ವಿದ್ಯಾರ್ಥಿ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಬಂಡಳ್ಳಿ ಕುಮಾರ್ ಗೆ ಮೈಸೂರು ವಿ.ವಿ.ಯಿಂದ ಡಾಕ್ಟರೇಟ್ ಪದವಿ

5 years ago

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆ ಮತ್ತು ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕದಾದ್ಯಂತ ಸಮ ಸಮಾಜದ ಕನಸನ್ನ ನಿಜ ರೂಪಕ್ಕೆ ತರುವಲ್ಲಿ ಹಲವು ಕಾರ್ಯ ಯೋಜನೆಗಳನ್ನು ಜಾರಿಗೆ ತಂದಿದೆ.

ಈ ವೇದಿಕೆ ಕರ್ನಾಟಕದಾದ್ಯಂತ 4 ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕ್ರತಿಕ, ವೈಚಾರಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಮೈಸೂರು ವಿಭಾಗೀಯ ಸಂಚಾಲಕರಾಗಿ ಬಂಡಳ್ಳಿ ಕುಮಾರ ಅವರು ನೇಮಕಗೊಂಡಿದ್ದಾರೆ.

ಹೋರಾಟ, ಚಳುವಳಿಯ ಜೊತೆಯಲ್ಲಿ ಕನ್ನಡ ವಿಷಯದಲ್ಲಿ ಸಂಶೋಧನೆ ನಡೆಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಇವರು “ನವೋದಯಕಾಲದ ಪ್ರಬಂಧ ಸಾಹಿತ್ಯದಲ್ಲಿ ಗ್ರಾಮೀಣ ಜೀವನ”ಎಂಬ ಸಂಶೋಧನಾ ವಿಷಯವನ್ನು ಆಯ್ಕೆ ಮಾಡಿಕೊಂಡು ಮೈಸೂರು ವಿ.ವಿಗೆ ಸಂಶೋಧನಾ ಮಹಾ ಪ್ರಬಂಧವನ್ನು ಸಲ್ಲಿಸಿದ್ದಾರೆ.

ಕುಮಾರ್ ಚಾಮರಾಜ ನಗರಜಿಲ್ಲೆ ಹನೂರು ತಾಲ್ಲೂಕು ಬಂಡಳ್ಳಿ ಗ್ರಾಮದ ರಾಚಪ್ಪ ಮತ್ತು ರಾಚಮ್ಮ ಅವರ ಮಗ. ಪ್ರಾಥಮಿಕ ಮತ್ತು ಪ್ರೌಢಾಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು, ಪದವಿ, ಸ್ನಾತಕೋತ್ತರ ಪದವಿ, ಬಿ.ಇಡಿ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ್ದಾರೆ. ಬಂಡಳ್ಳಿ ಗ್ರಾಮ ಸುಮಾರು 10,000 ಜನಸಂಖ್ಯೆಯನ್ನು ಹೊಂದಿದ್ದು, ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಹಿಂದುಳಿದಿದೆ. ಅಲ್ಲಿನ ಜನರು ಹೆಚ್ಚಾಗಿ ಬಡತನದಲ್ಲಿಯೇ ಜೀವನ ನಡೆಸುತ್ತಾರೆ. ತಮ್ಮ ಮಕ್ಕಳ ಶಾಲಾ-ಕಾಲೇಜುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೂಲಿ ಕೆಲಸ, ಗಾರೆ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಇವರ ತಂದೆ-ತಾಯಿ ಕಷ್ಟವನ್ನು ಮೆಟ್ಟಿ ನಿಂತು ತಮ್ಮ ಮಗನಿಗೆ ಪಿಎಚ್.ಡಿ ಪದವಿಯವರೆವಿಗೂ ವಿದ್ಯಾಭ್ಯಾಸ ಕೊಡಿಸಿದ್ದು ಶ್ಲಾಘನೀಯ.

ಕುಮಾರ್ ತಮ್ಮ ಊರಿನಲ್ಲಿ ಯುವಕರಿಗೆ ಮಾರ್ಗದರ್ಶನ ಮಾಡುತ್ತ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಫಂದಿಸುತ್ತಿದ್ದಾರೆ. ಬಂಡಳ್ಳಿ ಗ್ರಾಮದಲ್ಲಿ ಮೊದಲ ಪಿಎಚ್.ಡಿ ಪದವೀಧರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಪಿ.ಎಚ್.ಡಿ ಪದವಿ ಪಡೆದಿರುವ ಬಂಡಳ್ಳಿ ಕುಮಾರ್ ಅವರಿಗೆ, ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ವಿದ್ಯಾರ್ಥಿ ಬಂಧುತ್ವ ವೇದಿಕೆಯ ಉಸ್ತುವಾರಿಗಳಾದ ಅನಂತ ನಾಯಕ್, ವಿದ್ಯಾರ್ಥಿ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಮತ್ತು ಸಂಘಟನೆಯ ಎಲ್ಲ ಸಂಚಾಲಕರು, ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

Leave a Reply