ಕಾಂಗ್ರೆಸ್‌ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ

3 hours ago

ಕಾಂಗ್ರೆಸ್ ಪಕ್ಷ ಮಹಿಳಾ ವಂದನಾ (ಮಹಿಳಾ ಮೀಸಲಾತಿ) ಬಿಲ್ ನ್ನು ವಿರೋಧಿಸುವ ಮೂಲಕ ದೇಶದ ಸಮಗ್ರ ಮಹಿಳಾ ಶಕ್ತಿಗೆ ಅಪಮಾನ ಮಾಡಿದೆ. ಮಹಿಳೆಯರಿಗೆ ಮೀಸಲಾತಿ ನೀಡುವ ನೈಜ ಇಚ್ಛಾಶಕ್ತಿ ಕಾಂಗ್ರೆಸ್‌ಗೆ ಯಾವತ್ತೂ ಇರಲಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಅವರು ಮಾಡುತ್ತಿರುವುದನ್ನೇ ಈಗಲೂ ಮುಂದುವರಿಸಿದ್ದಾರೆ. ಇದರಿಂದ ಅವರಿಗೆ ಮಹಿಳೆಯರ ಶಾಪ ತಟ್ಟುವುದು ಖಚಿತ.

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಸಮಾನವಾಗಿ ಪಾಲ್ಗೊಳ್ಳಬೇಕು ಎನ್ನುವ ಪ್ರಗತಿಪರ ಚಿಂತನೆಗೆ ವಿರುದ್ಧವಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಡೆದುಕೊಂಡಿವೆ. ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗದಿರುವುದನ್ನು ಇಡೀ ದೇಶ ಗಮನಿಸುತ್ತಿದೆ. ಈಗ ಕಾಂಗ್ರೆಸ್ ಸುಳ್ಳು ಸಮರ್ಥನೆ ನೀಡಲು ಪ್ರಯತ್ನಿಸುತ್ತಿದೆ.

2023ರಲ್ಲಿ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿ, ಸುಮಾರು 50% ರಷ್ಟು ಕ್ಷೇತ್ರಗಳನ್ನು ಹೆಚ್ಚಿಸಿ, ಮಹಿಳೆಯರಿಗೆ 33% ಮೀಸಲಾತಿ ನೀಡುವ ಪ್ರಸ್ತಾವನೆ ಇತ್ತು. ಇದನ್ನು 2034ರಿಂದ ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಆದರೆ, ಇದನ್ನು 2029ರಲ್ಲೇ ಜಾರಿಗೆ ತರಬೇಕೆಂಬ ಕಾರಣದಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಸುಮಾರು 50% ಹೆಚ್ಚಿಸುವ ಉದ್ದೇಶ ಇತ್ತು. ಈ ಮಹತ್ವದ ವಿಷಯದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡಲು ಮುಂದಾಗಿದೆ.

ಈ ರಾಜಕೀಯ ****ಟಕ್ಕೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ.

ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂಬ ವಾದವನ್ನು ಕಾಂಗ್ರೆಸ್ ಮಿತ್ರಪಕ್ಷಗಳು ಲೋಕಸಭೆಯಲ್ಲಿ ಮುಂದಿಟ್ಟವು. ಇದಕ್ಕೆ ಪ್ರತಿಯಾಗಿ ಗೃಹ ಸಚಿವ ಅಮಿತ್ ಶಾ ಅವರು ಈಗಿರುವ ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಸುಮಾರು 50% ಹೆಚ್ಚಿಸಲು ಕಾನೂನಿನಲ್ಲಿ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಿದ್ದಾರೆ. ಆದರೂ ವಿಪಕ್ಷಗಳು ಇದನ್ನು ಒಪ್ಪಲಿಲ್ಲ. ಇದರಿಂದ ಕಾಂಗ್ರೆಸ್‌ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

– ಬಸವರಾಜ ಬೊಮ್ಮಾಯಿ, ಸಂಸದ

Leave a Reply