ಡಾ.ರಾಜಪ್ಪ ದಳವಾಯಿ 

1 year ago

ಡಾ. ರಾಜಪ್ಪ ದಳವಾಯಿಯವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆ, ಅಜ್ಜಂಪುರ ತಾಲ್ಲೂಕಿನ ಅನುವನಹಳ್ಳಿಯಲ್ಲಿ 1962 ಮಾರ್ಚ್ 30ರಂದು. ತಂದೆ ರಾಮಪ್ಪ ದಳವಾಯಿ, ತಾಯಿ ಹನುಮಕ್ಕ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ., ಪದವಿ, ಜಾನಪದದಲ್ಲಿ ಪಿಜಿ ಡಿಪ್ಲೊಮಾ, ಯುಜಿಸಿ ಫೆಲೊ ಆಗಿ ‘ಸ್ವಾತಂತ್ರ್ಯಪೂರ್ವ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ಅಂಶಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ., ಪದವಿಗಾಗಿ ಸಂಶೋಧನೆ (ಅಪೂರ್ಣ) ‘ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ, ಚಾರಿತ್ರಿಕ ವಾಸ್ತವ’ ವಿಷಯದ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂ.ಫಿಲ್., ಪದವಿ, ‘ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ’ ವಿಷಯದ ಸಂಶೋಧನೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ., ಪದವಿ, ‘ಕವಿರಾಜ ಮಾರ್ಗಂ: ಬಹುಶಿಸ್ತೀಯ ಅಧ್ಯಯನ’ ವಿಷಯದ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್., ಪದವಿ ಪಡೆದಿದ್ದಾರೆ.

ಅನುವನಹಳ್ಳಿ, ಶಿವನಿ, ಕೊಡಗನೂರು, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ಮೈಸೂರು, ದೆಹಲಿಯಲ್ಲಿ ವ್ಯಾಸಂಗ ಮಾಡಿ ಕನ್ನಡ ಅಧ್ಯಾಪಕರಾಗಿ ತಾವರೆಕೆರೆ (ಶಿರಾ ತಾಲ್ಲೂಕು), ಶಿಕಾರಿಪುರ, ಶಿವಮೊಗ್ಗ, ಅಜ್ಜಂಪುರ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಬೆಳಗಾವಿ ವಿಶ್ವವಿದ್ಯಾಲಯ ಮತ್ತು ಕೋಲಾರ ಪಿಜಿ ಸೆಂಟರ್ಗಳಲ್ಲಿ ಕೆಲಸ ಮಾಡಿದ್ದಾರೆ. ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕನ್ನಡ ವಿಷಯವನ್ನು ಬೋಧಿಸಿದ್ದಾರೆ. ಅಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ. 

ಕವಿತೆ, ಕತೆ, ವಿಚಾರ, ವಿಮರ್ಶೆ, ಸಂಶೋಧನೆ, ನಾಟಕಗಳು, ರಂಗಭೂಮಿ, ಬೀದಿನಾಟಕಗಳು, ಚಿತ್ರಕಲೆ, ಸಿನಿಮಾ, ಶಿಲ್ಪ ಮುಂತಾದ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ಬರೆದಿದ್ದಾರೆ. ಸುಯೋಧನ, ಒಂದು ಬೊಗಸೆ ನೀರು, ಕುಲಂ, ದಾರಾಶಿಕೊ, ಜೇಡರ ದಾಸಿಮಯ್ಯ, ಕಳಚಿದ ಕೊಂಡಿಗಳು, ಯಲುವು ರಾಜನ ಮಡದಿ, ಮಠದೊಳಗಣ ಬೆಕ್ಕು, ಮುಖ್ಯಮಂತ್ರಿ ಅರಸು, ಭಾಗ್ಯವಿದಾತ ಡಾ. ಅಂಬೇಡ್ಕರ್, ಭಾರತದ ಜನತೆಯಾದ ನಾವು, ಐಸಿಸ್ ಮುಂತಾದವು ಇವರ ಪ್ರಮುಖ ನಾಟಕಗಳು. ಸಿನಿಮಾ ಮೀಮಾಂಸೆ (ಸಿನಿಮಾ), ಚಲನ (ಸಣ್ಣ ಕತೆ), ಅಂತರಗಟ್ಟೆವ್ವ (ಕಾವ್ಯರೂಪಕ), ಸಂಸ್ಕೃತಿ ನಿರ್ವಚನ (ಲೇಖನಗಳು), ಡೋಲಿ ಮತ್ತಿತರ ನಾಟಕಗಳು (ಏಕಾಂಕಗಳು), ತಿಳಿವಳಿಕೆ (ವಿಚಾರ), ಉಳುಮೆ (ವಿಮರ್ಶೆ), ಕೃತಿ-ಆಕೃತಿ (ಸಂಕೀರ್ಣ), ಓದು ಬರಹ (ವಿಮರ್ಶೆ), ರಕ್ತದ ಬಣ್ಣ ಕಪ್ಪು (ಕಾವ್ಯ), ಬೆಳೆ (ಲೇಖನಗಳು) ಮತ್ತು ದಳವಾಯಿ ಡಜನ್ ನಾಟಕಗಳು ಕೃತಿಗಳು ಪ್ರಕಟವಾಗಿವೆ. ಇವರ ಒಂದು ಬೊಗಸೆ ನೀರು, ದಾರಾಶಿಖೊ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ. ದಾರಾಶಿಖೊ ಮರಾಠಿಗೂ ಅನುವಾದವಾಗಿದೆ.

ಕನ್ನಡ ಸಾಹಿತ್ಯ ಕೋಶ, ನೆನಪುಗಳು ಸಾಯುವುದಿಲ್ಲ, ಕನ್ನಡ ಸಾಹಿತ್ಯ ಪುನರ್ಮನನ 2005, ಕನ್ನಡ ಸಾಹಿತ್ಯ ಪುನರ್ಮನನ 2006, ವ್ಯೋಮಾವ್ಯೋಮ ಮಹಾಕಾವ್ಯದ ವಿಮರ್ಶೆ, ನಾದದ ನದಿ – ಇಸ್ಮಾಯಿಲ್ ಗೋನಾಳರ ನೆನಪು ಇವರ ಸಂಪಾದಿತ ಕೃತಿಗಳು. ಇವರ ಬದುಕು ಮತ್ತು ಬರಹ ಕುರಿತು ಕ್ರಿಯಾಪದ ಎಂಬ ಕೃತಿಯನ್ನು ಡಾ.ರವಿಕುಮಾರ್ ನೀಹ, ಇವರಿಗೆ ವಿದ್ಯಾರ್ಥಿಗಳು ಮತ್ತು ಒಡನಾಡಿಗಳು ಅರ್ಪಿಸಿರುವ ‘ನಮ್ಮ ಪ್ರೀತಿಯ ದಳವಾಯಿ ಮೇಷ್ಟ್ರು’ ಕೃತಿಯನ್ನು ಡಾ.ಪ್ರದೀಪ್ ಮಾಲ್ಗುಡಿ ಹಾಗೂ ಡಾ.ರಾಜಪ್ಪ ದಳವಾಯಿ ರಂಗಾನುಸಂಧಾನ ಕೃತಿಯನ್ನು ಡಾ.ಟಿ.ಎಸ್.ವಿವೇಕಾನಂದ ಮತ್ತು ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಸಂಪಾದಿಸಿದ್ದಾರೆ.

ಕರಡಿಪುರ ಚಲನಚಿತ್ರಕ್ಕೆ ಕಲಾನಿರ್ದೇಶನ, ಹಗಲುವೇಷ ಚಿತ್ರದಲ್ಲಿ ನಟ, ನಾನು ಗಾಂಧಿ ಚಿತ್ರದ ಸಂಭಾಷಣೆಕಾರ, ಚರಂತಿ ಚಿತ್ರದ ಚಿತ್ರಕತೆ, ನಟಿ, ಕನ್ನಡಾಭರಣ ಪಿ. ಕಾಳಿಂಗರಾವ್ ಚಿತ್ರಗಳಿಗೆ ಸಂಶೋಧಕ ಹಾಗೂ ಚಿತ್ರಕತೆ, ಗಾಂಧಿ ಮತ್ತೆ ಹುಟ್ಟಿದ್ರೆ (ಕಿರುಚಿತ್ರ 1998) ನಿರ್ದೇಶನ, ಇಸ್ಮಾಯಿಲ್ ಗೋನಾಳ್ (ಸಾಕ್ಷ್ಯಚಿತ್ರ 2016) ಕದ್ದವರಾರಣ್ಣ ಬೀಜಗಳ (ಕಿರುಚಿತ್ರ 2018) ನಿರ್ದೇಶನ. 

ಪ್ರಶಸ್ತಿಗಳು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2000 (ಚಿಕ್ಕಮಗಳೂರು), ಕುವೆಂಪುಶ್ರೀ ಪ್ರಶಸ್ತಿ – 2004 (ಬೆಂಗಳೂರು), ನಾಟಕ ಅಕಾಡೆಮಿ ಸುವರ್ಣ ಪ್ರಶಸ್ತಿ – 2011 (ಬೆಂಗಳೂರು), ರಂಗ ಜಂಗಮ ಪ್ರಶಸ್ತಿ – 2013 (ಬಳ್ಳಾರಿ), ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿ – 2017 (ಬೆಂಗಳೂರು), ಇಸ್ಮಾಯಿಲ್ ಗೋನಾಳ್ ರಂಗ ಪ್ರಶಸ್ತಿ – 2018 – (ಬಳ್ಳಾರಿ)

Leave a Reply