ಗುಂಡ್ಲುಪೇಟೆ: ಸ್ವಾತಂತ್ರ್ಯ ಚಳವಳಿ ಇತಿಹಾಸ ಸೇರಿರುವ ಚಳವಳಿ ಮಾತ್ರವಲ್ಲ, ಈ ದೇಶದ ಅಸ್ತಿತ್ವ ಇರುವ ಪರ್ಯಂತ ಅದನ್ನು ನೆನಪಿಸಿಕೊಂಡು ಅದರ ವಿವಿಧ ಆಯಾಮಗಳು ಪರಿಶೀಲನೆಗೆ ಒಳಪಡುತ್ತಿರಬೇಕು. ಈ ದೃಷ್ಟಿಯಿಂದ ೨೫ ವರ್ಷಗಳ ಹಿಂದೆ ಪ್ರಕಟವಾದ ಹೆಚ್.ನಾಗವೇಣಿಯವರ ಗಾಂಧಿ ಬಂದ ಈ ತರಹದ ಒಂದು ಅಧ್ಭುತ ಕೃತಿ ಎಂದು ಹಿರಿಯ ಸಾಹಿತಿ ಕೆ.ವೆಂಕಟರಾಜು ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯ ಎಂಬ ವಿಷಯ ಕುರಿತು ಮಾತನಾಡಿದರು.
ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ಪ್ರಪಂಚದಲ್ಲಿಯೇ ವಿಶಿಷ್ಠವಾದುದು. ನಮ್ಮ ಸ್ವಾತಂತ್ರ್ಯ ಚಳವಳಿ ಏಷ್ಯಾ ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳ ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿಮತ್ತು ಪ್ರೇರಣೆ ಒದಗಿಸಿದೆ. ಶಸ್ತ್ರಕ್ರಾಂತಿ ನಡೆಸದೇ ಸತ್ಯ ಮತ್ತು ಅಹಿಂಸೆಯ ಅಸ್ತ್ರ ಬಳಸಿ ಜಗತ್ತೇ ಬೆರಗಾಗುವ ರೀತಿಯಲ್ಲಿ ನಾವು ಸ್ವಾತಂತ್ರ್ಯ ಪಡೆದೆವು ಎಂದರು.

ಗಾಂಧಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಕೇವಲ ಬ್ರಿಟಿಷರಿಂದ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ, ಹೊಸ ನಾಗರೀಕತೆ ಮತ್ತು ಸಂಸ್ಕೃತಿಯ ನಿರ್ಮಾಣ, ಹೊಸ ಆಲೋಚನೆಯೊಂದಿಗೆ ಬದುಕನ್ನು ರೂಪಿಸುವುದು ಗುರಿಯಾಗಿತ್ತು. ಅಸ್ಪೃಶ್ಯತಾ ನಿವಾರಣೆ, ಸರ್ವಧರ್ಮಸಮ ಭಾವ, ಖಾದಿ ಮತ್ತು ಗ್ರಾಮೀಣ ಗುಡಿ ಕೈಗಾರಿಕೆ ಸರಳ ಬದುಕು, ಜನಜೀವನದ ಪ್ರತಿ ಅಂಶದಲ್ಲಿಯೂ ವೈಜ್ಞಾನಿಕತೆ ಇತ್ಯಾದಿ ಮೌಲ್ಯಗಳನ್ನು ಮುಂದಿಟ್ಟಿತು. ವಾಟ್ಸಾಪ್ ವಿಶ್ವವಿದ್ಯಾನಿಲಯಗಳ ಸುಳ್ಳು ಪ್ರಚಾರಗಳಿಗೆ ವಿದ್ಯಾರ್ಥಿಗಳು ಕಿವಿಗೊಡದೇ ಸತ್ಯ ಅರಿಯುವ ಪ್ರಯತ್ನ ಮಾಡಬೇಕು ಎಂದರು.
ಕನ್ನಡ ಸಾಹಿತಿಗಳು ಕೇವಲ ಹೋರಾಟದ ಚಿತ್ರಣ ಮಾತ್ರವಲ್ಲ, ಈ ಮೌಲ್ಯಗಳ ಪರಿಶೀಲನೆಯನ್ನು ಮಾಡಿದ್ದಾರೆ. ಬೇಂದ್ರೆಯವರು ತಮ್ಮ ಬರವಣಿಗೆಯ ಕಾರಣಕ್ಕೆ ಜೈಲಿಗೆ ಹೋದರು. ಕುವೆಂಪು ರವರ ಎರಡು ಸಂಕಲನ – ಅಗ್ನಿಹಂಸ ಮತ್ರು ಕೋಗಿಲೆ ಮತ್ತು ಸೋವಿಯಟ್ ರಷ್ಯಾ – ದ ಅನೇಕ ಕವನಗಳು ಇದೇ ವಸ್ತು ಹೊಂದಿವೆ. ಸ್ವತಂತ್ರ ಭಾರತ ಮತ್ತು ಸಂಯುಕ್ತ ಕರ್ನಾಟಕ ನಮ್ಮ ಗುರಿಯಾಗಿತ್ತು. ಕುವೆಂಪು ಅವರ ಕವನಗಳಲ್ಲಿ ವೈಜ್ಞಾನಿತೆಯ ಮೂರನೆ ಅಯಾಮವೂ ಇದೆ. ಪುತಿನ, ರಾಜರತ್ನಮ್, ಗೊರೂರು, ಬಸವರಾಜ ಕಟ್ಟೀಮನಿ, ನಿರಂಜನ ಅನಕೃ ಅವರ ಬರಹಗಳಲ್ಲಿ ಇವುಗಳನ್ನು ಕಾಣಬಹುದು. ಪಂಜೆ ಮಂಗೇಶರಾಯರ ನಾಗರ ಹಾವು ಪದ್ಯ ಮಕ್ಕಳಪದ್ಯ ಎಂದು ಬಿಂಬಿತವಾಗಿದ್ದರೂ ಅದು ಮಾರ್ಮಿಕವಾಗಿ ನಮ್ಮನ್ನು ಆಳುವವರನ್ನು ಹಂಗಿಸುತ್ತಿತ್ತು ಎಂದರು.
ಖ್ಯಾತ ಗಾಯಕ ಸಿ.ಎಂ. ನರಸಿಂಹಮೂರ್ತಿ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಪವಿತ್ರಾ ಅವರು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡ ಪ್ರಾಧ್ಯಾಪಕಿ ಡಾ. ಜ್ಯೋತಿ ಸ್ವಾಗತಿಸಿದರೆ ಕೊನೆಯಲ್ಲಿ ಸಂಚಾಲಕರಾದ ಪ್ರೊ. ಎ ಎಂ ಶಿವಸ್ವಾಮಿ ಅವರು ವಂದಿಸಿದರು.




