ಗೋಪಾಲಕೃಷ್ಣ ಅಡಿಗ (18-02-1918 – 14-11-1992)
ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದೇ ಪ್ರಸಿದ್ಧರಾದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರು ಕರಾವಳಿಯ ಉಡುಪಿ ಜಿಲ್ಲೆಯ ಮೊಗೇರಿ ಎಂಬ ಗ್ರಾಮದಲ್ಲಿ ಜನಿಸಿದರು. ಮೊಗೇರಿ ಮತ್ತು ಬೈಂದೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ, ಕುಂದಾಪುರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ನಡೆಸಿದರು. ಕನ್ನಡದ ಮಹತ್ವದ ಸಾಹಿತ್ಯಕ ಪತ್ರಿಕೆ ಸಾಕ್ಷಿ ಪತ್ರಿಕೆಯ ಸಂಪಾದಕರಾಗಿ ಅವರು ಕನ್ನಡ ಸಾಹಿತ್ಯ ಮತ್ತು ವಿಮರ್ಶಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನವೋದಯ ಮತ್ತು ಪ್ರಗತಿಶೀಲ ಸಾಹಿತ್ಯದ ನಂತರ ನವ್ಯ ಸಾಹಿತ್ಯದ ಆದ್ಯ ಪ್ರವರ್ತಕರಲ್ಲಿ ಗೋಪಾಲಕೃಷ್ಣ ಅಡಿಗರು ಪ್ರಮುಖ ಪಾತ್ರವಹಿಸಿದರು. ಟಿ.ಎಸ್.ಎಲಿಯಟ್ ನ ವೇಸ್ಟ್ ಲ್ಯಾಂಡ್ ಮತ್ತು ರಾಮ ಮನೋಹರ ಲೋಹಿಯಾ ಅವರ ಚಿಂತನೆಗಳು ಇವರನ್ನು ಪ್ರಭಾವಿಸಿವೆ. ಬೆಂಗಳೂರಿನಿಂದ ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಅಡಿಗ ಸೋಲು ಅನುಭವಿಸಿದ್ದರು.
ಗೋಪಾಲಕೃಷ್ಣ ಅಡಿಗ ಅವರ ಮೊಮ್ಮಗ ಮನು ರಾಜು ಸಿಎನ್‌ಎನ್‌ನ ಹಿರಿಯ ರಾಜಕೀಯ ವರದಿಗಾರರಾಗಿ, ಇನ್ನೊಬ್ಬ ಮೊಮ್ಮಗ ಶರತ್ ರಾಜು ಅಮೆರಿಕದಲ್ಲಿ ಚಲನಚಿತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

1950 ಮತ್ತು 1960ರ ದಶಕಗಳಲ್ಲಿ ಅಡಿಗರು ಮೈಸೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1964ರಿಂದ 1968ರವರೆಗೆ ಸಾಗರದ ಲಾಲ್ ಬಹದ್ದೂರ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 1968ರಿಂದ 1971ರವರೆಗೆ ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಕನ್ನಡದ ಮಹತ್ವ ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಸಂಪಾದಕ, ವಿಮರ್ಶಕರಾಗಿ ಗೋಪಾಲಕೃಷ್ಣ ಅಡಿಗರು ಗುರುತಿಸಲ್ಪಡುತ್ತಾರೆ. ಮಣ್ಣಿನ ವಾಸನೆ ಸೇರಿದಂತೆ ಮಹತ್ವದ ಪರಿಕಲ್ಪನೆಗಳನ್ನು ಕನ್ನಡ ವಿಮರ್ಶಕ ಲೋಕಕ್ಕೆ ಪರಿಚಯಿಸಿದವರು. ಸಾಕ್ಷಿ ಪತ್ರಿಕೆಯ ಮೂಲಕ ಕನ್ನಡ ವಿಮರ್ಶೆಯ ಮಜಲುಗಳನ್ನು ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭೂಮಿಗೀತ, ರಾಮನವಮಿಯ ದಿವಸ, ಮೋಹನಮುರಲಿ, ಹಿಮಗಿರಿಯ ಕಂದರ ಮೊದಲಾದ ಮಹತ್ವದ ಕವಿತೆಗಳು ವಿಮರ್ಶಕರಿಂದ ಪ್ರಶಂಸೆಗೆ ಪಾತ್ರವಾಗಿವೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿದ್ದಾರೆ.
ಗೋಪಾಲಕೃಷ್ಣ ಅಡಿಗರ ಕೆಲವು ಕವಿತೆಗಳ ಆಯ್ದ ಸಾಲುಗಳು:
ಇದು ಬಾಳು
ಎತ್ತರೆತ್ತರಕ್ಕೆ ಏರುವ ಮನಕೂ
ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲ್ಲಿ ಮುಳುಗಿ ಕಂಡನೋ
ಬಾನಿಗೊಂದು ಪೆಂಪ
ಒಳತೋಟಿ
ಆದರ್ಶ ಸಾಧನೆಯ ಧ್ರುವತಾರೆಯೊಂದು ಬಾ
ನಂಗಳದಿ ನಿಂತು ಕೈಮಾಡಿ ಕರೆಯುತಿಹುದು
ವಿಷಯ ಸುಖದಾಸೆ ಕಾರ್ಮುಗಿಲಾಗಿ ಹಗೆಯಾಗಿ
ದೃಷ್ಟಿಯನು ನೆಲದೆಡೆಗೆ ದೂಡುತಿಹುದು
ನನ್ನ ಅವತಾರ
ನಾನು ಅವನು ಒಂದೆ ಲೋಹ
ಕಬ್ಬಿಣ-ಕರಿ ಕಬ್ಬಿಣ
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ
ಭೂಮಿಗೀತ
ಇವಳೆದೆಗೆ ಬೇರಿಳಿದ ಕಾಲು ನನ್ನದು
ಬರಿದೆ ನಕ್ಷತ್ರ ಲೋಕಕ್ಕೂ ರೈಲುಬಿಟ್ಟೆ
ಪ್ರಾರ್ಥನೆ
ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು
ಹೊತ್ತಿನ ಮುಖಕ್ಕೆ ಶಿಖೆ ಹಿಡಿವುದನ್ನು, ಹಾಗೇ
ಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನೂ
ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತ ಪುತ್ರ
ಭೂತ
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ
ವಿಗ್ರಹಕ್ಕೊಗಿಸುವ ಅಸಲು ಕಸಬು
ಶ್ರೀರಾಮನವಮಿಯ ದಿವಸ
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪರೇಷೆ
ಬಂಡಾಯ
ದಂಗೆಯೇಳಬೇಕಾಗುತ್ತಲೇ ಇರುತ್ತದೆ
ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ
ಒಳತೋಟಿ
ಮರ್ತ್ಯಜೀವದ ತರುವೊಳುಮರತೆಯ ಫಲ ತನಗೆ
ಸಿಕ್ಕಬೇಕೆಂದವನು ಭಾವಿಸಿದನು
ಮೋಹನ ಮುರಲಿ
ಇರುವುದೆಲ್ಲವ ಬಿಟ್ಟು
ಇರದುರೆಡೆಗೆ ತುಡಿವುದೆ ಜೀವನ
ಒಳತೋಟಿ
ಆದರ್ಶ ಸಾಧನೆಯ ಧ್ರುವತಾರೆಯೊಂದು ಬಾ
ನಂಗಳದಿ ನಿಂತು ಕೈಮಾಡಿ ಕರೆಯುತಿಹುದು
ವಿಷಯ ಸುಖದಾಸೆ ಕಾರ್ಮುಗಿಲಾಗಿ ಹಗೆಯಾಗಿ
ದೃಷ್ಟಿಯನು ನೆಲದೆಡೆಗೆ ದೂಡುತಿಹುದು
ಬಿಡುಗಡೆಯ ಹಾಡು
ಮರೆತುಬಿಡಲೊ ಮಗುವೆ ನಿನ್ನ ಒಲವಿನಂಗಭಂಗವ
ತೆರೆಯೋ ಅಂತರಂಗವ
ಅಲ್ಲಿ ಹುಡುಕು ಕಳಚಿಬಿದ್ದ ನಿನ್ನ ಜೀವರತ್ನವ
ತನ್ನತನದ ಸತ್ವವ
ಸಿಕ್ಕಿರಬಹುದು, ಸಿಕ್ಕದಿದ್ದರೇನು? ಹುಡುಕಾಟವೇ
ಅದರ ದಿವ್ಯಪಾರವೇ
ಎದೆಗೆ ಬಲವ ಮಾತೆಗೆ ಧೃತಿಯ ಬಾಳಿಗೊಂದು ಶಾಂತಿಯ
ನೀಡಬಹುದು ಕಾಂತಿಯ
ಒಳತೋಟಿ
ಅನ್ಯರೊಳು ಲೋಪದೋಷಗಳ ಬೆದಕಲು ಬೆದರಿ
ತನ್ನೆದೆಯನೇ ಗುಡಿಸಲನುವಾದನು
ಓಡಲೆಳಸುತಿಹುದು
ಓಡಲೆಳಸುತಿಹುದು ಜೀವ ದೂರ ದೂರ ಜನವಿದೂರ
ವಿಪಿನದೆಡೆಗೆ
ಬಿಡುಗಡೆಯ ಹಾಡು
ಒಲವೆಯೆಂದು ನಲವೆಯೆಂದು ನಾವು ಹುಸಿಯ ಮುಸುಕನು
ತೊಡಿಸಿ ನಿಜಕೆ ಮೆರೆವೆವು
ಒಲವು ಸುಳ್ಳು ನಲವು ಜಳ್ಳು ನಮ್ಮ ನಾವೆ ವಂಚಿಸುವೆವು
ಇಲ್ಲದುದನೆ ಹೊರೆವೆವು
ನಾನೆ ನನ್ನ ನಲ್ಲ ನಲ್ಲೆ ಒಲುಮೆ ಸಂಭ್ರಮ
ಉಳಿದುದೆಲ್ಲ ವಿಭ್ರಮ
ಕಲ್ಲಾಗು ಕಲ್ಲಾಗು
ಕಲ್ಲಾಗು ಕಲ್ಲಾಗು ಬಾಳ ಬಿರುಗಾಳಿಯಲ್ಲಿ
ಅಲ್ಲಾಡದೆಯೆ ನಿಲ್ಲು ಜೀವ
ಗಾಳಿಯೊಡನೆ
ಕಂಡು ಮಾತನಾಡಿ ಮೈ
ದಡವಿ ನಗಿಸಿ ನಲಿವರಿಲ್ಲ
ಬೆಂದ ಬಗೆಗೆ ಸೊದೆಯನೆರೆದು
ಕಂಬನಿಯ ತೊಡೆವರಿಲ್ಲ
ಒಳತೋಟಿ
ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ
ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ
ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ
ಸರದೊಳಾವುದೋ ಕಲ್ಲು ಬಿದ್ದ ಹಾಗೆ
ಹಲವು ತಾನಗಳ ಸಂತಾನವಾದುದು ಮಧುರ
ನೊಳಬಾಳು; ಹರೆಯದೊಡ್ಡೋಲಗದಲಿ
ತನೆಗೆಲ್ಲಿ ನೆಲೆ? ಬಾಳಹಾಡಿಗೆಲ್ಲಿಹುದು ಬೆಲೆ?
ಎಂದು ಮುರುಟಿದನು ತನುಮನಗಳಲ್ಲಿ
ಹೊಸಹಾದಿ
ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ
ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ
ಮಂಜುತರ ಸೃಷ್ಟಿಗಾನದಲಿ ಮೈಮೆರೆಯೆ
ಎಂಜಲಾಗದ ಮಧುರ ಮಧುರಸವ ಸವಿಯೆ
ರಂಜಿಸುವ ಕಾಡುಮೇಡುಗಳನಂಡಲೆಯೆ
ವಿಧಿಗೆ
ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ ಕೆ
ಚ್ಚೆದೆತನದ ಬಲ್ಮೆಯನು ಬಿತ್ತರಿಪೆನು
ಪದವನಿಡುತೆನ್ನೆದೆಯ ಮೇಲೆ ತಾಂಡವವೆಸಗು
ಬೆದರುವೆನೆ ಬೆಚ್ಚುವೆನೆ ನಿನಗೆ ನಾನು
ನನ್ನ ನುಡಿ
ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ
ಗೋಪಾಲಕೃಷ್ಣ ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ 1946ರಲ್ಲಿ ಪ್ರಕಟವಾಯಿತು. ಅನಂತರ ಕಟ್ಟುವೆವು ನಾವು (1948), ನಡೆದು ಬಂದ ದಾರಿ (1952), ಚಂಡೆಮದ್ದಳೆ (1954), ಭೂಮಿಗೀತ (1959), ವರ್ಧಮಾನ (1972), ಇದನ್ನು ಬಯಸಿರಲಿಲ್ಲ (1975), ಮೂಲಕ ಮಹಾಶಯರು (1981), ಬತ್ತಲಾರದ ಗಂಗೆ (1983), ಚಿಂತಾಮಣಿಯಲ್ಲಿ ಕಂಡ ಮುಖ (1987), ಸುವರ್ಣ ಪುತ್ಥಳಿ (1990) ಹಾಗೂ ಬಾ ಇತ್ತ ಇತ್ತ (1993) ಪ್ರಕಟವಾಗಿವೆ. 1937ರಿಂದ 1976ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ 1987ರಲ್ಲಿ ಪ್ರಕಟವಾಗಿದೆ.
ಎಂ.ಗೋಪಾಲಕೃಷ್ಣ ಅಡಿಗರ ಕೃತಿಗಳು
ಕಾವ್ಯ
೧. ಭಾವತರಂಗ, ಗಾಂಧಿ ಸಾಹಿತ್ಯ ಮಾಲೆ ೧೯೪೬, ಕಾವ್ಯಾಲಯ ೧೯೪೭, ಸಾಕ್ಷಿ ಪ್ರಕಾಶನ ೧೯೭೬, ಐ.ಬಿ.ಹೆಚ್. ಪ್ರಕಾಶನ ೧೯೮೮
೨. ಕಟ್ಟುವೆವು ನಾವು, ಕಾವ್ಯಾಲಯ ೧೯೪೮, ಶಾರದಾ ಪ್ರಕಾಶನ ೧೯೬೩, ಅಕ್ಷರ ಪ್ರಕಾಶನ ೧೯೭೩, ಐಬಿಎಚ್ ಪ್ರಕಾಶನ ೧೯೮೮
೩. ನಡೆದುಬಂದ ದಾರಿ, ಉಷಾ ಸಾಹಿತ್ಯ ಮಾಲೆ ೧೯೫೨, ಅಕ್ಷರ ಪ್ರಕಾಶನ ೧೯೭೩, ಐಬಿಎಚ್ ಪ್ರಕಾಶನ ೧೯೮೮
೪. ಚಂಡೆಮದ್ದಳೆ, ಜನಪ್ರಿಯ ಸಾಹಿತ್ಯ ೧೯೫೪, ಸಾಕ್ಷಿ ಪ್ರಕಾಶನ ೧೯೬೫, ಐಬಿಎಚ್ ಪ್ರಕಾಶನ ೧೯೮೮
೫. ಭೂಮಿಗೀತ, ಶಾರದಾ ಪ್ರಕಟನಾಲಯ ೧೯೫೯, ಅಕ್ಷರ ಪ್ರಕಾಶನ ೧೯೭೨, ಐಬಿಎಚ್ ಪ್ರಕಾಶನ ೧೯೮೮
೬. ವರ್ಧಮಾನ, ಅಕ್ಷರ ಪ್ರಕಾಶನ ೧೯೭೩, ಐಬಿಎಚ್ ಪ್ರಕಾಶನ ೧೯೮೮, 2005
೭. ಇದನ್ನು ಬಯಸಿರಲಿಲ್ಲ, ಅಕ್ಷರ ಪ್ರಕಾಶನ ೧೯೭೫, ಐಬಿಎಚ್ ಪ್ರಕಾಶನ ೧೯೮೮
೮. ಮೂಲಕ ಮಹಾಶಯರು, ಸಾಕ್ಷಿ ಪ್ರಕಾಶನ ೧೯೮೦, ಐಬಿಎಚ್ ಪ್ರಕಾಶನ, ೧೯೮೮
೯. ಬತ್ತಲಾರದ ಗಂಗೆ, ಐಬಿಎಚ್ ಪ್ರಕಾಶನ ೧೯೮೮
೧೦. ಚಿಂತಾಮಣಿಯಲ್ಲಿ ಕಂಡ ಮುಖ, ಪ್ರಜಾ ಪ್ರಿಂಟರ್ಸ್ ೧೯೮೭, ಕನ್ನಡ ಪುಸ್ತಕ ಪ್ರಾಧಿಕಾರ ೧೯೯೬
೧೧. ಬಾ ಇತ್ತ ಇತ್ತ (ಮರಣೋತ್ತರ ಪ್ರಕಟಣೆ) ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ 1993
೧೨. ಸುವರ್ಣ ಪುತ್ಥಳಿ ಅಪರ್ಣ ಪ್ರಕಾಶನ ೧೯೯೦, ಕನ್ನಡ ಪುಸ್ತಕ ಪ್ರಾಧಿಕಾರ ೧೯೯೬
ಆಯ್ದ ಕವನ ಸಂಗ್ರಹಗಳು
೧. ಅಡಿಗರ ಆಯ್ದ ಕವನಗಳು, 1968
೨. ಆರೋಹಣ, 1974
ಗೋಪಾಲಕೃಷ್ಣ ಅಡಿಗರ ಸಮಗ್ರ ಸಂಕಲನಗಳು
೧. ಸಮಗ್ರಕಾವ್ಯ (ಸಾಕ್ಷಿ ಪ್ರಕಾಶನ), 1976
೨. ಸಮಗ್ರಕಾವ್ಯ (ಐ.ಬಿ.ಎಚ್. ಪ್ರಕಾಶನ), 1987
೩. ಸಮಗ್ರಕಾವ್ಯ (ಸಪ್ನ ಬುಕ್ ಹೌಸ್), 1999
ಕಾದಂಬರಿ
೧. ಆಕಾಶದೀಪ, ನವ ಸಾಹಿತ್ಯ ಮಾಲೆ, 1952
೨. ಅನಾಥೆ, ಮೋಹನ ಪ್ರಕಶಾನ ೧೯೫೫, ಐಬಿಎಚ್ ಪ್ರಕಾಶನ ೨೦೦೫
ಕಥಾಸಂಕಲನ
೧. ಹುಲಿರಾಯ ಮತ್ತು ಇತರ ಕಥೆಗಳು
೧೯೨೬-೪೬ರ ಅವಧಿಯಲ್ಲಿ ಬರೆದ ಕಥೆಗಳು ಮತ್ತು ೧೯೨೭-೩೨ರ ಅವಧಿಯಲ್ಲಿ ಬರೆದ ಕಥೆಗಳು
ವಿಚಾರ ವಿಮರ್ಶೆ
೧. ಮಣ್ಣಿನ ವಾಸನೆ, ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜ್ ಕನ್ನಡ ಸಂಘ, 1966
೨. ವಿಚಾರಪಥ, ಅಕ್ಷರ ಪ್ರಕಾಶನ, 1971
೩. ಕನ್ನಡದ ಅಭಿಮಾನ, ಅಕ್ಷರ ಪ್ರಕಾಶನ, 1972
೪. ನಮ್ಮ ಶಿಕ್ಷಣಕ್ಷೇತ್ರ, ಅಕ್ಷರ ಪ್ರಕಾಶನ, 1972
೫. ಲೇಖನಗಳು ಮತ್ತು ಮುನ್ನುಡಿಗಳು, ಪ್ರಿಂಟರ್ಸ್ (ಮೈಸೂರು) ಪ್ರೈ.ಲಿ., 1972
ಸಮಗ್ರ
೧. ಸಮಗ್ರಗದ್ಯ, ಸಾಕ್ಷಿ ಪ್ರಕಾಶನ, 1977
೨. ಸಾಕ್ಷಿ ಪ್ರಜ್ಞೆ, ಸಪ್ನ ಬುಕ್ ಹೌಸ್, 2004
ಅನುವಾದ ಸಾಹಿತ್ಯ
೧. ಜನತೆಯ ಶತ್ರು, ವಿಶ್ವ ಸಾಹಿತ್ಯ, ಮೈಸೂರು,1949
೨. ದೆವ್ವದ ಕತೆಗಳು, ಸುಲಭ ಸಾಹಿತ್ಯ ಪ್ರಕಶಾನ, ಕುಮಟಾ 1953
೩. 1949ಸುವರ್ಣಕೀಟ, ವಿಶ್ವ ಸಾಹಿತ್ಯ ಮಾಲೆ ೧೯೪೮, ಅಕ್ಷರ ಪ್ರಕಾಶನ, 1965
೪. ಮುಕ್ತಾಫಲ, ನ್ಯಾಷನಲ್ ಬುಕ್ ಟ್ರಸ್ಟ್ ಪರವಾಗಿ ಶಾರದಾ ಪ್ರಕಟನಾಲಯ 1965
೫. ಹುಲ್ಲಿನ ದಳಗಳು, ಸಾಹಿತ್ಯ ಅಕಾಡೆಮಿ, ದೆಹಲಿ 1966
೬. ಭೂಗರ್ಭಯಾತ್ರೆ, ಕಾವ್ಯಾಲಯ ೧೯೫೦, ಅಕ್ಷರ ಪ್ರಕಾಶನ 1970
೭. ರೈತರ ಹುಡುಗಿ, ಕಾವ್ಯಾಲಯ ೧೯೪೮, ಅಕ್ಷರ ಪ್ರಕಾಶನ ೧೯೭೧
೮. ಇತಿಹಾಸಚಕ್ರ, ಅಕ್ಷರ ಪ್ರಕಾಶನ, ಸಾಗರ 1972
೯. ಪಾಶ್ಚಾತ್ಯ ಸಣ್ಣಕತೆ ಮತ್ತು ಇತರ ಅನುವಾದಗಳು ಸಾರ್ವಕಾಲಿಕ ಪುಸ್ತಕಗಳು, ನ್ಯಾಷನಲ್ ಬುಕ್ ಟ್ರಸ್ಟ್ 1974
೧೦. ಬನದ ಮಕ್ಕಳು, ಪುರೋಗಾಮಿ ಸಾಹಿತ್ಯ, ಬೆಂಗಳೂರು ೧೯೭೫
೧೧. ಟೈಪೀ, ಬೆಂಗಳೂರು ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೭೯
೧೨. ನಾಲ್ಕು ಮಂದಿ ಗೆಳೆಯರ ಕಥೆ, ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೭೯
೧೩. ಕೆಸರಿನಿಂದ ಶಿಖರಕ್ಕೆ, ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೭೯
೧೪. ಆಯ್ದ ಪ್ರಬಂಧಗಳು-೧, ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೮೧
೧೫. ಆಯ್ದ ಪ್ರಬಂಧಗಳು-೨, ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೮೩
೧೬. ರಾಜಕುಮಾರನ ಸಾಹಸಗಳು, ಜಗತ್ ಸಾಹಿತ್ಯಮಾಲೆ, ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೮೪
೧೭. ಕೆಂಪು ಅಕ್ಷರ, ಜಗತ್ ಸಾಹಿತ್ಯಮಾಲೆ, ಬೆಂಗಳೂರು, 1984
೧೮. ಕಾವ್ಯಜಗತ್ತು, ಜಗತ್ ಸಾಹಿತ್ಯಮಾಲೆ, ಬೆಂಗಳೂರು ೧೯೮೯
ಆತ್ಮ ಕಥನ
ನೆನಪಿನ ಗಣಿಯಿಂದ ಪ್ರಿಸಂ ಬುಕ್ಸ್ ಪ್ರೈ.ಲಿ. (ಕನ್ನಡಪ್ರಭ ಪತ್ರಿಕೆಯಲ್ಲಿ ಲೇಖನಮಾಲೆಯಾಗಿ ಪ್ರಕಟಿತ ೧೯೯೦-೯೧) 1999
ಸಂಕೀರ್ಣ
ಆರೂಡು (ಆರಂಭದ ರಚನೆಗಳು) ದಕ್ಷಿಣ ಕನ್ನಡ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನ 1993
ಪ್ರಶಸ್ತಿ ಮತ್ತು ಪುರಸ್ಕಾರಗಳು
‘ಒಳತೋಟಿ’ ಕವಿತೆಗೆ ಬಿಎಂಶ್ರೀ ಸುವರ್ಣಪದಕ 1941
ರಾಜ್ಯಸಾಹಿತ್ಯ ಅಕಾಡೆಮಿಯ ಪ್ರಶಸ್ತಿ 1974
‘ವರ್ಧಮಾನ’ ಕವನ ಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ 1975
ಕುಮಾರ ಆಸಾನ್ ಪ್ರಶಸ್ತಿ 1979
ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (ಧರ್ಮಸ್ಥಳ)1979
ವರ್ಧಮಾನ ಪ್ರಶಸ್ತಿ 1980
ಕಬೀರ್ ಸಮ್ಮಾನ್ ಪ್ರಶಸ್ತಿ 1986
ಪಂಪ ಪ್ರಶಸ್ತಿ (ಮರಣೋತ್ತರ) 1993
ಗೋಪಾಲಕೃಷ್ಣ ಅಡಿಗ ಅವರ ಕಾವ್ಯ ಕುರಿತ ವಿಮರ್ಶಾಗ್ರಂಥಗಳು
ಭೂಮಿಗೀತ ಕಾವ್ಯಪ್ರವೇಶ – ರಾಮದಾಸ್ ಸಂವೇದನೆ (ಸಂ)
ಸಂವೇದನೆ -ಜಿ. ಎಚ್. ನಾಯಕ ಮತ್ತು ಎಚ್. ಎಂ. ಚನ್ನಯ್ಯ
ಎಂ. ಗೋಪಾಲಕೃಷ್ಣ ಅಡಿಗ: ಒಂದು ಕಾವ್ಯಾಭ್ಯಾಸ: ಡಾ.ಸುಮತೀಂದ್ರ ನಾಡಿಗ 1968
ಅಡಿಗರ ಕಾವ್ಯ ಅಡಿಗರು ಮತ್ತು ನವ್ಯ ಕಾವ್ಯ: ಡಾ.ಸುಮತೀಂದ್ರ ನಾಡಿಗ 1975
ಕಾವ್ಯಶೋಧನ (ಸಂ): ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಅನ್ವೇಷಣದ ಅಡಿಗರು (ಸಂ): ದೇಶಪಾಂಡೆ ಸುಬ್ಬರಾಯ
ಸಂಸ್ಕೃತಿ ಮತ್ತು ಅಡಿಗ: ಡಾ. ಯು. ಆರ್. ಅನಂತಮೂರ್ತಿ
ಗೋಪಾಲಕೃಷ್ಣ ಅಡಿಗ: ಬಿ. ವಿ. ಕೆದಿಲಾಯ
ಅನನ್ಯ (ಸಂ): ಡಾ. ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ
ಅಡಿಗರ ಕಾವ್ಯದಲ್ಲಿ ವಾಸ್ತವತೆ: ಡಾ. ಅಣ್ಣಮ್ಮ
ಗೋಪಾಲಕೃಷ್ಣ ಅಡಿಗ: ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಪ್ರತಿಮಾಲೋಕ (ಗೋಪಾಲಕೃಷ್ಣ ಅಡಿಗ ಮರು ಓದು): ಸಂ. ಎಸ್.ಆರ್. ವಿಜಯಶಂಕರ



