ಮುದ್ರೆಯೊಳಗೆ ನಿದ್ರಿಸುವ ಗಾಂಧಿ

2 years ago

ಮುದ್ರೆಯೊಳಗೆ ನಿದ್ರಿಸುವ ಗಾಂಧಿ

ನಾನು ನನ್ನುಡುಗಿಗೆ  ಕಾಣಿಕೆಯಾಗಿ ಪುಟ್ಟ
ಟೈಟಾನಿಕ್ ಹಡಗೊಂದ ಕೊಡಿಸಬೇಕೆಂದಾಗ
ಜೇಬಲ್ಲಿನ ಹತ್ತರ ನೋಟೊಳಗಿನ ಗಾಂಧಿ ನಗುತ್ತಾನೆ!

ಗಾಂಧಿ,
ನೀ ನಡೆಯುವಾಗ ದೂಳು ಮೆತ್ತುವ
ಕಾಲುದಾರಿಗಳು ಈಗ ಡಾಂಬರು ಹೊದಿಕೆಹೊತ್ತ
ಟೈರುದಾರಿಗಳಾಗಿ ಬೂಟಿನ ಸದ್ದಿಗೆ
ಹೈ ಹೀಲ್ಡ್ ಚಪ್ಪಲಿಗೆ ಟಕ್ ಟಕ್ ಧನಿಯಾಗಿ
ಅಪ್ಪಚ್ಚಿಯಾದ ಹೆಣದ ರಕ್ತ ಹೀರುತ್ತಿವೆ!

ಈ ರಸ್ತೆಯ ಮದ್ಯೆ ನಿರಂತರವಾಗಿ ನಿಂತ ನಿನ್ನ
ಕಾಲುಗಳು ಸೋತಿರಬೇಕು..
ನೀ ಕೂತು ಮಿರಮಿಸಲು ಕುರ್ಚಿ
ಹಾಕುವ ಕರುಣೆ ಇಲ್ಲಾರಿಗೂ ಇಲ್ಲ..
ಈ ದಾರಿಯ ಹೊಗೆ ಧೂಳು ಹೀರಿ ನಿನ್ನ
ಆರೋಗ್ಯ ಕೆಟ್ಟಿರಬೇಕು..
ನಿನ್ನ ಪ್ರತಿಮೆಗಳ ಆಸ್ಪತ್ರೆಗೆ ಸೇರಿಸಿ
ಚಿಕಿತ್ಸೆ ಕೊಡಿಸುವವರೂ ಇಲ್ಲ..

ಆದರೂ ನೀ ರಸ್ತೆಯ  ಮದ್ಯೆ ಟ್ರಾಫಿಕ್ ಫೋಲಿಸ್ ಆಗಿ
ಕಾರ್ಯನಿರತ!

ಮೋಸ ಭ್ರಷ್ಟಾಚಾರ ಹಿಂಸೆಗೆ ಭಾಷ್ಯ ಬರೆಯುವ
ನಿನ್ನ ಮುಖ ಮುದ್ರೆಯ ನೋಟುಗಳು..
ಕಚೇರಿಯೊಳಗಿನ ಕರ್ಮಕಾಂಡವ ಕಣ್ಣಾರೆ ಕಂಡು
ಕಾಣ್ಣೀರಿಡುವ ನಿನ್ನ ಫೋಟೋಗಳು
ನೀನು ನೋಡಬಾರದ್ದನ್ನು ನಿನ್ನ ಕಣ್ಣೆದುರು
ಚುಚ್ಚಿ ಚುಚ್ಚಿ..ತೋರಿಸಿ
ಗಹಗಹಿಸಿ ನಗುವ ನಾವುಗಳು
ಗೋಡ್ಸೆಯ ಗೂಡೊಳಗೆ ಕಾವು ಪಡೆಯುವ ಮೊಟ್ಟೆಗಳು!

ನಿನ್ನ ಸತ್ಯಾಗ್ರಹದ ಬುನಾದಿಯ ಮೇಲೆ ಅಸತ್ಯದ
ಬಣ್ಣದ ಮನೆಗಳು ರಾರಾಜಿಸುತ್ತಿವೆ
ಅಹಿಂಸೆಯ ಹಾಲಿನ ಬಟ್ಟಲೊಳಗೆ
ರಕ್ತ ಹೆಪ್ಪುಗಟ್ಟುತ್ತಿದೆ..
ಇಂಡಿಯಾದ ಇಂದ್ರಿಯಗಳು
ನಿಗ್ರಹ ಕಳೆದುಕೊಂಡಿವೆ
ಪಠ್ಯಪುಸ್ತಕದೊಳಗೆ ಗಾಂಧಿ ತಾತನಾಗಿ
ಮಕ್ಕಳೊಂದಿಗೆ ಆಟವಾಡುತ್ತಲೇ ಇರು,
ಇತ್ತ ತಲೆ ಹಾಕಲೇಬೇಡ

ಮುದ್ರೆಯೊಳಗೆ ನಿದ್ರಿಸುವ ಗಾಂಧಿಯ
ಎಲ್ಲೆಂದರಲ್ಲಿ ಗುದ್ದಿ ಗುದ್ದಿ ಎಬ್ಬಿಸಿ ಬಿಡುತ್ತಾರೆ,
ಗಲಿಬಿಲಿಗೊಂಡ ತಾತ
ತನ್ನ ಬಾಳೀಸು ಮುಟ್ಟಿನೋಡಿ
ಹೊಡೆದಿಲ್ಲ ಎಂದು ನಿಟ್ಟುಸಿರು ಬಿಟ್ಟು
ಮತ್ತೆ ಮುದ್ರೆಯೊಳಗೆ ನಿದ್ರೆಗೆ ಜಾರುತ್ತಾನೆ!

– ಅರುಣ್ ಜೋಳದಕೂಡ್ಲಿಗಿ

Leave a Reply