ಮೈಸೂರು: ಡಾ. ಪುಟ್ಟಸಿದ್ದಯ್ಯ ಅವರು ವಯೋಸಹಜ ಖಾಯಿಲೆಯಿಂದ ದಿ: 18-03-2026 ಮಧ್ಯಾಹ್ನ 12.00ಗಂಟೆಯಲ್ಲಿ ನಿಧನರಾದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಡಾ.ಪುಟ್ಟಸಿದ್ದಯ್ಯ ಅವರು ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದಲ್ಲಿ ದಿ:26-10-1936 ರಂದು ಪುಟ್ಟಯ್ಯ ಮತ್ತು ಕೆಂಪಮ್ಮ ಅವರ ಮೂರನೆಯ ಪುತ್ರನಾಗಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು; ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದವರು. ಆನಂತರ ಮೈಸೂರಿನಲ್ಲಿ ಇಂಟರ್ಮೀಡಿಟ್ ಶಿಕ್ಷಣ ಪಡದು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪೂರೈಸಿದರು.
ಸ್ವಲ್ಪಕಾಲ ಬೆಂಗಳೂರಿನ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುವಾಗ ಖ್ಯಾತ ನಟ ರಜನಿಕಾಂತ್ ಇವರ ಸಹಪಾಠಿಯಾಗಿದ್ದರು. ಬಾಲ್ಯದಲ್ಲಿ ಬಡತನ ಕಾರಣಕ್ಕಾಗಿ ಪರ ಊರಿನಲ್ಲಿ ಜೀತಕ್ಕಿದ್ದವರು. ಅದನ್ನು ತೊರೆದು ಶಾಲಾ ಶಿಕ್ಷಣ ಪೂರೈಸಿದವರು.
ಮೊದಲು ವೈದ್ಯಾಧಿಕಾರಿ ಆಗಿ ಶಿವಮೊಗ್ಗ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ (1971-1981) ಸೇವೆ ಸಲ್ಲಿಸಿದವರು. ಆಗ ಪ್ರೊ. ಕೃಷ್ಣಪ್ಪ ಅವರ ಸ್ನೇಹದೊಂದಿಗೆ ದಸಂಸ ಹೋರಾಟಗಳಿಗೆ ಬೆಂಬಲವಾದವರು. ಹಾಸನ ಜಿಲ್ಲೆಯ ಹಳೇಬೀಡು ಮತ್ತು ಅರೆಹಳ್ಳಿಯಲ್ಲಿ ಸೇವೆಸಲ್ಲಿಸಿ (1981-85) ಮೈಸೂರಿನ ಕೆ.ಆರ್. ಆಸ್ಪತ್ರೆ ಹಾಗೂ ಹೆಚ್.ಡಿ.ಕೊಟೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ (1990-97) ಉಪ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆಯಿಂದ ನಿವೃತ್ತರಾಗಿದ್ದರು.
ವೈಚಾರಿಕ ಮನೋಭಾವಗಳನ್ನು ಮೈಗೂಡಿಸಿಕೊಂಡಿದ್ದ ಪುಟ್ಟಸಿದ್ದಯ್ಯ ಸದಾ ಬುದ್ಧ, ಬಸವ, ವಿವೇಕಾನಂದರ ತತ್ವಾದರ್ಶಗಳನ್ನು ಅಕ್ಷರಶಃ ಪಾಲಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ ಕೂಡ ಆಗಿದ್ದರು.
ವೈದ್ಯಕೀಯ ವೃತ್ತಿಯಲ್ಲಿದ್ದಾಗಲೆ ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಪತ್ನಿ ದಿವಂಗತ ರಾಜಮ್ಮ ಅವರ ಪ್ರೇರಣೆಯಿಂದ ಶಾಲೆ, ವಿದ್ಯಾರ್ಥಿನಿಲಯ ಆರಂಭಿಸಿದವರು. ಅದಕ್ಕಾಗಿಯೇ 1991ರಲ್ಲಿ ಬಾಬು ಜಗಜೀವನರಾಮ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ತೆರೆದು ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸಾಯುವ ತನಕವೂ ಸೇವೆಸಲ್ಲಿಸಿದ್ದಾರೆ. ಅದರಡಿ ಪೂರ್ವಪ್ರಾಥಮಿಕ ಶಾಲೆ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಸಂಸ್ಕೃತ ಪಾಠ ಶಾಲೆ ಹಾಗೂ ವಿದ್ಯಾರ್ಥಿನಿಲಯ ನಿರ್ವಹಿಸಲಾಗುತ್ತಿದೆ. ಆನೇಕ ಆರೋಪ ಮತ್ತು ಅವಮಾನಗಳನ್ನು ನುಂಗುತ್ತಲೇ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾದವರು.
ತಮಗಿದ್ದ ಸಂಧಿವಾತ ರೋಗವನ್ನು ಲೆಕ್ಕಿಸದೆ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ಜನರಿಗೆ ಆರೋಗ್ಯ ಮತ್ತು ಶಿಕ್ಷಣಗಳ ಬಗ್ಗೆ ಅರಿವು ನೀಡಿದವರು. ಡಾ.ಟಿ.ವೈ ಭೂತಯ್ಯ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಭಾರತದಲ್ಲಿ ಒಳ ಮೀಸಲಾತಿ ಹೋರಾಟದಲ್ಲಿ ಸಕ್ರೀಯವಾಗಿ ದುಡಿದವರು. ನೇರ ನಡೆ, ನುಡಿಗಳಿಗೆ ಹೆಸರಾದವರು. ಅಪಾರ ಸ್ನೇಹಿತರನ್ನು ಸಂಪಾದಿಸಿದ್ದವರು. ದಸಂಸ ಮತ್ತು ಪ್ರಗತಿಪರ ಹೋರಾಟಗಳಲ್ಲಿ ದುಡಿದವರು.
ಡಾ.ಪುಟ್ಟಸಿದ್ದಯ್ಯ ಅವರ ಬಹುಮುಖಿ ಸೇವೆಗಳನ್ನು ಗುರುತಿಸಿ ಸರ್ಕಾರ ಮತ್ತು ಸ್ವಯಂ ಸೇವಾ ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ನೀಡಿವೆ:
1. ಉತ್ತಮ ವೈದ್ಯಕೀಯ ಸೇವಾ ಪ್ರಶಸ್ತಿ ( 1982-83)
2. ಶೈಕ್ಷಣಿಕ ಸೇವಾ ಪ್ರಶಸ್ತಿ (2007), ರಾಷ್ಟ್ರೀಯ ವಿಕಾಸ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಸನ ಜಿಲ್ಲೆ.
3. “ ಜಾಂಬವ ಶ್ರೀ ಪ್ರಶಸ್ತಿ -2005, ಆದಿ ಜಾಂಬವ ವಿಚಾರ ವೇದಿಕೆ, ಬೆಂಗಳೂರು
4. “ ದಲಿತ ಶ್ರೀ ಪ್ರಶಸ್ತಿ(2012), ಕರ್ನಾಟಕ ದಲಿತ ಜ್ಞಾನ ಭಾರತಿ, ಬೆಂಗಳೂರು .
5. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2020, ಶೈಕ್ಷಣಿಕ ಕ್ಷೇತ್ರ
ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಮೈಸೂರಿನ ರಾಜೀವನಗರದಲ್ಲಿರುವ ಬಾಬು ಜಗಜೀವನ ರಾಮ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಇಡಲಾಗಿದೆ. ಅಂತಿಮ ಸಂಸ್ಕಾರವನ್ನು ಕೋಟೆಹುಂಡಿಯ ಸ್ವಜಮೀನಿನಲ್ಲಿ ದಿ: 19-03-2026ರ 11.30 ಗಂಟೆ ತರುವಾಯ ನೇರವೇರಿಸಲಾಗುವುದೆಂದು ತೀರ್ಮಾನಿಸಲಾಗಿದೆ.
ದೂರವಾಣಿ: 8722691411, 8217366957




