ಗೋಪಾಲಕೃಷ್ಣ ಅಡಿಗರ ಜನ್ಮದಿನ
ಗೋಪಾಲಕೃಷ್ಣ ಅಡಿಗರು ಕುಂದಾಪುರ ತಾಲೂಕಿನ ಮೊಗೇರಿಯಲ್ಲಿ 1918ರ ಫೆಬ್ರವರಿ 18ರಂದು ಜನಿಸಿರುತ್ತಾರೆ. ಬೈಂದೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋದರು. ಯಾವುದೇ ಪುಸ್ತಕ ಸಿಗಲಿ ಅದನ್ನು ಓದುವಂತಹ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. 1942ರಲ್ಲಿ ಬಿಎ ಅನರ್ಸ್ ಮಾಡಿಕೊಂಡು ಉಪಾಧ್ಯಾಯರಾಗಿಯು, ಕೆಲಕಾಲ ಸರ್ಕಾರಿ ಕಚೇರಿಯಲ್ಲಿ ಗುಮಾಸ್ತರಾಗಿಯು ಕೆಲಸ ಮಾಡಿದ್ದರು. 1952ರಲ್ಲಿ ಎಂಎ ಪದವಿ ಪಡೆದುಕೊಂಡು ಕೆನರಾ ಕಾಲೇಜ್ ಮೈಸೂರು, ಸೇಂಟ್ ಫಿಲೋಮಿನಾ ಕಾಲೇಜ್ ಹಾಗೂ ಸಾಗರದ ಲಾಲ್ ಬಹದ್ದೂರ್ ಕಾಲೇಜ್ ಇಲ್ಲಿ ಕೆಲಸ ಮಾಡಿ 1968ರಲ್ಲಿ ಪ್ರಾಚಾರ್ಯ ಹುದ್ದೆಗೆ ರಾಜೀನಾಮೆ ನೀಡಿ, ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾಗಿ ದುಡಿದು ನಂತರ ನಿವೃತ್ತರಾದರು. 1971ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜನ ಸಂಘದ ಅಭ್ಯರ್ಥಿಯಾಗಿ ಕೆಂಗಲ್ ಹನುಮಂತಯ್ಯನವರ ವಿರುದ್ಧ ಚುನಾವಣೆಗು ಸ್ಪರ್ಧಿಸಿದ್ದರು.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಅಡಿಗರು ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ, ವಿಚಾರ ಸಾಹಿತ್ಯ, ಅನುವಾದ ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಅಡಿಗರು ಕವಿಗಳು. ಲಂಕೇಶ್ ಅವರು ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದು ಹೇಳುತ್ತಾರೆ. ತಮ್ಮ ಕವಿತೆಗಳಲ್ಲಿ ಸಮಾಜದ ಮೇಲೆ ಪ್ರಭಾವ ಬೀರುವಂತಹ ವಿಚಾರಗಳನ್ನು ಪ್ರಕಟಿಸಿದ್ದಾರೆ.
ಅಡಿಗರು ಭಾವಗೀತೆಗಳನ್ನು ಬರೆದ ರೀತಿಯಲ್ಲಿ ನವ್ಯ ಕವಿತೆಗಳನ್ನು ಬರೆದರು. ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆ ಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಬತ್ತಲಾಗದ ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖ – ಇವು ಅಡಿಗರು ಬರೆದು ಪ್ರಕಟಿಸಿರುವ ಕವನ ಸಂಕಲಗಳು.

ಚಿಂತಾಮಣಿಯಲ್ಲಿ ಕಂಡ ಮುಖ ಅಡಿಗರ ಕೊನೆಯ ಕವನ ಸಂಕಲನ. ಇದರಲ್ಲಿ 14 ಕವನಗಳಿದ್ದು ಬಿಎಂಶ್ರೀ ಅವರನ್ನು ಕುರಿತ ಒಂದು ಕವನ ಇದೆ. ಇವರಿಗೆ ಕಬೀರ್ ಸನ್ಮಾನ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮರಣೋತ್ತರವಾಗಿ ಪಂಪ ಪ್ರಶಸ್ತಿ ಬಂದಿರುತ್ತದೆ.
ಮಣ್ಣಿನ ವಾಸನೆ, ಕನ್ನಡದ ಅಭಿಮಾನ, ವಿಚಾರ ಪಥ, ನಮ್ಮ ಶಿಕ್ಷಣ ಕ್ಷೇತ್ರ – ಇವರ ಪ್ರಬಂಧಗಳು. ಭೂಗರ್ಭ ಯಾತ್ರೆ, ರೈತರ ಹುಡುಗಿ, ಜನತೆಯ ಶತ್ರು, ಇತಿಹಾಸ, ಮೊದಲಾದವು ಅಡಿಗರ ಅನುವಾದಿತ ಕೃತಿಗಳು. ಆಕಾಶ ದೀಪ, ಅನಾಥೆ ಎಂಬ ಸ್ವತಂತ್ರ ಕಾದಂಬರಿಗಳನ್ನು ಅಡಿಗರು ರಚಿಸಿದ್ದಾರೆ. ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು ಎಂದು ಹಾಡಿದ ಅಡಿಗರು, ಕವಿಯನ್ನು ಅವರ ಕಾವ್ಯದಲ್ಲಿ ನೋಡಬೇಕು ಎನ್ನುವುದು ಅವರ ಮಾತಾಗಿತ್ತು.
1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಡಿಗರು ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಮೋಹನ ಮುರಲಿ ಹಾಡನ್ನು ಹಾಡದಿರುವ ಗಾಯಕರೇ ಇಲ್ಲ. ಇವರ ಕವಿತೆಗಳನ್ನು ನಾಡಿನಾದ್ಯಂತ ಗಾಯಕರುಗಳು ಪ್ರತಿದಿನವೂ ಹತ್ತಾರು ಕಾರ್ಯಕ್ರಮಗಳಲ್ಲಿ ಹೇಳುತ್ತಲೇ ಇರುತ್ತಾರೆ. ಅಡಿಗರು ನಮ್ಮೊಂದಿಗೆ ಇಲ್ಲವಾದರೂ ಅವರ ಕಾವ್ಯಗಳು ಭಾವಗೀತೆಗಳು, ಕನ್ನಡಿಗರ ಕಿವಿಗಳಿಗೆ ಪ್ರತಿ ದಿನವೂ ಒಂದಲ್ಲ ಒಂದು ರೂಪದಲ್ಲಿ ಕೇಳುತ್ತಲೇ ಇರುತ್ತವೆ. ಅದಕ್ಕಾಗಿ ಇವರನ್ನು ಮರೆಯಲಾರದ ಕವಿ ಎಂದು ಕರೆಯಬಹುದು.
– ಕೆ ಎಸ್ ನಾಗರಾಜ್, ಬೆಂಗಳೂರು




