ನಾವು ಬದುಕಲು ಇಚ್ಛಿಸುವೆವು
ಬಹುಕಾಲ ಸತ್ತಿರುವುದಕ್ಕಾಗಿ
ನಾವು ಬೆಳಕನ್ನು ಪ್ರೀತಿಸುವೆವು
ಕತ್ತಲೆ ನಮ್ಮ ಕಳ್ಳುಬಳ್ಳಿಯಾಗಿದ್ದಕ್ಕಾಗಿ
ನಾವು ಸ್ವಾತಂತ್ರ್ಯ ಬಯಸುವೆವು
ಬಯಲಲ್ಲಿ ಕೋಳಬಂಧಿಗಳಾಗಿದ್ದಕ್ಕಾಗಿ
ನಾವು ಪ್ರೀತಿಗಾಗಿ ಸವೆಯುವೆವು
ದ್ವೇಷ ಮಾನವನ ದೌರ್ಬಲ್ಯವಾಗಿರುವುದಕ್ಕಾಗಿ
ನಾವು ಈ ಕ್ಷಣದ ನೆಮ್ಮದಿಗಾಗಿ ಕಾಯುವೆವು
ಅದು ಮರೀಚಿಕೆಯೆಂದು ತಿಳಿದೂ
ಮಾನವ ಇತಿಹಾಸ ಬೇಗೆಯ ಬೆಟ್ಟವಾಗಿರುವುದಕ್ಕಾಗಿ
ನಾವು ಸ್ಥಿರತೆಗಾಗಿ ಹಂಬಲಿಸುವೆವು
ಭವಿಷ್ಯವು ಅಸ್ಥಿರವಾಗಿರುವುದಕ್ಕಾಗಿ
ನಾವು ಭಂಜಕರಾಗುವೆವು
ಮನುಷ್ಯನಿಗೆ ಸಂಪ್ರದಾಯ ಬದುಕಿನ
ದಾರಿಯಾಗಿರುವುದಕ್ಕಾಗಿ
ಇವೆಲ್ಲ ಕಾರಣಕ್ಕಾಗಿ, ಬುದ್ಧ
ನಾ ನಿನ್ನ ಪೂಜಿಸುವೆ
ಅನುಸರಿಸಲಾರೆ
ಕ್ಷಮೆಯಿರಲಿ ಗುರುವೇ
– ಮೂಲ: ರಾಜೇಶ್ವೋರ್ ಕರ್ಕಿ, ನೇಪಾಳಿ ಕವಿ
– ಕನ್ನಡಕ್ಕೆ: ಯೋಗೀಶ ಪಿ, ಪ್ರಶಾಂತ್ ಬೀಚಿ




