ಕಾಡುವ ಕಿರಂ – 2023: ಹಲವು ಕವಿ ಮನಸುಗಳ ಕಾವ್ಯ ವಾಚನ ವೇದಿಕೆಯ ಮೆರುಗನ್ನು ಹೆಚ್ಚಿಸಿತು

3 years ago

#KaduvaKiram #Poetry #recital #poet #minds #graced #stage #anusuyayatheesh

‘ಕಾಡುವ ಕಿರಂ’ ಫೇಸ್ಬುಕ್ ಬಳಗದಲ್ಲಿ ಕೊರೋನಾ ಕಾಲದಲ್ಲಿ ನೋಡಿದ ‘ಅಹೋರಾತ್ರಿ ಕಾವ್ಯವಾಚನ’ ಹಾಗೂ ಡಾ.ಬೇಲೂರು ರಘುನಂದನ್ ಅವರು ನಡೆಸಿದ ಕಿರಂ ಅಹೋರಾತ್ರಿ ಕಾವ್ಯ ವಾಚನ ಕಾರ್ಯಕ್ರಮ ಮತ್ತು ಆ ಪುಸ್ತಕ ಕುರಿತಂತೆ ಡಾ. ರಾಜಶೇಖರ್ ಮಠಪತಿ ಅವರ ‘ಕಡಲಾಯಿತು ಕನ್ನಡ’ ಕೃತಿಯಲ್ಲಿ ನಾನು ಓದಿದ ‘ತುಮುಲಗಳಿಗೆ ತುಟಿಯಾಗಿ ಕಿರಂ ಹೊಸ ಕವಿತೆ’ ಎಂಬ ಲೇಖನ ಎರಡು ಕಿರಂ ಕಾವ್ಯ ಸ್ಮರಣೆಯ ಭಾಗವಾಗಿ ಬಹಳ ಗಮನ ಸೆಳೆದವು.

ಕಿರಂ ಎಂದೇ ಖ್ಯಾತ ನಾಮರಾದ ಕಿತ್ತಾನೆ ರಂಗಣ್ಣ ನಾಗರಾಜ್ ನಾಡು ಕಂಡ ಪ್ರತಿಭಾವಂತ ಲೇಖಕ, ವಿಮರ್ಶಕ, ಚಿಂತಕ, ಪ್ರಾಧ್ಯಾಪಕ ಹಾಗೂ ವಿದ್ವಾಂಸರು. ಕಿರಂ ಅವರಿಗೆ ಕಾವ್ಯ ಆಸಕ್ತಿಯಷ್ಟೇ ಅಲ್ಲದೆ ಬದುಕು ಕೂಡ ಆಗಿತ್ತು. ನಾಡಿನಾದ್ಯಂತ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದ ಅವರು ತಮ್ಮ ಉಪನ್ಯಾಸಗಳ ಮೂಲಕ ಕಾವ್ಯಾಸಕ್ತರ ಗಮನ ಸೆಳೆದವರು. ನಾಡಿನ ಅನೇಕ ಯುವಕರ ಬರಹಕ್ಕೆ ಶಕ್ತಿ ತುಂಬಿದವರು. ಇದೀಗ ‘ಕಾಡುವ ಕಿರಂ – 2023’ ಕಾರ್ಯಕ್ರಮದ ದಶಮಾನೋತ್ಸವದ ಸಂಭ್ರಮಾಚರಣೆಯು ಯುವ ಮತ್ತು ಉತ್ಸಾಹಿ ಕವಿಗಳಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯ ಕೀರ್ತಿ ಅವರ ಸಾರಥ್ಯದಲ್ಲಿ ಆಗಸ್ಟ್ 7 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಅಹೋರಾತ್ರಿ ಯಶಸ್ವಿಯಾಗಿ ಜರುಗಿತು.

ಸುಮಾರು 3 ತಲೆಮಾರುಗಳ ಕಾವ್ಯಾಸಕ್ತರಿಂದ ನಡೆದುಕೊಂಡು ಬಂದಿದ್ದು ಅದರಂತೆ ಇದೀಗ ಕರುನಾಡಿನ ವಿವಿಧ ಜಿಲ್ಲೆಗಳ ಕವಿಕಾವ್ಯ ಸಮಾಗಮ ನಡೆಯಿತು. ಕಿರಂ ಎಂಬ ಕಾವ್ಯ ಮಾಂತ್ರಿಕನ ಚಹರೆಗಳನ್ನು ಮುಂದಿನ ತಲೆಮಾರುಗಳಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಇದೊಂದು ಅಭಿನಂದನಾರ್ಹ ಕಾರ್ಯಕ್ರಮವಾಗಿದ್ದು ಶ್ರೀ ಅಗ್ರಹಾರ ಕೃಷ್ಣಮೂರ್ತಿ ಅವರಿಂದ ಉದ್ಘಾಟನೆಗೊಂಡು ಶ್ರೀ ಎಂ.ಎಸ್ ಮೂರ್ತಿ ಅವರಿಂದ ‘ಕಿರಂ ಹೊಸ ಕವಿತೆ – 2023’ ಪುಸ್ತಕ ಪರಿಚಯವಾಯಿತು. ಅಲ್ಲಿರುವ ಸುಮಾರು ನೂರು ಜನ ಕವಿಗಳ ಕಾವ್ಯಗಳ ಒಳ ಮತ್ತು ಹೊರಗುಗಳನ್ನು, ಅಂತಃಸತ್ವವನ್ನು, ಒಳನೋಟಗಳನ್ನು ತೆರೆದಿಟ್ಟರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರೊ. ನರೇಂದ್ರ ನಾಯಕ್, ಸಿ.ಎಸ್ ನಿರ್ಮಲಾ ಕುಮಾರಿ, ಸುಬ್ಬು ಹೊಲೆಯಾರ್, ಆರ್.ಜಿ. ಹಳ್ಳಿ ನಾಗರಾಜು, ನಾಗತಿಹಳ್ಳಿ ರಮೇಶ್, ಡಾ.ನಾಗೇಶ್ ದಸೂಡಿ ಅವರುಗಳಿಗೆ ಕಿ.ರಂ ನಾಗರಾಜ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹಲವು ಕವಿ ಮನಸುಗಳ ಕಾವ್ಯ ವಾಚನ ವೇದಿಕೆಯ ಮೆರುಗನ್ನು ಹೆಚ್ಚಿಸಿತ್ತು. ತಲಾ 20 ರಂತೆ 5 ಗೋಷ್ಠಿಗಳಲ್ಲಿ ನಡೆದ ಕಾವ್ಯಾನುಸಂಧಾನವನ್ನು ಶ್ರೀ ಮುಕುಂದ ರಾಜ್, ಡಾ.ಟಿ.ಯಲ್ಲಪ್ಪ, ಡಾ.ಗೀತ ವಸಂತ, ಡಾ.ಎಚ್.ಎಸ್. ಸತ್ಯನಾರಾಯಣ ಹಾಗೂ ಶ್ರೀದೇವಿ ಕೆರೆಮನೆ ಅವರುಗಳು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಇಲ್ಲಿ ಕವಿಗಳ ಕಾವ್ಯದ ಅಂತರಾಳವನ್ನು ತೆರೆದಿಡುವ ಜೊತೆಗೆ ಕಾವ್ಯದ ರಚನೆ, ಆಶಯಗಳನ್ನು ಕುರಿತಂತೆ ವಿಸ್ತೃತವಾಗಿ ಚರ್ಚಿಸಲಾಯಿತು. ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಕಿರಂ ಅವರೊಂದಿಗಿನ ಒಡನಾಟ, ಅವರ ಕಾವ್ಯ ಕುರಿತು ಚರ್ಚೆ, ಯುವ ಕವಿಗಳಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹ ಮುಂತಾದ ಹತ್ತು ಹಲವು ವಿಚಾರಗಳನ್ನು ಕುರಿತು ಚಿಂತಕರಾದ ಶ್ರೀ ಮುಕುಂದ ರಾಜ್, ವಿಮರ್ಶಕರಾದ ಡಾ. ಎಚ್.ಎಸ್. ಸತ್ಯ ನಾರಾಯಣ್, ಗೀತಾ ವಸಂತ, ಡಾ. ಎಚ್ ಎಲ್ ಪುಷ್ಪ ಸೇರಿದಂತೆ ವೇದಿಕೆಯಲ್ಲಿದ್ದ ಬಹಳಷ್ಟು ಜನರು ತಮ್ಮ ಅನುಭವಗಳನ್ನು, ಕಿರಂ ಅವರೊಂದಿಗಿನ ಇವರ ಒಡನಾಟವನ್ನು ತೆರೆದಿಡುತ್ತಾ ಕಿರಂ ಎಂಬ ಅವಧೂತನನ್ನು ಪರಿಚಯಿಸಿದರು.

ಡಾ. ಬೇಲೂರು ರಘುನಂದನ್ ಅವರಿಂದ ಪ್ರಾರಂಭವಾದ ಕಾವ್ಯವಾಚನ ವಾಸುದೇವ ನಾಡಿಗ್, ಸಂಧ್ಯಾರಾಣಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಕವಿ ಮನಸುಗಳ ಸೊಗಸಾದ ಅಭಿವ್ಯಕ್ತಿಯೊಂದಿಗೆ ಸುಂದರವಾಗಿ ಮುಕ್ತಾಯವಾಯಿತು.

ಚಮ್ಮಾರನ ಚಾಲೂಕಿ ಹೆಂಡತಿ ನಾಟಕ ಪ್ರದರ್ಶನ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು. ನಿದ್ರಾ ದೇವಿಯ ಆಗಮನದ ಸಮಯವಾದ್ದರಿಂದ ಎಲ್ಲರ ತೂಕಡಿಕೆಯನ್ನು ಕಳೆಯಲು ಆಗಾಗ ಮೂಡಿಬಂದ ಜನಪದ ಗಾಯನ ಮತ್ತು ರೇಖಾಚಿತ್ರಗಳ ರಚನೆ ಸಭಾಸದರ ಮನವನ್ನು ಮುದಗೊಳಿಸಿತು.

ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಇತರರ ಕವಿತೆಗಳಿಗೆ ಕಿವಿಯಾಗಿ, ನನ್ನದೇ ಕವಿತೆಗೆ ದನಿಯಾಗಿದ್ದರ ಜೊತೆಗೆ ನಾಡಿನ ಹಿರಿಕಿರಿ ಕವಿಗಳ ಭೇಟಿ ಮಾತುಕತೆ ಬಹಳಷ್ಟು ಖುಷಿ ನೀಡಿತು. ಇಂತಹ ಅದ್ಭುತ ಕಾರ್ಯಕ್ರಮ ಒಂದನ್ನ ಆಯೋಜಿಸಿ ಅದರ ಯಶಸ್ವಿಗೆ ಶ್ರಮಿಸಿದಂತಹ ಕಿರಂ ಬಳಗಕ್ಕೆ ಹೃತ್ಪೂರ್ವಕವಾದ ಶುಭಾಶಯಗಳು ಹಾಗೂ ಅಭಿನಂದನೆಗಳು.

ನನಗೆ ಅವಕಾಶ ನೀಡಿದ ಶಂಕರ್ ಸಿಹಿಮೊಗ್ಗೆ ಹಾಗೂ ಸೂರ್ಯ ಕೀರ್ತಿ ಅವರಿಗೆ ಬಹಳಷ್ಟು ಧನ್ಯವಾದಗಳು

  • ಅನುಸೂಯ ಯತೀಶ್

Leave a Reply