ ಪ್ರಾಣ ಉಳಿಸುವ ಮೂಲಸೌಕರ್ಯ ಒದಗಿಸುವಲ್ಲಿ ಏಕಿಲ್ಲ? ಜಾಹೀರಾತುಗಳಲ್ಲಿ ಗ್ಯಾರೆಂಟಿ ಸರ್ಕಾರ, ನುಡಿದಂತೆ ನಡೆದ ಸರ್ಕಾರ, ಬಡವರ ಪರವಾದ ಸರ್ಕಾರ ಅಂತ ಬಿಂಬಿಸಿಕೊಳ್ಳುವ ನೀವು, ವಾಸ್ತವದಲ್ಲಿ ಸಾವಿನ ಸರಣಿಯಲ್ಲಿ ಕರ್ನಾಟಕವನ್ನು ನಂಬರ್ 1 ಮಾಡುತ್ತಿದ್ದೀರಿ.

ಇನ್ನಾದರೂ ಆಡಳಿತ ಯಂತ್ರವನ್ನು ಎಚ್ಚರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ. ಇಲ್ಲದಿದ್ದರೆ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಶಾಪ ನಿಮ್ಮ ಸರ್ಕಾರವನ್ನು ಸುಟ್ಟು ಭಸ್ಮ ಮಾಡುವುದು ನಿಶ್ಚಿತ.

– ಆರ್ ಅಶೋಕ್, ವಿಧಾನಸಭೆ ವಿಪಕ್ಷ ನಾಯಕ

Leave a Reply