ಅಭಿವೃದ್ಧಿಯ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿ
ಧಾರವಾಡ: ಗಾನವಿದೂಷಿ ಗಂಗೂಬಾಯಿ ಹಾನಗಲ್ ಅವರ ಜನ್ಮಸ್ಥಳವಾದ ನಗರದ ಹೊಸಯಲ್ಲಾಪೂರ ಓಣಿಯ ಗಂಗೋತ್ರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭೇಟಿ ನೀಡಿ, ಗಂಗೂಬಾಯಿ ಹಾನಗಲ್ ಅವರ ಹುಟ್ಟಿದ ಮನೆ ಅಭಿವೃದ್ಧಿಪಡಿಸುವ ಕುರಿತು ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಸಂಗೀತ ಕಲಾವಿದರೊಂದಿಗೆ ಸ್ಥಳದಲ್ಲಿ ಚರ್ಚಿಸಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ನಂತರ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರಿ, ಸಂಗೀತ ಸುಧೆ ಪದ್ಮವಿಭೂಷಣ ಪುರಸ್ಕೃತ ದಿ. ಗಂಗೂಬಾಯಿ ಹಾನಗಲ್ ಅವರನ್ನು ಸ್ಮರಣೀಯಗೊಳಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ವೃತ್ತಿ ರಂಗಭೂಮಿಯಲ್ಲಿ ಧಾರವಾಡದ ಪ್ರಸಿದ್ಧಿಯನ್ನು ಅನೇಕ ಕಲಾವಿದರು ದಾಖಲಿಸಿದ್ದಾರೆ. ಅವರ ಕೊಡುಗೆ ಮತ್ತು ಸಾಧನೆಯನ್ನು ನಾವು ಸ್ಮರಿಸುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಮುಂದುವರೆಸಲು ಅಗತ್ಯ ಸೌಲಭ್ಯ, ಅವಕಾಶಗಳನ್ನು ಮಾಡಿಕೊಡುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಇತರ ಉದ್ಯಮಗಳ ಆರ್ಥಿಕ ನೆರವಿನಲ್ಲಿ ಗಂಗೋತ್ರಿಯನ್ನು ಅಭಿವೃದ್ಧಿಪಡಿಸಿ, ಸಂಗೀತ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡಲು ಜಿಲ್ಲಾಡಳಿತದಿಂದ ಒಂದು ಮುನ್ನೋಟದ ರೂಪರೇಷಗಳನ್ನು ಸಿದ್ಧಪಡಿಸಲಾಗುವುದು ಎಂದರು.
ಈಗಿರುವ ಗಂಗೋತ್ರಿಯ ಜಾಗ ಚಿಕ್ಕದಾಗಿರುವದರಿಂದ ಅಕ್ಕಪಕ್ಕದ ಖಾಲಿ ಜಾಗೆಗಳನ್ನು ಪಡೆಯುವ ಕುರಿತು ಅವುಗಳ ಮಾಲೀಕರೊಂದಿಗೆ ಸಂಪರ್ಕಿಸಲಾಗುವುದು. ಒಪ್ಪಿದಲ್ಲಿ ಆ ಜಾಗಗಳನ್ನು ಸಹ ಉಪಯೋಗಿಸಿಕೊಂಡು ಉತ್ತಮವಾದ ಸಂಗೀತ-ಸಾಂಸ್ಕೃತಿಕ ಭವನ ಹಾಗೂ ನಿರಂತರವಾಗಿ ಸಂಗೀತ ಪಾಠಶಾಲೆಗಳು ನಡೆಯುವಂತೆ ಮಾಡಲಾಗುವುದು. ಸ್ಥಳೀಯ ಕಲಾವಿದರ, ಸಂಗೀತಗಾರರ ಸಹಕಾರದಿಂದ ನಿರಂತರವಾಗಿ ಸಂಗೀತ ಸಭೆಗಳು ಜರಗುವಂತೆ ಯೋಜಿಸಲಾಗುವುದು. ಹಾಗೂ ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ ಅವರ ಕಿರಾಣಾ ಘರನಾ ಸಂಗೀತವನ್ನು ಮುಂದುವರೆಸುವ ಆಸಕ್ತರಿಗೆ ಪ್ರೋತ್ಸಾಹಿಸಲಾಗುವುದು ಎಂದರು.
ಗಂಗೋತ್ರಿಯನ್ನು ಉಪಯುಕ್ತವಾಗಿ ಮಾಡಲು ಕಲಾವಿದರ, ಸಂಗೀತಗಾರರ ಹಾಗೂ ಸ್ಥಳೀಯರ, ಜನಪ್ರತಿನಿಧಿಗಳ ಸಲಹೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಬೇಕು. ಗಂಗೋತ್ರಿಯನ್ನು ಸ್ಮಾರಕವಾಗಿಸಲು ಅಗತ್ಯ ನೀಲನಕ್ಷೆಯನ್ನು ಅಂದಾಜು ವೆಚ್ಚದ ಪಟ್ಟಿಯೊಂದಿಗೆ ಸರ್ಕಾರಕ್ಕೆ ಹಾಗೂ ಸಿಎಸ್‍ಆರ್ ನೆರವಿಗಾಗಿ ಸಲ್ಲಿಸಲು ಅಗತ್ಯ ಪ್ರಸ್ತಾವನೆಯನ್ನು ತಯಾರಿಸಿ, ಒಂದು ವಾರದಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಅವರು ಸೂಚಿಸಿದರು.
ಇದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಪವಿತ್ರ ತಾಣವಾಗಬೇಕು. ಆದ್ದರಿಂದ ಸರ್ಕಾರದ ಸಹಕಾರದೊಂದಿಗೆ ಈ ಮನೆಯನ್ನು ಪುನರ್‍ನಿರ್ಮಿಸಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಶಂಕರ ಶಳಕೆ, ಹಿರಿಯ ನ್ಯಾಯವಾದಿ ಅರುಣ ಚರಂತಿಮಠ, ಕಲಾವಿದ ಪ್ರಸನ್ನ ಗುಡಿ, ಡಾ. ಶಶೀಧರ ನರೇಂದ್ರ, ರಾಘವೇಂದ್ರ ಗುಡಿ, ಸಂಗೀತ ಕಲಾವಿದೆ ಭಾರ್ಗವಿ ಗುಡಿ, ವೀರಣ್ಣ ಪತ್ತಾರ, ಉದಯ ಯಂಡಿಗೇರಿ, ಅಣ್ಣಪ್ಪ ಪಾಲನಕರ, ಸಮೀರ ಜೋಶಿ, ಸಂಜೀವ ಲಕ್ಕಮನಹಳ್ಳಿ ಸೇರಿದಂತೆ ಗಂಗೂಬಾಯಿ ಹಾನಗಲ್ ಅವರ ಅನುಯಾಯಿಗಳು, ಅಭಿಮಾನಿಗಳು, ಸಂಗೀತ ಸೇವಕರು, ಸಂಗೀತಾಸಕ್ತರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.









