ಕೆ.ಎಸ್.ನರಸಿಂಹಸ್ವಾಮಿ

10 months ago

ಕೆ.ಎಸ್.ನರಸಿಂಹಸ್ವಾಮಿ (26-01-1915 – 28-12-2003)

ಕನ್ನಡದ ನವೋದಯ ಕಾಲದ ಶ್ರೇಷ್ಠ ಕವಿ, ಅನುವಾದಕ, ವಿಮರ್ಶಕ ಕೆ.ಎಸ್.ನ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿಪರಿಚಿತರಾದ ಕೆ.ಎಸ್.ನರಸಿಂಹಸ್ವಾಮಿ ಅವರು 26-01-1915ರಂದುಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಸುಬ್ಬರಾವ್ ಮತ್ತು ತಾಯಿ ನಾಗಮ್ಮ. ಕೆ.ಎಸ್.ನರಸಿಂಹಸ್ವಾಮಿಯವರು ಜನಿಸಿದ ಕೆಲಕಾಲದ ನಂತರ ಸುಬ್ಬರಾಯರು ಕಿಕ್ಕೇರಿ ತೊರೆದು ಮೈಸೂರಿನಲ್ಲಿ ನೆಲೆಸಿದರು.

ಕೆಎಸ್‌ನ ಅವರ ವಿದ್ಯಾಭ್ಯಾಸ ಪದವಿ ಶಿಕ್ಷಣದವರೆಗೆ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಶಿಕ್ಷಣದ ನಂತರ ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮೈಸೂರಿನ ಇಂಟರ್ಮೀಡಿಯೆಟ್ ಕಾಲೇಜಿನ ಪ್ರಿ-ಎಂಜಿನಿಯರಿಂಗ್’ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದರು. ಪದವಿಪೂರ್ವ ಶಿಕ್ಷಣ ಮುಗಿದ ನಂತರ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದರು. ಆ ಕ್ಷೇತ್ರದಲ್ಲಿ ಆಸಕ್ತಿ ಇಲ್ಲದಿರುವುದರಿಂದ ಶಿಕ್ಷಣ ಕ್ಷೇತ್ರವನ್ನು ಬದಲಿಸಿ, ಬಿ.ಎ. ಮಾಡಲು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ 1934ರಲ್ಲಿ ಸೇರಿಕೊಂಡರು. ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಬಿಎಂಶ್ರೀ, ಕೆಎಸ್‌ನ ಅವರಿಗೆ ಇಂಗ್ಲೀಷ್ ಕಾವ್ಯದ ಬೋಧಕರಾಗಿದ್ದರು.

ಹೀಗೆ ಬೆಂಗಳೂರಿನಲ್ಲಿ ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸುತ್ತಿದ್ದ ಅವಧಿಯಲ್ಲಿ ಜೂನಿಯರ್ ಬಿ.ಎ. ಮುಗಿಸುವ ವೇಳೆಗೆ ಅವರ ತಂದೆ ನಿಧನರಾದರು. ನಂತರ ಪದವಿ ಶಿಕ್ಷಣ ಪೂರೈಸಲಾಗಿದೆ ಅರ್ಧಕ್ಕೇ ನಿಲ್ಲಿಸಿ ಮೈಸೂರಿಗೆ ವಾಪಸಾದರು. ಸಂಸಾರದ ಜವಾಬ್ದಾರಿ ನಿರ್ವಹಿಸಲು ತಂದೆ ಕೆಲಸ ನಿರ್ವಹಿಸುದ್ದ ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿಕೊಂಡರು. ಅನಂತರ ಸರ್ಕಾರಿ ನೌಕರಿ ಸಿಕ್ಕಿದ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತು. ಬೆಂಗಳೂರಿನ ಹೌಸಿಂಗ್ ಬೋರ್ಡ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸಿ 1970೦ರಲ್ಲಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿ ನಂತರ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ 1972-74 ಹಾಗೂ ಯುವ ಕರ್ನಾಟಕದ ಸಂಪಾದಕರಾಗಿ 1974-76 ಕೆಲಸ ನಿರ್ವಹಿಸಿದರು.

1936ರಲ್ಲಿ ತಿಪಟೂರಿನಲ್ಲಿ ಶಿರಸ್ತೆದಾರರಾಗಿದ್ದ ನಾಡಿಗ ಭೀಮರಾಯರ ಮಗಳು ವೆಂಕಮ್ಮನವರೊಂದಿಗೆ ವಿವಾಹ ನೆರವೇರಿತು. ಇವರಿಗೆ ನಾಲ್ಕು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳಾದರು. ಸರಕಾರಿ ನೌಕರಿಯಿಂದ ನಿವೃತ್ತಿ ನಂತರ ಬೆಂಗಳೂರಿನ ಜಯನಗರದಲ್ಲಿ ಅನಂತರ ಬನಶಂಕರಿ ಬಡಾವಣೆಯಲ್ಲಿರುವ ‘ಕಾವ್ಯಶ್ರೀ’ ಎಂಬ ಸ್ವಂತ ಮನೆಯಲ್ಲಿ ವಾಸವಾಗಿದ್ದರು. 28-12-2003ರಂದು ಕಾಲವಶರಾದರು.

ಒಲುಮೆಯ ಕವಿಯೆಂದೇ ಪ್ರಸಿದ್ಧರಾದ ಕೆ.ಎಸ್.ನರಸಿಂಹಸ್ವಾಮಿಯವರು ನವೋದಯದ ಅವಧಿಯಲ್ಲಿ ಕಾವ್ಯಕೃಷಿ ಆರಂಭಿಸಿ, ನವ್ಯ, ದಲಿತ – ಬಂಡಾಯ ಸಾಹಿತ್ಯದ ಅವಧಿಯಲ್ಲೂ ಕವಿನಗಳನ್ನು ಬರೆದರು. ವಿವಾಹಾನಂತರದ ಪ್ರೇಮ ಅವರ ಕಾವ್ಯದ ವಸ್ತುವಾಗಿರುವುದು ವಿಶೇಷ. ಅದರ ಜೊತೆಗೆ ವ್ಯಕ್ತಿ, ವೈಯಕ್ತಿಕ, ಸಾಮಾಜಿಕ, ರಾಜಕೀಯ ವಿಷಯಗಳನ್ನೂ ಸೂಕ್ಷ್ಮವಾಗಿ ಅವರ ಕವಿತೆಗಳು ಒಳಗೊಂಡಿವೆ. ಎಳೆಯ ಪ್ರಾಯದ ಗಂಡುಹೆಣ್ಣಿನ ನವಿರಾದ ಭಾವನೆಗಳು, ತಾಕಲಾಟ, ತೊಳಲಾಟಗಳು ಇವರ ಕವಿತೆಯಲ್ಲಿ ಸಮರ್ಥವಾಗಿ ಒಡಮೂಡಿವೆ. ಕವಿ, ಅನುವಾದಕ, ವಿಮರ್ಶಕರಾಗಿ ಕನ್ನಡ ಸಾಹಿತ್ಯ ಲೋಕವನ್ನು ಇವರು ಬೆಳಗಿದ್ದಾರೆ.

ಕೆ.ಎಸ್‌.ನರಸಿಂಹಸ್ವಾಮಿಯವರ ಕೃತಿಗಳು:

ಕಾವ್ಯ

  1. ಮೈಸೂರ ಮಲ್ಲಿಗೆ – 1942
  2. ಐರಾವತ – 1945
  3. ದೀಪದ ಮಲ್ಲಿ – 1947
  4. ಉಂಗುರ – 1949
  5. ಇರುವಂತಿಗೆ – 1954
  6. ಶಿಲಾಲತೆ – 1958
  7. ಮನೆಯಿಂದ ಮನೆಗೆ – 1960
  8. ತೆರೆದ ಬಾಗಿಲು – 1979
  9. ನವ ಪಲ್ಲವ – 1989
  10. ಮಲ್ಲಿಗೆಯ ಮಾಲೆ (ಸಮಗ್ರ ಕಾವ್ಯ ಸಂಪುಟ)
  11. ದುಂಡು ಮಲ್ಲಿಗೆ – 1983
  12. ನವಿಲ ದನಿ – 1999
  13. ಸಂಜೆ ಹಾಡು – 2000
  14. ಕೈಮರದ ನೆಳಲಲ್ಲಿ – 2001
  15. ಎದೆ ತುಂಬ ನಕ್ಷತ್ರ – 2002
  16. ಮೌನದಲಿ ಮಾತ ಹುಡುಕುತ್ತ – 2003
  17. ದೀಪ ಸಾಲಿನ ನಡುವೆ – 2003
  18. ಹಾಡು-ಹಸೆ (ಆಯ್ದ ಅತ್ಯುತ್ತಮ ಗೀತಗಳು) 2003
  19. ಮಲ್ಲಿಗೆಯ ಮಾಲೆ (ಸಮಗ್ರ ಕಾವ್ಯ ಸಂಪುಟ 1942- 2004) 2004

ಗದ್ಯ:

  1. ಎರಡು ಸಣ್ಣ ಕಥೆಗಳು – 1941, 1965
  2. ಉಪವನ – 1958
  3. ದಮಯಂತಿ – 1960
  4. ವಿ.ಸೀ. – 1970
  5. ಸಿರಿಮಲ್ಲಿಗೆ – 1990
  6. ನುಡಿ ಮಲ್ಲಿಗೆ – 1990

ಅನುವಾದ

  1. ಮೋಹನ ಮಾಲೆ (ಗಾಂಧೀಜಿ ಸುಭಾಷಿತಗಳು) – 1956
  2. ನನ್ನ ಕನಸಿನ ಭಾರತ (ಗಾಂಧೀಜಿ ಕೃತಿಗಳಿಂದ ಆಯ್ದ ಭಾಗಗಳು) -1961
  3. ಪ್ರಪಂಚದ ಬಾಲ್ಯದಲ್ಲಿ (ವೆರಿಯರ್ ಎಲ್ವಿನ್: ಜಾನಪದ ಕಥೆಗಳು) – 1965
  4. ಮೀಡಿಯ (ಯೂರಿಪಿಡೀಸ್‌ ನಾಟಕ) – 1966
  5. ಹಕಲ್‌ಬರಿ ಫಿನ್ನನ ಸಾಹಸಗಳು (ಮಾರ್ಕ್ ಟ್ರೇನ್ ಕಾದಂಬರಿ) – 1969
  6. ಸುಬ್ರಹ್ಮಣ್ಯ ಭಾರತಿ (ಪ್ರೇಮ ನಂದಕುಮಾ‌ರ್) – 1971
  7. ಜಾರ್ ಸುಲ್ತಾನಾ ಮತ್ತು ಹಂಸವತಿ, ಪುಷ್ಕಿನ್ನನ ಕವಿತೆಗಳು – 1971
  8. ರಾಣಿಯ ಗಿಳಿ ಮತ್ತು ರಾಜನ ಮಂಗ (ಮಕ್ಕಳ ಗೀತೆಗಳು) – 1972
  9. ಮಾಯಾಶಂಖ ಮತ್ತು ಇತರ ಕಥೆಗಳು (ಮಕ್ಕಳ ಕಥೆಗಳು) 1972
  10. ಪತ್ರಗುಚ್ಛ: (ನೆಹರು ಪತ್ರಗಳು); ಎಸ್.ಆರ್. ರಾಮಸ್ವಾಮಿಯವರೊಡನೆ -1975
  11. ರಾಬರ್ಟ್ ಬರ್ನ್ ಕವಿಯ ಕೆಲವು ಪ್ರೇಮಗೀತಗಳು 1997
  12. ಕೆಲವು ಚೀನೀ ಕವನಗಳು 1997

ಅನ್ಯ ಭಾಷೆಗೆ ಅನುವಾದಿತ ಕೃತಿಗಳು

  1. Tr. P. Sreenivasa Rao & Sumateendra Nadig, The Buddha Smile; Kavyalaya, 1993
  2. Tr. Ramachandra Sharma, The Open Door; Sahitya Akademi, 2001

ಕೆ.ಎಸ್‌.ನರಸಿಂಹಸ್ವಾಮಿ ಅವರ ಕೃತಿಗಳ ಕುರಿತು ಪ್ರಕಟಿತ ವಿಮರ್ಶಾ ಕೃತಿಗಳು/ಲೇಖನಗಳು

  1. ಆಮೂರ, ಜಿ.ಎಸ್., ಕೆ.ಎಸ್. ನರಸಿಂಹಸ್ವಾಮಿ: ಲೌಕಿಕ ಕಾವ್ಯ’ ಕೊರಳು-ಕೊಳಲು; ಪ್ರಿಯದರ್ಶಿನಿ ಪ್ರಕಾಶನ, 2005
  2. ಕುರ್ತಕೋಟಿ, ಕೀರ್ತಿನಾಥ, ಕೆ.ಎಸ್. ನರಸಿಂಹಸ್ವಾಮಿ, ನೂರು ಮರ ನೂರು ಸ್ವರ; ಕನ್ನಡ ವಿ.ವಿ., 1998
  3. ಕೊಡ್ಲೆಕೆರೆ, ಚಿಂತಾಮಣಿ, ‘ಶೋಧನ ಪ್ರಧಾನ ಮಾದರಿ,’ ಅಂತರಂಗದ ಆಕಾಶ; ಚಿತ್ರಮೂಲ ಪ್ರಕಾಶನ, 2006
  4. ನರಹಳ್ಳಿ, ಬಾಲಸುಬ್ರಹ್ಮಣ್ಯ, ಇಹದ ಪರಿಮಳದ ಹಾದಿ; ಲಿಪಿ ಪ್ರಕಾಶನ, 1995
  5. ನಂಗಲಿ, ಚಂದ್ರಶೇಖರ ವಿ. ‘ಕೆ.ಎಸ್.ನ ಕಾವ್ಯದಲ್ಲಿ ಪರಿಸರ ಮತ್ತು ಭೂಮಿತತ್ವ, ಸಂಕ್ರಮಣ, 2007
  6. ನಾಗರಾಜ್, ಡಿ.ಆರ್ಣ., ‘ಕೆ.ಎಸ್. ನರಸಿಂಹಸ್ವಾಮಿಯವರ ಕಾವ್ಯದಲ್ಲಿ ಭೂಮಿ, ಶಕ್ತಿ ಶಾರದೆಯ ಮೇಳ; ಅಕ್ಷರ ಪ್ರಕಾಶನ, 1983
  7. ನಾಡಿಗ, ಸುಮತೀಂದ್ರ, ಮೌನದಾಚೆಯ ಮಾತು; ಸಪ್ನ ಬುಕ್‌ಹೌಸ್, 2007
  8. ನಾಯಕ, ಜಿ. ಪ್ರಶಾಂತ, ಪ್ರೀತಿಯ ಬದುಕು; ನಮ್ಮ ಪ್ರಕಾಶನ, 2004
  9. ರಾಘವೇಂದ್ರ ರಾವ್, ಎಚ್.ಎಸ್., ‘ನವ ಪಲ್ಲವ ಒಂದು ಪರಿಚಯ,’ ನಿಲವು; ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ, 1989

10 ‘ಸಂಜೆ ಹಾಡು, ತರು ತಳೆದ ಪುಷ್ಪ; ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ, 2004

  1. ‘ನಿಮ್ಮುಸಿರು ನನ್ನ ಕವಿತೆ,’ ಮುನ್ನುಡಿ, ಮಲ್ಲಿಗೆಯ ಮಾಲೆ; ಲಿಪಿ ಪ್ರಕಾಶನ, 2004
  2. ರಾಮಚಂದ್ರನ್, ಸಿ.ಎನ್, “ಗಡಿಯಾರದಂಗಡಿಯ ಮುಂದೆ’: ಒಂದು ವ್ಯಾಖ್ಯಾನ,” ಗಾಂಧಿ ಬಜಾರ್ ಮೇ, 2007
  3. ರಾಮೇಗೌಡ, ಕೆ.ಎಸ್. ನರಸಿಂಹಸ್ವಾಮಿ; ನವ ಕರ್ನಾಟಕ, 2002
  4. (ಸಂ) ಶಿವರುದ್ರಪ್ಪ, ಜಿ.ಎಸ್., ಚಂದನ; ಕೆಎಸ್‌ನ ಅಭಿನಂದನ ಸಮಿತಿ, 1972. ಈ ಅಭಿನಂದನಾ ಗ್ರಂಥದಲ್ಲಿ ಹಿರಿಯ ಕವಿಗಳಾದ ಪುತಿನ, ಜಿಎಸ್ಎಸ್, ಕಣವಿ, ಜಿ.ಎಸ್. ಸಿದ್ದಲಿಂಗಯ್ಯ, ಕೀರ್ತಿನಾಥ ಕುರ್ತಕೋಟಿ ಸೇರಿದಂತೆ ವಿದ್ವಾಂಸರು ಬರೆದಿರುವ 32 ಮಹತ್ವದ ಲೇಖನಗಳು ಇವೆ.

ಪ್ರಶಸ್ತಿ-ಪುರಸ್ಕಾರಗಳು

  1. 1943 – ದೇವರಾಜ ಬಹದ್ದೂರ್ ಬಹುಮಾನ (ಮೈಸೂರ ಮಲ್ಲಿಗೆ)
  2. 1957 – ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಬಹುಮಾನ (ಶಿಲಾಲತೆ)
  3. 1958 – ದೆಹಲಿ ಕವಿ ಸಮ್ಮೇಳನದಲ್ಲಿ ಭಾಗಿ
  4. 1965 – ಕಾರವಾರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕಾವ್ಯ ಮಂಥನ” ಅಧ್ಯಕ್ಷತೆ
  5. 1970 – ಬೆಂಗಳೂರು ‘ಸುವರ್ಣ ಮಹೋತ್ಸವ’ ಕನ್ನಡ ಸಾಹಿತ್ಯ ಸಮ್ಮೇಳನ, ಸನ್ಮಾನ
  6. 1972 – ‘ಚಂದನ’ ಅಭಿನಂದನ ಗ್ರಂಥ ಸಮರ್ಪಣೆ (ಸಂ. ಜಿ.ಎಸ್. ಶಿವರುದ್ರಪ್ಪ)
  7. 1972 – ಕರ್ನಾಟಕ ‘ರಾಜ್ಯೋತ್ಸವ ಪ್ರಶಸ್ತಿ’
  8. 1974 – ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  9. 1978 – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ತೆರೆದ ಬಾಗಿಲು)
  10. 1985 – ಕನ್ನಡ ಸಾಹಿತ್ಯ ಪರಿಷತ್ತು ಗೌರವ ಫೆಲೋಷಿಪ್
  11. 1987 – ಕೇರಳದ ‘ಕುಮಾರನ್ ಆಶಾನ್ ಪ್ರಶಸ್ತಿ’
  12. 1990 – ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು – ಅಧ್ಯಕ್ಷತೆ
  13. 1992 – ರಾಷ್ಟ್ರೀಯ ಪ್ರಶಸ್ತಿ: ಅತ್ಯುತ್ತಮ ಗೀತ ರಚನಕಾರ (ಮೈಸೂರ ಮಲ್ಲಿಗೆ)
  14. 1992 – ಗೌರವ ಡಿ.ಲಿಟ್., ಪ್ರಶಸ್ತಿ: ಬೆಂಗಳೂರು ವಿಶ್ವವಿದ್ಯಾನಿಲಯ
  15. 1996 – ಡಾ.ಮಾಸ್ತಿ ಸಾಹಿತ್ಯ ಪ್ರಶಸ್ತಿ
  16. 1997 – ಪಂಪ ಪ್ರಶಸ್ತಿ: ಕರ್ನಾಟಕ ಸರಕಾರ
  17. 1999 – ಗೌರವ ಫೆಲೋಷಿಪ್: ಕೇಂದ್ರ ಸಾಹಿತ್ಯ ಅಕಾಡೆಮಿ
  18. 2000 – ಗೊರೂರು ಸಾಹಿತ್ಯ ಪ್ರಶಸ್ತಿ

Leave a Reply