ಸುಬ್ಬು ಹೊಲೆಯಾರ್

2 years ago

ಸುಬ್ಬು ಹೊಲೆಯಾರ್ ಎಂದು ಪ್ರಸಿದ್ಧರಾಗಿರುವ ಹೆಚ್.ಕೆ. ಸುಬ್ಬಯ್ಯ ಅವರ ತಂದೆ ಕೋಮರಯ್ಯ, ತಾಯಿ ತಿಪ್ಪಮ್ಮ. 21.09.1962ರಂದು ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ಜನಿಸಿದರು.

ನೀನಾಸಂ ಹೆಗ್ಗೋಡಿನಲ್ಲಿ ಡಿಪ್ಲೊಮ ಇನ್ ಡ್ರಾಮಾ ಪದವಿ ನಂತರ ಎರಡು ವರ್ಷಗಳ ತಿರುಗಾಟದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಪ್ರದರ್ಶನ ನೀಡಿ ಅನುಭವ ಪಡೆದರು. ಕಳೆದ ಮೂವತ್ತು ವರ್ಷಗಳಿಂದಲೂ ದಲಿತ ಸಂಘರ್ಷ ಸಮಿತಿಯ ಭಾಗವಾಗಿದ್ದಾರೆ.

‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕವಲನ ಸಂಕಲನ 2003ರಲ್ಲಿ ಪ್ರಕಟವಾಯಿತು. ಇವರ ಎರಡನೇ ಕವನಗಳ ಸಂಗ್ರಹ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ 2013ರಲ್ಲಿ ಪ್ರಕಟವಾಗಿದೆ. ಈ ಕೃತಿಗೆ ಪು.ತಿ.ನ. ಕಾವ್ಯ ಪ್ರಶಸ್ತಿ ಸಿಕ್ಕಿದೆ.

ಸುಬ್ಬು ಹೊಲೆಯಾರ್ ಅವರು, ಡಾ.ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯ ಪ್ರಶಸ್ತಿ, ‘ಅಮ್ಮ’ ಗೌರವ ಪ್ರಶಸ್ತಿ, ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 

2010ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ, 2013ನೇ ಸಾಲಿನ ಬುದ್ಧ ಪ್ರಶಸ್ತಿ, 2019ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯಾದ “ಸಾಹಿತ್ಯ ಶ್ರೀ” ಪ್ರಶಸ್ತಿ, ಜನಸಂಸ್ಕೃತಿ ಪ್ರತಿಷ್ಠಾನ ಹಾಗು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ಕೊಡಮಾಡುವ 2024ನೇ ಸಾಲಿನ ‘ಕಿರಂ ಪುರಸ್ಕಾರ – 2024’ ಪ್ರಶಸ್ತಿ ದೊರೆತಿದೆ.

ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಲಯನ್ಸ್ ಇಂಟರ್‌ನ್ಯಾಷನಲ್ ಹಾಗು ರಂಗಚಂದಿರ ಟ್ರಸ್ಟ್ ನವರು ಕೊಡಮಾಡುವ 2023ನೇ ಸಾಲಿನ ‘ರಂಗಾಭಿನಂದನೆ’ ಗೌರವ, ನಾಟಕ ಕ್ಷೇತ್ರದಲ್ಲಿ ಹೆಸರಾಂತ ನಾಟಕಕಾರ ತೊ.ನಂಜುಂಡಸ್ವಾಮಿಯವರ ರಂಗಚೇತನ ಸಂಸ್ಥೆಯಿಂದ ಕೊಡಲಾಗುವ ‘ನಾಡ ಚೇತನ ಗೌರವ’ ಪ್ರಶಸ್ತಿ, ಗೆ ದಲಿತ ಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿವೆ.

ಸುಬ್ಬು ಹೊಲೆಯಾರ್ ಅವರು ಕಾವ್ಯಕೃಷಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಕಲೇಶಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನ – 2010ರಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿ ಗೌರವಿಸಲಾಗಿದೆ. ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್ ಅವರು ಸುಬ್ಬು ಹೊಲೆಯಾರ್ ಅವರ ಕತೆ ‘ದನ ಕಾಯದವನು’ ಆಧಾರಿತ ‘ಕರಿಯ ಕಣ್‌ಬಿಟ್ಟ’ ಕಲಾತ್ಮಕ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

2007ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಕಾವ್ಯ ಸಂಗ್ರಹ ಇವರ ಸಂಪಾದಕತ್ವದಲ್ಲಿ ಹೊರಬಂದಿದೆ. ದೂರದರ್ಶನದ ನೌಕರರು ಅಭಿನಯಿಸಿದ್ದ ಹೆಚ್‌.ಎಸ್.ವೆಂಕಟೇಶಮೂರ್ತಿ ಅವರ ‘ಹೆಜ್ಜೆಗಳು’ ನಾಟಕವನ್ನು ನಿರ್ದೇಶಿಸಿದ್ದು, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸುಬ್ಬು ಹೊಲೆಯಾರ್ ಪಡೆದಿದ್ದಾರೆ. 

ಶಿವಮೊಗ್ಗದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಕವಿಗೋಷ್ಠಿಯ ಅಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಗೋವಾ ಕೊಯಮತ್ತೂರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕಾವ್ಯ ವಾಚಿಸಿದ್ದಾರೆ.

ಇವರ ಕವನಗಳು ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಪಠ್ಯಗಳಾಗಿವೆ. 

1990-2022ರವರೆಗೆ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರ ಬೆಂಗಳೂರು ಇಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಸಾಹಿತ್ಯ ಸಾಂಸ್ಕೃತಿಕ ಕೃಷಿಗಾಗಿ ಕರ್ನಾಟಕ ಸರ್ಕಾರ 2023ನೇ ಸಾಲಿನ ನಾಡಿನ ಪ್ರತಿಷ್ಠಿತ ಗೌರವವಾದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಸುಬ್ಬು ಹೊಲೆಯಾರ್ ಅವರ ಸೇವೆಯನ್ನು ಗೌರವಿಸಿದೆ.

ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2016ರಲ್ಲಿ ಪ್ರಕಟವಾಗಿರುವ ‘ಸತ್ಯಮಂಗಲ ಮಹದೇವ’ ಜೀವನ ಚಿತ್ರಣ ಕೃತಿಯನ್ನು ಸುಬ್ಬು ಹೊಲೆಯಾರ್ ರಚಿಸಿದ್ದಾರೆ.

Leave a Reply